ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್‌ ಠಾಣೆಗೆ ಯೋಗಿ ಹಠಾತ್‌ ಭೇಟಿ

ಗೃಹ ಖಾತೆಯನ್ನು ತಮ್ಮ ಬಳಿಯೇ ಇಟ್ಟುಕೊಂಡಿರುವ ಆದಿತ್ಯನಾಥ
Last Updated 23 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ಲಖನೌ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಇಲ್ಲಿನ ಹಜರತ್‌ಗಂಜ್‌ ಪೊಲೀಸ್‌ ಠಾಣೆಗೆ ಗುರುವಾರ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು. 
 
ಗೃಹ ಖಾತೆಯನ್ನು ತಮ್ಮ ಬಳಿಯೇ ಇಟ್ಟುಕೊಂಡಿರುವ ಆದಿತ್ಯನಾಥ ಅವರು ಗುರುವಾರ ಬೆಳಿಗ್ಗೆ ಹಠಾತ್‌ ಭೇಟಿ ನೀಡಿದ್ದು ಪೊಲೀಸರು ಮತ್ತು ಅಧಿಕಾರಿಗಳನ್ನು ಅಚ್ಚರಿಯಲ್ಲಿ ಕೆಡವಿತು.
 
‘ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸ್ಥಿತಿಯನ್ನು ಪರಿಶೀಲಿಸಲು ಮತ್ತು ಪೊಲೀಸರ ನೈತಿಕ ಸ್ಥೈರ್ಯ ಅಳೆಯಲು ಇಲ್ಲಿಗೆ ಬಂದಿದ್ದೇನೆ’ ಎಂದು ಆದಿತ್ಯನಾಥ ಹೇಳಿದರು.
 
‘ರಾಜ್ಯದಲ್ಲಿ ಕಾನೂನು ವ್ಯವಸ್ಥೆಯನ್ನು ಸುಧಾರಿಸಲಾಗುವುದು. ಜನರ ಕಲ್ಯಾಣಕ್ಕೆ ಅಗತ್ಯವಾಗಿರುವ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಹಿಂಜರಿಯುವುದಿಲ್ಲ’ ಎಂದು ಅವರು ಹೇಳಿದರು.
 
ಭೇಟಿಯ ಸಂದರ್ಭದಲ್ಲಿ, ರಾಜ್ಯದ ಪೊಲೀಸ್‌ ಪಡೆಯ ಕಾರ್ಯನಿರ್ವಹಣೆ ಬಗ್ಗೆ ಅಲ್ಲಿದ್ದ ಅಧಿಕಾರಿಗಳಿಂದ ಅವರು ಮಾಹಿತಿ ಪಡೆದರು. ರಾಜ್ಯ ಪೊಲೀಸ್‌ನ ಅಪರಾಧ ವಿಭಾಗ ಮತ್ತು ಸೈಬರ್‌ ವಿಭಾಗಗಳ ಚಟುವಟಿಕೆಗಳನ್ನೂ ಪರಿಶೀಲಿಸಿದರು.
 
ಗುರುವಾರದ ದಿಢೀರ್‌ ಭೇಟಿ ಆರಂಭವಷ್ಟೇ ಎಂದು ಹೇಳಿದ ಅವರು, ಮುಂದಿನ ದಿನಗಳಲ್ಲಿ ಇಲಾಖೆಯ ಎಲ್ಲ ಹಂತಗಳಲ್ಲೂ ಸುಧಾರಣೆ ಕಂಡು ಬರಲಿದೆ ಎಂದರು.
 
100 ಪೊಲೀಸರ ಅಮಾನತು:  ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಜಾರಿಗೊಳಿಸುವಲ್ಲಿ ನಿರ್ಲಕ್ಷ್ಯ ತೋರಿದ 100 ಪೊಲೀಸ್‌ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.
 
ಗಾಜಿಯಾಬಾದ್‌, ಮೀರಠ್‌ ಮತ್ತು ನೊಯಿಡಾ ಭಾಗಗಳಲ್ಲಿ ಹೆಚ್ಚು ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ರಾಜಧಾನಿ ಲಖನೌದಲ್ಲಿ ಏಳು ಇನ್‌ಸ್ಪೆಕ್ಟರ್‌ಗಳನ್ನು ಅಮಾನತು ಮಾಡಲಾಗಿದೆ.
 
ಕಸ ಗುಡಿಸಿದ ಸಚಿವ!
ಉತ್ತರ ಪ್ರದೇಶದ ನೂತನ ಸಚಿವ ಉಪೇಂದ್ರ ತಿವಾರಿ ಅವರು ಗುರುವಾರ ರಾಜ್ಯ ಸಚಿವಾಲಯದಲ್ಲಿರುವ ತಮ್ಮ ಕೊಠಡಿ ಮತ್ತು ಕಾರಿಡಾರ್‌ ಅನ್ನು ಸ್ವತಃ ಪೊರಕೆ ಹಿಡಿದು ಸ್ವಚ್ಛಗೊಳಿಸಿದರು.

ಪರಿಸರ, ನೀರು ಪೂರೈಕೆ, ಭೂ ಅಭಿವೃದ್ಧಿ, ಜಲಸಂಪನ್ಮೂಲ ಮತ್ತು ಅರಣ್ಯ ಖಾತೆ (ಸ್ವತಂತ್ರ ಖಾತೆ) ರಾಜ್ಯ ಸಚಿವ ತ್ರಿಪಾಠಿ ಅವರು ಕಸ ಗುಡಿಸುತ್ತಿರುವ ಚಿತ್ರ ಮತ್ತು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತು.

ಸ್ವಚ್ಛತೆ ಬಗ್ಗೆ ಹೆಚ್ಚು ಒತ್ತು ನೀಡುತ್ತಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಅಧಿಕಾರ ಸ್ವೀಕರಿಸಿದ ಮರು ದಿನವೇ, ಸ್ವಚ್ಛ ಭಾರತ   ಆಂದೋಲನವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದರು.

ತಮ್ಮ ಕಚೇರಿ ಇರುವ ಕಟ್ಟಡದ ಗೋಡೆಯಲ್ಲಿ ತಾಂಬೂಲದ ಕಲೆಯನ್ನು ಕಂಡು ಕೋಪಗೊಂಡಿದ್ದ ಆದಿತ್ಯನಾಥ, ಸರ್ಕಾರಿ ಕಚೇರಿಗಳಲ್ಲಿ ತಾಂಬೂಲ ಮತ್ತು ಪಾನ್‌ ಮಸಾಲ ಹಾಕುವುದಕ್ಕೆ ಬುಧವಾರ ನಿಷೇಧಿಸಿದ್ದರು.
 
ವೈಯಕ್ತಿಕ ಕೆಲಸಗಳಿಗಾಗಿ ಸರ್ಕಾರದ ಮೇಲೆ ಒತ್ತಡ ಬೇಡ: ಮೋದಿ ಕಿವಿಮಾತು
ನವದೆಹಲಿ:
ತಮಗೆ ಬೇಕಾದ ಪೊಲೀಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸಿಕೊಳ್ಳಲು ಅಥವಾ ಬೇರೆ ಕಡೆ ನಿಯೋಜಿಸಲು ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಪಕ್ಷದ ಸಂಸದರಿಗೆ  ಕಿವಿ ಮಾತು ಹೇಳಿದ್ದಾರೆ.

ನವದೆಹಲಿಯಲ್ಲಿ ಗುರುವಾರ ಸಂಸದರಿಗಾಗಿ ಆಯೋಜಿಸಿದ್ದ ಉಪಾಹಾರ ಕೂಟದಲ್ಲಿ ಮಾತನಾಡಿದ ಅವರು, ತಮ್ಮ ವೈಯಕ್ತಿಕ ಕೆಲಸಗಳನ್ನು ಮಾಡಿಸಿಕೊಳ್ಳಲು ರಾಜ್ಯ ಸರ್ಕಾರದ ಮೇಲೆ ಒತ್ತಡ ತರಬೇಡಿ ಎಂದು ಸಲಹೆ ನೀಡಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಮೋದಿ ಬೆಂಬಲಿಸಿದ್ದಾರೆ.

‘ಎಲ್ಲರ ಜೊತೆಗೆ, ಎಲ್ಲರ ಏಳಿಗೆ’ (ಸಬ್‌ಕಾ ಸಾಥ್‌, ಸಬ್‌ಕಾ ವಿಕಾಸ್‌) ಎಂಬ ಘೋಷ ವಾಕ್ಯವನ್ನು ನಿಜಮಾಡಲು ಯೋಗಿ ಸರ್ಕಾರ ಕೆಲಸ ಮಾಡಲಿದೆ. ವಿರೋಧ ಪಕ್ಷಗಳು ಗೆದ್ದಿರುವ ಕ್ಷೇತ್ರಗಳನ್ನೂ ಸರ್ಕಾರ ಅಭಿವೃದ್ಧಿ ಪಡಿಸಲಿದೆ ಎಂದು ಮೋದಿ ಹೇಳಿರುವುದಾಗಿ ಪಕ್ಷದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT