ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

31ರಿಂದ ವೈರಮುಡಿ ಜಾತ್ರೆ: ಸಿದ್ಧತೆ ಪರಿಶೀಲನೆ

ಮೆಟ್ಟಿಲುಗಳ ನವೀಕರಣ ಕಾರ್ಯ ಆರಂಭಿಸದಿದ್ದರೆ ಕಾನೂನು ಕ್ರಮ: ನಿರ್ಮಿತಿ ಕೇಂದ್ರಕ್ಕೆ ಎಚ್ಚರಿಕೆ
Last Updated 24 ಮಾರ್ಚ್ 2017, 7:23 IST
ಅಕ್ಷರ ಗಾತ್ರ

ಮೇಲುಕೋಟೆ: ಏಪ್ರಿಲ್ 5ರಂದು ನಡೆಯಲಿರುವ ಚೆಲುವನಾರಾಯಣ ಸ್ವಾಮಿಯ ವೈರಮುಡಿ ಉತ್ಸವದ ನಿಮಿತ್ತ ಜಿಲ್ಲಾಧಿಕಾರಿ  ಎಸ್.ಜಿಯಾವುಲ್ಲಾ ಮೇಲುಕೋಟೆಯಲ್ಲಿ ಗುರುವಾರ  ಪೂರ್ವಸಿದ್ಧತಾ ಸಭೆ ನಡೆಸಿದರು.  

ಪಾರ್ಕಿಂಗ್, ಉತ್ಸವ ಆರಂಭದ ಸ್ಥಳ, ಮುಕ್ತಾಯದ ಮಂಟಪ ಹಾಗೂ ಕುಡಿಯುವ ನೀರಿನ ಟ್ಯಾಂಕ್ ಇಡುವ ಸ್ಥಳಗಳನ್ನು  ಪರಿಶೀಲಿಸಿದರು.
ಉದ್ಘಾಟನೆಯ ಭಾಗ್ಯ ಕಾಣದ ಪ್ರವಾಸಿ ಮಂದಿರಕ್ಕೆ ತೆರಳಿದ ಅವರು ಸಣ್ಣ–ಪುಟ್ಟ ದುರಸ್ತಿ ಕಾರ್ಯ ಕೈಗೊಂಡು ತಕ್ಷಣ ದೇವಾಲಯದ ವಶಕ್ಕೆ ನೀಡಬೇಕೆಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಸೂಚನೆ ನೀಡಿದರು. 

ಕಲ್ಯಾಣಿಯಲ್ಲಿ ಸ್ನಾನ ಮಾಡಿದ ಮಹಿಳಾ ಭಕ್ತರು ಬಟ್ಟೆ ಬದಲಿಸಲು ನಿರ್ಮಿಸಲಾಗಿರುವ ಕ್ಯಾಬಿನ್ ವೀಕ್ಷಿಸಿ, ತಕ್ಷಣ ಅದನ್ನು ಭಕ್ತರ ಉಪಯೋಗಕ್ಕೆ ಬಳಸಿಕೊಳ್ಳುವಂತೆ ಸೂಚಿಸಿದರು.

ಎಸ್‌ಪಿ ಸುಧೀರ್‌ಕುಮಾರ್ ರೆಡ್ಡಿ ಅವರೊಂದಿಗೆ ಚರ್ಚಿಸಿದ ಅವರು, ನೂಕು ನುಗ್ಗಲಾಗದಂತೆ ಹಾಗೂ ದರ್ಶನಕ್ಕೆ ಭಕ್ತರು ಸಾಗುವಾಗ ಬಂದೋಬಸ್ತ್‌ ಏರ್ಪಡಿಸಬೇಕು ಎಂದು ಹೇಳಿದರು.

ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಅವರು, ಕುಡಿಯುವ ನೀರು, ಸ್ವಚ್ಛತೆ ಹಾಗೂ ವೈದ್ಯಕೀಯ ಸೇವೆಗಳ ಬಗ್ಗೆ ಹೆಚ್ಚಿನ ಒತ್ತು ನೀಡಬೇಕು. ನಿರಂತರ ವಿದ್ಯುತ್ ಪೂರೈಕೆಗೆ ಸೆಸ್ಕ್‌ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.

ಐದು ವರ್ಷಗಳಿಂದ ಸ್ಥಗಿತಗೊಂಡಿರುವ ಯೋಗಾನರಸಿಂಹಸ್ವಾಮಿ ಬೆಟ್ಟದ ಮೆಟ್ಟಿಲುಗಳ ನವೀಕರಣ ಕಾರ್ಯವನ್ನು ಆರಂಭಿಸದಿದ್ದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ನಿರ್ಮಿತಿ ಕೇಂದ್ರದ ಅಧಿಕಾರಿ ನರೇಶ್‌ಗೆ ಎಚ್ಚರಿಕೆ ನೀಡಿದರು. ನೂಕುನುಗ್ಗಲನ್ನು ತಡೆಗಟ್ಟುವುದಕ್ಕಾಗಿ ಈ ಬಾರಿ ಪಾಸ್‌ಗಳನ್ನು ಕಡಿತಗೊಳಿಸಿ ದೇವಾಲಯದ ಒಳಭಾಗ ನಡೆಯುವ ಕಾರ್ಯಕ್ರಮಗಳನ್ನು ಬೃಹತ್ ಪರದೆಗಳ ಮೂಲಕ ಬಿತ್ತರಿಸಬೇಕು.  ಉತ್ಸವವನ್ನು ಸಕಾಲದಲ್ಲಿ ಆರಂಭಿಸಬೇಕು ಎಂದರು.

ಸುಧೀರ್‌ಕುಮಾರ್ ರೆಡ್ಡಿ ಮಾತನಾಡಿ, ಕಳೆದ ಸಲಕ್ಕಿಂತ ಹೆಚ್ಚಿನ ಪೊಲೀಸ್ ಭದ್ರತೆ ನೀಡಲಾಗುತ್ತದೆ. ವ್ಯವಸ್ಥಿತ ಪಾರ್ಕಿಂಗ್ ಸೌಕರ್ಯ ಕಲ್ಪಿಸಲಾಗುತ್ತದೆ. ಮಹಿಳಾ ಭಕ್ತರ ಸುರಕ್ಷತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ, ಅಹಿತಕರ ಘಟನೆ ನಡೆಯದಂತೆ ಪೊಲೀಸರನ್ನು ನಿಯೋಜಿಸಲಾಗುತ್ತದೆ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪೂರ್ಣಿಮಾ ಮಾತನಾಡಿ, ಮಾರ್ಚ್‌ 31ರಿಂದ ಏಪ್ರಿಲ್ 12ರವರೆಗೆ  ವೈರಮುಡಿ ಜಾತ್ರಾ ಮಹೋತ್ಸವ ನಡೆಯಲಿದೆ. ಹತ್ತು ದಿನಗಳ ಕಾಲ ಚೆಲುವನಾರಾಯಣಸ್ವಾಮಿ ದೇವಾಲಯ ಯೋಗಾನರಸಿಂಹಸ್ವಾಮಿ ಬೆಟ್ಟ, ರಾಜಬೀದಿ ಕಲ್ಯಾಣಿ ಸಮುಚ್ಚಯಗಳಿಗೆ ದೀಪಾಲಂಕಾರ ಮಾಡಲಾಗುತ್ತಿದೆ. ಪಾರ್ಕಿಂಗ್ ಸ್ಥಳಗಳಲ್ಲಿ ಹೆಚ್ಚಿನ ದೀಪಗಳನ್ನು ಅಳವಡಿಸಲಾಗುತ್ತದೆ ಎಂದರು.

ಪಾಂಡವಪುರ ಉಪವಿಭಾಗಾಧಿಕಾರಿ ಆರ್.ಯಶೋದಾ, ಪಾಂಡವಪುರ ತಹಶೀಲ್ದಾರ್ ಹನುಮಂತರಾಯಪ್ಪ, ಮೇಲುಕೋಟೆ ಗ್ರಾ.ಪಂ. ಅಧ್ಯಕ್ಷ ನಾರಾಯಣ ಭಟ್ಟರ್, ಎಸ್.ಐ ಚಂದ್ರಶೇಖರ್ ಮಲ್ಲಪ್ಪ ಇದ್ದರು.

ಪೌರಕಾರ್ಮಿಕರ ನಿಯೋಜನೆ
ಕುಡಿಯುವ ನೀರು ಮತ್ತು ಸ್ವಚ್ಛತೆ ನಿರ್ವಹಣೆಯ ಬಗ್ಗೆ ಗ್ರಾಮ ಪಂಚಾಯಿತಿ ಕೈಗೊಂಡಿರುವ ವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆದ  ಜಿ.ಪಂ. ಸಿಇಒ ಶರತ್‌, ಸ್ವಚ್ಛತೆ ಕಾಪಾಡಲು ಸುತ್ತಮುತ್ತಲ ಗ್ರಾಮ ಪಂಚಾಯಿತಿಗಳ ಜತೆಗೆ ಪುರಸಭೆ, ನಗರಸಭೆಗಳಿಂದಲೂ ಪೌರಕಾರ್ಮಿಕರನ್ನು ನಿಯೋಜಿಸಲಾಗುವುದು.

ನಾಲ್ಕು ಆಂಬುಲೆನ್ಸ್ ಸಮೇತ ವೈದ್ಯಕೀಯ ಸೇವೆಗೆ ಸಜ್ಜಾಗಿರಬೇಕು.  ಯೋಗಾನರಸಿಂಹಸ್ವಾಮಿ ಬೆಟ್ಟದ ಬಳಿಯೂ ವೈದ್ಯಕೀಯ ಕೇಂದ್ರ ತೆರೆಯಬೇಕು ಎಂದು ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT