ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಾಯಕಾರಿ ಮಟ್ಟಕ್ಕೆ ಕುಸಿದ ಅಂತರ್ಜಲ

ನೈಸರ್ಗಿಕ ಅರಣ್ಯದ ನಾಶ, ಕೆರೆಗಳ ಶೇಖರಣಾ ಸಾಮರ್ಥ್ಯ ಕಸಿದುಕೊಂಡ ಹೂಳು
Last Updated 24 ಮಾರ್ಚ್ 2017, 5:47 IST
ಅಕ್ಷರ ಗಾತ್ರ

ಸಾಗರ:  ಅಪಾರ ಪ್ರಮಾಣದ ಕಾಡು ನಾಶ, ಏಕಜಾತಿ ಸಸ್ಯಗಳ ನೆಡುತೋಪು, ಕೊಳವೆ ಬಾವಿಗಳ ಆರ್ಭಟ, ನದಿ, ಕೆರೆಕಟ್ಟೆಗಳ ಸಂರಕ್ಷಣೆಯಲ್ಲಿ ನಿರ್ಲಕ್ಷ್ಯ... ಇದರ ಪರಿಣಾಮ ಪರಿಣಾಮ ಅಪ್ಪಟ ಮಲೆನಾಡು ಪ್ರದೇಶವಾಗಿರುವ ಸಾಗರ ತಾಲ್ಲೂಕಿನಲ್ಲಿ ಕೂಡ ಈಚೆಗಿನ ವರ್ಷಗಳಲ್ಲಿ ಅಂತರ್ಜಲದ ಮಟ್ಟ ದಿನೇ ದಿನೇ ಕುಸಿಯುತ್ತಿದೆ.

ನೀರಿನ ಮೂಲಗಳನ್ನು, ನೀರು ಶೇಖರಣೆಯಾಗುವ ಕೆರೆ–ಕುಂಟೆಗಳನ್ನು ಈ ತಾಲ್ಲೂಕಿನಲ್ಲಿ ನಿಕೃಷ್ಟವಾಗಿ ನಡೆಸಿಕೊಂಡ ಕಾರಣ ಬಹುತೇಕ ಕೆರೆಗಳಲ್ಲಿ ಹೂಳು ತುಂಬಿ ತಮ್ಮ ಶೇಖರಣಾ ಸಾಮರ್ಥ್ಯವನ್ನು ಕಳೆದುಕೊಂಡಿವೆ.

ಸಾಗರ ತಾಲ್ಲೂಕಿನಲ್ಲಿ 65.9 ಕಿ.ಮೀ. ವ್ಯಾಪ್ತಿಯಲ್ಲಿ ವರದಾ ನದಿ ಹರಿಯುತ್ತಿದ್ದು ಇದರ ಜಲಾನಯದ ವಿಸ್ತಾರ 607.97 ಚ.ಕಿ.ಮೀ. ಆಗಿದೆ. ಈ ನದಿಯ ನಿರ್ವಹಣೆಯನ್ನು ಕಡೆಗಣಿಸಿ ಘನ ಹಾಗೂ ದ್ರವ ತ್ಯಾಜ್ಯಗಳನ್ನು ನದಿಗೆ ಎಸೆದ ಪರಿಣಾಮ ಮಳೆಗಾಲದ ನಂತರ ಇಲ್ಲಿನ ಕೆರೆಗಳು ಹಾಗೂ ಅವುಗಳನ್ನೇ ಅವಲಂಬಿಸಿರುವ ಝರಿ ತೊರೆಗಳು ಬರಡಾಗುತ್ತಿರುವ ದೃಶ್ಯ ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯವಾಗುತ್ತಿದೆ.

ಈ ತಾಲ್ಲೂಕಿನಲ್ಲಿ ವ್ಯಾಪಕ ಪ್ರಮಾಣದಲ್ಲಿ ಅರಣ್ಯ ನಾಶವಾಗುತ್ತಿರುವುದು ಅಂತರ್ಜಲದ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. ಭಾರತೀಯ ವಿಜ್ಞಾನ ಸಂಸ್ಥೆಯ ಶಕ್ತಿ ಮತ್ತು ಜೌಗು ಭೂಮಿ ಸಂಶೋಧನಾ ವಿಭಾಗ ಎರಡು ವರ್ಷಗಳ ಹಿಂದೆ ನಡೆಸಿರುವ ಅಧ್ಯಯನದ ಪ್ರಕಾರ ಇಲ್ಲಿ 1973ರಿಂದ 2014ರವರೆಗೆ ಅರಣ್ಯದ ಪ್ರಮಾಣ ಶೇ 45.2ರಿಂದ ಶೇ 33.4ಕ್ಕೆ ಕುಸಿದಿದೆ.

ಬಗರ್‌ಹುಕುಂ ಮಂಜೂರಾತಿ ಹೆಸರಿನಲ್ಲಿ ಈಗಾಗಲೇ ಸಾಕಷ್ಟು ವಿಸ್ತಾರವಾದ ಅರಣ್ಯ ಭೂಮಿ ಕೃಷಿಭೂಮಿಯಾಗಿ ಪರಿವರ್ತನೆಯಾಗಿದೆ. ಅದರಲ್ಲೂ ಸಾಂಪ್ರದಾಯಿಕವಾದ ಭತ್ತದ ಬದಲಾಗಿ ಶುಂಠಿ, ಅನಾನಸ್‌ನಂತಹ ವಾಣಿಜ್ಯ ಬೆಳೆಗಳು ಇಂತಹ ಬಗರ್‌ಹುಕುಂ ಜಮೀನಿನಲ್ಲಿ ಬೆಳೆಯುತ್ತಿರುವುದೂ ಅಂತರ್ಜಲಕ್ಕೆ ದೊಡ್ಡ ಪೆಟ್ಟು ನೀಡುತ್ತಿವೆ. ಈಗ ಅರಣ್ಯ ಭೂಮಿ ಹಕ್ಕು ಕಾಯ್ದೆ ಹೆಸರಿನಲ್ಲಿ ಮತ್ತಷ್ಟು ಅರಣ್ಯ ನಾಶವಾಗುವ ಅಪಾಯ ಕೂಡ ಎದುರಾಗಿದೆ.

ತಾಲ್ಲೂಕಿನ ಎಲ್ಲೆಡೆ ಏಕಜಾತಿಯ ನೆಡುತೋಪುಗಳು ನೀರಿನ ಮಟ್ಟ ಕುಸಿಯಲು ದೊಡ್ಡ ಮಟ್ಟದ ಕೊಡುಗೆ ನೀಡಿದೆ. ಈಗ ಸರ್ಕಾರಿ ಭೂಮಿಯಲ್ಲಿ ನೀಲಗಿರಿ ನೆಡಬಾರದು ಎಂಬ ಆದೇಶ ಹೊರ ಬಿದ್ದಿದೆ. ಆದರೆ, ಇಲ್ಲಿನ ಮಣ್ಣಿನಲ್ಲಿರುವ ನೀಲಗಿರಿ ಸಸ್ಯದ ಬೇರು ಮತ್ತೆ ಚಿಗುರುವ ಗುಣ ಹೊಂದಿದ್ದು ಅದನ್ನು ಸಂಪೂರ್ಣ ನಾಶ ಮಾಡುವುದು ಸುಲಭ ಸಾಧ್ಯವಲ್ಲ. ಈ ಮೂಲಕ ಮಣ್ಣಿನ ಹಾಗೂ ವಾತಾವರಣದ ತೇವಾಂಶ ಕಡಿಮೆಯಾಗುವ ಅನಾಹುತ ಕಣ್ಣೆದುರು ಇದೆ.

ಈ ಭಾಗದಲ್ಲಿ ಶೇ 90ರಷ್ಟು ಕೊಳವೆಬಾವಿಗಳು ವಿಫಲ ಎಂಬ ಅಂಶ ಗೊತ್ತಿದ್ದರೂ ಒಣಗುತ್ತಿರುವ ತೋಟ ಹಾಗೂ ಬೆಳೆಗಳನ್ನು ಉಳಿಸಿ
ಕೊಳ್ಳುವ ಕೊನೆಯ ಪ್ರಯತ್ನವಾಗಿ ಎಲ್ಲೆಂದರಲ್ಲಿ ಕೊಳವೆಬಾವಿಗಳನ್ನು ಕೊರೆಸಲಾಗುತ್ತಿದೆ. ವಿಫಲವಾದ ಕೊಳವೆಬಾವಿಗಳಲ್ಲಿ ಯಂತ್ರಗಳು ಬರೀ ಕಲ್ಲಿನ ಪುಡಿಯನ್ನು ಮೇಲೆತ್ತಿ ತರುತ್ತಿವೆ. ಹೀಗೆ ಅನಿಯಂತ್ರಿತವಾಗಿ ಕೊರೆಯುತ್ತಿರುವ ಕೊಳವೆಬಾವಿಗಳಿಂದ ತೆರೆದ ಬಾವಿ ಹಾಗೂ ಕೆರೆಗಳ ನೀರಿನ ಸೆಲೆ ಬತ್ತುತ್ತಿವೆ.

ಶರಾವತಿ ಹಿನ್ನೀರಿನ ಪ್ರದೇಶದಿಂದ ಸಾಗರ ನಗರಕ್ಕೆ ಕುಡಿಯುವ ನೀರು ತರುವ ಯೋಜನೆ ಕಾರ್ಯಗತಗೊಂಡಿರುವ ಹಿನ್ನೆಲೆಯಲ್ಲಿ ಈ ವರ್ಷ ನಗರದ ಜನತೆಗೆ ಕುಡಿಯುವ ನೀರಿನ ಕೊರತೆಯ ಬಿಸಿ ಅಷ್ಟಾಗಿ ತಟ್ಟುವಂತೆ ಕಾಣುತ್ತಿಲ್ಲ.

ಆದರೆ ಮಳೆಯ ಪ್ರಮಾಣ ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ಕಡಿಮೆಯಾಗುತ್ತಿರುವುದನ್ನು ಗಮನಿಸಿದರೆ ಹಿನ್ನೀರಿನ ಪ್ರದೇಶದಲ್ಲೂ ನೀರಿನ ಕೊರತೆಯಾಗುವುದು ಖಚಿತವಾಗಿದೆ. ಹೀಗಾದಲ್ಲಿ ಸರ್ಕಾರ ನೂರಾರು ಕೋಟಿ ರೂಪಾಯಿ ವೆಚ್ಚ ಮಾಡಿ ರೂಪಿಸಿರುವ ಯೋಜನೆ ನಿಷ್ಪ್ರಯೋಜಕವಾಗುವ ಅಪಾಯವಿದೆ.

ಬಯಲುಸೀಮೆ ಪ್ರದೇಶದ ಜನರಿಗಾದರೆ ನೀರಿನ ಕೊರತೆಯನ್ನು ನಿರ್ವಹಣೆ ಮಾಡುವ ಕಲೆ ಸಿದ್ಧಿಸಿದೆ. ಆದರೆ, ಇಷ್ಟು ವರ್ಷಗಳ ಕಾಲ ಯಥೇಚ್ಛವಾಗಿ ನೀರನ್ನು ತಮ್ಮ ದೈನಂದಿನ ಬದುಕಿನಲ್ಲಿ ಬಳಸುತ್ತಾ ಬಂದಿರುವ ಮಲೆನಾಡಿನ ಜನತೆಗೆ ಮುಂಬರುವ ವರ್ಷಗಳಲ್ಲಿ ಕುಸಿಯು
ತ್ತಿರುವ ಅಂತರ್ಜಲದ ಮಟ್ಟ ದೊಡ್ಡ ಪ್ರಮಾಣದಲ್ಲಿ ಸಂಕಷ್ಟ ತರುವ ಸಾಧ್ಯತೆಗಳು ನಿಚ್ಚಳವಾಗಿದೆ.
– ಎಂ.ರಾಘವೇಂದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT