ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಗಾದಿ: ಸಮರಸ ಬದುಕಿನ ಆರಂಭದ ದಿನ

Last Updated 24 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ದೀಪಾವಳಿಗೆ ಸಂಭ್ರಮ ಉತ್ಸಾಹ ತುಂಬಲು ದೀಪಗಳು, ಪಟಾಕಿ, ಆಕಾಶಬುಟ್ಟಿ, ಮಗಳು ಅಳಿಯನನ್ನು ಮನೆಗೆ ಕರೆವ ಸಡಗರ.

ಹೋಳಿಹುಣ್ಣಿಮೆಯಂದು ಕಾಮದಹನದ ಕೆನ್ನಾಲಿಗೆಗೆ ಗಾಢಬಣ್ಣಗಳಲ್ಲಿ ಮೀಯುವ ಸಡಗರ ಗೌರಿ, ಗಣೇಶ, ವರಮಹಾಲಕ್ಷ್ಮಿ, ಅನಂತವ್ರತಗಳಲ್ಲಿ ಮೂರ್ತಿಗಳನ್ನು ಪ್ರತಿಷ್ಠಾಪಿಸುವ, ಆಹ್ವಾನಿಸುವ, ಷೋಡಶೋಪಚಾರಗಳಿಂದ ಪೂಜಿಸುವ ಸಡಗರ.

ಯುಗಾದಿ - ಸಂವತ್ಸರದ ಮೊದಲ ದಿನ, ವಸಂತಋತು, ಚೈತ್ರಮಾಸ, ಪ್ರತಿಪದೆ. ಶಿಶಿರನ ನಿರ್ಗಮನ. ಜೀವಂತಿಕೆಯ ಸಾಕಾರ ರೂಪ ವೃಕ್ಷಕ್ಕೆ, ಮೈಕೊಡವಿ ಹಳದಿಯನ್ನು ಹಸಿರಾಗಿಸುವ ತವಕ. ಹೊಸತು ಹೊಸತು... ಮನುಷ್ಯ ನಿರಂತರವಾಗಿ ಹಾತೊರೆಯುವುದು ಹೊಸತಿಗಾಗಿ. ಏಕತಾನತೆ ಮಗ್ಗುಲಾಗಿ ವೈವಿಧ್ಯತೆ ಟಿಸಿಲೊಡೆದರೆ ಅಲ್ಲೊಂದು ಹೊಸತು ಭಾವ.  ಕಳೆದ ಸಂವತ್ಸರದ ದಣಿವಾರಿಸಿಕೊಂಡು, ಬರಿದಾದ ರೆಂಬೆಕೊಂಬೆಗಳನ್ನು ಸೀಳಿ ಮೈದೋರುವ ಚಿಗುರಿನಂತೆ ದಾಂಗುಡಿಯಿಡುವ ಹೊಸ ಕಲ್ಪನೆ, ಯೋಜನೆಗಳನ್ನು ಸಾಕಾರಗೊಳಿಸುವ ಹೊಸ ಹುರುಪು.

ಯುಗಾದಿಯೆಂದರೆ...
ಯುಗಾದಿಯ ದಿನ ಅಭ್ಯಂಗಕ್ಕೆ ವಿಶೇಷ ಮಹತ್ವ. ಎಣ್ಣೆಯನ್ನು ದೇವರ ಮುಂದಿಟ್ಟು ಭಗವಂತನಿಗೆ ಅರ್ಪಿಸಿದ ಎಣ್ಣೆಯನ್ನು, ಮನೆಮಂದಿಯೆಲ್ಲ ಹಚ್ಚಿಕೊಂಡು ಎರೆದುಕೊಳ್ಳುವುದು ಸಂಪ್ರದಾಯ. ಸನ್ಯಾಸಿಗಳೂ ಎಣ್ಣೆಸ್ನಾನ ಮಾಡುವ ವಿಶೇಷ ದಿನ ಯುಗಾದಿ. ಮಾವಿನೆಲೆ, ಹೂತುಂಬಿದ ಬೇವಿನೆಲೆಗಳ ಗುಚ್ಛಗಳನ್ನು ಬಾಗಿಲಿಗೆ ತೋರಣವಾಗಿಸಿ, ಮನೆದೇವರ ಪೂಜೆ, ಮಂಗಳಾರತಿಗಳಿಂದ ಮನೆಗೆ ಸಾತ್ವಿಕ ಕಳೆ ತುಂಬುವುದು. ಅಂಗಳ ಸಾರಿಸಿ ಬಣ್ಣ ಬಣ್ಣದ ರಂಗೋಲಿಯನ್ನು ಇಡುವುದು ಹಬ್ಬದ ಸಡಗರದ ಮೊದಲ ಕುರುಹು.

ಎಣ್ಣೆ ನೀರು ಹಾಕಿಕೊಂಡು ಮೈಯಿನ ಕೊಳೆ ತೊಳೆಯುವುದಷ್ಟೇ ಅಲ್ಲದೆ, ಒಳಗಿನ ಕೊಳೆಗಳನ್ನೂ ತೊಳೆಯಬೇಕು. ದುಗುಡ, ಅನಿಶ್ಚಿತತೆ, ಇಲ್ಲವೆನ್ನುವ ಕೊರಗುಗಳು, ಇನ್ನೊಬ್ಬರೊಂದಿಗೆ ಹೋಲಿಸಿಕೊಂಡು ಮರುಗುವುದು – ಇವೆಲ್ಲವುಗಳನ್ನೂ ನವಿರಾಗಿ ನಿವಾರಿಸಿಕೊಂಡು ಬದುಕನ್ನು ಬಂದಂತೆ ಸಂಭ್ರಮದಿಂದ, ಉತ್ಸವದಂತೆ ಸ್ವೀಕರಿಸಬೇಕು. ಜಡತ್ವವನ್ನು ಹೆಡೆಮುರಿಕಟ್ಟಿ ಒಗೆದು ಶಿಸ್ತು, ದೃಢತೆಯಿಂದ ಬದುಕಿನುಯ್ಯಾಲೆಯ ಸುಖ-ದುಃಖದ ಜೀಕುಗಳ ಶೀತಲ ಗಾಳಿಯನ್ನು ಅನುಭವಿಸಬೇಕು. ಹರೆಯ ಯಾರಿಗೆ ಬೇಡ; ಮುಪ್ಪು ಯಾರಿಗಿಷ್ಟ? ಯುಗಾದಿಯ ಸಂದರ್ಭದಲ್ಲಿ ಎಲ್ಲರೂ ತಮ್ಮ ತಮ್ಮ ವಯಸ್ಸು ಆಲಸ್ಯಗಳನ್ನು ಮರೆತು ಜೀವಸೆಲೆಯ ಒರತೆಯಾಗುವತ್ತ ಮುನ್ನಡೆಯಬೇಕು. ಕವಿ ಪುತಿನರವರು ತಮ್ಮ ಯುಗಾದಿಯ ಹಾಡು ಕವಿತೆಯಲ್ಲಿ ಹೇಳಿರುವಂತೆ -

ಹಳೆಯದೆಲ್ಲ ಮರೆಯಿರೈ
ಹೊಸತು ಬಾಳ ತೆರೆಯಿರೈ
ಕಳೆದ ವರುಷಕಿಂದು ಒಂದೆ
ಕಣ್ಣ ಹನಿಯ ಸಲಿಸಿರೈ
ಮುಪ್ಪು ಹರೆಯ ಮರೆಯುತ
ಬೆಪ್ಪ ಜಾಣ ಬೆರೆಯುತ
ಲಗ್ಗೆ ಚೆಂಡು ಚಿಣ್ಣಿಕೋಲು
ಏಣಿ ಉಯ್ಯಲಾಡಿರೈ

ವರ್ಷದ ಇತರ ದಿನಗಳಲ್ಲಿ ಆಧುನಿಕ ಉಡುಪಿಗೇ ಅಂಟಿಕೊಳ್ಳುವ ಯುವಕ–ಯುವತಿಯರು ಯುಗಾದಿಯಂದು ಸಾಂಪ್ರದಾಯಿಕ ಉಡುಪನ್ನು ಸ್ವ ಇಚ್ಛೆಯಿಂದ ಧರಿಸಿ ದೇವಾಲಯಗಳಿಗೆ ಭೇಟಿ ಕೊಡುವುದನ್ನು ನೋಡುವುದೊಂದು ಅಚ್ಚರಿ.

ಪಂಚಾಂಗಶ್ರವಣ
ಯುಗಾದಿಯ ಸಂಜೆ ಸಮುದಾಯದ ಜನರೆಲ್ಲರೂ ಒಂದೆಡೆ ಸೇರಿ ಗುರುಗಳ ಮುಖಾಂತರ ಪಂಚಾಂಗ ಶ್ರವಣ ಮಾಡುವುದು ಪದ್ಧತಿ. ದೇವಸ್ಥಾನಗಳಲ್ಲಿ ಅಥವಾ ಮನೆಯಲ್ಲೇ ಪಂಚಾಂಗವನ್ನು ಓದಿ, ಆ ವರ್ಷದ ಮಳೆ, ಬೆಳೆ, ಧಾರಣೆಗಳ ವಿವರಗಳನ್ನು ಸವಿಸ್ತಾರವಾಗಿ ತಿಳಿಯುವ ಕುತೂಹಲ.

ಸೂರ್ಯಗ್ರಹಣ, ಚಂದ್ರಗ್ರಹಣ, ಪರ್ವಕಾಲಗಳು ಅವುಗಳ ಫಲಾಫಲಗಳನ್ನು ತಿಳಿಯುವ ಉತ್ಸಾಹ. ಮಹಿಳೆಯರು ಪಂಚಾಂಗಶ್ರವಣಕ್ಕಾಗಿ ನೆರೆದಿರುವ ಸ್ತ್ರೀಯರಿಗೆ ಅರಿಶಿನ, ಕುಂಕುಮ, ಗಂಧ, ತಾಂಬೂಲ, ಕೋಸಂಬರಿ, ಪಾನಕ/ಮಜ್ಜಿಗೆಯನ್ನು ನೀಡಿ ಮುಂಬರುವ ದಿನಗಳು ಮಂಗಳಮಯವಾಗಿರಲಿ ಎಂದು ಬೇಡುತ್ತಾರೆ.

ಯುಗಾದಿಯ ಅಡುಗೆ ವೈಶಿಷ್ಟ್ಯ

ಒಂದೊಂದು ಹಬ್ಬದಲ್ಲಿಯೂ ನಿರ್ದಿಷ್ಟವಾದ ಅಡುಗೆ ಮಾಡುವ ಪದ್ಧತಿಯಿದ್ದು, ಈ ಆಧುನಿಕ ಕಾಲದಲ್ಲಿಯೂ ಅದನ್ನು ಮುತುವರ್ಜಿಯಿಂದ ಮುಂದುವರೆಸುವವರ ದಂಡನ್ನೇ ಕಾಣಬಹುದಾಗಿದೆ.  ಕೋಸಂಬರಿ, ತೊವ್ವೆ, ಮಾವಿನಕಾಯಿ ಚಿತ್ರಾನ್ನ, ಅನಾನಸಿನ ಗೊಜ್ಜು, ಹೂರಣದ ಹೋಳಿಗೆ, ಬೋಂಡ, ಗಸಗಸೆ ಪಾಯಸ, ಕರಬೂಜ ಹಣ್ಣಿನ ರಸಾಯನ, ಪಾನಕ, ತಿಳಿ ಮಜ್ಜಿಗೆಗಳು ಯುಗಾದಿಯ ವಿಶೇಷ.

ಚೈತ್ರದ ಗೌರಿ, ರಾಮನವಮಿ, ಹನುಮಜಯಂತಿಯನ್ನು ಮುಂದಿಟ್ಟುಕೊಂಡು ಬರುತ್ತದೆ ಯುಗಾದಿ. ಹೊಸದಾಗಿ ಮದುವೆಯಾದ ತರುಣಿ ಚೈತ್ರದ ಗೌರಿಯನ್ನು ಉಯ್ಯಾಲೆಯಲ್ಲಿ ಪ್ರತಿಷ್ಠಾಪಿಸಿ ಒಂದು ತಿಂಗಳ ಕಾಲ ಸುವಾಸಿನಿಯರ ಕಾಲು ತೊಳೆದು ಪಾನಕ ತಾಂಬೂಲಗಳನ್ನು ಕೊಟ್ಟು ಆಶೀರ್ವಾದ ಪಡೆಯುತ್ತಾಳೆ. ಯುಗಾದಿಯಿಂದ ಆರಂಭಿಸಿ ರಾಮನವಮಿಯವರೆಗೆ ಒಂಬತ್ತು ದಿನಗಳು ಸಂಗೀತ, ನೃತ್ಯ, ಹರಿಕಥೆಯಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ಎಲ್ಲ ಕಡೆಯೂ ನಡೆಯುತ್ತಿರುತ್ತದೆ. ಅನೇಕ ಕ್ಷೇತ್ರಗಳಲ್ಲಿ ಯುಗಾದಿಯ ದಿನದಂದೇ ನಡೆಯುವ ರಥೋತ್ಸವ, ಜಾತ್ರೆಗಳು ಹೆಣ್ಣುಮಕ್ಕಳನ್ನು ತವರುಮನೆಗೆ ಆಹ್ವಾನಿಸಲು ಕಾರಣವಾಗಿವೆ.

ಯುಗಾದಿಯೊಂದಿಗೇ ವಸಂತ ಋತುವಿನಾಗಮನ. ಯಾವ ಕವಿಯೂ ಈ ಋತುವಿನ ಪ್ರಭಾವದಿಂದ ತಪ್ಪಿಸಿಕೊಂಡಿಲ್ಲ. ದಣಿವಿಲ್ಲದೇ ತಮ್ಮ ವಿಪುಲವಾದ ಕಲ್ಪನೆಯನ್ನು ಹರಿಬಿಟ್ಟಿದ್ದಾರೆ, ವಸಂತನನ್ನು ಬಣ್ಣಿಸಲು. ರಾಧೆ-ಕೃಷ್ಣರ ಒಲವನ್ನು ಇನ್ನಿಲ್ಲದಂತೆ ವರ್ಣಿಸುವ ಕವಿ ವಿದ್ಯಾಪತಿ ತನ್ನ ‘ವಸಂತಲೀಲಾ’ ಪದ್ಯದಲ್ಲಿ ಹೀಗೆ ಹೇಳುತ್ತಾನೆ: 

ಮಧುರ ಋತುವಿನಲಿ ಮಕರಂದ ತುಂಬಿದ ಹೂಗಳು
ಮಧು ಹೀರುವ ಮತ್ತ ಜೇನ್ನೊಣಗಳು
ಬೃಂದಾವನ ಮಧುಮಯ, ಅಲ್ಲಿ ವಾಸಿಪ
ಪ್ರೇಮ ಮಧುರ, ಅದರ ದೈವ ಮಧುರ.
ಮಹದಾನಂದವೀವ ಸಂಗೀತವಾದ್ಯಗಳು ಮಧುಮಯ
ತಾಳ ಜೇನು, ವಾದ್ಯ ನುಡಿಸುವ ಕರಗಳು ಮಧುಮಯ
ನೃತ್ಯ ಮಧುಮಯ
ನರ್ತಿಸುವರ ಹಾವಭಾವಗಳು ಮಧುಮಯ
ಹಿಗ್ಗಿನ ಹಾಡುಗಳು ಮಧುಮಯ
ವಿದ್ಯಾಪತಿಯ ಪದಪುಂಜವದು ಮಧುಮಯ!!

ಕುಟುಂಬದ ಸದಸ್ಯರನ್ನು ಒಟ್ಟುಗೂಡಿಸುವ ಸೂತ್ರ ಹೆಣ್ಣು. ಹಬ್ಬದ ದಿನವನ್ನು ನೆವವಾಗಿಸಿಕೊಂಡು ಮಕ್ಕಳಿಗೆ ಸಂಪ್ರದಾಯ, ಆಚರಣೆಗಳನ್ನು ಸಲೀಸಾಗಿ ದಾಟಿಸುವ ಹರಿಕಾರಳವಳು. ಪ್ರೀತಿಯನ್ನೇ ಮೂಲಮಂತ್ರವಾಗಿಸಿಕೊಂಡು ವಿಶೇಷ ದಿನಗಳ ಜಟಿಲ ನಿಯಮಗಳನ್ನೂ ಸಂಪ್ರದಾಯದ ಸೌರಭವನ್ನೂ ಮುಂದಿನ ಜನಾಂಗಕ್ಕೆ ಪರಿಚಯಿಸುವ ಗುರುತರ ಜವಾಬ್ದಾರಿ ಅವಳದು. ಎಷ್ಟೇ ಆಧುನಿಕ ವಿಚಾರದವಳಾದರೂ ಹಬ್ಬದ ದಿನ ಮಾತ್ರ ಸಾಂಪ್ರದಾಯಿಕ ಉಡುಗೆಯಾದ ಸೀರೆಯನ್ನು ಉಡುವುದೇ ಅವಳಿಗೆ ಪ್ರಿಯ, ಬೇಸಿಗೆಯಲ್ಲೇ ವಿಶೇಷವಾಗಿ ಲಭ್ಯವಿರುವ ಮೈಸೂರು ಮಲ್ಲಿಗೆ, ಆಂಬುರು ಮಲ್ಲಿಗೆಯಿಂದ ಹೆರಳನ್ನು ಅಲಂಕರಿಸಿಕೊಳ್ಳುತ್ತಾಳೆ. ನೆರೆಹೊರೆಯ ಹಿರಿಯರನ್ನೂ ಗೆಳತಿಯರನ್ನೂ ಮನೆಗೆ ಆಹ್ವಾನಿಸಿ ಪಾನಕ, ಕೋಸಂಬರಿಯನ್ನು ಕೊಟ್ಟು ನಿತ್ಯ ಕೆಲಸದ ಏಕತಾನತೆಯಿಂದ ಹೊರಬರಲು ಪ್ರಯತ್ನಿಸುತ್ತಾಳೆ.

ಹಬ್ಬದ ದಿನ ಎಲ್ಲರಿಗೂ ರಜೆ. ಗಂಟೆಗಟ್ಟಲೆ ಟೀವಿ, ಕಂಪ್ಯೂಟರ್‌ನ ಮುಂದೆ ಕಳೆಯದೆ, ವಾಟ್ಸಾಪ್, ಫೇಸ್‌ಬುಕ್‌ಗಳಿಗೆ ವಿರಾಮ ನೀಡಿ ಮನೆಯ ಎಲ್ಲ ಸದಸ್ಯರೂ ಹಬ್ಬದ ಆಚರಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಸಂಕಲ್ಪವನ್ನು ಮಾಡುವ ಅವಶ್ಯಕತೆಯಿದೆ. ಹಬ್ಬವೆಂದರೆ ಅದೆಷ್ಟು ಕೆಲಸವಿರುತ್ತದೆ. ತೋರಣ ಕಟ್ಟುವುದು, ಹೂ-ಪತ್ರೆ ತರುವುದು, ಪೂಜೆಗೆ ಅಣಿ ಮಾಡುವುದು, ಬೇವಿನ ಹೂ ಬಿಡಿಸುವುದು, ಬೆಲ್ಲ ಪುಡಿ ಮಾಡುವುದು, ಅಡುಗೆ ತಯಾರಿ... ಇವುಗಳಲ್ಲಿ ಯಾವುದೊಂದು ನಡೆಯದಿದ್ದರೂ ಕೊರತೆ ಎದ್ದುಕಾಣುವುದು. ಇವೆಲ್ಲವನ್ನೂ ಮನೆಯ ಸದಸ್ಯರು ಹಂಚಿಕೊಂಡು ಮಾಡಿದಾಗ ಕೆಲಸ ಹಗುರವಾಗುವುದರ ಜೊತೆಗೆ ಹಬ್ಬದ ಸಂಭ್ರವೂ ಹೆಚ್ಚುತ್ತದೆ.

***

ಬೇವು–ಬೆಲ್ಲದೊಂದಿಗೆ ಶ್ಲೋಕ
ಯುಗಾದಿ ಒಂದು ದಿನದ ಹಬ್ಬವಲ್ಲ; ಮುಂದಿರುವ ಇಡೀ ಸಂವತ್ಸರದ ನೀಲಿನಕ್ಷೆ; ಬೇವು-ಬೆಲ್ಲದ ಸಮೀಕರಣ. ಬೇವು ಔಷಧೀಯ ಗುಣಗಳ ತವರು ಹೌದಾದರೂ, ಅದರ ಕಹಿ ಬದುಕಿನ ಬೇಸರ, ದುಃಖಗಳನ್ನೂ ಬೆಲ್ಲದ ಸವಿಯು-ಸುಖವನ್ನೂ ಪ್ರತಿನಿಧಿಸುತ್ತದೆ. ಬೇವು–ಬೆಲ್ಲದ ಮಿಶ್ರಣವನ್ನು ತಿನ್ನುವಾಗ ಹೇಳುವ ಒಂದು ಶ್ಲೋಕ ಹೀಗಿದೆ:
ಶತಾಯುಃ ವಜ್ರದೇಹಾಯ ಸರ್ವಸಂಪತ್ಕರಾಯಚ |
ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂ ||
ಅದರರ್ಥ ಹೀಗೆ: ನೂರು ವರ್ಷಗಳ ಆಯುಷ್ಯ, ಸದೃಢ ಆರೋಗ್ಯ, ಸಕಲ ಸಂಪತ್ತುಗಳ ಪ್ರಾಪ್ತಿಗಾಗಿಯೂ, ಸಕಲ ಅರಿಷ್ಟ ನಿವಾರಣೆಗಾಗಿಯೂ ಬೇವು–ಬೆಲ್ಲಗಳ ಸೇವನೆ ಮಾಡುತ್ತೇನೆ.

***
ಯುಗಾದಿ ಎಂದರೆ ಯುಗದ ಆದಿ. ಇದು ಸೃಷ್ಟಿಯ ಮೊದಲ ದಿನವೂ ಆಗಬಹುದು; ನಮ್ಮ ಕಾಲಮಾನದ ಮೊದಲ ದಿನವೂ ಆಗಬಹುದು; ನಮ್ಮ ಹುಟ್ಟಿನ ಮೊದಲ ದಿನವೂ ಆಗಬಹುದು; ವರ್ಷದ ಮೊದಲ ದಿನವೂ ಆಗಬಹುದು; ಒಂದೊಂದು ಕ್ಷಣದ ಆರಂಭವೂ ಆಗಬಹುದು. ಇವೆಲ್ಲವನ್ನೂ ಸಂಕೇತಿಸುತ್ತಿದೆ ‘ಯುಗಾದಿ’. ಇಡಿಯ ಸೃಷ್ಟಿಯಲ್ಲೇ ಸಂಭ್ರಮವಿದೆ. ಆದರೆ ನಾವು ಅದನ್ನು ಮರೆತಿದ್ದೇವೆ.

ಈ ಕಾರಣದಿಂದ ಬದುಕು ನಮ್ಮ ಪಾಲಿಗೆ ಹೊರೆಯಾಗಿದೆ; ಕಹಿಯ ಮೂಟೆಯಾಗಿದೆ. ಆದರೆ ಸುಖ–ದುಃಖಗಳೂ ಸಿಹಿ–ಕಹಿಗಳೂ ರಾತ್ರಿ–ಹಗಲುಗಳಂತೆ ಒಂದು ಇನ್ನೊಂದರಲ್ಲಿ ಸೇರಿಕೊಂಡು ಸುತ್ತುತ್ತಿರುತ್ತದೆ. ಇದರ ಸಾಂಕೇತಿಕತೆಯನ್ನೂ ಯುಗಾದಿಯ ಆಚರಣೆಯಲ್ಲಿ ನೋಡಬಹುದು. ಬೇವು–ಬೆಲ್ಲವನ್ನು ಒಂದಾಗಿ ಸವಿಯುವುದರ ಹಿಂದಿರುವ ತತ್ತ್ವವಾದರೂ ಇದೇ ಹೌದು. ಪ್ರಕೃತಿಯೇ ಈ ಗುಟ್ಟನ್ನು ಪ್ರಕಟಿಸುತ್ತಿರುತ್ತದೆ. ಒಣಗಿರುವ ಮರ ಚಿಗುರುವುದು; ಚಿಗುರಿದ ಮರ ಕ್ರಮೇಣ ಹೂವಾಗಿ, ಹಣ್ಣಾಗಿ, ಬಳಿಕ ತನ್ನ ಸೌಂದರ್ಯವನ್ನು ಕಳೆದುಕೊಂಡು ಬೋಳಾಗಿ ಮತ್ತೆ ಚಿಗುರುವುದಕ್ಕೆ ಸಿದ್ಧವಾಗುತ್ತದೆ.

ಹೀಗೆ ನಿರಂತರವಾಗಿ ಈ ಹುಟ್ಟು–ಸಾವುಗಳ ಚಕ್ರ ಮುಂದುವರೆಯುತ್ತಲೇ ಇರುತ್ತದೆ. ಇದು ಕ್ಷಣಕ್ಷಣದ ವಿದ್ಯಮಾನ. ಸುಖ–ದುಃಖಗಳ, ಹುಟ್ಟು–ಸಾವುಗಳ ಹೆಣಿಗೆ ಒಂದು ಇನ್ನೊಂದರಲ್ಲಿ ಬೆರೆತುಹೋಗಿರುತ್ತದೆ. ಆದುದರಿಂದ ನಾವು ಯಾವುದನ್ನು ಸುಖ ಎಂದು ಭಾವಿಸಿಕೊಂಡಿರುತ್ತವೋ ಅದು ದುಃಖವೇ ಆಗಿರಬಹುದು; ಯಾವುದನ್ನು ದುಃಖ ಎಂದುಕೊಂಡಿರುತ್ತೇವೋ ಅದು ಸುಖವೇ ಆಗಿರಬಹುದು. ಹೀಗಾಗಿ ಸುಖ–ದುಃಖಗಳ ಬಗ್ಗೆ ತುಂಬ ತಲೆಕೆಡಿಸಿಕೊಳ್ಳದೆಯೇ ಬದುಕನ್ನು ಪೂರ್ಣವಾಗಿ ಸ್ವೀಕರಿಸುವುದರಲ್ಲಿಯೇ ಜೀವನದ ನಿಜವಾದ ಸೊಗಸಿದೆ. ನಮ್ಮ ಬದುಕಿನ ಆರಂಭದ ಕ್ಷಣವೇ ಇಂಥ ವಿವೇಕ ಮತ್ತು ಸೌಂದರ್ಯಗಳು ನಮ್ಮದಾಗಲಿ ಎಂಬ ಆಶಯವೇ ಯುಗಾದಿಯ ತಾತ್ಪರ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT