ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮಾನ್ಯಗೊಳ್ಳಲಿದೆ ಆಧಾರ್‌ನೊಂದಿಗೆ ಸಂಪರ್ಕಿಸದ ಪಾನ್‌ ಕಾರ್ಡ್‌!

ಡಿಸೆಂಬರ್‌ 31ರ ಗಡುವು
Last Updated 24 ಮಾರ್ಚ್ 2017, 14:00 IST
ಅಕ್ಷರ ಗಾತ್ರ

ನವದೆಹಲಿ: ಆಧಾರ್‌ ಕಾರ್ಡ್‌ನೊಂದಿಗೆ ಪರ್ಮನೆಂಟ್‌ ಅಕೌಂಟ್‌ ನಂಬರ್(ಪಾನ್‌ ಕಾರ್ಡ್‌) ಸಂಪರ್ಕಿಸದಿದ್ದಲ್ಲಿ ಪಾನ್‌ ಕಾರ್ಡ್‌ ಅಮಾನ್ಯಗೊಳ್ಳಲಿದೆ!

12 ಅಂಕಿ ಬಯೋಮೆಟ್ರಿಕ್‌ ಗುರುತು ಯೋಜನೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದೇ ಯೋಜನೆ ಅಡಿ ಆಧಾರ್‌ನೊಂದಿಗೆ ಸಂಪರ್ಕ ಹೊಂದಿರದ ಪಾನ್‌ ಕಾರ್ಡ್‌ಗಳು ಡಿಸೆಂಬರ್‌ 31ರ ನಂತರ ಅಮಾನ್ಯಗೊಳ್ಳುವ ಸಾಧ್ಯತೆ ಎದುರಾಗಿದೆ.

ತೆರಿಗೆದಾರರು ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಸಲು ಪಾನ್‌ ಕಾರ್ಡ್‌ ಕಡ್ಡಾಯವಾಗಿದೆ. ಆದರೆ, ವಿದ್ಯಾರ್ಥಿಗಳು ಸೇರಿದಂತೆ ತೆರಿಗೆ ವಲಯದಿಂದ ಹೊರಗಿರುವ ಅನೇಕರು ಗುರುತು ದಾಖಲೆಯಾಗಿ ಪಾನ್‌ ಕಾರ್ಡ್ ಬಳಸುತ್ತಿದ್ದಾರೆ.

ಸುಳ್ಳು ದಾಖಲೆಗಳು ಹಾಗೂ ಮೋಸದಿಂದ ಪಡೆದಿರುವ ಪಾನ್‌ ಕಾರ್ಡ್‌ ಪತ್ತೆಗೂ ಈ ಕ್ರಮ ಸಹಕಾರಿಯಾಗಲಿದೆ.

ಪ್ರಸ್ತುತ 108 ಕೋಟಿ ಭಾರತೀಯರು ಆಧಾರ್‌ ಕಾರ್ಡ್‌ ಹೊಂದಿದ್ದು, ಮಧ್ಯಾಹ್ನದ ಬಿಸಿ ಊಟದಂತಹ ಸರ್ಕಾರದ ಯೋಜನೆಗಳು ಹಾಗೂ ಅನುದಾನ ಪಡೆಯಲು ಆಧಾರ್‌ ಸಂಖ್ಯೆ ಕಡ್ಡಾಯಗೊಳಿಸಲಾಗಿದೆ. ಇತ್ತೀಚೆಗೆ ಲೋಕಸಭೆ ‘ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಕೆ ಅಥವಾ ಪಾನ್‌ ಕಾರ್ಡ್‌ ಪಡೆಯಲು’ ಆಧಾರ್‌ ಕಡ್ಡಾಯಗೊಳಿಸಿರುವ ಮಸೂದೆಯನ್ನು ಅನುಮೋದಿಸಿದೆ.

ವರ್ಷಾಂತ್ಯದೊಳಗೆ ಆಧಾರ್‌ ಕಾರ್ಡ್ ನೀಡುವ ಪ್ರಕ್ರಿಯೆ ಬಹುತೇಕ ಪೂರ್ಣಗೊಳ್ಳಲಿದ್ದು, ಅದೇ ಸಮಯದ ಮಿತಿಯೊಳಗೆ ಪಾನ್‌ ಕಾರ್ಡ್‌ ಹೊಂದಿರುವವರು ಆಧಾರ್‌ನೊಂದಿಗೆ ಸಂಪರ್ಕಿಸಬೇಕಾಗುತ್ತದೆ ಎಂದು ಹಿಂದುಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

ದೇಶದ 25 ಕೋಟಿ ಮಂದಿ ಪಾನ್‌ ಕಾರ್ಡ್ ಹೊಂದಿದ್ದು, ಆಧಾರ್‌ ಸಂಖ್ಯೆಯೊಂದಿಗೆ ಸಂಪರ್ಕಿಸದೇ ಜುಲೈ 1ರಿಂದಲೇ ಆದಾಯ ತೆರಿಗೆ ರಿಟರ್ನ್ಸ್‌ ಅರ್ಜಿ ಸಲ್ಲಿಸಲು ಸಾಧ್ಯವಾಗುವುದಿಲ್ಲ ಎನ್ನಲಾಗಿದೆ.

₹50 ಸಾವಿರಕ್ಕಿಂತ ಹೆಚ್ಚು ಮೊತ್ತದ ಬಿಲ್‌ ಪಾವತಿ, ಬ್ಯಾಂಕ್‌ ಖಾತೆಗೆ ಹಣ ಸಂದಾಯ ಮಾಡುವುದು ಹಾಗೂ ₹2 ಲಕ್ಷಕ್ಕೂ ಅಧಿಕ ಮೌಲ್ಯದ ಆಭರಣ ಖರೀದಿಯಲ್ಲಿ ಪಾನ್‌ ಕಾರ್ಡ್‌ ಸಂಖ್ಯೆ ನಮೂದಿಸುವುದು ಈಗಾಗಲೇ ಬಳಕೆಯಲ್ಲಿದೆ.

ಆದಾಯ ತೆರಿಗೆ ಇಲಾಖೆ ವೆಬ್‌ಸೈಟ್‌ ಮೂಲಕ ಆಧಾರ್‌ ಮತ್ತು ಪಾನ್‌ ಕಾರ್ಡ್‌ ಸಂಪರ್ಕಿಸಬಹುದಾಗಿದೆ. ವೆಬ್‌ಸೈಟ್‌: incometaxindiaefiling.gov.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT