ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾರಣ ಅರೆಕಾಲಿಕ ಕೆಲಸವಲ್ಲ

ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ವಿರುದ್ಧ ಎಸ್.ಎಂ. ಕೃಷ್ಣ ಪರೋಕ್ಷ ಟೀಕೆ
Last Updated 23 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ನವದೆಹಲಿ: ಬಿಜೆಪಿ ಸೇರಿರುವ ಕಾಂಗ್ರೆಸ್‌ ಮುಖಂಡ ಎಸ್‌. ಎಂ. ಕೃಷ್ಣ ಅವರು ಕಾಂಗ್ರೆಸ್‌ ಪಕ್ಷದ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಪರೋಕ್ಷವಾಗಿ ಟೀಕಿಸಿದ್ದಾರೆ. ರಾಜಕಾರಣ ಗಂಭೀರ ಕೆಲಸ. ‘ಗುದ್ದಿ ಓಡುವ’ ರೀತಿಯಲ್ಲಿ ರಾಜಕಾರಣ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
 
ಕಾಂಗ್ರೆಸ್‌ ಹೈಕಮಾಂಡ್‌ಗೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಜತೆ ಸಂಪರ್ಕವೇ ಇಲ್ಲ ಎಂದು ಬುಧವಾರ ಬಿಜೆಪಿ ಸೇರಿದ ಕೃಷ್ಣ ಹೇಳಿದ್ದಾರೆ. 
 
ಉತ್ತರ ಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಹೀನಾಯವಾಗಿ ಸೋತ ನಂತರ ರಾಹುಲ್‌ ಅವರ ನಾಯಕತ್ವ ಸಾಮರ್ಥ್ಯದ ಬಗ್ಗೆ ಚರ್ಚೆಯಾಗುತ್ತಿದೆ. ಈ ಬಗ್ಗೆ ಕೇಳಿದ ಪ್ರಶ್ನೆಗೆ ಕೃಷ್ಣ ಅವರು, ‘ರಾಜಕಾರಣ ಅರೆಕಾಲಿಕ ಕೆಲಸ ಅಲ್ಲ’ ಎಂದು ಉತ್ತರಿಸಿದ್ದಾರೆ. 
 
ಕಾಂಗ್ರೆಸ್‌ ಮರು ನಿರ್ಮಾಣವಾಗುವ ಅಗತ್ಯ ಇದೆ. ಆದರೆ ಪಕ್ಷದ ನಾಯಕತ್ವ ಈ ಬಗ್ಗೆ ‘ಗಂಭೀರ’ವಾಗಿ ಯೋಚಿಸುತ್ತಿಲ್ಲ  ಎಂದು ಅವರು ಹೇಳಿದ್ದಾರೆ. ಗಾಂಧಿ ಕುಟುಂಬದ ವಂಶಾಡಳಿತದಿಂದ ಹೊರಗೆ ಬರದಿದ್ದರೆ ಕಾಂಗ್ರೆಸ್‌ ಮರಳಿ ನೆಲೆ ಕಂಡುಕೊಳ್ಳುವುದು ಸಾಧ್ಯವಿಲ್ಲ ಎಂದೂ ಕೃಷ್ಣ ಹೇಳಿದ್ದಾರೆ. 
 
ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದು ‘ಸ್ವಚ್ಛ ವ್ಯಕ್ತಿತ್ವ’ದ ನಾಯಕರನ್ನು ಬೇರೆ ಪಕ್ಷಗಳಿಂದ ಆಮದು ಮಾಡಿಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್‌ ವಕ್ತಾರ ರಾಜೀವ್‌ ಗೌಡ ಹೇಳಿದ್ದಾರೆ.

ಮಾನವಂತರಿಗಾಗಿ ಬಿಜೆಪಿ ಹುಡುಕಾಟ: ಕಾಂಗ್ರೆಸ್‌
‘ಕರ್ನಾಟಕದಲ್ಲಿ ಬಿಜೆಪಿ ಈಗಾಗಲೇ ಬೆತ್ತಲಾಗಿದೆ. ಆ ಪಕ್ಷದ ನಾಯಕರೆಲ್ಲ ಜೈಲುಹಕ್ಕಿಗಳು. ರಾಜ್ಯ ಬಿಜೆಪಿ ನಾಯಕತ್ವ ವಹಿಸಿಕೊಂಡಿರುವ ಬಿ.ಎಸ್‌. ಯಡಿಯೂರಪ್ಪ ಜೈಲಿಗೆ ಹೋಗಿ ಬಂದವರು.

ಜನಾರ್ದನ ರೆಡ್ಡಿ ಇತ್ತೀಚೆಗಷ್ಟೇ ಜೈಲಿನಿಂದ ಹೊರಗೆ ಬಂದಿದ್ದಾರೆ. ಇವರೆಲ್ಲ ಜನರಿಗೆ ಭಯ ಹುಟ್ಟಿಸುವ ನಾಯಕರು. ಹಾಗಾಗಿ ಬೇರೆ ಪಕ್ಷಗಳಲ್ಲಿರುವ ಮಾನವಂತ ರಾಜಕಾರಣಿಗಳನ್ನು ಬಿಜೆಪಿ ಹುಡುಕುತ್ತಿದೆ’ ಎಂದು ಅವರು ಹೇಳಿದ್ದಾರೆ.

ಪಂಜಾಬ್‌ನಲ್ಲಿ ಗೆದ್ದಂತೆಯೇ ಮುಂದಿನ ವರ್ಷ ನಡೆಯಲಿರುವ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಅಲ್ಲಿಯವರೆಗೆ ಕೃಷ್ಣ ಅವರು ಕಾಯಬಹುದಿತ್ತು ಎಂದು ರಾಜೀವ್ ಗೌಡ ಹೇಳಿದ್ದಾರೆ. ಕಾಂಗ್ರೆಸ್‌ ಪುನರ್‌ಸಂಘಟನೆಯ ಕೆಲಸ ಈಗಾಗಲೇ ಆರಂಭವಾಗಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT