ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿ ಶುಂಠಿಗಿಲ್ಲ ಬೆಲೆ:ಒಣ ಶುಂಠಿಗೆ ಮೊರೆ

ಮಧ್ಯವರ್ತಿಗಳ ಕಾಟದಲ್ಲಿ ಬಡವಾದ ಬೆಳೆಗಾರರು; ಹೋಬಳಿಯಲ್ಲಿ ಇಲ್ಲದ ಸಂಗ್ರಹಣಾ ವ್ಯವಸ್ಥೆ
Last Updated 24 ಮಾರ್ಚ್ 2017, 6:56 IST
ಅಕ್ಷರ ಗಾತ್ರ

ಶಿರಸಿ: ಗರಿಷ್ಠ ಮುಖಬೆಲೆಯ ನೋಟು ರದ್ದತಿಯ ನಂತರ ಪಾತಾಳಕ್ಕೆ ಕುಸಿದಿದ್ದ ಹಸಿ ಶುಂಠಿಯ ಬೆಲೆ ಅರ್ಧ ಹಂಗಾಮು ಕಳೆದರೂ ಇನ್ನೂ ತೆವಳುತ್ತಿದೆ. ಲಕ್ಷಾಂತರ ರೂಪಾಯಿ ಬಂಡವಾಳ ತೊಡಗಿಸಿರುವ ಬೆಳೆಗಾರ ನಷ್ಟ ತಪ್ಪಿಸಿಕೊಳ್ಳಲು ಒಣ ಶುಂಠಿಗೆ ಮೊರೆ ಹೋಗುತ್ತಿದ್ದಾನೆ.

ತಾಲ್ಲೂಕಿನ ಬನವಾಸಿ ಹೋಬಳಿ ಯಲ್ಲಿ ನೂರಾರು ಎಕರೆ ಭತ್ತದ ಗದ್ದೆಗಳು ಶುಂಠಿ ಹೊಲಗಳಾಗಿ ಮಾರ್ಪಟ್ಟಿವೆ. ಹವಾಮಾನ ವೈಪರೀತ್ಯ, ಇನ್ನಿತರ ಕಾರಣಗಳಿಂದ ವರ್ಷದಿಂದ ವರ್ಷಕ್ಕೆ ಶುಂಠಿ ಬೆಳೆಯುವ ಕ್ಷೇತ್ರ ವಿಸ್ತರಣೆ ಯಾಗುತ್ತಿದೆ. ‘ಶುಂಠಿ ಬೆಳೆ ಜೂಜಾಟ ವಿದ್ದಂತೆ. ದರ ಬಂದರೆ ಬಂಪರ್ ಲಾಭ ಇಲ್ಲದಿದ್ದರೆ ದೊಡ್ಡ ನಷ್ಟ’ ಎನ್ನುವ ರೈತರು ಅದನ್ನೇ ಸವಾಲಾಗಿ ಸ್ವೀಕರಿಸಿ ಶುಂಠಿ ಬೆಳೆಯುತ್ತಾರೆ.

‘ಬಿತ್ತಿದ ಶುಂಠಿ ಬಲಿಯುವ ಮೊದಲೇ ಖರೀದಿಗೆ ಬಂದಿದ್ದ ಮಧ್ಯವರ್ತಿಗಳು ನವೆಂಬರ್ ತಿಂಗಳಿನಲ್ಲಿ ಕ್ವಿಂಟಲ್‌ಗೆ ಗರಿಷ್ಠ ₹ 2200 ಬೆಲೆಯಲ್ಲಿ ಎಳೆಯ ಶುಂಠಿ ಖರೀದಿಸಿದ್ದರು. ಆರಂಭದಲ್ಲಿಯೇ ಉತ್ತಮ ದರ ಕಂಡು ಬೆಳೆಗಾರರು ಸಂತಸಪಟ್ಟಿದ್ದರು. ಆದರೆ ನೋಟು ರದ್ದತಿ ನಂತರ ಒಮ್ಮೆಲೇ ದರ ₹1700ಕ್ಕೆ ಕುಸಿಯಿತು. ಆಗ ಬಿದ್ದ ದರ ಇನ್ನೂ ಹಾಗೆಯೇ ಇದೆ.

ಇದೇ ದರದಲ್ಲಿ ಬೆಳೆದಿರುವ ಮಾಲು ಮಾರಾಟ ಮಾಡಿದರೆ ಭಾರೀ ನಷ್ಟ ಅನುಭವಿಸಬೇಕಾಗುತ್ತದೆ. ಹೀಗಾಗಿ ದೊಡ್ಡ ಬೆಳೆಗಾರರು ಒಣ ಶುಂಠಿ ಮಾಡಿ ಸಂಗ್ರಹಿಸಿಡುತ್ತಿದ್ದಾರೆ’ ಎನ್ನುತ್ತಾರೆ ಬೆಳೆಗಾರ ಸುಧಾಮ ಬೇಗಣ್ಣ ಮರೇರ್.

ಎರಡು ವರ್ಷಗಳ ಹಿಂದೆ ಶುಂಠಿ ಕ್ವಿಂಟಲ್‌ಗೆ 10ಸಾವಿರ ಗರಿಷ್ಠ ಬೆಲೆ ದೊರೆತಿತ್ತು. ಕಳೆದ ವರ್ಷ ಈ ವೇಳೆಗೆ ₹ 2500 ದರವಿತ್ತು. ಆದರೆ ಈ ವರ್ಷದ ಬೆಲೆ ಬೆಳೆಗಾರರನ್ನು ಕಂಗಾಲು ಮಾಡಿದೆ. ಒಂದು ಎಕರೆಗೆ ಎಂಟು ಕೆ.ಜಿ ಬೀಜ ಬಿತ್ತ ಮಾಡಿದರೆ ಅಂದಾಜು 160ರಿಂದ 175 ಕ್ವಿಂಟಲ್ ಇಳುವರಿ ಬರುತ್ತದೆ.

ಗದ್ದೆಗಳನ್ನು ಲೀಸ್‌ಗೆ ತೆಗೆದುಕೊಂಡಿದ್ದರೆ ಎಂಟು ತಿಂಗಳ ಈ ಬೆಳೆ ಕೊಯ್ಲಿಗೆ ಬರುವ ತನಕ ₹ 2 ಲಕ್ಷ ವೆಚ್ಚವಾಗುತ್ತದೆ. ನಾವು ಗದ್ದೆಯಲ್ಲಿ ಕೆಲಸ ಮಾಡದೇ ಎಲ್ಲವನ್ನೂ ಕೂಲಿಯಾಳುಗಳ ಮೂಲಕ ಮಾಡಿಸಿದರೆ ಇನ್ನು ₹50ಸಾವಿರ ಹೆಚ್ಚು ಖರ್ಚಾಗುತ್ತದೆ. ಹೀಗಾಗಿ ಕನಿಷ್ಠ ₹2500 ದರವಿಲ್ಲದಿದ್ದರೆ ಬೆಳೆಗಾರನಿಗೆ ಹಾನಿಯಾಗುತ್ತದೆ ಎಂದು ಅವರು ಹೇಳಿದರು.

ಹೊರ ರಾಜ್ಯದಲ್ಲಿ ಮಾರುಕಟ್ಟೆ: ಬನವಾಸಿ ಯ ಶುಂಠಿಗೆ, ಅಹಮ್ಮದಾಬಾದ್, ಮುಂಬೈ, ದೆಹಲಿಯಲ್ಲಿ ಮಾರುಕಟ್ಟೆ ಯಿದೆ. ಮಧ್ಯವರ್ತಿಗಳು ಬಂದು ರೈತರಿಂದ ಖರೀದಿಸಿ ಅಲ್ಲಿಗೆ ಕೊಂಡೊ ಯ್ಯುತ್ತಾರೆ. ಅನೇಕ ಬಾರಿ ಅವರಿಂದ ಹಣ ಪಾವತಿ ವಿಳಂಬವಾಗುತ್ತದೆ. ಕೆಲವೊಮ್ಮೆ ಮೋಸವೂ ಆಗುತ್ತದೆ.

15 ದಿನ ಬಿಟ್ಟು ಹಣ ಕೊಡುವುದಾಗಿ ನಂಬಿಸಿ ಕೈಕೊಡುತ್ತಾರೆ. ಆದರೆ ರೈತನಿಗೆ ಅವರನ್ನು ಅವಲಂಬಿಸದೇ ಬೇರೆ ಗತಿಯಿಲ್ಲ. ಸಣ್ಣ ಬೆಳೆಗಾರರು ವಿಧಿಯಿಲ್ಲದೇ ಅವರಿಗೇ ಮಾಲನ್ನು ಕೊಡುತ್ತಿದ್ದಾರೆ. ದೊಡ್ಡ ಬೆಳೆಗಾರರು ಒಣ ಶುಂಠಿ ಮಾಡಿ ದರಕ್ಕಾಗಿ ಕಾಯುತ್ತಿದ್ದಾರೆ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಒಣ ಶುಂಠಿಗೆ ಮಾರುಕಟ್ಟೆಯಲ್ಲಿ ಕೆ.ಜಿ.ಗೆ ಸರಾಸರಿ ₹ 95 ದರವಿದೆ. ಐದು ಕೆ.ಜಿ. ಹಸಿ ಶುಂಠಿಯಿಂದ ಒಂದು ಕೆ.ಜಿ ಒಣ ಶುಂಠಿ ಸಿಗುತ್ತದೆ. ನಿತ್ಯ ಕೆಲಸಕ್ಕೆ ಬರುವ ಮಹಿಳೆಯರಿಗೆ ಕೂಲಿ ಹಣ ನೀಡಬೇಕು. ಸುತ್ತಲಿನ ಹಳ್ಳಿಗಳಿಂದ ಬೆಳಿಗ್ಗೆ ಬರುವ ಹೆಂಗಸರು ಸಂಜೆಯ ತನಕ ಕೆಲಸ ಮಾಡಿ ಒಣ ಶುಂಠಿ ಸಿದ್ಧಪಡಿಸುತ್ತಾರೆ. ಪ್ರಖರ ಬಿಸಿಲಿನಲ್ಲಿ 15 ದಿನಕ್ಕೆ ಒಣ ಶುಂಠಿ ಸಿದ್ಧವಾಗುತ್ತದೆ ಎಂದು ಬೆಳೆಗಾರ ಪ್ರವೀಣ ಮಲ್ಲಾಡದವರ್ ಹೇಳಿದರು.

‘ಬನವಾಸಿ ಭಾಗದಲ್ಲಿನ ಕೃಷಿ ಭೂಮಿಯನ್ನು ಇಲ್ಲಿನ ರೈತರೇ ಲೀಸ್ ಮೇಲೆ ಪಡೆಯುವುದರಿಂದ ಕೇರಳಿಗರ ಕಾಟವಿಲ್ಲ. ನಾವು ತೀರಾ ಅಪಾಯಕಾರಿ ಯಾದ ರಾಸಾಯನಿಕಗಳನ್ನು ಹಾಕದಿರು ವುದರಿಂದ ಶುಂಠಿ ಬೆಳೆದರೂ ನಮ್ಮ ಭೂಮಿ ಬಂಜರಾಗುವುದಿಲ್ಲ’ ಎಂದು ಅವರು ಹೇಳಿದರು.

*
ಅಧಿಕ ಪ್ರಮಾಣದಲ್ಲಿ ಶುಂಠಿ ಬೆಳೆಯುವ ಬನವಾಸಿ ಹೋಬಳಿಯಲ್ಲಿ ಸಂಗ್ರಹಣಾ ಘಟಕ ಸ್ಥಾಪನೆ ಆಗಬೇಕು. ಮನೆಯಲ್ಲಿಯೇ ಇಟ್ಟರೆ ಕೇವಲ ಐದು ತಿಂಗಳು ಮಾತ್ರ ಉಳಿಸಿಕೊಳ್ಳಬಹುದು.
-ಸುಧಾಮ ಬೇಗಣ್ಣ ಮರೇರ್,
ಶುಂಠಿ ಬೆಳೆಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT