ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂವಿನ ಕೃಷಿಯಲ್ಲಿ ಲಾಭ ಕಂಡ ರೈತ

ಹನಿ ನಿರಾವರಿ ಪದ್ಧತಿ ಮೂಲಕ ಯಶಸ್ಸು ಕಂಡ ರಾಮಣ್ಣ
Last Updated 24 ಮಾರ್ಚ್ 2017, 5:03 IST
ಅಕ್ಷರ ಗಾತ್ರ

ಮಾಲೂರು: ನೀರಿನ ಕೊರತೆಯಿಂದ ವಾಣಿಜ್ಯ ಬೆಳೆಗಳ ಕೃಷಿಗೆ ತಿಲಾಂಜಲಿ ಇಟ್ಟ ರೈತರು ಹೂವು ಕೃಷಿ ಕಡೆ ಮುಖ ಮಾಡಿದ್ದಾರೆ. ತಾಲ್ಲೂಕಿನ ಕಸಬಾ ಹೋಬಳಿಯ ತೊರ್ನಹಳ್ಳಿ ಗ್ರಾಮದ ರೈತ ರಾಮಣ್ಣ ತಮ್ಮ ಒಂದು ಎಕರೆಯಲ್ಲಿ ಕನಕಾಂಬರ ನಾಟಿ ಮಾಡಿ ಸುಮಾರು ಒಂದೂವರೆ ವರ್ಷಗಳಿಂದ ಉತ್ತಮ ಇಳುವರಿ ಪಡೆಯುತ್ತಿದ್ದಾರೆ.

ತರಕಾರಿಗಳನ್ನು ಬೆಳೆಯುತ್ತಿದ್ದ ರಾಮಣ್ಣ ಕೊಳವೆ ಬಾವಿಯಲ್ಲಿ ನೀರಿನ ಮಟ್ಟ ಕಡಿಮೆಯಾಗಿದ್ದರಿಂದ ಸ್ನೇಹಿತರ ಸಲಹೆ ಮೇರೆಗೆ ಹೂವಿನ ಕೃಷಿಯಲ್ಲಿ ತೊಡಗಿಕೊಂಡರು. ಕೊಳವೆ ಬಾವಿಯಲ್ಲಿ ಬರುವ ಅಲ್ಪ ಸ್ವಲ್ಪ ನೀರಿನಲ್ಲೇ ಹನಿ ನಿರಾವರಿ ಪದ್ಧತಿ ಮೂಲಕ ಹೂವಿನ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ.

ರಾಮಣ್ಣ ಬೆಳೆದ ಕನಕಾಂಬರ ಫಸಲು ಪ್ರಾರಂಭದಲ್ಲಿ ದಿನಕ್ಕೆ 4 ರಿಂದ 5 ಕೆ.ಜಿ ಹೂವು ಸಿಗುತ್ತಿತ್ತು. ನಂತರ  ಈಗ 8 ರಿಂದ 9 ಕೆ.ಜಿ ಹೂವು ಸಿಗುತ್ತಿದೆ. ಅಲ್ಲದೇ ತೋಟಕ್ಕೆ ಬಂದು ಖರೀದಿಸುವ ಹೂವು ಮಾರಾಟಗಾರರು ಸಾಮಾನ್ಯವಾಗಿ ಕೆಜಿಗೆ ₹ 150ರಿಂದ ₹ 200 ನೀಡಿ ಖರೀದಿಸುತ್ತಾರೆ. ಹಬ್ಬದ ದಿನಗಳಲ್ಲಿ ₹ 500ರಿಂದ ₹ 550 ನೀಡಿ ಕೊಂಡುಕೊಳ್ಳುತ್ತಿದ್ದಾರೆ.

ಕನಕಾಂಬರ ಹೂವಿಗೆ ಬೇಡಿಕೆ: ವರ್ಷದ ಆರಂಭದಿಂದ ಪ್ರಾರಂಭವಾಗುವ ಜಾತ್ರೆಗಳಿಂದ  ಹಿಡಿದು ವರ ಮಹಾಲಕ್ಷ್ಮಿ, ಶ್ರಾವಣ ಮಾಸದ ಹಬ್ಬಗಳು, ಮದುವೆ ಸಮಾರಂಭಗಳಲ್ಲಿ ಕನಕಾಂಬರ ಹೂವಿಗೆ  ಹೆಚ್ಚು ಬೇಡಿಕೆ ಇದೆ. ಗಿಡಗಳಿಂದ ಹೂವು ಬಿಡಿಸುವುದು ಸ್ವಲ್ಪ ಕಷ್ಟ ಕೆಲಸವಾದ್ದರಿಂದ ಕೂಲಿ ಹಾಳುಗಳಿಗೆ 1 ಕೆ.ಜಿ ಹೂವು ಬಿಡಿಸಲು ₹ 30 ನೀಡಬೇಕು. ಆದರೂ ಲಾಭ ಬರುವುದರಿಂದ ತೊಂದರೆ ಇಲ್ಲ ಎಂದು ರಾಮಣ್ಣ ಪತ್ನಿ ಚನ್ನಮ್ಮ ಅವರ ಮಾತು.

ದೀರ್ಘಾವದಿ ಬೆಳೆಗಳನ್ನು ನಂಬಿ ಕುಳಿತಾಗ ನಷ್ಟ ಬಂದರೆ ಹೊರೆಯಾಗುತ್ತದೆ. ಅಲ್ಪಕಾಲಿಕ ಕೃಷಿಯಲ್ಲಿಯೂ ಫಸಲು ಕೈಗೆ ಬರುವಾಗ ದರ ಇಳಿಕೆಯಾಗುತ್ತದೆ. ಆದರೆ ಹೂವಿನ ಕೃಷಿಯಲ್ಲಿ ಎಷ್ಟೇ ಪೈಪೊಟಿ ಇದ್ದರೂ ಅದಕ್ಕೆ ಬೇಡಿಕೆ ಕಡಿಮೆಯಾಗುವುದಿಲ್ಲ. ಶ್ರಮಕ್ಕೆ ತಕ್ಕ ಪ್ರತಿಫಲ ಖಂಡಿತ ದೊರೆಯುತ್ತದೆ ಎನ್ನುವರು ರಾಮಣ್ಣ.
–ವಿ.ರಾಜಗೋಪಾಲ್‌

ಬೆಳೆಯುವ ವಿಧಾನ
5 ರಿಂದ 6 ಕೆ.ಜಿ. ಬಿತ್ತನೆ ಮಾಡಿರುವ ಜಮೀನಿಗೆ ಹೆಕ್ಟೇರಿಗೆ ಸುಮಾರು 25 ಟನ್ ಕೊಟ್ಟಿಗೆ ಗೊಬ್ಬರ ಹಾಕಬೇಕು. ನಂತರ ಒಂದು ಅಡಿ ಅಂತರದಲ್ಲಿ ಬದುಗಳನ್ನು ನಿರ್ಮಿಸಿ ಸಸಿಗಳನ್ನು ನಾಟಿ ಮಾಡಬೇಕು.

ನಾಟಿ ಸಮಯದಲ್ಲಿ  ಕನಕಾಂಬರ ಬೆಳೆಗೆ  ಹೆಕ್ಟೇರಿಗೆ 33.4 ಕೆ.ಜಿ ಸಾರಜನಕ, 60ಕೆ.ಜಿ  ರಂಜಕ ಹಾಗೂ 60ಕೆ.ಜಿ ಪೊಟ್ಯಾಷ್ ರಾಸಾಯನಿಕ ಗೊಬ್ಬರಗಳನ್ನು ನಾಟಿಗೆ ಮುಂಚೆಯೇ ಹಾಕಬೇಕು. ನಾಟಿ ಮಾಡಿದ ಮೂರು ತಿಂಗಳಿಗೆ ಹೂವು ಬಿಡಲು ಪ್ರಾರಂಭವಾಗುತ್ತದೆ ಎಂಬುದು ರಾಮಣ್ಣ ಅವರ ಮಾತು.

ಮಹಿಳೆಯರಿಗೆ ಅಚ್ಚು ಮೆಚ್ಚು
ಮಲ್ಲಿಗೆ ಹೂವು ಕಂಪಿನಿಂದ ಎಲ್ಲರ ಗಮನ ಸೆಳೆದರೂ ಕೂಡ ಕನಕಾಂಬರ ಹೂವುಗಳನ್ನು ಮಹಿಳೆಯರು ಇಷ್ಟ ಪಡುತ್ತಾರೆ. ಕಾರಣ ಕನಕಾಂಬರ ಹೂವುಗಳು ಬೇಗ ಬಾಡುವುದಿಲ್ಲ. ಹೆಚ್ಚು ಕಾಲ ತಲೆಗೆ ಮುಡಿದುಕೊಳ್ಳಬಹುದು. ಹೀಗಾಗಿ ಗ್ರಾಮೀಣ ಪ್ರದೇಶದ ರಸ್ತೆ ಬದಿಗಳು ಅಥವಾ ಮಾರುಕಟ್ಟೆಯಲ್ಲಿ ಕನಕಾಂಬರ ಹೂವುಗಳ ಮಾರಾಟ ಹೆಚ್ಚಾಗಿ ಕಂಡು ಬರುತ್ತಿದೆ ಎಂದು ಮಹಿಳೆಯರ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT