ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಿಮ್‌ ಕಾರ್ಡ್‌ನಂತಾದ ಮಾಧ್ಯಮ’

ಕವಿವಿ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ಕಾರ್ಯಕ್ರಮ
Last Updated 24 ಮಾರ್ಚ್ 2017, 6:12 IST
ಅಕ್ಷರ ಗಾತ್ರ

ಧಾರವಾಡ:  ಸುದ್ದಿ ಮಾಧ್ಯಮವನ್ನು ಕೆಲ ಓದುಗರು ಮತ್ತು ವೀಕ್ಷಕರು ಸಿಮ್‌ ಕಾರ್ಡ್‌ನಂತೆ ಬಳಕೆ ಮಾಡುತ್ತಿದ್ದಾರೆ ಎಂದು ಹಿರಿಯ ಪತ್ರಕರ್ತ ಕೃಷ್ಣ ಪ್ರಸಾದ್ ವಿಷಾದಿಸಿದರು.

ಕರ್ನಾಟಕ ವಿಶ್ವವಿದ್ಯಾಲಯದ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಪೋಸ್ಟ್‌ ಮತ್ತು ಪ್ರೀಪೆಯ್ಡ್‌ ರೀತಿಯಲ್ಲಿ ಮಾಧ್ಯಮವನ್ನು ಬಳಕೆ ಮಾಡಲಾಗುತ್ತಿದೆ. ಇಂಥ ಸಂದರ್ಭದಲ್ಲಿ ಪತ್ರಕರ್ತರು ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕಾದ ಅಗತ್ಯವಿದೆ ಎಂದು ಹೇಳಿದರು.

ಪತ್ರಿಕೋದ್ಯಮ ಓದಿನಿಂದ ಮಾತ್ರ ಉತ್ತಮ ವರದಿಗಾರನಾಗಲು ಸಾಧ್ಯವಿಲ್ಲ. ನಮ್ಮ ಓದು, ಶ್ರಮ ಮತ್ತು ಪ್ರತಿಭೆಯಿಂದ ಮಾದರಿ ಪತ್ರಕರ್ತರಾಗಬಹುದು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಈಚೆಗೆ ಮಾಧ್ಯಮಗಳ ಬಗ್ಗೆ ಪ್ರಧಾನಿ, ರಕ್ಷಣಾ ಮಂತ್ರಿಯಾಗಿದ್ದ ವೇಳೆ ವಿ.ಕೆ.ಸಿಂಗ್‌ ಹಾಗೂ ಟ್ರಂಪ್ ಅಂಥವರು ಮಾಧ್ಯಮದ ಕುರಿತು ಕೀಳಾಗಿ ಮಾತನಾಡಿದ್ದಾರೆ. ಆದರೆ ಅವರ ಅರ್ಥೈಸಿಕೊಂಡ ರೀತಿಯಲ್ಲಿ ಮಾಧ್ಯಮ ಹದಗೆಟ್ಟಿಲ್ಲ ಎಂದರು.

1947ರಲ್ಲಿ ಭಾರತದಲ್ಲಿ ೩೦೦ ಪತ್ರಿಕೆಗಳಿಂದ 25 ಲಕ್ಷ ಪ್ರತಿಗಳು ಮಾರಾಟವಾಗುತ್ತಿದ್ದವು. ಈಗ ಅದು  ಸಾವಿರಕ್ಕೆ ಹೆಚ್ಚಾಗಿ 4.5 ಕೋಟಿ  ಮೀರಿದೆ ಎಂದು ಹೇಳಿದರು.

ಪತ್ರಕರ್ತರಿಗೆ ಸಹನೆ, ಕರುಣೆ, ನಂಬಿಕೆ, ಕಾಳಜಿ, ಸೌಹಾರ್ದ ಗುಣ ಇರಬೇಕು. ಅಂದಾಗ ಮಾತ್ರ ವೈಚಾರಿಕತೆ ಬೆಳೆಸಲು ಸಾಧ್ಯ. ಉತ್ತರ ಪ್ರದೇಶದಲ್ಲಿ ಶಾಸಕನೊಬ್ಬನ ಗೆಲುವಿಗೆ ತಿರುಚಿತ ವೀಡಿಯೊಂದು ಸಹಾಯವಾಯಿತು. ಇದನ್ನು ಪತ್ರಕರ್ತರಾದವರು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.

ಹೆಚ್ಚು ಹೆಚ್ಚು ಭಾಷೆಗಳನ್ನು ತಿಳಿದುಕೊಂಡು ಭಾಷಾ ಪ್ರೌಢಮೆಯನ್ನು ವೃದ್ಧಿಪಡಿಸಿಕೊಂಡಿರಬೇಕು. ಅಂದಾಗ ಮಾತ್ರ ಪತ್ರಿಕೋದ್ಯಮದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.

ಪಾಶ್ಚಿಮಾತ್ಯ ದೇಶಗಳಲ್ಲಿ ಮುದ್ರಣ ಮಾಧ್ಯಮ ಪ್ರಸಾರ ಇಳಿಮುಖವಾಗುತ್ತಿದೆ. ಆದರೆ ಚೀನಾ ಮತ್ತು ಭಾರತದಂತಹ ದೇಶಗಳಲ್ಲಿ ತಂತ್ರಜ್ಞಾನ, ಸಾಕ್ಷರತೆ ಜೊತೆ ಪ್ರಸಾರವೂ ಹೆಚ್ಚುತ್ತಿದೆ. ಜಗತ್ತಿನ 100 ಅತ್ಯಧಿಕ ಮುದ್ರಿತವಾಗುವ ಪತ್ರಿಕೆಗಳಲ್ಲಿ ಶೇ 75ರಷ್ಟು ಪತ್ರಿಕೆಗಳು ಈ ಎರಡು ದೇಶದಲ್ಲಿವೆ. ಈ ಹಿನ್ನೆಲೆಯಲ್ಲಿ ಪತ್ರಿಕೆಗೆ ಉತ್ತಮ ಭವಿಷ್ಯವಿದೆ ಎಂದು ಹೇಳಿದರು.

ಮಾಧ್ಯಮದ ವಿಶ್ವಾಸಾರ್ಹತೆ ಈಗ ಕಡಿಮೆಯಾಗತೊಡಗಿದ್ದು, ಜನರು ಪ್ರಶ್ನಿಸುವ ಹಂತ ತಲುಪಿರುವುದು ವಿಷಾದನೀಯ.  ಹಣಕ್ಕಾಗಿ, ಪ್ರಸಿದ್ಧಿಗಾಗಿ ಪತ್ರಿಕೋದ್ಯಮಕ್ಕೆ ಬರಬೇಡಿ ಎಂದರು. ಪ್ರಾಧ್ಯಾಪಕರಾದ ಡಾ.ಜೆ.ಎಂ.ಚಂದುನವರ, ಡಾ.ಸಂಜಯಕುಮಾರ, ಡಾ.ವಿಶ್ವನಾಥ ಚಿಂತಾಮಣಿ ಮೊದಲಾದವರು ಹಾಜರಿದ್ದರು.

*
ಯಾರಿಗೂ ಹೆದರದೆ ಸಂವಿಧಾನದ ಆಶಯಕ್ಕಾಗಿ ಪತ್ರಕರ್ತ ದುಡಿಯಬೇಕು. ಪತ್ರಕರ್ತರು ಮೊದಲು ತಮ್ಮಲ್ಲಿ ಬದಲಾವಣೆ ತಂದುಕೊಳ್ಳಬೇಕು.
-ಕೃಷ್ಣ ಪ್ರಸಾದ್,
ಹಿರಿಯ ಪತ್ರಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT