ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಪ್ಪಗೊಂಡನಹಳ್ಳಿ ಪುನಶ್ಚೇತನಕ್ಕೆ ಟೆಂಡರ್‌

ಅರ್ಕಾವತಿ ನದಿಯಲ್ಲಿ ‘ವೆಟ್‌ಲ್ಯಾಂಡ್‌’ ಶುದ್ಧೀಕರಣ ಘಟಕ ನಿರ್ಮಿಸಲು ಯೋಜನೆ
Last Updated 23 ಮಾರ್ಚ್ 2017, 20:08 IST
ಅಕ್ಷರ ಗಾತ್ರ
ಬೆಂಗಳೂರು:  ನಗರದ ಜನತೆಗೆ ಕುಡಿ­ಯುವ ನೀರು ಪೂರೈಸುವ ಪ್ರಮುಖ ಮೂಲಗಳಲ್ಲಿ ಒಂದಾಗಿದ್ದ ತಿಪ್ಪಗೊಂಡ­ನ­­ಹಳ್ಳಿಯ ಚಾಮರಾಜ­ಸಾಗರ ಜಲಾಶ­ಯ­­ದ ಪುನಶ್ಚೇತನಕ್ಕೆ ಜಲಮಂಡಳಿ ಟೆಂಡರ್‌ ಕರೆದಿದೆ. 
 
ಈ ಜಲಾಶಯಕ್ಕೆ ಎತ್ತಿನಹೊಳೆಯಿಂದ 1.8 ಟಿಎಂಸಿ ಅಡಿ ನೀರು ಹರಿಸಲು ರಾಜ್ಯ ಸರ್ಕಾರ ಉದ್ದೇಶಿಸಿದೆ. ಅದಕ್ಕೂ ಮುನ್ನ ಮಲಿನಗೊಂಡಿರುವ ಜಲಾಶಯದ  ನೀರನ್ನು ಶುದ್ಧೀಕರಿಸಬೇಕಿದೆ.

ಮಾದಾವರ ಕೆರೆಯ ಬಳಿ ಅರ್ಕಾವತಿ ನದಿಯಲ್ಲಿ ‘ವೆಟ್‌ಲ್ಯಾಂಡ್‌’ ಶುದ್ಧೀಕರಣ ಘಟಕ ನಿರ್ಮಿಸಿ ನೀರು ಸಂಸ್ಕರಿಸಲು ಮಂಡಳಿ ಯೋಜನೆ ರೂಪಿಸಿದೆ. ಇದನ್ನು ಅನುಷ್ಠಾನ ಮಾಡಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಜಲಮಂಡಳಿಗೆ ₹10 ಕೋಟಿ ಹಸ್ತಾಂತರಿಸಿದೆ. 
 
ಅರ್ಕಾವತಿ, ಕುಮದ್ವತಿ ನದಿಗಳ ಸಂಗಮ ತಿಪ್ಪಗೊಂಡನಹಳ್ಳಿ. ದೊಡ್ಡಬಳ್ಳಾಪುರ, ನೆಲಮಂಗಲ, ದೇವನಹಳ್ಳಿ, ಮಾಗಡಿ ಮತ್ತು ಬೆಂಗಳೂರು ಭಾಗದ 1,453 ಚದರ ಕಿ.ಮೀ. ಜಲಾನಯನ ಪ್ರದೇಶವನ್ನು ಇದು  ಹೊಂದಿದೆ. ಪ್ರತಿದಿನ 13.5 ಕೋಟಿ ಲೀಟರ್‌ ನೀರು ಸರಬರಾಜು ಮಾಡುವ ಸಾಮರ್ಥ್ಯವನ್ನು ಇಲ್ಲಿ ಜಲಾಗರ ಹೊಂದಿದೆ. 
 
1998ರಲ್ಲಿ ಕೊನೆಯ ಬಾರಿಗೆ ಜಲಾಶಯ ತುಂಬಿತ್ತು. 2004ರಲ್ಲಿ 72 ಅಡಿ ನೀರಿತ್ತು. ಆ ಬಳಿಕ ನೀರಿನ ಪ್ರಮಾಣ ಕಡಿಮೆಯಾಗುತ್ತಲೇ ಬಂತು. 2012ರ ಅಂತ್ಯದವರೆಗೆ ನಗರದ ಪೂರ್ವಭಾಗಕ್ಕೆ ನಿತ್ಯ ಸುಮಾರು 5 ಕೋಟಿ ಲೀಟರ್‌ ಪಂಪ್‌ ಮಾಡಲಾಗುತ್ತಿತ್ತು.
 
ಜಲಾಶಯದ ನೀರು ರಾಸಾಯನಿಕ ಮಿಶ್ರಿತವಾಗಿದೆ. ನೈಟ್ರೇಟ್‌ ಸೇರಿದಂತೆ ನೀರಿನಲ್ಲಿ ಕರಗಿದ ಘನವಸ್ತುಗಳ (ಟಿಡಿಎಸ್‌) ಪ್ರಮಾಣ ಜಲಾಶಯದಲ್ಲಿ ಶೇ 800ರಷ್ಟು ಇದೆ. ಈ ಪ್ರಮಾಣ ಶೇ 500ಕ್ಕಿಂತ ಕಡಿಮೆ ಇದ್ದರೆ ಕುಡಿಯಲು ಬಳಸಬಹುದು. ಹೀಗಾಗಿ ಇದರ ನೀರನ್ನು ಶುದ್ಧೀಕರಿಸಲು ಯೋಜಿಸಲಾಗಿದೆ.  
 
‘ನದಿಗೆ ಕೊಳಚೆ ನೀರು ಸೇರದಂತೆ ತಡೆಯಲು ನಾಗಸಂದ್ರದಲ್ಲಿ 2 ಕೋಟಿ ಲೀಟರ್‌ ಸಾಮರ್ಥ್ಯದ ತ್ಯಾಜ್ಯ ಸಂಸ್ಕರಣಾ ಘಟಕ ಹಾಗೂ ಚಿಕ್ಕಬಾಣಾವರದಲ್ಲಿ 50  ಲಕ್ಷ ಲೀಟರ್‌ ಸಾಮರ್ಥ್ಯದ ಎಸ್‌ಟಿಪಿ ನಿರ್ಮಿಸಲಾಗುತ್ತಿದೆ’ ಎಂದು ಜಲಮಂಡಳಿ ಅಧಿಕಾರಿಗಳು ತಿಳಿಸುತ್ತಾರೆ. 
 
***
ಟೆಂಡರ್‌ ಪ್ರಕ್ರಿಯೆ
- ಏಪ್ರಿಲ್‌ 24: ಭರ್ತಿ ಮಾಡಿದ ಟೆಂಡರ್‌ಗಳನ್ನು ಸಲ್ಲಿಸಲು ಕೊನೆಯ ದಿನ.
- ಏಪ್ರಿಲ್‌ 27: ತಾಂತ್ರಿಕ ಬಿಡ್‌ಗಳನ್ನು ತೆರೆಯುವ ದಿನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT