ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗವಿಕಲ ಅಥ್ಲೀಟ್‌ಗಳಿಗೆ ವಂಚನೆ

ಒಲಂಪಿಕ್ಸ್‌ನಲ್ಲಿ ಅವಕಾಶ ಕೊಡಿಸಲು ಹಣ ಪಡೆದ ಆರೋಪ
Last Updated 23 ಮಾರ್ಚ್ 2017, 19:57 IST
ಅಕ್ಷರ ಗಾತ್ರ

ಬೆಂಗಳೂರು: ಕಳೆದ ವರ್ಷ ಬ್ರೆಜಿಲ್‌ನಲ್ಲಿ ನಡೆದ ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಅವಕಾಶ ಕೊಡಿಸುವುದಾಗಿ ನಂಬಿಸಿ, ಅಂಗವಿಕಲ ಅಥ್ಲೀಟ್‌ಗಳಿಂದ ಲಕ್ಷಾಂತರ ರೂಪಾಯಿ ಪಡೆದು ವಂಚಿಸಿದ್ದ ಅರೋಪದಡಿ ರಾಮಮೂರ್ತಿ ಎಂಬುವರ ವಿರುದ್ಧ ಬಾಣಸವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಚ್‌ಬಿಆರ್‌್ ಲೇಔಟ್‌ನ ಜೋಯ್ಸಾ ಕುಮಾರಿ ಎಂಬುವರು ದೂರು ಕೊಟ್ಟಿದ್ದಾರೆ. ರಾಮಮೂರ್ತಿ ಸಹ ಅಂಗವಿಕಲ ಕ್ರೀಡಾಪಟುವಾಗಿದ್ದು, ಅವರ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ‘ರಾಮಮೂರ್ತಿ ಅವರು ಇದೇ ರೀತಿ ನಾಲ್ಕೈದು ಅಥ್ಲೀಟ್‌ಗಳಿಂದ ₹ 10 ಲಕ್ಷದವರೆಗೆ ಹಣ ಸಂಗ್ರಹಿಸಿದ್ದಾರೆ.  ಅವರಲ್ಲಿ ಕೆಲವರು ರಾಷ್ಟ್ರೀಯ ತಂಡದಲ್ಲಿ ಭಾಗವಹಿಸಿದ್ದರೆ, ಮತ್ತೆ ಕೆಲವರು ರಾಜ್ಯಮಟ್ಟದ ಕ್ರೀಡೆಗಳಲ್ಲಿ ಪಾಲ್ಗೊಂಡವರೂ ಇದ್ದಾರೆ’ ಎಂದು ಜೋಯ್ಸಾ ದೂರಿದ್ದಾರೆ.

‘ಒಲಿಂಪಿಕ್ಸ್‌ನಲ್ಲಿ ಅವಕಾಶ ಸಿಗುತ್ತದೆಂದು ಲಭ್ಯವಿರುವ ಸೌಕರ್ಯಗಳಲ್ಲೇ ತರಬೇತಿ ಪಡೆಯುತ್ತಿದ್ದೆವು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಹ ಗುರುತಿಸಿ ನಮಗೆ ಉದ್ಯೋಗಾವಕಾಶ ಕಲ್ಪಿಸುತ್ತವೆ ಎಂಬ ಕನಸನ್ನೂ ಕಂಡಿದ್ದೆವು. ತಿಂಗಳ ಮುನ್ನವೇ ಪಾಸ್‌ಪೋರ್ಟ್ ಕೂಡ ಮಾಡಿಸಿಕೊಂಡಿದ್ದೆವು. ಕ್ರೀಡಾಕೂಟ ಆರಂಭವಾಗುವ ದಿನಾಂಕ ಹತ್ತಿರ ಬಂದರೂ, ಅಲ್ಲಿಗೆ ಕರೆದೊಯ್ಯುವ ಬಗ್ಗೆ ರಾಮಮೂರ್ತಿ ತಲೆ ಕೆಡಿಸಿಕೊಳ್ಳಲಿಲ್ಲ. ಈಗ ಹಣವನ್ನೂ  ಹಿಂದಿರುಗಿಸುತ್ತಿಲ್ಲ’ ಎಂದು ಇನ್ನೊಬ್ಬ ಕ್ರೀಡಾಪಟು ಆರೋಪಿಸಿದ್ದಾರೆ.

‘ಅಥ್ಲೀಟ್‌ಗಳನ್ನು ಅಂತರರಾಷ್ಟ್ರೀಯ ಕ್ರೀಡಾಕೂಟಗಳಿಗೆ ಕಳುಹಿಸುವ ಜವಾಬ್ದಾರಿ ಕ್ರೀಡಾ ಇಲಾಖೆಗೆ ಇರುತ್ತದೆ. ನಮ್ಮಿಂದ ಹಣ ಪಡೆದ ರಾಮಮೂರ್ತಿ, ‘ನೀವು ಯಾರನ್ನೂ ಸಂಪರ್ಕಿಸಬೇಡಿ. ನಾನೇ ಎಲ್ಲ ವ್ಯವಸ್ಥೆ ಮಾಡುತ್ತೇನೆ’ ಎಂದಿದ್ದರು. ಅಂಗವಿಕಲರ ನೋವು ಅವರಿಗೂ ಅರ್ಥವಾಗುತ್ತದೆಂದು ನಾವೂ ಸುಮ್ಮನಾಗಿದ್ದೆವು’ ಎಂದು ಅವರು  ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT