ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಬ್ಬರ ಬಂಧನ, ಮತ್ತೊಬ್ಬರು ಪೊಲೀಸರ ವಶಕ್ಕೆ

ಜೀವ ಬೆದರಿಕೆ, ಬೈಕ್‌ಗಳಿಗೆ ಬೆಂಕಿ ಹಚ್ಚಿದ ಪ್ರಕರಣ: ತನಿಖೆಗೆ ಮೂರು ತಂಡ
Last Updated 24 ಮಾರ್ಚ್ 2017, 6:46 IST
ಅಕ್ಷರ ಗಾತ್ರ

ಬಳ್ಳಾರಿ: ನಗರದ 27ನೇ ವಾರ್ಡಿನ ಸದಸ್ಯೆ ಐ.ದಿವ್ಯಾಕುಮಾರಿ ಅವರ ಕುಟುಂಬದ ಸದಸ್ಯರಿಗೆ ಜೀವ ಬೆದರಿಕೆ ಹಾಕಿ ಬೈಕ್‌ಗಳಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿ ಕೌಲ್‌ಬಜಾರ್‌ ಠಾಣೆಯ ಪೊಲೀಸರು ಒಬ್ಬರನ್ನು ಬುಧವಾರ ರಾತ್ರಿ ಬಂಧಿಸಿದ್ದು, ಮತ್ತೊಬ್ಬರನ್ನು ಗುರುವಾರ ವಶಕ್ಕೆ ಪಡೆದಿದ್ದಾರೆ.

ಜಾಗೃತಿ ನಗರದ ನಿವಾಸಿ ಆರೋಪಿ ಪುರುಷೋತ್ತಮ ಎಂಬುವರನ್ನು ಕಡಪಗೇರಿಯ ಉರ್ದು ಟ್ರೈನಿಂಗ್ ಶಾಲೆಯ ಬಳಿ ಬುಧವಾರ ಬಂಧಿಸಲಾಗಿದೆ. ಕೌಲ್‌ಬಜಾರ್ ಪ್ರದೇಶದ ನಿವಾಸಿ ಜಿಲಾನ್ ಎಂಬುವರನ್ನು ಗುರುವಾರ ವಶಕ್ಕೆ ಪಡೆಯಲಾಗಿದೆ. ವಶದಲ್ಲಿರುವ ಆರೋಪಿಯನ್ನು ನಗರ ಉಪವಿಭಾಗದ ಡಿವೈಎಸ್‌ಪಿ ಎಚ್‌.ಎಸ್‌.ಹೊಸಮನಿ ನೇತೃತ್ವದ ಪೊಲೀಸ್‌ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೂರು ತಂಡ ರಚನೆ
ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲೇ ಘಟನೆ ನಡೆದಿರುವಾಗಿ ದೂರು ದಾಖಲಾಗಿದೆ. ಈ ಸಂಬಂಧ ತನಿಖೆ ಸಲುವಾಗಿ ಮೂರು ತಂಡಗಳನ್ನು ರಚಿಸಲಾಗಿದೆ. ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆದಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌.ಚೇತನ್‌ ತಿಳಿಸಿದ್ದಾರೆ.

ವರದಿ ಸಲ್ಲಿಕೆ: ‘ದಿವ್ಯಾಕುಮಾರಿ ಅವರ ಮಗ ದೀಪಕ್‌ ಚೌಧರಿ ಅವರನ್ನು ಸಂಪರ್ಕಿಸುವ ಯತ್ನ ಕೈಗೂಡಿಲ್ಲ. ಅವರ ಸಂಪರ್ಕ ದೊರೆತ ಬಳಿಕ ಮಾಹಿತಿ ಪಡೆದು ಪಕ್ಷದ ಹೈಕಮಾಂಡಿಗೆ ವರದಿ ಸಲ್ಲಿಸಲಾಗುವುದು’ ಎಂದು ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಜಿ.ಎಸ್‌. ಆಂಜನೇಯುಲು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಮೇಯರ್‌ ಸ್ಥಾನವು ಸಾಮಾನ್ಯ ಅಭ್ಯರ್ಥಿಗೆ ಮೀಸಲಿರುವುದರಿಂದ, ಪಕ್ಷಕ್ಕೆ ಬಹುಮತವೂ ಇರುವುದರಿಂದ ಸದಸ್ಯರಲ್ಲಿ ಪೈಪೋಟಿ ಹೆಚ್ಚಿದೆ. ಈ ಬಗ್ಗೆ ಈಗಾಗಲೇ ಹೈಕಮಾಂಡ್‌ ಗಮನ ಸೆಳೆಯಲಾಗಿದೆ. ಉಸ್ತುವಾರಿ ಸಚಿವರು ಹಾಗೂ ಎಲ್ಲ ಶಾಸಕರ ಸಮ್ಮುಖದಲ್ಲಿ ಸಮಸ್ಯೆಯನ್ನು ಬಗೆಹರಿಸಲಾಗುವುದು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT