ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜನರಿಗೆ ಭಿಕ್ಷೆ ಬೇಕಿಲ್ಲ; ಅವಕಾಶ ಸೃಷ್ಟಿಸಿಕೊಡಿ’

ಲಂಡನ್‌ನಿಂದ ಬಂದು ನಂಜನಗೂಡಿನಲ್ಲಿ ಲೇಬರ್‌ ಪಕ್ಷದ ಸದಸ್ಯ ನೀರಜ್‌ ಪ್ರಚಾರ
Last Updated 24 ಮಾರ್ಚ್ 2017, 8:24 IST
ಅಕ್ಷರ ಗಾತ್ರ

ಮೈಸೂರು: ನಂಜನಗೂಡು ಉಪಚುನಾವಣೆ ಕಣ ರಂಗೇರುತ್ತಿದ್ದು, ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ ಪ್ರಸಾದ್‌ ಪರ ಪ್ರಚಾರ ನಡೆಸಲು ಲೇಬರ್‌ ಪಕ್ಷದ ಸದಸ್ಯ ಹಾಗೂ ಲ್ಯಾಂಬೆತ್‌ ನಗರದ ಮಾಜಿ ಮೇಯರ್ ನೀರಜ್ ಪಾಟೀಲ್ ಅವರು ಲಂಡನ್‌ನಿಂದ ಬಂದಿದ್ದಾರೆ.

ಶ್ರೀನಿವಾಸ ಪ್ರಸಾದ್‌ ಅವರನ್ನು ಭೇಟಿ ಮಾಡಿ ಉಪಚುನಾವಣೆ ಹಾಗೂ ಕ್ಷೇತ್ರದ ಬಗ್ಗೆ ಮಾಹಿತಿ ಪಡೆದರು. ಬಳಿಕ ಗ್ರಾಮಗಳಿಗೆ ತೆರಳಿ ಮತಯಾಚಿಸಿದರು. ಜನರೊಂದಿಗೆ ಸಮಾಲೋಚನೆ ನಡೆಸಿದರು.

‘ಬದನವಾಳು, ದೇವನೂರು ಸೇರಿದಂತೆ ಕ್ಷೇತ್ರದ ಗ್ರಾಮೀಣ ಭಾಗದಲ್ಲಿ ಪ್ರಚಾರ ನಡೆಸುತ್ತಿದ್ದೇನೆ. ಒಂದೆರಡು ದಿನ ಇಲ್ಲಿಯೇ ಇದ್ದು, ಮತದಾರರ ಆಶಯಗಳನ್ನು ತಿಳಿಯುವ ಉದ್ದೇಶ ಹೊಂದಿದ್ದೇನೆ. ಸರ್ಕಾರದ ಯೋಜನೆಗಳ ಕುರಿತು ಚರ್ಚಿಸುತ್ತೇನೆ. ಶ್ರೀನಿವಾಸಪ್ರಸಾದ್‌ ಅವರು ಬಹಳ ಕಾಲದಿಂದ ನನಗೆ ಪರಿಚಿತರು’ ಎಂದು ನೀರಜ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಮತದಾರರು ಲಂಡನ್‌ನವರಾಗಲಿ ಅಥವಾ ನಂಜನಗೂಡಿನವರಾಗಲಿ ಯಾರೂ ಭಿಕ್ಷೆ ಕೇಳಲ್ಲ. ಪಕ್ಷಗಳು ನೀಡುವ ಲ್ಯಾಪ್‌ಟಾಪ್‌, ಸೀರೆ ಅವರಿಗೆ ಬೇಕಿಲ್ಲ. ಬದಲಾಗಿ ಅವಕಾಶಗಳನ್ನು ಸೃಷ್ಟಿಸಿಕೊಡಬೇಕು. ಅದನ್ನು ಕೇಳುವ ಹಕ್ಕು ಮತದಾರರಿಗಿದೆ. ಉದ್ಯೋಗ ಒದಗಿಸುವುದು. ಶಾಲೆ, ಆಸ್ಪತ್ರೆ, ರಸ್ತೆ ನಿರ್ಮಿಸಿಕೊಡುವುದಕ್ಕೆ ಪಕ್ಷಗಳು ಆದ್ಯತೆ ನೀಡಬೇಕು. ದುರಂತವೆಂದರೆ ಎಲ್ಲಾ ಸರ್ಕಾರಗಳು ಈ ನಿಟ್ಟಿನಲ್ಲಿ ವಿಫಲವಾಗಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ವಿಶ್ವದಲ್ಲಿ ಕಾರ್ಮಿಕರಿಗೆ ಕಡಿಮೆ ಪಗಾರ ನೀಡುತ್ತಿರುವ ದೇಶ ಭಾರತ. ಬಡವರಿಗೆ ಕಡಿಮೆ ವೇತನ ನೀಡಿ ಶ್ರೀಮಂತರಿಗೆ ಕಡಿಮೆ ತೆರಿಗೆ ವಿಧಿಸಿದರೆ ಯಾವ ರೀತಿಯ ಆರ್ಥಿಕ ವ್ಯವಸ್ಥೆ ರೂಪಿಸುತ್ತೀರಿ. ಇಂಥ ವ್ಯವಸ್ಥೆಯನ್ನು ರಾತ್ರೋರಾತ್ರಿ ಬದಲಾಯಿಸಲು ಸಾಧ್ಯವೇ’ ಎಂದು ಪ್ರಶ್ನಿಸಿದರು.

‘ಪ್ರಧಾನಿ ನರೇಂದ್ರ ಮೋದಿ ಬಗ್ಗೆ ನನಗೆ ಗೌರವವಿದೆ. ನೋಟು ರದ್ದು ಪ್ರಕ್ರಿಯೆಗೂ ಮೆಚ್ಚುಗೆ ಇದೆ. ನಾನೇನೂ ಭಾರತದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷೆ ಹೊಂದಿಲ್ಲ. ಸ್ವಯಂ ಪ್ರೇರಿತನಾಗಿ ಬಂದು ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚಿಸುತ್ತಿದ್ದೇನೆ’ ಎಂದು ತಿಳಿಸಿದರು.

‘ಪಂಜಾಬ್‌ನಲ್ಲಿ ಈಚೆಗೆ ನಡೆದ ಚುನಾವಣೆಯಲ್ಲಿ ಬ್ರಿಟನ್‌ನಿಂದ ಸುಮಾರು 2 ಸಾವಿರ ಜನ ಬಂದು ಆಮ್‌ ಆದ್ಮಿ ಪಕ್ಷದ ಪರ ಪ್ರಚಾರ ನಡೆಸಿದರು. ಭಾರತದಲ್ಲಿನ ಬೆಳವಣಿಗೆಯಲ್ಲಿ ಮುಖ್ಯ ಪಾತ್ರ ವಹಿಸುವ ಹಂಬಲ ಹೊಂದಿರುವ ಅನಿವಾಸಿ ಭಾರತೀಯರು ಇಂಥ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ’ ಎಂದು ಹೇಳಿದರು.

*
ಬರ ಪರಿಸ್ಥಿತಿಯ ನಿಜವಾದ ಸ್ವರೂಪ ಗೊತ್ತಾಯಿತು. ಆದರೆ, ಇಲ್ಲಿ ಬರ ಇರುವುದು ಜನರಿಗೆ ಮಾತ್ರ; ರಾಜಕಾರಣಗಳಿಗೆ ಅಲ್ಲ ಎಂಬುದೂ ತಿಳಿಯಿತು.
-ನೀರಜ್‌ ಪಾಟೀಲ್‌,
ಲೇಬರ್‌ ಪಕ್ಷದ ಸದಸ್ಯ, ಲಂಡನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT