ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸಿಬಿ ಬಲೆಗೆ ಬಿದ್ದ ಕೆಐಎಡಿಬಿ ಅಧಿಕಾರಿ, ನೌಕರ

ನಿವೇಶನಕ್ಕೆ ಸಂಬಂಧಿಸಿದ ಸೇಲ್‌ ಡೀಡ್‌ ಮಾಡಿಕೊಡುವುದಕ್ಕೆ ಲಂಚ ಪಡೆಯುತ್ತಿದ್ದ ವೇಳೆ ದಾಳಿ, ನ್ಯಾಯಾಂಗ ವಶಕ್ಕೆ
Last Updated 24 ಮಾರ್ಚ್ 2017, 6:40 IST
ಅಕ್ಷರ ಗಾತ್ರ

ಬೆಳಗಾವಿ: ನಿವೇಶನಕ್ಕೆ ಸಂಬಂಧಿಸಿದ ಸೇಲ್‌ ಡೀಡ್‌ ಮಾಡಿಕೊಡುವುದಕ್ಕೆ ಲಂಚ ಪಡೆಯುತ್ತಿದ್ದ ಕೆಐಎಡಿಬಿಯ ಅಧಿಕಾರಿ ಹಾಗೂ ನೌಕರನೊಬ್ಬ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಲೆಗೆ ಗುರುವಾರ ಬಿದ್ದಿದ್ದಾರೆ.

ಕೆಐಎಡಿಬಿ ಬೆಳಗಾವಿ ವಲಯ ಕಚೇರಿಯ ಅಭಿವೃದ್ಧಿ ಅಧಿಕಾರಿ ಎಲ್‌.ಕೆ. ಪ್ರಕಾಶಕುಮಾರ ಹಾಗೂ ಮೀಟರ್‌ ರೀಡರ್‌ ಬಸವರಾಜ ಪೂಜೇರಿ ಲಂಚ ಪಡೆಯುವಾಗ ಸಿಕ್ಕಿಬಿದ್ದವರು.

ಕಾಮತ್‌ಗಲ್ಲಿಯ ಇಮ್ತಿಯಾಜ್‌ ಅಹಮದ್‌, ನಜೀರ್‌ ಅಹಮದ್‌ ತಹಶೀಲ್ದಾರ್‌ ಅವರು ಕೆಐಎಡಿಬಿಯಲ್ಲಿ 15 ವರ್ಷಗಳ ಹಿಂದೆ ಖರೀದಿಸಿದ್ದ 20X30 ನಿವೇಶನದ ಲೀಸ್‌ ಅವಧಿ ಮುಗಿದಿತ್ತು. ಇದನ್ನು ತಮ್ಮ ಹೆಸರಿಗೆ ಮಾಡಿಕೊಡುವಂತೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಪ್ರಕಾಶಕುಮಾರ ₹15 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇದರಿಂದ ಬೇಸರಗೊಂಡ ಇಮ್ತಿಯಾಜ್‌ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದರು ಎಂದು ಎಸಿಬಿ ಅಧಿಕಾರಿಗಳು ಮಾಹಿತಿ ನೀಡಿದರು.

ಎಸಿಬಿ ಎಸ್ಪಿ ಚನ್ನಬಸವಣ್ಣ ಲಂಗೋಟಿ, ಡಿವೈಎಸ್ಪಿ ಜೆ. ರಘು, ಇನ್‌ಸ್ಪೆಕ್ಟರ್‌ಗಳಾದ ವಿಶ್ವನಾಥ ಕಬ್ಬೂರ, ವೈ.ಎಸ್‌. ಧರನಾಯಕ ಹಾಗೂ ಸಿಬ್ಬಂದಿ ಈ ದಾಳಿ ನಡೆಸಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ನಾಲ್ವರ ಬಂಧನ: ನಗರದ ಖಂಜರಗಲ್ಲಿಯ ರಸ್ತೆಯಲ್ಲಿ ಮಟ್ಕಾ ಜೂಟಾಟ ಆಡುತ್ತಿದ್ದ ನಾಲ್ವರು ಆರೋಪಿಗಳನ್ನು ನಗರ ಅಪರಾಧ ವಿಭಾಗದ ಪೊಲೀಸರು ಗುರುವಾರ ಬಂಧಿಸಿ ಅವರಿಂದ ₹8,769 ನಗದು ಹಾಗೂ 4 ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಖಂಜರಗಲ್ಲಿಯ ನಿವಾಸಿಗಳಾದ ಶಫಿ ತಹಶೀಲ್ದಾರ, ಇಮ್ರಾನ್ ತಹಶೀಲ್ದಾರ, ಜಾವೇದ ತಹಶೀಲ್ದಾರ ಹಾಗೂ ಸಂತೋಷ ಅಕ್ಕತಂಗೇರಹಾಳ ಬಂಧಿತ ಆರೋಪಿಗಳು.ಎಸಿಪಿ ಆರ್.ಆರ್. ಕಲ್ಯಾಣಶೆಟ್ಟಿ, ಇನ್‌ಸ್ಪೆಕ್ಟರ್‌ ರಮೇಶ ಹೂಗಾರ ಹಾಗೂ ಸಿಬ್ಬಂದಿ ಈ ದಾಳಿ ನಡೆಸಿದ್ದಾರೆ.

ಪ್ರಾಮಾಣಿಕತೆ ಮೆರೆದ ಚಾಲಕ: ತಾನು ಚಲಾಯಿಸುತ್ತಿದ್ದ ಟಾಟಾ ಮ್ಯಾಜಿಕ್‌ ವಾಹನದಲ್ಲಿ ಪ್ರಯಾಣಿಸಿದ ಮಹಿಳೆ ಬಿಟ್ಟು ಹೋಗಿದ್ದ ₨ 2,40 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ₹20 ಸಾವಿರ ನಗದನ್ನು ಚಾಲಕನು ವಾಹನದ ಮಾಲೀಕರ ಮೂಲಕ ಡಿಸಿಪಿ ಜಿ. ರಾಧಿಕಾ ಅವರಿಗೆ ಗುರುವಾರ ಒಪ್ಪಿಸಿ, ಪ್ರಾಮಾಣಿಕತೆ ಮೆರೆದಿದ್ದಾರೆ.

ತಾಲ್ಲೂಕಿನ ಕಡೋಲಿ ಗ್ರಾಮದ ಪ್ರಶಾಂತ ಕಾಂಬಳೆ ಪ್ರಾಮಾಣಿಕತೆ ಮೆರೆದ ಚಾಲಕ. ಮಾರ್ಚ್‌ 14ರಂದು ರಾಮತೀರ್ಥನಗರದ ಸುರೇಖಾ ಛಲವಾದಿ ಎನ್ನುವವರು ಬ್ಯಾಗ್‌ ಅನ್ನು ವಾಹನದಲ್ಲಿಯೇ ಬಿಟ್ಟು ಹೋಗಿದ್ದರು. ಇದನ್ನು ಗಮನಿಸಿದ ಚಾಲಕ ಪ್ರಶಾಂತ, ಮಾಲೀಕರ ಮೂಲಕ ಗುರುವಾರ ಪೊಲೀಸರಿಗೆ ಒಪ್ಪಿಸಿದ್ದಾರೆ.

ಚಾಲಕನಿಗೆ ಡಿಸಿಪಿ ಸನ್ಮಾನ ಪತ್ರ ನೀಡಿ ಅಭಿನಂದಿಸಿದರು. ಚಿನ್ನಾಭರಣ ಹಾಗೂ ನಗದನ್ನು ವಾರಸುದಾರರಾದ ಸುರೇಖಾ ಅವರಿಗೆ ಗುರುವಾರ ನೀಡಲಾಯಿತು ಎಂದು ಪ್ರಕಟಣೆ ತಿಳಿಸಿದೆ.

ಮತ್ತೊಂದು ಪ್ರಕರಣ: ಇಲ್ಲಿನ ಶಹಾಪುರದ ಕೋರೆಗಲ್ಲಿಯ ವಿವೇಕಾನಂದ ರೇವಣಕರ ಅವರು ಬುಧವಾರ ಕಳೆದುಕೊಂಡಿದ್ದ ₹ 1.95 ಲಕ್ಷ ಮೌಲ್ಯದ ಚಿನ್ನಾಭರಣ ಪತ್ತೆಯಾಗಿದ್ದು, ಅದನ್ನು ಪೊಲೀಸರು ಗುರುವಾರ ಒಪ್ಪಿಸಿದರು.

ವಿವೇಕಾನಂದ ಅವರು ಪೋತದಾರ ಚಿನ್ನದ ಅಂಗಡಿಯಲ್ಲಿ 60 ಗ್ರಾಂ ತೂಕದ ಚಿನ್ನಾಭರಣ ತೆಗೆದುಕೊಂಡು ಹೋಗುವಾಗ ಮಾರ್ಗಮಧ್ಯದಲ್ಲಿ ಕಳೆದುಕೊಂಡಿದ್ದರು.

ತಮಗೆ ಸಂತೋಷ ಚಿತ್ರಮಂದಿರದ ಬಳಿ ದೊರೆತ ಚಿನ್ನಾಭರಣವನ್ನು ನಗರಪಾಲಿಕೆ ಸದಸ್ಯ ಬಾಬುಲಾಲ ಮುಜಾವರ ಅವರ ಮೂಲಕ ಆಜಾದ್‌ನಗರದ ಇಲಿಯಾಸ್‌ ಅತ್ತಾರ ಅವರು ಡಿಸಿಪಿ ಜಿ. ರಾಧಿಕಾ ಅವರಿಗೆ ತಂದು ಒಪ್ಪಿಸಿದ್ದರು. ಡಿಸಿಪಿ ಸೂಚನೆ ಮೇರೆಗೆ ಪರಿಶೀಲನೆ ನಡೆಸಿದ ಖಡೇಬಜಾರ ಎಸಿಪಿ, ಪೋತದಾರ ಬಂಗಾರದ ಅಂಗಡಿಯಲ್ಲಿ ದೊರೆತೆ ಮಾಹಿತಿ ಪ್ರಕಾರ ವಾರಸುದಾರರನ್ನು ಪತ್ತೆ ಹಚ್ಚಿದ್ದಾರೆ. ನಂತರ ಆಭರಣವನ್ನು ಒಪ್ಪಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ನ್ಯಾಯಾಲಯ ಸಿಬ್ಬಂದಿಗೆ ಜೀವ
ಬೆದರಿಕೆ:
ಗೋಕಾಕಿನ ದಿವಾಣಿ ನ್ಯಾಯಾಲಯದ ಬೆಲೀಫ್‌ ಮೇಲೆ ವಾಹನ ಚಲಾಯಿಸಿ ಅಪಘಾತ ಮಾಡಲು ಯತ್ನಿಸಿದ್ದಲ್ಲದೇ ಅವರಿಗೆ ಜೀವ ಬೆದರಿಕೆ ಹಾಕಿದ ಘಟನೆ ನಡೆದಿದೆ. ತಾಲ್ಲೂಕಿನ ಮಾಲದಿನ್ನಿ ಗ್ರಾಮ ವ್ಯಾಪ್ತಿಯಲ್ಲಿ ಕಳೆದ ಇದೇ 21ರಂದು ಸಂಜೆ ಬೇಲಿಪ್ ಅವರು ನಡೆದು ಹೋಗುವಾಗ ಜೀಪ್‌ನಿಂದ ಮೇಲೆ ಹರಿಸಲು ಯತ್ನಿಸಿದ್ದಲ್ಲದೆ,

ಅವರ ಮನೆ ಮೇಲೆ ಕಲ್ಲು ತೂರಲು ಯತ್ನಿಸಲಾಗಿದೆ ತಾಲ್ಲೂಕಿನ ಉಪ್ಪಾರಹಟ್ಟಿ ಗ್ರಾಮದ ನಿವಾಸಿ ಬಾಳೇಶ ದುಂಡಪ್ಪ ಕೊಳವಿ ಎಂಬುವವರ ವಿರುದ್ಧ ಮಾಲದಿನ್ನಿ ಗ್ರಾಮದ ನಿವಾಸಿ ಬಾಬು ಶಂಕರ ಮಾವರಕರ ಗ್ರಾಮೀಣ ಪೊಲೀಸ್‌ ಠಾಣೆಗೆ ದೂರು ದಾಖಲಿಸಿದ್ದಾರೆ. ಬೇಲೀಫ್‌ ಮೇಲೆ ಈ ರೀತಿ ಕೃತ್ಯ ಎಸಗಲು ಕಾರಣ ತಿಳಿದುಬಂದಿಲ್ಲ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮೀಣ ಠಾಣೆಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಆಕಸ್ಮಿಕ ಬೆಂಕಿ ತಗುಲಿದಾಗ ಮನೆಯಲ್ಲಿ ಯಾರೂ ಇರಲಿಲ್ಲ..
ಪರಮಾನಂದವಾಡಿ(ಬೆಳಗಾವಿ ಜಿಲ್ಲೆ):
ರಾಯಬಾಗ ತಾಲ್ಲೂಕು ಪರಮಾನಂದವಾಡಿ ಗ್ರಾಮದ ಯಲ್ಲಟ್ಟಿ ಪ್ಲಾಟ್‌ನ ಗುಡಿಸಲಿನಲ್ಲಿ ಆಕಸ್ಮಿಕ ಬೆಂಕಿ ತಗುಲಿದಾಗ ದೊಡ್ಡವರು ಯಾರೂ ಮನೆಯಲ್ಲಿ ಇರಲಿಲ್ಲ. ಮಗು ಮಾತ್ರ ಮನೆಯಲ್ಲಿತ್ತು.

ಮಹಾದೇವ ಪೋಳ ಅವರ ಪತ್ನಿ ಕೂಲಿಗೆ ಹೋಗಿದ್ದರು. ಮಧ್ಯಾಹ್ನ ಮಕ್ಕಳಿಬ್ಬರಿಗೆ ಊಟ ಮಾಡಿಸಿದ ಮಹಾದೇವ ಅವರು ಹಿರಿಯ ಮಗನನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಮೇವು ತರಲು ಹೋಗಿದ್ದರು. ಆದರೆ ಮನೆಯಲ್ಲಿ ಮಲಗಿದ್ದ ಒಂದೂವರೆ ವರ್ಷದ ರಾಹುಲ್‌ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಬೆಂಕಿ ಹೊತ್ತಿಕೊಂಡಿದ್ದು ಹೇಗೆ ಎನ್ನುವುದು ಸ್ಪಷ್ಟವಾಗಿಲ್ಲ. ಅಕ್ಕಪಕ್ಕದ ಮನೆಯವರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ, ಹೆಚ್ಚಿನ ಅನಾಹುತವನ್ನು ತಪ್ಪಿಸಿದರು.

ತಹಶೀಲ್ದಾರ್‌ ಸಾಂತ್ವನ: ರಾಯಬಾಗ ತಹಶೀಲ್ದಾರ್‌ ಕೆ.ಎನ್. ರಾಜಶೇಖರ ಭೇಟಿ ನೀಡಿ ಪರಿಶೀಲಿಸಿ, ಮಹಾದೇವ ಪೋಳ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಸರ್ಕಾರದಿಂದ ಸಿಗುವ ನೆರವನ್ನು ಕೊಡಿಸುವುದಾಗಿ ಅವರು ಭರವಸೆ ನೀಡಿದರು. ಚಿಕ್ಕೋಡಿ ಉಪ ವಿಭಾಗಾಧಿಕಾರಿ ಗೀತಾ ಕೌಲಗಿ, ರಾಯಬಾಗ ಸಿಪಿಐ ಪ್ರೀತಂ ಶ್ರೇಯಕರ, ಹಾರೊಗೇರಿ ಪಿಎಸ್ಐ, ಪಿಡಿಒ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಭೇಟಿ ನೀಡಿ, ಸಾಂತ್ವನ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT