ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬೆಳಕಿನ ದಾರಿ ಕಾಣದ ಸಮಾನತೆ’

ಹುತಾತ್ಮ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ: ‘ದಾರಿ ಯಾವುದು?’ ಬೀದಿನಾಟಕ ಪ್ರದರ್ಶನ
Last Updated 24 ಮಾರ್ಚ್ 2017, 6:35 IST
ಅಕ್ಷರ ಗಾತ್ರ

ಹಾವೇರಿ: ‘ಬ್ರಿಟೀಷರ ದಬ್ಬಾಳಿಕೆಯ ಕಗ್ಗತ್ತಲಿನಲ್ಲಿ ಕಾಲ ಕಳೆದ ನಾವು 1947ರಲ್ಲಿ ಸ್ವಾತಂತ್ರ್ಯದ ಬೆಳಕನ್ನು ಕಂಡಿದ್ದೇವೆ. ಆದರೆ, ಈ ವರೆಗೂ ಸಮಾನತೆಯ ಬೆಳಕಿನ ದಾರಿಯನ್ನು ಮಾತ್ರ ಕಂಡಿಲ್ಲ’ ಎಂಬ ಸಂದೇಶ ಸಾರುವ ಸಾಹಿತಿ ಸತೀಶ ಕುಲಕರ್ಣಿ ಬರೆದ ‘ದಾರಿ ಯಾವುದು?’ ಬೀದಿನಾಟಕವು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

ಸ್ವಾತಂತ್ರ್ಯ ಹೋರಾಟಗಾರರಾದ ಮೈಲಾರ ಮಹದೇವಪ್ಪ, ವೀರಯ್ಯ ಹಿರೇಮಠ, ತಿರುಕಪ್ಪ ಮಡಿವಾಳರ, ಭಗತ್‌ ಸಿಂಗ್‌, ಸುಖ್‌ದೇವ್‌ ಹಾಗೂ ರಾಜಗುರು ಸ್ಮರಣಾರ್ಥ ಇಲ್ಲಿನ ಟಿಎಂಎಇಎಸ್ ಕಾಲೇಜಿನಲ್ಲಿ ಭಾರತೀಯ ವಿದ್ಯಾರ್ಥಿ ಫೆಡರೇಷನ್‌ ಬೀದಿ ನಾಟಕವನ್ನು ಪ್ರಸ್ತುತ ಪಡಿಸಿತು.

‘ಇನ್‌ಕಿಲಾಬ್‌ ಜಿಂದಾಬಾದ್‌, ಇನ್‌ಕಿಲಾಬ್‌ ಜಿಂದಾಬಾದ್‌’ ಎಂದು ತನ್ನ ಗಟ್ಟಿ ದನಿಯಲ್ಲಿ ಸ್ವಾತಂತ್ರ್ಯಕ್ಕೆ ಕ್ರಾಂತಿಯಾಗಬೇಕು ಎಂಬ ಕ್ರಾಂತಿಧ್ವನಿ’ಯ ಮೂಲಕ ಭಗತ್‌ಸಿಂಗ್‌ ಪಾತ್ರಧಾರಿ ಎಸ್‌ಎಫ್‌ಐ ಸಂಘಟನೆಯ ವಿಜಯಕುಮಾರ ಪ್ರೇಕ್ಷಕರ ಗಮನಸೆಳೆದರು.

‘ನಾವು ಶಾಂತಿವಾದಿ ಗಾಂಧೀಜಿ ತತ್ವಪರಿಪಾಲಕರು, ಸ್ವಾತಂತ್ರ್ಯಕ್ಕೆ ರಕ್ತ ಹರಿಸುವುದು ಬೇಡ, ಶಾಂತವಾಗಿ ಪಡೆಯೋಣ’ ಎಂದು ಹೇಳುವ  ಮೈಲಾರ ಮಹದೇವಪ್ಪನವರ ಪಾತ್ರದಲ್ಲಿ ಎಸ್‌ಎಫ್‌ಐ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಸುಭಾಷ್ ಬಂದರು.

ವೀರಯ್ಯ ಹಿರೇಮಠ ಪಾತ್ರದಲ್ಲಿ ಗುಡ್ಡಪ್ಪ ಹರಿಜನ, ತಿರುಕಪ್ಪ ಮಡಿವಾಳರ ಪಾತ್ರದಲ್ಲಿ ಮಲ್ಲಪ, –ರಾಜಗುರು ಪಾತ್ರದಲ್ಲಿ ಭರಮಗೌಡ್, ಸುಖದೇವ್‌ ಪಾತ್ರದಲ್ಲಿ  ವಿಠಲ ಕಾಣಿಸಿಕೊಂಡರು. ಬಸವರಾಜ ಶಿಗ್ಗಾವಿ ಕ್ರಾಂತಿಗೀತೆಯನ್ನು ಹಾಡಿದರು.

ಉದ್ಘಾಟನೆ: ‘ಭಗತ್‌ಸಿಂಗ್ ಒಬ್ಬ ಅಪ್ರತಿಮ ದೇಶ ಪ್ರೇಮಿ, ದೇಶದ ಸ್ವಾತಂತ್ರ್ಯ ಹೋರಾಟದ ಧ್ರುವತಾರೆ, ಇಂದಿನ ಯುವ ಪೀಳಿಗೆಯ ಸ್ಫೂರ್ತಿಯ ನಾಯಕ’ ಎಂದು ‘ಬೀದಿನಾಟಕ’ವನ್ನು ಉದ್ಘಾಟಿಸಿ ಮಾತನಾಡಿದ ಕಾರ್ಮಿಕ ಮುಖಂಡ ನಾರಾಯಣ ಕಾಳೆ ಹೇಳಿದರು. 

‘ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದ ಹೋರಾಟಗಾರರ ಬಗ್ಗೆ ಬೀದಿನಾಟಕದ ಮೂಲಕ ಎಸ್‌ಎಫ್‌ಐ ಸಂಘಟನೆಯು ಜಿಲ್ಲೆಯ ಯುವಜನತೆಯಲ್ಲಿ ಅರಿವು ಮೂಡಿಸುತ್ತಿದೆ. ಭವಿಷ್ಯದ ಮಕ್ಕಳಿಗೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದವನ್ನು ಪರಿಚಯಿಸುವ ದೃಷ್ಟಿಯಿಂದ ಈ ಕಾರ್ಯವನ್ನು ಕೈಗೊಳ್ಳುತ್ತಿದೆ’ ಎಂದರು.

‘ದೇಶದ ಸ್ವಾತಂತ್ರ್ಯ ಚಳವಳಿಗೆ ತನ್ನದೇ ಆದ ಕೊಡುಗೆ ನೀಡಿದ ಭಗತ್‌ಸಿಂಗ್ ಮತ್ತು ಆತನ ಸಂಗಾತಿಗಳಾದ ರಾಜಗುರು, ಸುಖದೇವ್ ಸ್ವತಂತ್ರ ಭಾರತದ ಕನಸು ಕಂಡವರು.

ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕ್ ಅಸೋಷಿಯೇಶನ್‌ ಅನ್ನು ಕಟ್ಟಿದ ಭಗತ್, ಸಮಾಜವಾದಿ ರಾಷ್ಟ್ರ ನಿರ್ಮಾಣದ ಕನಸು ಹೊತ್ತಿದ್ದರು’ ಎಂದರು. ವಿಜಕುಮಾರ ಹಾಗೂ ಬಸವರಾಜ ಶಿಗ್ಗಾವಿ ಮಾತನಾಡಿದರು. ಎಸ್‌ಎಫ್‌ಐ ಸಂಘಟನೆಯ ರೇಣುಕಾ ಕಹಾರೆ ಹಾಗೂ ನೀಲಮ್ಮ ಇದ್ದರು.

*
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 70ವರ್ಷಗಳೇ ಕಳೆದಿವೆ. ಆದರೆ, ಸಮಾನತೆ ಮಾತ್ರ ಇನ್ನೂ ಬಂದಿಲ್ಲ.
-ನಾರಾಯಣ ಕಾಳೆ,
ಕಾರ್ಮಿಕ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT