ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಲ್ಮೆಟ್ ಧರಿಸದಿದ್ದರೆ ಡಿಎಲ್ ರದ್ದು!

ಜಿಲ್ಲೆಯಲ್ಲಿ ಏಪ್ರಿಲ್ 3ರಿಂದ ಹೊಸ ನಿಯಮಾವಳಿ ಅನುಷ್ಠಾನಕ್ಕೆ ಪೊಲೀಸ್ ಇಲಾಖೆ ಸಿದ್ಧತೆ
Last Updated 24 ಮಾರ್ಚ್ 2017, 7:08 IST
ಅಕ್ಷರ ಗಾತ್ರ

ಬಾಗಲಕೋಟೆ: ‘ವಾಹನ ಸವಾರರೇ ಎಚ್ಚರ, ಜಿಲ್ಲೆಯಲ್ಲಿ ಏಪ್ರಿಲ್ 3ರಿಂದ ಹೆಲ್ಮೆಟ್ ರಹಿತ ಚಾಲನೆ ನಿಮ್ಮ ಚಾಲನಾ ಪರವಾನಗಿ ಪತ್ರ (ಡ್ರೈವಿಂಗ್ ಲೈಸೆನ್ಸ್) ರದ್ದಾಗಲು ದಾರಿಯಾಗಲಿದೆ.

ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಅಪಘಾತಗಳ ನಿಯಂತ್ರಣಕ್ಕೆ ಹೀಗೊಂದು ಕಠಿಣ ಕ್ರಮಕ್ಕೆ ಮುಂದಾಗಿರುವುದಾಗಿ’ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹೆಲ್ಮೆಟ್, ಚಾಲನಾ ಪರವಾನಗಿ ಪತ್ರ, ವಾಹನದ ವಿಮೆ ದಾಖಲಾತಿ, ನೋಂದಣಿ ಪತ್ರ, ಇಂಧನ ಕ್ಷಮತೆ ಪ್ರಮಾಣಪತ್ರ ಸೇರಿದಂತೆ ವಾಹನ ಸವಾರರು ಎಲ್ಲಾ ದಾಖಲೆಗಳನ್ನು ಹೊಂದಿರುವುದು ಕಡ್ಡಾಯವಾಗಿದೆ.

ಈ ದಾಖಲೆಗಳು ಇಲ್ಲದಿದ್ದಲ್ಲಿ ಇಲ್ಲಿಯವರೆಗೂ ದಂಡ ಮಾತ್ರ ವಿಧಿಸಲಾಗುತ್ತಿತ್ತು. ಇನ್ನು ಮುಂದೆ ಸಾರಿಗೆ ಇಲಾಖೆಗೆ ಶಿಫಾರಸು ಮಾಡಿ ಚಾಲನಾ ಪರವಾಗಿಯನ್ನು ರದ್ದುಪಡಿಸಲಾಗುವುದು ಎಂದು ಎಸ್‌ಪಿ ಹೇಳಿದರು.

ಎಂಟು ದಿನ ಕಲಾವಕಾಶ: ಚಾಲನೆ ವೇಳೆ ಹೆಲ್ಮೆಟ್ ಸೇರಿದಂತೆ ಇತರೆ ದಾಖಲಾತಿಗಳನ್ನು ಹೊಂದುವುದು ಕಡ್ಡಾಯ ನಿಯಮ ಜಾರಿಗೂ ಮುನ್ನ ಸಾರ್ವಜನಿಕರಲ್ಲಿ ಆ ಬಗ್ಗೆ ಜಾಗೃತಿ ಮೂಡಿಸಲು ಮಾರ್ಚ್ 24ರಿಂದ 8 ದಿನಗಳ ಕಾರ್ಯ ಇಲಾಖೆಯಿಂದ ಮಾಹಿತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ಎಲ್ಲಾ ಠಾಣೆಗಳ ಪೊಲೀಸರು ಈ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ. ವಾಹನಗಳನ್ನು ತಪಾಸಣೆ ಮಾಡಲಿದ್ದಾರೆ. ಈ ವೇಳೆ ಹೆಲ್ಮೆಟ್, ಸೀಟ್‌ಬೆಲ್ಟ್‌ ಹಾಕಿಕೊಳ್ಳಬೇಕಿರುವುದು ಕಡ್ಡಾಯ. ಡ್ರೈವಿಂಗ್ ಲೈಸೆನ್ಸ್ ಸೇರಿದಂತೆ ಅಗತ್ಯ ದಾಖಲೆಗಳು ಇಲ್ಲದಿದ್ದರೆ ದಂಡ ವಿಧಿಸುವುದಿಲ್ಲ. ಕೇವಲ ಎಚ್ಚರಿಕೆ ನೀಡಿ ಕಳುಹಿಸಲಾಗುವುದು. ನಂತರ ದಂಡ ಹಾಗೂ ಕ್ರಮದ ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದು ಎಸ್‌.ಪಿ  ಹೇಳಿದರು.

ಮೂರು ಬಾರಿ ಅವಕಾಶ: ವಾಹನದ ಸೂಕ್ತ ದಾಖಲಾತಿ, ಚಾಲನಾ ಪರವಾನಗಿ ಪತ್ರ ಹಾಗೂ ಹೆಲ್ಮೆಟ್ ಹೊಂದದವರಿಗೆ ಏಪ್ರಿಲ್‌ 3ರಿಂದ ಮೊದಲು ಮೂರು ಬಾರಿ ದಂಡ ವಿಧಿಸಿ ಕಳುಹಿಸಲಾಗುವುದು.

ಈ ವೇಳೆ ಸಂಬಂಧಿಸಿದವರ ವಾಹನದ ಸಂಖ್ಯೆ, ಉಲ್ಲಂಘಮೆಯಾದ ನಿಯಮ, ಹೆಸರು, ಮೊಬೈಲ್ ಸಂಖ್ಯೆ, ಬೆರಳಚ್ಚು ಗುರುತು ಹಾಗೂ ಸಹಿ ಪಡೆಯಲಾಗುವುದು. ನಾಲ್ಕನೇ ಬಾರಿ ಅದೇ ಧೋರಣೆ ಮುಂದುವರಿಸಿದಲ್ಲಿ ಮೋಟಾರು ವಾಹನ ಕಾಯ್ದೆಯಡಿ ಕ್ರಮಕ್ಕೆ ಮುಂದಾಗುವುದಾಗಿ ತಿಳಿಸಿದರು.

ಪಾರ್ಕಿಂಗ್ ಸಮಸ್ಯೆ ಪರಿಹಾರ: ರಸ್ತೆಗೆ ಅಡ್ಡಲಾಗಿ ಹಾಗೂ ಪಾರ್ಕಿಂಗ್ ಅಲ್ಲದ ಸ್ಥಳದಲ್ಲಿ ವಾಹನಗಳನ್ನು ನಿಲ್ಲಿಸುವ ಕಾರಣ ಜಮಖಂಡಿ, ಮುಧೋಳ ಹಾಗೂ ಬಾಗಲಕೋಟೆ ನಗರಗಳಲ್ಲಿ ಪದೇ ಪದೇ ವಾಹನ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಅದನ್ನು ಪರಿಹರಿಸಲು ಈಗಾಗಲೇ ಸಿದ್ಧತೆ ನಡೆಸಲಾಗಿದೆ.

ವಾಹನ ಸಂಚಾರಕ್ಕೆ ಅಡ್ಡಿ ಉಂಟು ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಜಿಲ್ಲಾಧಿಕಾರಿ ಜೊತೆ ಚರ್ಚಿಸಿ ಪಾರ್ಕಿಂಗ್‌ಗೆ ಸ್ಥಳಾವಕಾಶ ನಿಗದಿಪಡಿಸಲಾಗುವುದು ಎಂದು ಹೇಳಿದರು.

*
ಸಾರ್ವಜನಿಕರಿಗೆ ಡಿ.ಎಲ್‌. ಕೊಡಿಸುವ ನಿಟ್ಟಿನಲ್ಲಿ ಸಾರಿಗೆ ಇಲಾಖೆ ಸಹಯೋಗದಲ್ಲಿ ಅಭಿಯಾನಕ್ಕೆ ಚಿಂತಿಸಲಾಗಿದೆ. ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳುವೆ.
-ಸಿ.ಬಿ.ರಿಷ್ಯಂತ್,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT