ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ 1.65 ಲಕ್ಷ ಮಕ್ಕಳಿಗೆ ಲಸಿಕೆ ಗುರಿ

ಏ.2ರಿಂದ ಪೋಲಿಯೊ ಲಸಿಕೆ ಆಂದೋಲನ
Last Updated 24 ಮಾರ್ಚ್ 2017, 4:41 IST
ಅಕ್ಷರ ಗಾತ್ರ

ಕೋಲಾರ: ಪೋಲಿಯೊ ಲಸಿಕೆ ಆಂದೋಲನಕ್ಕೆ ಜಿಲ್ಲೆಯಲ್ಲಿ ಸಕಲ ಸಿದ್ಧತೆ ಮಾಡಿಕೊಂಡು ಅಭಿಯಾನವನ್ನು ಸುಸೂತ್ರವಾಗಿ ನಡೆಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕಚಂದ್ರ ಅಧಿಕಾರಿಗಳಿಗೆ ಸೂಚಿಸಿದರು.

ರಾಷ್ಟ್ರೀಯ ಪಲ್ಸ್‌ ಪೋಲಿಯೊ ಆಂದೋಲನ ಕುರಿತು ನಗರದಲ್ಲಿ ಗುರುವಾರ ಅಧಿಕಾರಿಗಳ ಸಭೆ ನಡೆಸಿದ ಅವರು, ಏ.2 ಮತ್ತು ಏ.30ರಂದು ಎರಡು ಹಂತದಲ್ಲಿ ಪೋಲಿಯೊ ಲಸಿಕೆ ಆಂದೋಲನ ನಡೆಯಲಿದೆ ಎಂದರು.

‘ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಏ.2ರಿಂದ 3 ದಿನಗಳ ಕಾಲ ಮತ್ತು ನಗರ ಪ್ರದೇಶದಲ್ಲಿ 4 ದಿನ ಪೋಲಿಯೊ ಲಸಿಕೆ ಹಾಕಲಾಗುತ್ತದೆ. ಏ.30ರಿಂದ ಗ್ರಾಮೀಣ ಪ್ರದೇಶದಲ್ಲಿ 3 ದಿನ ಹಾಗೂ ನಗರ ಪ್ರದೇಶದಲ್ಲಿ 4 ದಿನ ಲಸಿಕೆ ಹಾಕಲಾಗುವುದು’ ಎಂದು ಹೇಳಿದರು.

‘ಕಾರ್ಯಕರ್ತರು ಮೊದಲ ದಿನ ಬೂತ್‌ಗಳಲ್ಲಿ ಮತ್ತು ನಂತರ 2 ದಿನಗಳ ಕಾಲ ಮನೆ ಮನೆಗೆ ತೆರಳಿ ಲಸಿಕೆ ಹಾಕುತ್ತಾರೆ. ಜಿಲ್ಲೆಯಲ್ಲಿ 1,65,699 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಇದೆ. ಜಿಲ್ಲೆಯಾದ್ಯಂತ 803 ಬೂತ್‌ಗಳನ್ನು ತೆರೆಯಲಾಗುತ್ತದೆ. 5 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಿಸಬೇಕು’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ 3,40,612 ಮನೆಗಳಿದ್ದು, ಪ್ರತಿ ಮನೆಗೂ ಭೇಟಿ ನೀಡಿ ಮಕ್ಕಳಿಗೆ ಲಸಿಕೆ ಹಾಕಲಾಗುತ್ತದೆ. ಲಸಿಕೆ ಆಂದೋಲನದಲ್ಲಿ 3,306 ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದು, ಇವರಲ್ಲಿ 156 ಮಂದಿ ಮೇಲ್ವಿಚಾರಕರು ಸೇರಿದ್ದಾರೆ. ಗುಡಿಸಲು, ಇಟ್ಟಿಗೆ ಕಾರ್ಖಾನೆ ಹಾಗೂ ತಾತ್ಕಾಲಿಕ ಶೆಡ್‌ಗಳಲ್ಲಿ ಸಾಕಷ್ಟು ಕುಟುಂಬಗಳು ವಾಸಿಸುತ್ತಿವೆ. ಈ ಕುಟುಂಬಗಳಲ್ಲಿನ ಮಕ್ಕಳಿಗೂ ಲಸಿಕೆ ಹಾಕುವ ಉದ್ದೇಶಕ್ಕೆ 4 ಸಂಚಾರ ದಳಗಳನ್ನು ರಚಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ರೋಟರಿ ಸಹಕಾರ: ‘ಲಸಿಕೆ ಆಂದೋಲನದ ಬಗ್ಗೆ ಕರಪತ್ರ, ಬ್ಯಾನರ್‌ ಮತ್ತು ಆಟೊಗಳ ಮೂಲಕ ಪ್ರಚಾರ ನಡೆಸಲಾಗುತ್ತದೆ. ಜತೆಗೆ ಜನರಲ್ಲಿ ಅರಿವು ಮೂಡಿಸಲು ಜಾಥಾಗಳನ್ನು ನಡೆಸಲಾಗುತ್ತದೆ. ಆಂದೋಲನಕ್ಕೆ ರೋಟರಿ ಸಂಸ್ಥೆ ಸಹಕಾರ ನೀಡುತ್ತಿದೆ. ರೋಟರಿ ಸಂಸ್ಥೆ ಸದಸ್ಯರು ಏ.2ರಂದು ಜಾಥಾ ನಡೆಸುತ್ತಾರೆ. ಪೋಲಿಯೊ ಲಸಿಕೆ ಆಂದೋಲನ ಕುರಿತು ಏ.27ರಂದು ಕಾರ್ಯಾಗಾರ ನಡೆಸಲಾಗುತ್ತದೆ’ ಎಂದು ವಿವರಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವಿಜಯ್‌ಕುಮಾರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪ್ರಸನ್ನ, ರೋಟರಿ ಸಂಸ್ಥೆ ಅಧ್ಯಕ್ಷ ರಾಮಚಂದ್ರಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆ ಪರಿವೀಕ್ಷಕ ಅಶೋಕ್ ಸಭೆಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT