ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಲ್‌ಡಿಇ ಕಾಲೇಜಿಗೆ ಸುವರ್ಣ ಸಂಭ್ರಮ

Last Updated 24 ಮಾರ್ಚ್ 2017, 7:04 IST
ಅಕ್ಷರ ಗಾತ್ರ

ಜಮಖಂಡಿ: ಅತ್ಯಂತ ದೂರದೃಷ್ಟಿವುಳ್ಳವರು ಹಾಗೂ ಶಿಕ್ಷಣ ಪ್ರೇಮಿಗಳು ಆಗಿದ್ದ ಜಮಖಂಡಿಯ ಕೊನೆಯ ಅರಸು ಮನೆತನದ ಪಟವರ್ಧನ ಸಂಸ್ಥಾನಿಕರು ನಗರದ ಹೃದಯ ಭಾಗದಲ್ಲಿ ವಿಶಾಲವಾದ ಕಟ್ಟಡ ನಿರ್ಮಿಸಿ ಪಿ.ಬಿ. ಪ್ರೌಢಶಾಲೆ ಆರಂಭಿಸಿದ್ದರು. ಶಿಕ್ಷಣ ಪ್ರಸಾರ ಕಾರ್ಯಕ್ಕೆ ತಮ್ಮ ಆಡಳಿತದ ಕೊನೆಯ ದಿನಗಳವರೆಗೂ ಸಹಾಯ, ಸಹಕಾರ ಮತ್ತು ಸಹಾಯಹಸ್ತ ನೀಡುತ್ತಾ ಬಂದಿದ್ದರು.

ವಿಜಯಪುರ ಬಿಎಲ್‌ಡಿಇ ಸಂಸ್ಥೆ 1963ರಲ್ಲಿ ಜಮಖಂಡಿ ನಗರದಲ್ಲಿ ಕಲೆ ಮತ್ತು ವಿಜ್ಞಾನ ಮಹಾವಿದ್ಯಾಲಯವನ್ನು ಸ್ಥಾಪಿಸಿತ್ತು. 1963ರಲ್ಲಿ ಕೇವಲ 200 ವಿದ್ಯಾರ್ಥಿಗಳಿಂದ ಆರಂಭವಾದ ಮಹಾವಿದ್ಯಾಲಯ ಈಗ 5 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಹೊಂದಿದೆ.

ಕೃಷ್ಣಾತೀರದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಗೆ ವಿಶಿಷ್ಟ ರೀತಿಯಲ್ಲಿ ಜ್ಞಾನ ಮತ್ತು ಅನುಭವ ಪ್ರಸಾರ ಮಾಡುತ್ತಿದೆ. ಸದ್ಯಕ್ಕೆ ಬಿ.ಎ, ಬಿ.ಎಸ್ಸಿ, ಬಿ.ಕಾಂ, ಬಿಬಿಎ, ಬಿಸಿಎ ಸ್ನಾತಕ ಕೋರ್ಸ್‌ಗಳು ಹಾಗೂ ಎಂ.ಎ(ಇತಿಹಾಸ), ಎಂ.ಎ(ರಾಜ್ಯಶಾಸ್ತ್ರ), ಎಂ.ಕಾಂ ಹಾಗೂ ಎಂ.ಎಸ್ಸಿ(ಗಣಿತಶಾಸ್ತ್ರ) ಸ್ನಾತಕೋತ್ತರ ಕೋರ್ಸ್‌ಗಳು ನಡೆಯುತ್ತವೆ.

ಸಂಯುಕ್ತ ಪದವಿ ಮಹಾವಿದ್ಯಾಲಯವನ್ನು 2002ರಲ್ಲಿ ವಿಭಜಿಸಿ ಪ್ರತ್ಯೇಕ ಪದವಿ ಪೂರ್ವ ಹಾಗೂ ಪದವಿ ಮಹಾವಿದ್ಯಾಯಗಳನ್ನು ರಚಿಸಲಾಗಿದೆ. ಪರೀಕ್ಷೆಯ ಗೌಪ್ಯತೆ, ಪಾವಿತ್ರ್ಯತೆ ಹಾಗೂ ಶಿಸ್ತು ಕಾಪಾಡಿಕೊಂಡು ಬರುವಲ್ಲಿ ಇಡೀ ರಾಜ್ಯದಲ್ಲಿ ತನ್ನದೇ ಆದ ಹೆಸರು ಪಡೆದಿದೆ. ಈ ವರೆಗೆ 61 ವಿದ್ಯಾರ್ಥಿಗಳು ವಿಶ್ವವಿದ್ಯಾಲಯ ಮಟ್ಟದಲ್ಲಿ ರ್‍್ಯಾಂಕ್‌ಗಳನ್ನು ಗಳಿಸಿದ್ದಾರೆ. ಗ್ರಂಥಾಲಯದಲ್ಲಿ 72 ಸಾವಿರಕ್ಕೂ ಅಧಿಕ ಪುಸ್ತಕಗಳು ಇವೆ. 


ಇ–ವಲಯ, ಇನ್‌ಬ್ಲಿಬ್‌ನೆಟ್‌, ಎನ್‌ಎಂಇ–ಐಸಿಟಿ ಪೋರ್ಟ್‌ಲ್‌, ವೈ–ಫೈ, ಇಂಟರನೆಟ್‌ ಸೌಲಭ್ಯ ಒದಗಿಸಲಾಗಿದೆ. ಪ್ರತಿ ವರ್ಷ ಮಹಾವಿದ್ಯಾಲಯದ ಕ್ರೀಡಾಪಟುಗಳು ವಿಶ್ವವಿದ್ಯಾಲಯ ಮಟ್ಟದಲ್ಲಿ, ಅಂತರ ವಿಶ್ವವಿದ್ಯಾಲಯ ಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದಾರೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಖ್ಯಾತಿಯ ಕ್ರೀಡಾಪಟುಗಳನ್ನು ರೂಪಿಸಿದ ಕೀರ್ತಿ ಮಹಾವಿದ್ಯಾಲಯಕ್ಕೆ ಇದೆ.

ಯುಜಿಸಿ ಕಾಯ್ದೆ 1956 ರ 2(ಎಫ್‌) ಮತ್ತು 12ಬಿ ಪಟ್ಟಿಯಲ್ಲಿ ಮಹಾವಿದ್ಯಾಲಯ ಸೇರ್ಪಡೆಯಾಗಿದೆ. ನ್ಯಾಕ್‌ನಿಂದ 2004 ರಲ್ಲಿ ಬಿ+ ಗ್ರೇಡ್‌ (ಸ್ಕೋರ್‌ ಪಾಯಿಂಟ್‌ 75.80), 2010 ರಲ್ಲಿ ‘ಎ’ ಗ್ರೇಡ್‌ (ಸಿಜಿಪಿಎ 3.12) ಹಾಗೂ 2016 ರಲ್ಲಿ ‘ಎ’ ಗ್ರೇಡ್‌ (ಸಿಜಿಪಿಎ 3.32) ಮಾನ್ಯತೆ ಪಡೆದಿದೆ.

1990–91 ರಲ್ಲಿ ಮಹಾವಿದ್ಯಾಲಯ ತನ್ನ ಬೆಳ್ಳಿಹಬ್ಬವನ್ನು ಆಚರಿಸಿಕೊಂಡಿದೆ. 2016 ರ ಫೆ.24 ರಂದು ನಿವೃತ್ತ ಲೋಕಾಯುಕ್ತ ಡಾ.ಎನ್‌. ಸಂತೋಷ ಹೆಗಡೆ ಅವರಿಂದ ಸುವರ್ಣ ಮಹೋತ್ಸವ ಉದ್ಘಾಟನೆಗೊಂಡಿತ್ತು. ಮಾರ್ಚ್‌ 25ರಂದು ಜರುಗಲಿರುವ ಸುವರ್ಣ ಮಹೋತ್ಸವ ಸಮಾರೋಪ ಸಮಾರಂಭ ಜರುಗಲಿದೆ. ಸಮಾರಂಭದ ಸಾನ್ನಿಧ್ಯವನ್ನು ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳು ವಹಿಸುವರು.

ಅಧ್ಯಕ್ಷತೆಯನ್ನು ಬಿಎಲ್‌ಡಿಇ ಸಂಸ್ಥೆಯ ಅಧ್ಯಕ್ಷರು, ಜಲಸಂಪನ್ಮೂಲ ಸಚಿವ ಡಾ.ಎಂ.ಬಿ. ಪಾಟೀಲ ವಹಿಸುವರು. ವಿಜಯಪುರದ ಬಿಎಲ್‌ಡಿಇ ವಿಶ್ವವಿದ್ಯಾಲಯ ಕುಲಪತಿ ಡಾ.ಎಂ.ಎಸ್‌. ಬಿರಾದಾರ, ವಿಶ್ರಾಂತ ಡಾ.ಬಿ.ಜಿ. ಮೂಲಿಮನಿ ಹಾಗೂ ಶಾಸಕ ಸಿದ್ದು ನ್ಯಾಮಗೌಡ ಅತಿಥಿಗಳಾಗಿ ಭಾಗವಹಿಸುವರು. ಸುವರ್ಣ ಮಹೋತ್ಸವ ಅಂಗವಾಗಿ ಸ್ಮರಣ ಸಂಚಿಕೆ ‘ಸುವರ್ಣ ಪಥ’ ಹೊರಬರಲಿದೆ.
-ಡಾ.ಟಿ.ಪಿ. ಗಿರಡ್ಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT