ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷಕ್ಕಿಂತ ವ್ಯಕ್ತಿ ನಿಷ್ಠೆಯ ಪಾರಮ್ಯ

ಗುಂಡ್ಲುಪೇಟೆ ಉಪಚುನಾವಣೆ: ಹಳ್ಳಿಗಳಲ್ಲಿ ಕಾಂಗ್ರೆಸ್‌–ಬಿಜೆಪಿ ಬಿರುಸಿನ ಪ್ರಚಾರ
Last Updated 24 ಮಾರ್ಚ್ 2017, 8:20 IST
ಅಕ್ಷರ ಗಾತ್ರ

ಚಾಮರಾಜನಗರ: ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ರಂಗೇರಿದೆ. ಕಾಂಗ್ರೆಸ್‌ ಮತ್ತು ಬಿಜೆಪಿಯಿಂದ ಬಿರುಸಿನ ಪ್ರಚಾರ ನಡೆಯುತ್ತಿದೆ. ಹಳ್ಳಿಗಳಲ್ಲಿ ಪಕ್ಷದ ಗೆಲುವಿಗಾಗಿ ಮುಖಂಡರು ಮತ್ತು ಕಾರ್ಯ ಕರ್ತರು ಪ್ರಚಾರದಲ್ಲಿ ಮುಳುಗಿದ್ದಾರೆ.

14 ಚುನಾವಣೆ ಕಂಡಿರುವ ಈ ಕ್ಷೇತ್ರದಲ್ಲಿ ಪಕ್ಷಕ್ಕಿಂತ ವ್ಯಕ್ತಿ ನಿಷ್ಠೆಯೇ ಪಾರಮ್ಯ ಮೆರೆ ದಿದೆ. ವಿಧಾನ ಸಭೆಯ ಮೊದಲ ಮಹಿಳಾ ಸ್ಪೀಕರ್‌ ಕೆ.ಎಸ್‌. ನಾಗರತ್ನಮ್ಮ ಮತ್ತು ಸಹಕಾರ ಮತ್ತು ಸಕ್ಕರೆ ಸಚಿವ ರಾಗಿದ್ದ ಎಚ್‌.ಎಸ್‌. ಮಹದೇವ ಪ್ರಸಾದ್‌ ಅವರ ಗೆಲುವು ಅವಲೋಕಿಸಿದರೆ ಈ ಅಂಶ ವೇದ್ಯವಾಗುತ್ತದೆ.

ಎಚ್‌.ಕೆ. ಶಿವರುದ್ರಪ್ಪ 2 ಬಾರಿ, ನಾಗರತ್ನಮ್ಮ 7 ಬಾರಿ ಮತ್ತು ಮಹದೇವಪ್ರಸಾದ್‌ ಸತತ ಐದು ಬಾರಿ ಈ ಕ್ಷೇತ್ರದಲ್ಲಿ ಜಯಗಳಿಸಿದ್ದಾರೆ.
ನಾಗರತ್ನಮ್ಮ ಅವರು 1957ರ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಗುಂಡ್ಲುಪೇಟೆ ಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದರು.

ಈ ಚುನಾವಣೆಯಲ್ಲಿ ಅವರು ಶೇ 65.66ರಷ್ಟು ಮತ ಪಡೆದು ಜಯಗಳಿಸಿದರು. 1962ರ ಚುನಾವಣೆ ಯಲ್ಲಿಯೂ ಅವರು ಪಕ್ಷೇತರರಾಗಿಯೇ ಗೆಲುವು ಸಾಧಿಸಿದರು. ಅವರ ಮತ ಬ್ಯಾಂಕ್‌ಗೆ ಯಾವುದೇ ಧಕ್ಕೆಯಾಗಲಿಲ್ಲ.

1967ರ ಚುನಾವಣೆ ವೇಳೆಗೆ ನಾಗರತ್ನಮ್ಮ ಕಾಂಗ್ರೆಸ್‌ ಪಾಳಯಕ್ಕೆ ಜಿಗಿದಿದ್ದರು. ಈ ಚುನಾವಣೆಯಲ್ಲಿ ದಾಖಲೆಯ ಅಂತರದಿಂದ ಗೆದ್ದರು. 1972ರ ಚುನಾವಣೆಯಲ್ಲಿ ಕಾಂಗ್ರೆಸ್‌ ನಿಂದ ಸ್ಪರ್ಧಿಸಿದ್ದ ಅವರಿಗೆ ಗೆಲುವು ಸುಲಭವಾಗಿ ಒಲಿದಿತ್ತು.

ರಾಜಕೀಯ ಸ್ಥಿತ್ಯಂತರದ ಪರಿಣಾಮ 1978ರ ಚುನಾವಣೆ ಯಲ್ಲಿ ನಾಗರತ್ನಮ್ಮ ಪಕ್ಷೇತರರಾಗಿ ಕಣಕ್ಕೆ ಇಳಿದು ಕೈಸುಟ್ಟು ಕೊಂಡರು. ಈ ಚುನಾವಣೆಯಲ್ಲಿ ಎಚ್‌.ಕೆ. ಶಿವರುದ್ರಪ್ಪ ಗೆದ್ದರು. ಆದರೆ, ನಾಗರತ್ನಮ್ಮ ಕೇವಲ 271 ಮತಗಳ ಅಂತರದಿಂದ ಸೋಲು ಅನುಭವಿಸಿ ದರು. ಅವರ ಮತ ಬ್ಯಾಂಕ್‌ಗೆ ಹೆಚ್ಚಿನ ಪೆಟ್ಟುಬೀಳಲಿಲ್ಲ.

ಮತ್ತೆ ಕಾಂಗ್ರೆಸ್‌ನತ್ತ ವಾಲಿದ ಅವರು 1983, 1985 ಮತ್ತು 1989ರ ಚುನಾವಣೆಯಲ್ಲಿ ಜಯ ಸಾಧಿಸಿದರು. ಅವರ ಮತ ಬ್ಯಾಂಕ್‌ ಪ್ರಮಾಣ ನಿರೀಕ್ಷೆಗೂ ಮೀರಿ ಹೆಚ್ಚಿತ್ತು. ನಾಗ ರತ್ನಮ್ಮ ಅವರು ಏಳು ಬಾರಿ ಗೆದ್ದಾಗಲೂ ಶೇ 50ಕ್ಕಿಂತ ಹೆಚ್ಚು ಮತ ಪಡೆದಿರು ವುದು ವಿಶೇಷ.

ಮಹದೇವಪ್ರಸಾದ್‌ ಪರ್ವ: ಮಹದೇವ ಪ್ರಸಾದ್‌ ಸತತ ಐದು ಬಾರಿ ಈ ಕ್ಷೇತ್ರದಲ್ಲಿ ಜಯಗಳಿಸಿ ದಾಖಲೆ ಬರೆದಿದ್ದಾರೆ. ಜಿಲ್ಲೆಯ ಉಳಿದ ವಿಧಾನಸಭಾ ಕ್ಷೇತ್ರ ಗಳಲ್ಲೂ ಸತತ ಐದು ಬಾರಿ ಜಯಗಳಿಸಿದ ರಾಜಕಾರಣಿ ಇಲ್ಲ.

1994, 1999, 2004ರ ಚುನಾ ವಣೆಯಲ್ಲಿ ಕ್ರಮವಾಗಿ ಜನತಾದಳ, ಜೆಡಿಯು, ಜೆಡಿಎಸ್‌ನಿಂದ ಗೆಲುವು ಸಾಧಿಸಿದರು. 2008 ಮತ್ತು 2013ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಜಯ ಸಾಧಿಸಿದರು.

ಮಹದೇವಪ್ರಸಾದ್‌ ಪ್ರತಿಯೊಂದು ಚುನಾವಣೆಯಲ್ಲೂ ಪಕ್ಷ ಬದಲಾಯಿಸಿ ದರೂ ಅವರ ಮತ ಬ್ಯಾಂಕ್‌ಗೆ ಮಾತ್ರ ಯಾವುದೇ ಧಕ್ಕೆಯಾಗಿರಲಿಲ್ಲ. ಮತ ಬ್ಯಾಂಕ್‌ ಅನ್ನು ಭದ್ರಪಡಿಸಿಕೊಳ್ಳುವಲ್ಲಿ ಅವರು ಯಶಸ್ವಿಯಾಗಿದ್ದರು. ಗುಂಡ್ಲುಪೇಟೆ ಕ್ಷೇತ್ರದಲ್ಲಿ ಪಕ್ಷಕ್ಕಿಂತ ವ್ಯಕ್ತಿ ನಿಷ್ಠೆಯೇ ಹೆಚ್ಚಿನ ಪ್ರಾಬಲ್ಯ ಹೊಂದಿದೆ ಎಂಬುದಕ್ಕೆ ನಾಗರತ್ನಮ್ಮ ಮತ್ತು ಮಹದೇವಪ್ರಸಾದ್‌ ಅವರು ಚುನಾವಣೆ ಗಳಲ್ಲಿ ಪಡೆದಿರುವ ಶೇಕಡವಾರು ಮತಗಳೇ ಸಾಕ್ಷಿಯಾಗಿವೆ.

ಪ್ರಸ್ತುತ ಉಪ ಚುನಾವಣೆಯಲ್ಲಿ ವ್ಯಕ್ತಿ ನಿಷ್ಠೆ ಗೌಣವಾಗಿದೆ. ರಾಜ್ಯ ಸರ್ಕಾರದ ಸಾಧನೆ ಮತ್ತು ಅನುಕಂಪದ ಅಲೆಯ ಮೇಲೆ ಕಾಂಗ್ರೆಸ್‌ ಚುನಾವಣೆಗೆ ಮುಂದಾಗಿದೆ. ಬಿಜೆಪಿಯು ಕೇಂದ್ರ ಸರ್ಕಾರದ ಸಾಧನೆ ಮುಂದಿಟ್ಟುಕೊಂಡು ಅಖಾಡಕ್ಕೆ ಇಳಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT