ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಳುವವರನ್ನು ಎಚ್ಚರಿಸಲು ಚಳವಳಿಯೊಂದೇ ಮಾರ್ಗ’

Last Updated 24 ಮಾರ್ಚ್ 2017, 6:31 IST
ಅಕ್ಷರ ಗಾತ್ರ

ಹಾನಗಲ್: ‘ಬಮ್ಮನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ನೀರಾವರಿ ಯೋಜನೆಗಳ ಅನುಷ್ಠಾನಕ್ಕಾಗಿ ರೈತ ಹೋರಾಟವನ್ನು ಬೆಂಬಲಿಸಿ ಈ ಭಾಗದ ಮಠಾಧೀಶರು ಬೀದಿಗಳಿಯುತ್ತೇವೆ. ಆಳುವವರನ್ನು ಎಚ್ಚರಿಸಲು ಚಳವಳಿಯೊಂದೇ ಮಾರ್ಗವಾಗಿದೆ’ ಎಂದು ಬಮ್ಮನಹಳ್ಳಿ ಗುರುಪಾದೇಶ್ವರ ವಿರಕ್ತಮಠದ ಶಿವಯೋಗೀಶ್ವರ ಸ್ವಾಮೀಜಿ ನುಡಿದರು.

ತಾಲ್ಲೂಕಿನ ಬಮ್ಮನಹಳ್ಳಿ ಗ್ರಾಮದಲ್ಲಿ ಬುಧವಾರ ಸಂಜೆ  ರೈತಸಂಘ ಮತ್ತು ಹಸಿರುಸೇನೆ ಗ್ರಾಮ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಬೇಸಿಗೆಯಲ್ಲಿ ಆಸರೆಯಾಗುತ್ತಿದ್ದ ಕೆರೆ–ಕಟ್ಟೆಗಳು ಅತಿಕ್ರಮಣಕ್ಕೆ ಒಳಗಾಗಿ ಅಂತರ್ಜಲ ಮಟ್ಟ ಕುಸಿಯುತ್ತಿರುವ ಭೀಕರತೆಯನ್ನು ಎಚ್ಚರಿಕೆ ಗಂಟೆಯಾಗಿ ಸ್ವೀಕರಿಸಬೇಕಾಗಿದೆ’ ಎಂದರು.

ಸ್ಥಳೀಯ ರೈತ ಮುಖಂಡ ಯಾಸಿರಖಾನ್‌ ಪಠಾಣ ಮಾತನಾಡಿ, ‘ಧರ್ಮಾ ಜಲಾಶಯದ ಎಡದಂಡೆ ಕಾಲುವೆ ಕಾಮಗಾರಿ ಆರಂಭಗೊಳ್ಳಬೇಕಾಗಿದೆ. ಆ ಮೂಲಕ ಬಮ್ಮನಹಳ್ಳಿ ಭಾಗದ ಕೆರೆಗಳಿಗೆ ನೀರು ತುಂಬಿಸಲು ಸಾಧ್ಯವಿದೆ’ ಎಂದರು.

‘ಬೇಡ್ತಿ–ವರದಾ ನದಿಗಳ ಜೋಡಣೆಯಿಂದ ಹಾನಗಲ್‌ ತಾಲ್ಲೂಕು ಸಂಪೂರ್ಣವಾಗಿ ನೀರಾವರಿಗೆ ಒಳಪಡುತ್ತದೆ. ಹೀಗಾಗಿ ಧರ್ಮಾ ಎಡದಂಡೆ ಕಾಲುವೆ ನಿರ್ಮಾಣಕ್ಕೆ ಮತ್ತು ಬೇಡ್ತಿ–ವರದಾ ನದಿ ಜೋಡಣೆಗಾಗಿ ರೈತ ಚಳವಳಿ ಹುಟ್ಟುಹಾಕುತ್ತಿದ್ದೇವೆ’ ಎಂದರು.

ರೈತಸಂಘದ ರಾಜ್ಯ ಸಂಚಾಲಕ ಮಹಾಂತೇಶ ಪೂಜಾರ ಮಾತನಾಡಿ, ‘ಚುನಾವಣೆ ಸಮಯದಲ್ಲಿ ಸಾಲಮನ್ನಾ ಬಗ್ಗೆ ಆಶ್ವಾಸನೆ ನೀಡುವ ರಾಜಕಾರಣಿಗಳು ಅಧಿಕಾರ ಸಿಕ್ಕಾಗ ರೈತರನ್ನು ಮರೆಯುತ್ತಾರೆ. ದೊಡ್ಡ ಉದ್ಯಮಿಗಳ ಸಾಲ ಮನ್ನಾ ಮಾಡಲು ತೋರುವ ಉತ್ಸಾಹವು ರೈತರ ಸಾಲ ಮನ್ನಾ ವಿಷಯದಲ್ಲಿ ಕಾಣದಾಗಿದೆ’ ಎಂದು ಹರಿಹಾಯ್ದರು.

ಹೋತನಹಳ್ಳಿ ಸಿಂಧಗಿಮಠದ ಶಂಬುಲಿಂಗ ಶಿವಾಚಾರ್ಯ ಸ್ವಾಮೀಜಿ, ‘ರೈತರನ್ನು ಅಗೌರವದಿಂದ ನೋಡುವ ಮನೋಭಾವ ಬದಲಾಗಬೇಕು, ಸಾವಯವ ಗೊಬ್ಬರದತ್ತ ಕೃಷಿಕರು ಆಸಕ್ತಿ ತೋರಬೇಕು’ ಎಂದರು.

ರೈತಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತಪ್ಪ ಹುಚ್ಚಣ್ಣನವರ, ತಾಲ್ಲೂಕು ಘಟಕದ ಗೌರವಾಧ್ಯಕ್ಷ ಸಿ.ಬಿ. ಪಾಟೀಲ, ಗ್ರಾಮದ ರೈತ ಮುಖಂಡ ರಾದ ಸಿ.ಬಿ.ಮಲ್ಲಮ್ಮನವರ, ಈರಪ್ಪ ಚಿಕ್ಕಣಗಿ, ಬಸವರಾಜ ಹರಿಶೆಟ್ಟರ, ಸಿದ್ಧ ರಾಮಗೌಡ ಪಾಟೀಲ, ಎಂ.ಎಂ.ಮುಲ್ಲಾ, ಖಾಸಿಂ ಜಿಗಳೂರ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT