ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇತನ ಹೆಚ್ಚಳಕ್ಕೆ ಒತ್ತಾಯ: ರೈಲ್ವೆ ನೌಕರರ ಪ್ರತಿಭಟನೆ

ರಾಷ್ಟ್ರೀಯ ಲಕ್ಷ್ಮೀ ಡೇರಿಯ ಹಾಲು ರಾಷ್ಟ್ರೀಯ ಲಕ್ಷ್ಮೀ ರಾಷ್ಟ್ರೀಯ ಲಕ್ಷ್ಮೀ
Last Updated 24 ಮಾರ್ಚ್ 2017, 6:25 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಸುರಕ್ಷತಾ ವಿಭಾಗದ ಮೇಲ್ವಿಚಾರಕರ ವೇತನವನ್ನು ಹೆಚ್ಚಿಸಬೇಕು. ‘ಗ್ರೂಪ್‌ ಸಿ’ ವಿಭಾಗದ ಸಿಬ್ಬಂದಿಯನ್ನು ‘ಗ್ರೂಪ್‌ ಬಿ’ಗೆ ಮೇಲ್ದರ್ಗೆಗೇರಿಸಿ ಸವಲತ್ತುಗಳನ್ನು ನೀಡಬೇಕು ಎಂದು ಒತ್ತಾಯಿಸಿ ನೈರುತ್ಯ ರೈಲ್ವೆ ಮಜ್ದೂರ್‌ ಯೂನಿಯನ್‌ನ ಸದಸ್ಯರು ಗುರುವಾರ ಇಲ್ಲಿನ ವಿಭಾಗೀಯ ವ್ಯವಸ್ಥಾಪಕರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಅಖಿಲ ಭಾರತ ರೈಲ್ವೆಮನ್ಸ್‌ ಫೆಡರೇಶನ್‌ (ಎಐಆರ್‌ಎಫ್) ಕರೆಯ ಮೇರೆಗೆ ನಡೆದ ಈ ಪ್ರತಿಭಟನೆಯಲ್ಲಿ ಮಜ್ದೂರ್‌ ಯೂನಿಯನ್‌ನ ನೂರಾರು ಪದಾಧಿಕಾರಿಗಳು ಭಾಗವಹಿಸಿದ್ದರು.

ಸಂಘದ ಪ್ರಧಾನ ಕಾರ್ಯದರ್ಶಿ ಎ.ಎಂ. ಡಿಕ್ರೂಸ್‌ ಮಾತನಾಡಿ, ‘ರೈಲ್ವೆ ಇಲಾಖೆಯು ನಿರಂತರವಾಗಿ ಕಾರ್ಮಿಕ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ. ಹತ್ತಾರು ಬೇಡಿಕೆಗಳನ್ನು ಇಟ್ಟುಕೊಂಡು ನಾವು ಪ್ರತಿಭಟನೆ ನಡೆಸುತ್ತಿದ್ದೇವೆ. ಆದರೆ, ಅಪ್ರೆಂಟಿಸ್‌ ಪೂರೈಸಿದ ಸಿಬ್ಬಂದಿಯನ್ನು ಇಲಾಖೆಯಲ್ಲಿ ಹುದ್ದೆ ನೀಡಿ ಕಾಯಂಗೊಳಿಸಬೇಕು’ ಎಂದು ಒತ್ತಾಯಿಸಿದರು.

ನೈರುತ್ಯ ರೈಲ್ವೆ ವಲಯ ಅಧ್ಯಕ್ಷ ಆರ್‌.ಆರ್‌. ನಾಯಕ್‌, ವಲಯದ ಖಜಾಂಚಿ ವಿ.ಇ. ಚಾರ್ಖಾನಿ, ಸಹಾಯಕ ಪ್ರಧಾನ ಕಾರ್ಯದರ್ಶಿಗಳಾದ ಎಸ್‌.ಎಫ್‌. ಮಲ್ಲಾಡ, ಜಯಲಕ್ಷ್ಮಿ, ಕೆ. ವೆಂಕಟೇಶ್‌, ವಿಭಾಗೀಯ ಅಧ್ಯಕ್ಷ ಎಡ್ವರ್ಡ್‌ ಜೇಮ್ಸ್‌, ವಿಭಾಗೀಯ ಕಾರ್ಯದರ್ಶಿ ಎಸ್‌.ಎ. ಆಲ್ಬರ್ಟ್‌ ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದರು.

ಲೋಕೊಪೈಲಟ್ ವರ್ಗಾವಣೆ ಖಂಡಿಸಿ ಪ್ರತಿಭಟನೆ
ಹುಬ್ಬಳ್ಳಿ:
ಹುಬ್ಬಳ್ಳಿ ವಿಭಾಗದಲ್ಲಿ ಲೋಕೊಪೈಲಟ್‌ (ರೈಲು ಎಂಜಿನ್‌ ಚಾಲಕರು) ಆಗಿ ಸೇವೆ ಸಲ್ಲಿಸುತ್ತಿರುವ ಧನಂಜಯಕುಮಾರ್‌ ಎಂಬುವವರನ್ನು ಏಕಾಏಕಿ ಮೈಸೂರು ವಿಭಾಗಕ್ಕೆ ವರ್ಗಾವಣೆ ಮಾಡಿದ ಕ್ರಮವನ್ನು ಖಂಡಿಸಿ ನೈರುತ್ಯ ರೈಲ್ವೆ ಮಜದೂರ್‌ ಸಂಘದ (ಎನ್‌ಆರ್‌ಎಂಎಸ್‌) ನೇತೃತ್ವದಲ್ಲಿ ನೂರಾರು ಲೋಕೊಪೈಲಟ್‌ಗಳು ಮತ್ತು ಮಹಿಳಾ ನೌಕರರು ತಮ್ಮ ಪುಟ್ಟ ಮಕ್ಕಳೊಂದಿಗೆ ಗುರುವಾರ ರೈಲ್ವೆ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು.

ಸಂಘದ ಮುಖಂಡರಾಗಿರುವ ಧನಂಜಯಕುಮಾರ್‌ ಅವರು ಆಗಾಗ ನೌಕರರ ಕುಂದುಕೊರತೆಗಳನ್ನು ಪರಿಹರಿಸುವಂತೆ ಆಡಳಿತ ಮಂಡಳಿಗೆ ಒತ್ತಾಯಿಸಿ ಮನವಿ ಸಲ್ಲಿಸುತ್ತಿದ್ದರು. ಇದು ರೈಲ್ವೆ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಇದರಿಂದ ಕುಪಿತಗೊಂಡ ಮುಖ್ಯ ವಿದ್ಯುತ್‌ ಅಧಿಕಾರಿ ರಾಜೀವಕುಮಾರ್‌ ಅವರು ಧನಂಜಯ ಕುಮಾರ್‌ ಅವರನ್ನು ಏಕಾಏಕಿ ಮೈಸೂರು ವಿಭಾಗಕ್ಕೆ ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಿದರು.

ಕೆಲಸಕ್ಕೆ ಹಾಜರಾಗಲು ಜೈನ್‌ ಸೂಚನೆ
ಮೈಸೂರಿಗೆ ವರ್ಗಾವಣೆಗೊಂಡಿರುವ ಧನಂಜಯಕುಮಾರ್‌ ಅವರು ರೈಲ್ವೆ ಆಸ್ಪತ್ರೆಯ ವೈದ್ಯಾಧಿಕಾರಿಯೊಂದಿಗೆ ಅನುಚಿತವಾಗಿ ವರ್ತನೆ ಮಾಡಿದ್ದರಿಂದ ಅವರನ್ನು ಎಲ್ಲರ ಅಭಿಪ್ರಾಯ ಪಡೆದು ವರ್ಗಾಯಿಸಲಾಗಿದೆ. ಅವರ ಪರ ಪ್ರತಿಭಟನೆ ಮಾಡುತ್ತಿರುವ ಲೋಕೊ ಪೈಲಟ್‌ಗಳು ಕೂಡಲೇ ಕೆಲಸಕ್ಕೆ ಹಾಜರಾಗಬೇಕು ಎಂದು ವಿಭಾಗೀಯ ವ್ಯವಸ್ಥಾಪಕ ಅರುಣ್‌ಕುಮಾರ್‌ ಜೈನ್‌ ಸೂಚನೆ ನೀಡಿದ್ದಾರೆ.

‘ಆರೋಗ್ಯ ಸರಿ ಇಲ್ಲದ ಬಗ್ಗೆ ವೈದ್ಯಕೀಯ ವರದಿಯನ್ನು ತಜ್ಞ ವೈದ್ಯರೇ ನೀಡಬೇಕಾಗುತ್ತದೆ. ಇದರಲ್ಲಿ ನಮ್ಮ ಪಾತ್ರವೇನೂ ಇಲ್ಲ. ಉಳಿದ ಸಮಸ್ಯೆಗಳನ್ನು ಮತುಕತೆ ಮೂಲಕ ಬಗೆಹರಿಸಿಕೊಳ್ಳಬಹುದು’ ಎಂದರು.

*
ನಮ್ಮ ಬೇಡಿಕೆಗಳನ್ನು ಆದ್ಯತೆ ಮೇರೆಗೆ ಈಡೇರಿಸುತ್ತಿಲ್ಲ. ಟ್ರ್ಯಾಕ್‌ಮನ್‌ಗಳ ವೇತನವನ್ನು ವೈಜ್ಞಾನಿಕ ನೆಲೆಗಟ್ಟಿನ ಮೇಲೆ ಹೆಚ್ಚಿಸಬೇಕು ಎಂಬ ಬೇಡಿಕೆಗೂ ಸ್ಪಂದಿಸಿಲ್ಲ.
-ಎ.ಎಂ. ಡಿಕ್ರೂಸ್‌,
ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT