ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದೇಶ ಹೊರಡಿಸಿದ್ದು ನಾನಲ್ಲ: ಶ್ರೀವತ್ಸ ಕೃಷ್ಣ

ಕನ್ನಡ ವಿರೋಧಿ ಅಧಿಕಾರಿಗೆ ವಾಗ್ದಂಡನೆ ವಿಧಿಸಿ: ಎಸ್‌.ಜಿ. ಸಿದ್ದರಾಮಯ್ಯ ಪತ್ರ
Last Updated 23 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ಬೆಂಗಳೂರು: ‘ನನ್ನ ಅನುಮತಿ ಇಲ್ಲದೆ ಕನ್ನಡ ವಿರೋಧಿ ಆದೇಶ ಹೊರಡಿಸಲಾಗಿದೆ. ಆ ವೇಳೆ ನಾನು ಆಸ್ಪತ್ರೆಯಲ್ಲಿದ್ದೆ.  ಕೆಳಹಂತದ ಕೆಲವು ಅಧಿಕಾರಿಗಳು ದುರುದ್ದೇಶದಿಂದ ಈ ಕೃತ್ಯ ಎಸಗಿರಬಹುದು’ ಎಂದು ಸಾರ್ವಜನಿಕ ಉದ್ದಿಮೆ ವಿಭಾಗದ ಕಾರ್ಯದರ್ಶಿ ಶ್ರೀವತ್ಸ ಕೃಷ್ಣ ಸಮಜಾಯಿಷಿ ನೀಡಿದ್ದಾರೆ. 
 
‘ನನ್ನ ಬಳಿಗೆ ಇಂಗ್ಲಿಷ್‌ನಲ್ಲಿರುವ ಕಡತಗಳನ್ನು ಮಾತ್ರ ಕಳುಹಿಸಿ’ ಎಂದು ಇಲಾಖೆಯ ಅಧೀನ ನೌಕರರಿಗೆ ಸೂಚಿಸಿ ಮಾರ್ಚ್‌ 4ರಂದು ಶ್ರೀವತ್ಸ ಕೃಷ್ಣ ಆದೇಶ ಹೊರಡಿಸಿದ್ದರು.
 
‘ಈ ಅಧಿಕಾರಿ ಕನ್ನಡ ವಿರೋಧಿ ನಿಲುವು ತಳೆದಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ’ ಎಂದು ಕನ್ನಡ ಗಡಿ ಜಾಗೃತಿ ಸಮಿತಿ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ  ಕನ್ನಡ ಪರ ಸಂಘಟನೆಗಳು ಒತ್ತಾಯಿಸಿದ್ದವು. 
 
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ  ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮಾರ್ಚ್‌ 15ರಂದು ನೋಟಿಸ್‌ ನೀಡಿತ್ತು. ಅದಕ್ಕೆ ಅವರು ಲಿಖಿತ ಉತ್ತರ ನೀಡಿದ್ದಾರೆ. ಈ ಮಧ್ಯೆ, ಘಟನೆ ಬಗ್ಗೆ ವರದಿ ನೀಡುವಂತೆ ಪ್ರಾಧಿಕಾರದ ಕಾರ್ಯದರ್ಶಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸೂಚಿಸಿದ್ದಾರೆ. 
 
‘ನಾನು 19 ವರ್ಷಗಳ ಸೇವೆಯ ನಂತರ ಕರ್ನಾಟಕ ವೃಂದದ ಸೇವೆಗೆ ಬಂದಿದ್ದೇನೆ. ಐಎಎಸ್‌ ಅಕಾಡೆಮಿ ತರಬೇತಿ ಸಂದರ್ಭದಲ್ಲಿ  ಸ್ಥಳೀಯ ಭಾಷಾ ಬಳಕೆ ಬಗ್ಗೆ ಅಧಿಕಾರಿಗಳಿಗೆ ತರಬೇತಿ ನೀಡುತ್ತದೆ. ಆದರೆ, ಈ ತರಬೇತಿ ನನಗೆ ಸಿಕ್ಕಿಲ್ಲ.

ಹೀಗಾಗಿ ಇತರ ಅಧಿಕಾರಿಗಳಂತೆ ಸ್ಫುಟವಾಗಿ ಕನ್ನಡ ಬಳಸಲು ಸಾಧ್ಯವಾಗುತ್ತಿಲ್ಲ. ಕನ್ನಡ ಭಾಷೆ ಕಲಿಯಲು ನಾನು ಸಿದ್ಧನಿದ್ದೇನೆ. ಕನ್ನಡ– ಇಂಗ್ಲಿಷ್‌ ಭಾಷೆಗಳಲ್ಲಿ ಪರಿಣತಿ ಉಳ್ಳ ತಜ್ಞ ತರಬೇತುದಾರರ ನೆರವು ಕೊಡಿಸಿ’ ಎಂದು ಅವರು ಮನವಿ ಮಾಡಿದ್ದಾರೆ.
 
ಅಲ್ಲದೆ, ‘ಈ ಹಿಂದೆ ಹೊರಡಿಸಿದ್ದ ಸುತ್ತೋಲೆ ಹಿಂದಕ್ಕೆ ಪಡೆದಿದ್ದೇನೆ. ಸುತ್ತೋಲೆ ಹೊರಡಿಸಿದ್ದಕ್ಕಾಗಿ ವಿಷಾದಿಸುತ್ತೇನೆ’ ಎಂದು ಅವರು ತಿಳಿಸಿದ್ದಾರೆ.
ಮುಖ್ಯಮಂತ್ರಿಗೆ ಪತ್ರ: ‘ಈ ಅಧಿಕಾರಿ ಕನ್ನಡ ವಿರೋಧಿ ಧೋರಣೆ ಹೊಂದಿರುವುದು ಸಾಬೀತಾಗಿದೆ.
 
ಈ ಮೂಲಕ ಇಡೀ ಶಾಸಕಾಂಗದ ಹಕ್ಕುಚ್ಯುತಿಗೆ ಕಾರಣರಾಗಿದ್ದಾರೆ. ಅವರನ್ನು ಸದನಕ್ಕೆ ಕರೆಸಿ ವಾಗ್ದಂಡನೆ ವಿಧಿಸಬೇಕು’ ಎಂದು ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್‌.ಜಿ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಅವರಿಗೆ ಮಾರ್ಚ್‌ 21ರಂದು ಪತ್ರ ಬರೆದಿದ್ದಾರೆ. 
 
‘ಅಧಿಕಾರಿಗೆ ನೋಟಿಸ್‌ ಜಾರಿ ಮಾಡಿ ಖುದ್ದಾಗಿ ವಿವರಣೆ ಪಡೆದಿದ್ದೇನೆ. ಕನ್ನಡ ಕಲಿಯುವ ಹಾಗೂ ಕನ್ನಡವನ್ನು ಆಡಳಿತದಲ್ಲಿ ಜಾರಿ ಮಾಡುವ ನಿರ್ದಿಷ್ಟ ನಿಲುವನ್ನು ಹೊಂದದಿರುವುದು ಅವರ ಮಾತಿನಿಂದಲೇ ಗೊತ್ತಾಗಿದೆ. ಅವರ ಹೇಳಿಕೆ ಸಮಂಜಸವಾಗಿಲ್ಲ ಎಂಬುದೂ ಮನವರಿಕೆಯಾಗಿದೆ’ ಎಂದು ಅವರು ಉಲ್ಲೇಖಿಸಿದ್ದಾರೆ. 
 
‘ರಾಜ್ಯದ ಆಡಳಿತದ ಶಕ್ತಿ ಕೇಂದ್ರದಲ್ಲಿಯೇ ಕನ್ನಡವನ್ನು ನಿರ್ಲಕ್ಷ್ಯಿಸುವ ಮನೋಭಾವ ಹೊಂದಿರುವ ಈ ಐಎಎಸ್‌ ಅಧಿಕಾರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದೂ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT