ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಿಗೆಯಲ್ಲೂ ಇವರಿಗಿಲ್ಲ ನೀರಿನ ಕೊರತೆ!

ಕೃಷಿ ಹೊಂಡಗಳನ್ನು ನಿರ್ಮಿಸಿ, ಕೋಟ್ಯಂತರ ಲೀಟರ್‌ ಮಳೆ ನೀರು ಕಾಯ್ದಿಟ್ಟುಕೊಂಡು ಉತ್ತಮ ಬೆಳೆ ಸಾಧನೆ
Last Updated 24 ಮಾರ್ಚ್ 2017, 6:19 IST
ಅಕ್ಷರ ಗಾತ್ರ

ಬೆಳಗಾವಿ: ಸತತ ಬರಗಾಲಕ್ಕೆ ತುತ್ತಾಗುವ ಜಿಲ್ಲೆಯ ಅಥಣಿ ತಾಲ್ಲೂಕಿನ ರೈತರೊಬ್ಬರು ನೀರಿನ ಸದ್ಬಳಕೆ, ಮಳೆ ನೀರು ಸಂಗ್ರಹ ಮತ್ತು ಕೃಷಿ ಹೊಂಡಗಳ ಮೂಲಕ ಬೇಸಿಗೆಯಲ್ಲೂ ಉತ್ತಮ ಬೆಳೆ ಬೆಳೆಯುತ್ತಿದ್ದಾರೆ. ಒಂದು ಕಾಲದಲ್ಲಿ ಬರಡಾಗಿದ್ದ ನೆಲದಲ್ಲಿ ಇಂದು ಕಬ್ಬು ಹಾಗೂ ದ್ರಾಕ್ಷಿ ಬೆಳೆ ನಳನಳಿಸುತ್ತಿದೆ.

ಇಂತಹ ಬೆಳೆಯನ್ನು ಪಡೆಯುತ್ತಿರುವುದು ಪ್ರಗತಿಪರ ರೈತ ಮಾನಸಿಂಗ್‌ ಬೊರಾಡೆ. ಜಿಲ್ಲಾ ಕೇಂದ್ರದಿಂದ 160 ಕಿ.ಮೀ. ದೂರದಲ್ಲಿರುವ ಅಥಣಿ ತಾಲ್ಲೂಕಿನ ಎಲಿಹಡಗಲಿ ಎನ್ನುವ ಕುಗ್ರಾಮದಲ್ಲಿ 40 ಎಕರೆಗೂ ಹೆಚ್ಚಿನ ಪ್ರದೇಶದಲ್ಲಿ ಅವರು ಕೃಷಿ ಮಾಡುತ್ತಿದ್ದಾರೆ.

ಬೇಸಿಗೆಯ 3–4 ತಿಂಗಳಲ್ಲಿ ನೀರಿನ ಕೊರತೆ ಕಾಡದಿರಲೆಂದು, ಬೃಹತ್‌ ಕೃಷಿ ಹೊಂಡಗಳನ್ನು ನಿರ್ಮಿಸಿಕೊಂಡು ಮಳೆ ನೀರನ್ನು ಹಿಡಿದಿಟ್ಟುಕೊಂಡಿದ್ದಾರೆ. ಹನಿ ನೀರಾವರಿ ಮೂಲಕ ನೀರನ್ನು ಇತಿ– ಮಿತಿಯಲ್ಲಿ ಬಳಸಿಕೊಂಡು ಉತ್ತಮ ಬೆಳೆ–ಆದಾಯವನ್ನೂ ಕಾಣುತ್ತಿದ್ದಾರೆ.

ಗ್ರಾಮದ ಹೊರವಲಯದಲ್ಲಿರುವ ಇವರ ಜಮೀನಿನಲ್ಲಿ ಕಬ್ಬು ಹಾಗೂ ದ್ರಾಕ್ಷಿ ಬಿರುಬಿಸಿಲಿನಲ್ಲಿಯೂ ಹಸಿರಿನಿಂದ ಕಂಗೊಳಿಸುತ್ತಿದ್ದರೆ, ಸಮೀಪದ ಜಮೀನುಗಳಲ್ಲಿನ ಕಬ್ಬಿನ ಬೆಳೆಗಳು ಒಣಗಿನಿಂತಿದ್ದು, ಬರಗಾಲದ ಭೀಕರತೆಯನ್ನು ಸಾರಿ ಹೇಳುತ್ತಿವೆ.

2 ಕೋಟಿ ಲೀ. ಸಾಮರ್ಥ್ಯ!: ಸುಮಾರು ಒಂದೂವರೆ ಎಕರೆ ಜಾಗದಲ್ಲಿ 30 ಅಡಿ ಆಳದಲ್ಲಿ ಸುಮಾರು ಕೋಟಿ ಲೀಟರ್‌ ಸಾಮರ್ಥ್ಯದ ಕೃಷಿ ಹೊಂಡವನ್ನು ಐದು ವರ್ಷ ಹಿಂದೆ ಮಾನಸಿಂಗ್‌ ಬೊರಾಡೆ ತಮ್ಮ ಹೊಲದಲ್ಲಿ ನಿರ್ಮಿಸಿದ್ದಾರೆ.

‘ನಾನು ಇಲ್ಲಿ ಜಮೀನು ಖರೀದಿಸಿ ದಾಗ ಬರಡಾಗಿತ್ತು. ದ್ರಾಕ್ಷಿಗೂ ಮುನ್ನ ವಿವಿಧ ಬೆಳೆ ಹಾಕಿದ್ದೆ. ಆದರೆ, ಬೇಸಿಗೆ ಯಲ್ಲಿ ಹಾಗೂ ಸತತ ಬರಗಾಲದಿಂದ ಬೆಳೆ ನಷ್ಟ ಉಂಟಾಗುತ್ತಿತ್ತು. ಇದಕ್ಕೆ ಪರಿ ಹಾರ ಕಂಡುಕೊಳ್ಳಲು  ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕೃಷಿ ಹೊಂಡ ನಿರ್ಮಾ ಣದ ಸಲಹೆ ನೀಡಿದರು’ ಎನ್ನುತ್ತಾರೆ 63ರ ಹರೆಯದ ಮಾನಸಿಂಗ್‌.

‘ಅಂದು ₹12 ಲಕ್ಷ ವೆಚ್ಚದಲ್ಲಿ ನಿರ್ಮಿ ಸಿದ ಕೃಷಿ ಹೊಂಡ ಲಕ್ಷಾಂತರ ರೂಪಾಯಿ ದುಡಿಯುವುದಕ್ಕೆ ನೆರವಾಗಿದೆ. 14 ಎಕ ರೆಗೂ ಮೀರಿ ದ್ರಾಕ್ಷಿಗೆ ಇದರಿಂದ ನೀರುಣಿ ಸುತ್ತಿದ್ದೇವೆ. ಇಲ್ಲಿ ಸಂಗ್ರಹವಾಗಿರುವ ನೀರು 3 ತಿಂಗಳಿಗೆ ಸಾಕಾಗಲಿದೆ. ಮಳೆ ಬಂದಾಗ ಹೊಂಡ ತುಂಬುತ್ತದೆ. ಇದ ರಿಂದ ಬೇಸಿಗೆಯಲ್ಲೂ ಕೃಷಿಗೆ ನೀರಿನ ಕೊರತೆ ಉಂಟಾಗಿಲ್ಲ’ ಎಂದರು.

ಕಬ್ಬಿಗೂ ಇದೇ ಮಾದರಿ:  ಇನ್ನೊಂದು ಜಮೀನಿನಲ್ಲಿಯೂ ಕೃಷಿ ಹೊಂಡ ನಿರ್ಮಿಸಲಾಗಿದ್ದು, ಸುಮಾರು 10 ಎಕರೆ ಕಬ್ಬಿಗೆ ಇಲ್ಲಿಂದ ಹನಿ ನೀರಾವರಿ ಮೂಲಕ ನೀರು ಪೂರೈಸಲಾಗುತ್ತಿದೆ.

‘ಯಾವುದೇ ಬೆಳೆಗೂ ಹನಿ ನೀರಾವರಿ ಪದ್ಧತಿ ಅನುಕೂಲವಾಗುತ್ತದೆ. ಇದ ರಿಂದ, ನೀರನ್ನು ಅಗತ್ಯವಿರುವಷ್ಟು ಮಾತ್ರ ಬಳಸಬಹುದು. ಅಲ್ಲದೆ, ಪೋಲಾಗುವು ದನ್ನೂ ತಡೆಯಬಹುದು. ಕೃಷಿ ಹೊಂಡ ನಿರ್ಮಿಸುವುದಕ್ಕೆ ಮುನ್ನ ದ್ರಾಕ್ಷಿ ಮೊದ ಲಾದ ಬೆಳೆಗಳಿಗೆ ಟ್ಯಾಂಕರ್‌ ತರಿಸಿ ನೀರು ಕೊಡುತ್ತಿದ್ದೆವು.

ಇದಕ್ಕೆ ₹10 ಲಕ್ಷ ವೆಚ್ಚ ಆಗುತ್ತಿತ್ತು. 1983ರಿಂದ 2011ರವರೆಗೆ ಹೀಗೇ ಮಾಡಿದೆ. ಈಗ ಕೃಷಿ ಹೊಂಡ ದಲ್ಲಿ ಮಳೆ ನೀರನ್ನು ಸಂಗ್ರಹಿಸಿದ್ದರಿಂದ, ನೀರು ಖರೀದಿಸುವುದು ತಪ್ಪಿದೆ’ ಎನ್ನು ತ್ತಾರೆ ಅವರು.

*
ಕೃಷಿ ಹೊಂಡ ನಿರ್ಮಿಸಿಕೊಂಡು ಮಳೆ ನೀರನ್ನು ಸಂಗ್ರಹಿಸಿ, ಹನಿ ನೀರಾವರಿ ಮೂಲಕ ಕೃಷಿ ಮಾಡಿದರೆ ಬೇಸಿಗೆಯಲ್ಲೂ ತೊಂದರೆ ಇಲ್ಲದಂತೆ ಬೆಳೆ ತೆಗೆಯಬಹುದು. ನಷ್ಟವು ಇರಲ್ಲ.
-ಮಾನಸಿಂಗ್‌ ಬೊರಾಡೆ,
ಕೃಷಿಕ, ಎಲಿಹಡಗಲಿ

*
ಬೇಸಿಗೆಯಲ್ಲೂ ಬೆಳೆಯನ್ನು ಉತ್ತಮವಾಗಿ ನಿರ್ವಹಿಸುವಲ್ಲಿ, ಮಳೆ ನೀರನ್ನು ಸಂಗ್ರಹಿಸಿ ಸದ್ಬಳಕೆ ಮಾಡಿಕೊಳ್ಳುವಲ್ಲಿ ರೈತ ಮಾನಸಿಂಗ್‌ ಬೊರಾಡೆ ಇತರ ರೈತರಿಗೆ ಮಾದರಿಯಾಗಿದ್ದಾರೆ.
ವಿ. ಜಾಧವ್‌
ತೋಟಗಾರಿಕೆ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT