ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೋತ್ಸಾಹಧನ ನಿಯಮ ಉಲ್ಲಂಘನೆ

ಹಿರಿಯೂರು ನಗರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯ ಮಂಜುನಾಥ್‌ ಆರೋಪ
Last Updated 24 ಮಾರ್ಚ್ 2017, 5:35 IST
ಅಕ್ಷರ ಗಾತ್ರ

ಹಿರಿಯೂರು:  ‘ನಗರಸಭೆ ಅನುದಾನದಡಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡುವಾಗ ನಿಯಮಗಳನ್ನು ಪಾಲಿಸಿಲ್ಲ’ ಎಂದು ಹಿರಿಯ ಸದಸ್ಯ ಎ.ಮಂಜುನಾಥ್‌ ಆರೋಪಿಸಿದರು.

ಹಿರಿಯೂರಿನ ನಗರಸಭೆ ಸಭಾಂಗಣದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ‘ಶೇ 90ರಷ್ಟು ಅಂಕ ಪಡೆದ ನಿಯಮದಡಿ ಬರುವ ವಿದ್ಯಾರ್ಥಿಗಳನ್ನು ಕಡೆಗಣಿಸಿ ಶೇ 65ರಷ್ಟು ಅಂಕ ಪಡೆದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ’ ಎಂದು ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಟಿ. ಚಂದ್ರಶೇಖರ್‌, ‘ಅರ್ಹ ಫಲಾನುಭವಿಗಳ ಹೆಸರು ಪಟ್ಟಿಯಲ್ಲಿ ತಪ್ಪಿದರೆ ಅಂಥವರಿಗೂ ಅನುದಾನ ನೀಡಲು ಅವಕಾಶವಿದೆ. ಅರ್ಜಿಗಳನ್ನು ಮತ್ತೆ ಪರಿಶೀಲಿಸಲಾಗುವುದು’ ಎಂದು ಭರವಸೆ ನೀಡಿದರು.

‘ನಗರದಲ್ಲಿ ಎರಡು ದಿನಗಳ ಹಿಂದೆ ಎಚ್1ಎನ್1ನಿಂದ ಒಬ್ಬರು ಮೃತ ಪಟ್ಟಿದ್ದಾರೆ. ಹೀಗಾಗಿ ನಗರದಲ್ಲಿರುವ ಹಂದಿ, ಬೀದಿ ನಾಯಿಗಳನ್ನು ಸ್ಥಳಾಂತರಿಸಬೇಕು’ ಎಂದು ಸದಸ್ಯ ಅಬ್ಬಾಸ್ ಒತ್ತಾಯಿಸಿದರು.

ವರ್ಗಾವಣೆಗೆ ಆಗ್ರಹ:  ಹಂದಿ, ನಾಯಿ ಹಾವಳಿ ಹೆಚ್ಚಿದ್ದು, ನಗರದ ಬಡಾವಣೆಗಳಲ್ಲಿ ಅನೈರ್ಮಲ್ಯ ತಾಂಡವವಾಡುತ್ತಿದೆ. ಹೀಗಿದ್ದರೂ ಪರಿಸರ ಎಂಜಿನಿಯರ್‌ ನಿಷ್ಕ್ರಿಯರಾಗಿದ್ದಾರೆ. ಸದಸ್ಯರ ಮೊಬೈಲ್ ಕರೆ ಸ್ವೀಕರಿಸದ, ಉತ್ತರ ನೀಡದ ಅಧಿಕಾರಿ ನಗರಸಭೆಗೆ ಬೇಕಾಗಿಲ್ಲ. ಕೂಡಲೇ ಅವರನ್ನು ಬೇರೆ ಕಡೆಗೆ ವರ್ಗಾವಣೆ ಮಾಡಿ ಎಂದು ಹಲವು ಸದಸ್ಯರು ಒತ್ತಾಯಿಸಿದರು.

ಸದಸ್ಯರ ಭಾವನೆಗೆ ಸ್ಪಂದಿಸಿದ ಆಯುಕ್ತ ರಮೇಶ್ ಸುಣಗಾರ್, ‘ಪರಿಸರ ಎಂಜಿನಿಯರ್ ವಿರುದ್ಧ ಕ್ರಮಕ್ಕೆ ಮೇಲಿನ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

‘ನಗರದ ಎಲ್ಲಾ ವಾರ್ಡ್‌ಗಳಲ್ಲಿ ನೀರನ್ನು ಅನಗತ್ಯವಾಗಿ ಪೋಲು ಮಾಡಲಾಗುತ್ತಿದೆ. ಸಾವಿರಾರು ನಲ್ಲಿಗಳಿಗೆ ನಿಯಂತ್ರಕ ಅಳವಡಿಸಿಲ್ಲ. ಬಹಳಷ್ಟು ಕಡೆ ನಲ್ಲಿ ನೀರು ಚರಂಡಿ ಸೇರುತ್ತಿದೆ. ನೀರಿಗೆ ಎಲ್ಲೆಡೆ ಹಾಹಾಕಾರವಿದೆ. ಸದಸ್ಯರು ತಮ್ಮ ವಾರ್ಡ್ ನಿವಾಸಿಗಳಿಗೆ ನೀರು ಪೋಲು ಮಾಡದಂತೆ ಎಚ್ಚರ ವಹಿಸಲು ತಿಳಿವಳಿಕೆ ನೀಡಬೇಕು’ ಎಂದು ಅಧ್ಯಕ್ಷರು ಮನವಿ ಮಾಡಿದರು.

ಸದಸ್ಯ ಜಬೀವುಲ್ಲಾ ಮಾತನಾಡಿ, ‘ನಗರದ ೨೭ನೇ ವಾರ್ಡ್‌ಗೆ ನಗರಸಭೆ ಅನುದಾನವನ್ನು ತಾರತಮ್ಯ ಮಾಡದೇ ಸಮಾನವಾಗಿ ಹಂಚಿಕೆ ಮಾಡಬೇಕು. ಬರದ ಹಿನ್ನೆಲೆಯಲ್ಲಿ ಸಂತೆ ಹಾಗೂ ನಿತ್ಯ ಬೀದಿಬದಿ ವ್ಯಾಪಾರ ನಡೆಸುವ ರೈತರು ಮತ್ತು ವರ್ತಕರಿಂದ ಜಕಾತಿ (ಕಂದಾಯ) ಸಂಗ್ರಹಿಸಬೇಡಿ.

ನಗರದ ಲಕ್ಷ್ಮಮ್ಮ ಬಡಾವಣೆಯ ಪಾರ್ಕ್‌ ಅನ್ನು ಖಾಸಗಿ ವಿದ್ಯಾಸಂಸ್ಥೆ ಆಕ್ರಮಿಸಿಕೊಂಡಿದೆ. ಇದರಿಂದ ಸಾರ್ವಜನಿಕರಿಗೆ ಪಾರ್ಕ್‌ ಅನ್ನು ವಶಕ್ಕೆ ಪಡೆದು ಸಾರ್ವಜನಿಕರ ಉಪಯೋಗಕ್ಕೆ ಮುಕ್ತಗೊಳಿಸಬೇಕು’ ಎಂದು ಒತ್ತಾಯಿಸಿದರು.

ಸದಸ್ಯೆ ಪುಷ್ಪಾ ಮಾತನಾಡಿ, ‘ನಗರದ ಒಂಬತ್ತನೇ ವಾರ್ಡ್‌ಗೆ ಅಂಗನವಾಡಿ ಕೇಂದ್ರದ ಅಗತ್ಯವಿದೆ.ಕೇಂದ್ರ ತೆರೆಯಲು ಅನುದಾನ ಮಂಜೂರು ಮಾಡಬೇಕು’ ಎಂದು ಒತ್ತಾಯಿಸಿದರು.

ಸದಸ್ಯ ಜಬೀವುಲ್ಲಾ ಅವರು, ‘ನಗರದ ಅಂಗನವಾಡಿ ಕೇಂದ್ರಗಳಿಗೆ ಶೌಚಾಲಯಗಳಿಲ್ಲ. ಮೊದಲು ಶೌಚಾಲಯ ನಿರ್ಮಿಸಲು ಅನುದಾನ ಮಂಜೂರು ಮಾಡಬೇಕು’ ಎಂದು ಆಗ್ರಹಿಸಿದರು.

ಆಯುಕ್ತ ರಮೇಶ್ ಸುಣಗಾರ್ ಮಾತನಾಡಿ, ‘ಸರ್ಕಾರದಿಂದ ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ₹ 2 ಕೋಟಿ ಅನುದಾನ ಮಂಜೂರಾಗಿದೆ. ಈಗಾಗಲೇ ₹ 4. 66 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕ್ರಿಯಾಯೋಜನೆ ಸಿದ್ಧ ಗೊಂಡಿದೆ’ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಉಪಾಧ್ಯಕ್ಷೆ ಇಮ್ರಾನ್‌ಬಾನು, ಸ್ಥಾಯಿ ಸಮಿತಿ ಅಧ್ಯಕ್ಷ ಸಂಜಯ್‌ಕುಮಾರ್‌ ಜೈನ್, ಸದಸ್ಯರಾದ ಪ್ರೇಮ್ ಕುಮಾರ್, ಶಿವಣ್ಣ, ನಟರಾಜ್, ತಿಮ್ಮರಾಜು ಹಾಜರಿದ್ದರು.

‘ಟೂರ್‌ ಹೋಗೋಣ  ’
‘ಗಿಡಾನೂ ಬೇಡ; ಮರಾನೂ ಬೇಡ. ಎಲ್ಲಾದರೂ ಟೂರ್‌ ಹೋಗೋಣ; ನಡೀರಿ..!’
‘ನಗರಸಭೆಯಲ್ಲಿ ಉಳಿದಿರುವ ₹ 2.70 ಲಕ್ಷ ಹಣದಲ್ಲಿ ನಗರದಲ್ಲಿ ಗಿಡ ನೆಟ್ಟು ಹಸಿರು ಮಾಡೋಣ’ ಎಂದು ಅಧ್ಯಕ್ಷ ಟಿ. ಚಂದ್ರಶೇಖರ್‌ ಹೇಳಿದಾಗ, ಕೆಲವು ಸದಸ್ಯರು ಈ ರೀತಿ ಪ್ರತಿಕ್ರಿಯಿಸಿದರು. ಇದು ಜನಪ್ರತಿನಿಧಿಗಳ ಜನಪರ ಹಾಗೂ ಪರಿಸರ ಕಾಳಜಿಯನ್ನು ಎತ್ತಿ ತೋರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT