ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೌಡಿಶೀಟರ್‌ ಹತ್ಯೆ; 8 ಮಂದಿ ಬಂಧನ

ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ; ಮೂವರು ಆರೋಪಿಗಳು ಪರಾರಿ
Last Updated 24 ಮಾರ್ಚ್ 2017, 8:50 IST
ಅಕ್ಷರ ಗಾತ್ರ

ರಾಮನಗರ: ‘ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ರೌಡಿಶೀಟರ್‌ ಚಂದನ್‌ ಅಲಿಯಾಸ್ ಆಂಬೊಡೆ ಹತ್ಯೆ ನಡೆದಿದ್ದು, ಪ್ರಕರಣದ ಸಂಬಂಧ 8 ಆರೋಪಿಗಳನ್ನು ಬಂಧಿಸಲಾಗಿದೆ. ಮೂವರು ಆರೋಪಿಗಳು ತಲೆಮರಿಸಿಕೊಂಡಿದ್ದಾರೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿ ಬಿ.ರಮೇಶ್‌ ತಿಳಿಸಿದರು.

ಚನ್ನಪಟ್ಟಣದಲ್ಲಿ ಈಚೆಗೆ ನಡೆದ ರೌಡಿಶೀಟರ್ ಚಂದನ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ವಿವರಣೆ ನೀಡಿದರು. ‘ಚನ್ನಪಟ್ಟಣದ ಎಲೆಕೇರಿ ನಿವಾಸಿ ದ್ರುವಕುಮಾರ್‌(42), ಶಿವಾನಂದ ಟಾಕೀಸ್ ಬಳಿಯ ನಿವಾಸಿ ಮದು (29), ಮಾರುತಿ ಬಡಾವಣೆಯ ಮರಿಸಿದ್ದ (32), ರಾಮನಗರದ ಅಚ್ಚಲು ಫ್ಯಾಕ್ಟರಿ ಬಳಿಯ ನಿವಾಸಿಗಳಾದ ಬಸವರಾಜು (26), ರವಿ (24), ಚನ್ನಪಟ್ಟಣದ ಮಠದ ಬೀದಿಯ ಸಂದೀಪ (36), ಎಲೆಕೇರಿ ನಿವಾಸಿಗಳಾದ ಮಹದೇವ (38), ಮಂಚೇಗೌಡ (45) ಬಂಧಿತರು, ಇವರನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಪೊಲೀಸರ ವಶಕ್ಕೆ ಪಡೆಯಲಾಗಿದೆ’ ಎಂದು ಅವರು ವಿವರಿಸಿದರು.

‘ಇದೇ ತಿಂಗಳ 17ರಂದು ಸಂಜೆ ಚಂದನ್ ತನ್ನ ಸ್ನೇಹಿತರಾದ ಯೋಗೀಶ್ ಮತ್ತು ಅಪ್ಪಿ ಅವರೊಂದಿಗೆ ಚನ್ನಪಟ್ಟಣದ ಸಾತನೂರು ರಸ್ತೆಯಲ್ಲಿ ಸ್ಕೂಟರಿನಲ್ಲಿ ಹೋಗುತ್ತಿದ್ದ ಸಂದರ್ಭ ಆರೋಪಿಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿ ಚಂದು ಹತ್ಯೆ ಮಾಡಿದ್ದರು. ಉಳಿದ ಇಬ್ಬರು ಓಡಿ ಹೋಗಿದ್ದರು.

ಚನ್ನಪಟ್ಟಣ ಪೂರ್ವ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಘಟನೆ ನಂತರ ಎಲ್ಲ ಆರೋಪಿಗಳು ತಲೆಮರಿಸಿಕೊಂಡಿದ್ದು, ತನಿಖೆ ಚುರುಕುಗೊಳಿಸಿ ಇದೇ 21ರಂದು ಬಂಧಿಸಲಾಯಿತು. ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳನ್ನೂ ಶೀಘ್ರ ಬಂಧಿಸಲಾಗುವುದು’
ಎಂದರು.

‘ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ದ್ರುವಕುಮಾರ್ ಹಾಗೂ ಸಹಚರರ ವಿರುದ್ಧ ಕಳೆದ ಜೂನ್‌ನಲ್ಲಿ ರಾಮನಗರದಲ್ಲಿ ಡಾಬಾವೊಂದರ ಮೇಲೆ ಚಂದು ಹಾಗೂ ಸಹಚರರು ಗಂಭೀರ ಹಲ್ಲೆ ನಡೆಸಿದ್ದರು. ಇದಕ್ಕೆ ಪ್ರತೀಕಾರವಾಗಿ ಈ ಹತ್ಯೆ ಮಾಡಿದ್ದಾಗಿ ಆರೋಪಿಗಳು ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ’ ಎಂದರು.

‘ಚನ್ನಪಟ್ಟಣದಲ್ಲಿ ರೌಡಿ ಚಟುವಟಿಕೆಗಳ ಬಗ್ಗೆ ಪೊಲೀಸರಿಗೆ ಮೊದಲೇ ತಿಳಿದಿದ್ದರೂ ಮುನ್ನೆಚ್ಚರಿಕೆ ವಹಿಸಲಿಲ್ಲ’ ಎಂಬ ದೂರುಗಳ ಕುರಿತು ಅವರು ಪ್ರತಿಕ್ರಿಯಿಸಿ ‘ಚಂದು ಹತ್ಯೆ ಬಗ್ಗೆ ಪೊಲೀಸರಿಗೆ ಮೊದಲೇ ತಿಳಿದಿತ್ತು.

ರೌಡಿಗಳೊಂದಿಗೆ ಪೊಲೀಸರು ಸಂಪರ್ಕದಲ್ಲಿ ಇದ್ದರು ಎಂಬ ಅಂಶದ ಬಗ್ಗೆ ಸಂಬಂಧಿಸಿದ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಲಾಗುವುದು. ಆರೋಪ ನಿಜವೇ ಆಗಿದ್ದಲ್ಲಿ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು’ ಎಂದು ಸ್ಪಷ್ಟಪಡಿಸಿದರು.

ಪರೇಡ್‌ ಶೀಘ್ರ
‘ಜಿಲ್ಲೆಯಲ್ಲಿ ಶೀಘ್ರದಲ್ಲಿಯೇ ಎಲ್ಲ ರೌಡಿ ಶೀಟರ್‌ಗಳ ಪರೇಡ್‌ ನಡೆಸಿ ಎಚ್ಚರಿಕೆ ನೀಡಲಾಗುವುದು. ಆದಾಗ್ಯೂ ತಮ್ಮ ಸಮಾಜಘಾತುಕ ಚಟುವಟಿಕೆಗಳನ್ನು ಮುಂದುವರಿಸಿದಲ್ಲಿ ಗೂಂಡಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸಲಾಗುವುದು’ ಎಂದು ಎಸ್ಪಿ ರಮೇಶ್‌ ತಿಳಿಸಿದರು.

*
ಹತ್ಯೆಗೀಡಾದ ಚಂದನ್‌ ಹಾಗೂ ಪ್ರಕರಣ ಆರೋಪಿಗಳೊಂದಿಗೆ ಪೊಲೀಸರು ಸಂಪರ್ಕ ಹೊಂದಿದ್ದರು ಎಂಬ ಆರೋಪದ ಬಗ್ಗೆ ತನಿಖೆ ನಡೆಸಲಾಗುವುದು. ಆರೋಪ ಸಾಬೀತಾದಲ್ಲಿ ಶಿಸ್ತು ಕ್ರಮ ಜರುಗಿಸಲಾಗುವುದು.
-ಬಿ. ರಮೇಶ್‌,
ಎಸ್ಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT