ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ ಜೀವಜಲದ ಆ ಎರಡು ಕೆರೆಗಳು...

ಸಾಗರದ ಭೀಮನಕೋಣೆ, ಶಿವಮೊಗ್ಗದ ವಿಠಗೊಂಡನಕೊಪ್ಪ ಗ್ರಾಮಸ್ಥರ ಸಾಧನೆ
Last Updated 24 ಮಾರ್ಚ್ 2017, 5:59 IST
ಅಕ್ಷರ ಗಾತ್ರ

ಶಿವಮೊಗ್ಗ: ಬೇಸಿಗೆಯ ತಾಪಕ್ಕೆ ಜಿಲ್ಲೆಯಲ್ಲಿ ಅಂತರ್ಜಲ ಪಾತಾಳ ತಲುಪುತ್ತಿದ್ದರೆ, ಸಾಗರ ತಾಲ್ಲೂಕಿನ ಭೀಮನಕೋಣೆಯ ಕರಡಿ ಕೆರೆ, ಶಿವಮೊಗ್ಗ ತಾಲ್ಲೂಕಿನ ಹಾರನಹಳ್ಳಿ ಸಮೀಪದ ವಿಠಗೊಂಡನಕೊಪ್ಪದ ಹುಲಿಕೆರೆಗಳು ಬೇಸಿಗೆಯಲ್ಲೂ ಜಲಾವೃತವಾಗಿ ನಳನಳಿಸುತ್ತಿವೆ.

ಬೇಸಿಗೆಯಲ್ಲೂ ಸಾಕಷ್ಟು ನೀರಿನ ಸಂಗ್ರಹವಿದ್ದು, ಜನ–ಜಾನುವಾರು ಜತೆಗೆ, ನೂರಾರು ಪಕ್ಷಿಗಳಿಗೆ ಆಶ್ರಯ ತಾಣವಾಗಿವೆ. ಬಿಸಿಲ ದಾಹ ತಣಿಸುವ ಈಜು ಕೊಳಗಳಾಗಿವೆ.

ಭೀಮನಕೋಣೆಯ ಕರಡಿ ಕೆರೆ: ಸಾಗರ ನಗರದಿಂದ ಎಂಟು ಕಿ.ಮೀ. ದೂರದಲ್ಲಿರುವ ಭೀಮನಕೋಣೆಯ ಕರಡಿ ಕೆರೆ ಈಗ ಜಿಲ್ಲೆಯ ಜನರ ಆಕರ್ಷಣೆಯ ಕೇಂದ್ರವಾಗಿದೆ.

ಕೆರೆ ಊರಿನ ಜನರ ಜತೆ ಭಾವನಾತ್ಮಕ ಸಂಬಂಧ ಹೊಂದಿದೆ. 2012ಕ್ಕೂ ಹಿಂದೆ ಈ ಕೆರೆ ಒಂದು ನಿರ್ಜೀವ ಕೆರೆಯಾಗಿತ್ತು. ಸಾಗರದ ಹರೀಶ್‌ ದಾಮೋದರ್‌ ನವಾತೆ ಆ ಗ್ರಾಮಕ್ಕೆ ಭೇಟಿ ನೀಡಿದ ನಂತರ ಕೆರೆಯ ಚಿತ್ರಣವೇ ಬದಲಾಯಿತು.

ಮಗನಿಗೆ ಈಜು ಕಲಿಸಲು ಹೋಗಿದ್ದ ನವಾತೆ ಅವರು, ಗ್ರಾಮದ ಮುಖ್ಯರಸ್ತೆಯಲ್ಲೇ ಇದ್ದ ಉಪಯೋಗಕ್ಕೆ ಬಾರದ ಈ ಕೆರೆ ಅಭಿವೃದ್ಧಿಪಡಿಸಲು ನಿರ್ಧರಿಸಿದ್ದರು. ಗ್ರಾಮದ ಮನೆಮನೆಗೆ ತೆರಳಿ ಕೆರೆ ಸ್ವಚ್ಛಗೊಳಿಸುವ ಕುರಿತು ಜಾಗೃತಿ ಮೂಡಿಸಿದರು. ಕೆರೆ ಉಪಯುಕ್ತತೆ, ಈಜು ಕಲಿಯುವುದರ ಲಾಭ ಮನವರಿಕೆ ಮಾಡಿಕೊಟ್ಟರು.

ಅವರ ಮಾತಿಗೆ ಸಮ್ಮತಿ ಸೂಚಿಸಿದ ಗ್ರಾಮಸ್ಥರು ಪ್ರತಿ ಮನೆಯಿಂದಲೂ ಪರಿಕರ ತಂದು ಸ್ವಚ್ಛತಾ ಕಾರ್ಯಕ್ಕೆ ಮುಂದಾದರು. ಹಂತಹಂತವಾಗಿ ಕೆಲಸ ಕೈಗೆತ್ತಿಕೊಂಡರು. ಈಗ ಆ ಕೆರೆ ಸುಂದರ ಕೆರೆಯಾಗಿ ರೂಪುಗೊಂಡಿದೆ.

ಚಿಕ್ಕಮಕ್ಕಳು, ವೃದ್ಧರು, ಬಾಲಕಿಯರು, ಮಹಿಳೆಯರು ಎನ್ನದೇ ವಯೋಮಿತಿಯ ಹಂಗಿಲ್ಲದೇ ಎಲ್ಲರೂ ಈ ಕೆರೆಯಲ್ಲಿ ಈಜು ಕಲಿತಿದ್ದಾರೆ. ಕೆರೆ ಸ್ವಚ್ಛಗೊಳಿಸಿ, ನೀರು ಸಂಗ್ರಹ ಮಾಡಿದ್ದಾರೆ. ನಿತ್ಯವೂ ವಯಸ್ಸು, ಲಿಂಗಭೇದದ ಹಂಗಿಲ್ಲದೇ ಈಜುತ್ತಾರೆ.

ನಿತ್ಯ ಸ್ವಲ್ಪ ಸಮಯವಾದರೂ ಈಜುವ ಕಾರಣ ಜನರ ಆರೋಗ್ಯವೂ ಸುಧಾರಿಸಿದೆ. ಮೈಕೈ ನೋವು, ಸೊಂಟ ನೋವು ಮಾಯವಾಗಿವೆ. ಬಹುತೇಕ ಜನರ ಬೊಜ್ಜು ಕರಗಿದೆ. ಕೆರ ಸುತ್ತಮುತ್ತಲ ಅಂತರ್ಜಲಮಟ್ಟವೂ ಹೆಚ್ಚಾಗಿದೆ.

ವಿಠಗೊಂಡನಕೊಪ್ಪದ ಹುಲಿಕೆರೆ: ಸರ್ಕಾರಿ ಯೋಜನೆ ಸರಿಯಾಗಿ ಸದ್ಬಳಕೆ ಮಾಡಿಕೊಂಡರೆ ಬೇಸಿಗೆಯ ಬವಣೆ ಹೇಗೆ ನಿಭಾಯಿಸಬಹುದು ಎನ್ನುವುದಕ್ಕೆ ವಿಠಗೊಂಡನಕೊಪ್ಪದ ಜನರೇ ಸಾಕ್ಷಿ.

ವಿಠಗೊಂಡನಕೊಪ್ಪದ ಗ್ರಾಮಸ್ಥರು ನಿವೃತ್ತ ಗ್ರಾಮಲೆಕ್ಕಿಗ ಸಿ.ಶಿವಾನಂದಪ್ಪ ಅವರ ಅಧ್ಯಕ್ಷತೆಯಲ್ಲಿ ಬಸವೇಶ್ವರ ಕೆರೆ ಅಭಿವೃದ್ಧಿ ಸಂಘ ಕಟ್ಟಿಕೊಂಡು ಗ್ರಾಮದ ವ್ಯಾಪ್ತಿಯ ಹುಲಿಕೆರೆ ಹಾಗೂ ಅಗಸಿನಕಟ್ಟೆ ಕೆರೆ ಅಭಿವೃದ್ಧಿ ಪಡಿಸಿದ್ದಾರೆ. 2012ರ ನಂತರ ಸಂಘದ ನೇತೃತ್ವದಲ್ಲಿ ಕೆರೆ ಸ್ವಚ್ಛಗೊಳಿಸಿ, ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು.

ಪ್ರತಿನಿತ್ಯ ಗ್ರಾಮದ ಜನರು ಸರದಿಯ ಮೇಲೆ ಶ್ರಮದಾನ ಮಾಡಿದ್ದಾರೆ. ಸರ್ಕಾರ ಹುಲಿಕೆರೆಗೆ ನೀಡಿದ ₹ 14.40 ಲಕ್ಷ ಹಾಗೂ ಅಗಸಿನಕಟ್ಟೆ ಕೆರೆಗೆ ನೀಡಿದ ₹ 15.43 ಲಕ್ಷ ಅನುದಾನ ಸದ್ಬಳಕೆ ಮಾಡಿಕೊಂಡು ಕೆರೆ ಹಾಗೂ ಸುತ್ತಲ ಕಾಲುವೆ ಅಭಿವೃದ್ಧಿಗೆ ಬಳಸಿಕೊಳ್ಳಲಾಯಿತು.

ಒಂದು ಮಳೆಗಾಲ ಮುಗಿಯುತ್ತಿದ್ದಂತೆ ಕೆರೆಗೆ ಜೀವಕಳೆ ಬಂತು. ಜೀವಜಲ ತುಂಬಿತು. ಗ್ರಾಮದ ಕೊಳವೆಬಾವಿಗಳಲ್ಲಿ ಅಂತರ್ಜಲ ಹೆಚ್ಚಾಯಿತು. ಒಂದು ಮಳೆಗಾಲ ಮುಗಿಯುವುದರ ಒಳಗೆ ಸಾಕಷ್ಟು ನೀರು ಸಂಗ್ರಹವಾಯಿತು. ಊರಿನ ಜಾನುವಾರಿಗೆ ವರದಾನವಾಯಿತು. ಕಾಡು ಪ್ರಾಣಿಗಳು ನೀರು ಹುಡುಕಿಕೊಂಡು ಕೆರೆಯ ಬಳಿಗೆ ಬಂದವು. ದೂರದಿಂದ ವೈವಿಧ್ಯಮಯ ಪಕ್ಷಿಗಳ ಸಂಕುಲವೇ ಬಂದವು.

ಕರಡಿ ಕೆರೆ: ಹಬ್ಬದ ಸೊಬಗು
ಭೀಮನಕೋಣೆ ಜನರು ಈಜಲು ಬೇಕಾದ ಪರಿಕರ ಪೇಟೆಯಿಂದ ಹಣಕೊಟ್ಟು ತಾರದೇ, ಅವರೇ ಕುಶಲಕಲೆಯ ಪರಿಕರ ಸಿದ್ಧಪಡಿಸಿ
ದ್ದಾರೆ. ನೀರಲ್ಲಿ ಮುಳಗದಿರುವ ಸಾಧನ, ನೀರಿನ ಗಡಿ ನಿರ್ಧರಿಸುವ ಸಾಧನ ತಯಾರಿಸಿಕೊಂಡಿದ್ದಾರೆ. ಕೆರೆ ಅಭಿವೃದ್ಧಿಗೆ ಯಾವ ಸಂಘವನ್ನೂ ಕಟ್ಟಿಕೊಂಡಿಲ್ಲ. ಪೈಸೆ ಅನುದಾನವನ್ನೂ ಪಡೆದಿಲ್ಲ.

ತಾವೇ ಹಣ ಹಾಕಿಕೊಂಡು ವರ್ಷಕ್ಕೆ ಒಮ್ಮೆ ಕೆರೆ ಹಬ್ಬ ಆಚರಿಸುತ್ತಾರೆ. ಒಬ್ಬರ ಬೆನ್ನು ಒಬ್ಬರು ಹಿಡಿದುಕೊಂಡು ಕೆರೆಯ ಸುತ್ತಲೂ ರೈಲು ಬೋಗಿಯ ರೀತಿ ಚಲಿಸುವುದು, ಹಾಡು ಹೇಳುವುದು, ಊಟ ಕಟ್ಟಿಕೊಂಡು ಬಂದು ಅಲ್ಲೇ ಸಾಮೂಹಿಕವಾಗಿ ಸವಿಯುವ ಪರಿಪಾಠ ಬೆಳೆಸಿಕೊಂಡು ಬಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT