ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರ್ಯದ ಉತ್ಪತ್ತಿಗೂ ಇದೆ ಲೈಂಗಿಕಸುಖದ ನಂಟು

Last Updated 24 ಮಾರ್ಚ್ 2017, 19:30 IST
ಅಕ್ಷರ ಗಾತ್ರ

‘ನನಗೀಗ 45 ವರ್ಷ. ಒಂದು ವರ್ಷದಿಂದೀಚೆಗೆ ನನ್ನಲ್ಲಿ ವೀರ್ಯದ ಪ್ರಮಾಣ ಕಡಿಮೆ ಆದಂತೆ ಅನುಭವವಾಗುತ್ತಿದೆ. ಇದರಿಂದ ಲೈಂಗಿಕ ತೃಪ್ತಿಯೂ ತಗ್ಗಿದಂತಾಗಿದೆ. ಇದಕ್ಕೆ ಕಾರಣವೇನು?

ಇಂಥ ಸಮಸ್ಯೆಯ ಪ್ರಶ್ನೆಗಳು ಸಾಕಷ್ಟು ಬರುತ್ತಿರುತ್ತವೆ. ಇದಕ್ಕೆ ಉತ್ತರ ಎಂಬಂತೆ ಈ ಲೇಖನವಿದೆ ನೋಡಿ...

ಮಿಲನಸುಖ ಅಥವಾ ಲೈಂಗಿಕತೃಪ್ತಿ ಪಡೆಯುವಲ್ಲಿ ಸೋಲಲು ಹಲವು ಕಾರಣಗಳಿರಬಹುದು. ಆದರೆ ವೀರ್ಯದ ಕೊರತೆ ಅಥವಾ ಕಡಿಮೆ ಪ್ರಮಾಣದ ವೀರ್ಯ ಅತಿಮುಖ್ಯ ಸಮಸ್ಯೆಗಳಾಗಿ ಕಾಡುತ್ತವೆ. ಕಡಿಮೆ ವೀರ್ಯಸ್ಖಲನ ಲೈಂಗಿಕತೃಪ್ತಿಗೆ ಅಡ್ಡಿಯಾಗುತ್ತದೆ ಎಂಬುದೂ ಹಲವರ ಮಾತು. ಹಾಗಿದ್ದರೆ ವೀರ್ಯಾಣುವಿನ  ಪ್ರಮಾಣ ಲೈಂಗಿಕತೆಯ ಮೇಲೆ ಪರಿಣಾಮ ಬೀರಬಹುದೇ? ಯಾವೆಲ್ಲಾ ಕಾರಣಕ್ಕೆ ವೀರ್ಯಾಣುವಿನ ಪ್ರಮಾಣ ಕುಂಠಿತಗೊಳ್ಳುತ್ತದೆ ಎಂಬ ಅಂಶಗಳನ್ನು ತಿಳಿದುಕೊಳ್ಳುವುದೂ ಅತಿ ಮುಖ್ಯ.

ಕಡಿಮೆ ಪ್ರಮಾಣದ ವೀರ್ಯ, ಕಡಿಮೆ ‘ಟೆಸ್ಟೊಸ್ಟೆರಾನ್’ ಅನ್ನು ಸೂಚಿಸುತ್ತದೆಯೇ?

ಲೈಂಗಿಕಕ್ರಿಯೆಯಲ್ಲಿ ತೊಡಗಿಸಿಕೊಳ್ಳಲು ಅಗತ್ಯವಾಗಿರುವ ಟೆಸ್ಟೊಸ್ಟೆರಾನ್ ಹಾರ್ಮೋನಿನಲ್ಲಿನ ಬದಲಾವಣೆ ಕಡಿಮೆ ವೀರ್ಯ ಪರಿಮಾಣಕ್ಕೆ ಒಂದು  ಕಾರಣವಾಗಿರಬಹುದಷ್ಟೆ. ಇದರೊಂದಿಗೆ ಇನ್ನಿತರ ಅಂಶಗಳೂ ಜೊತೆ ಸೇರುತ್ತವೆ. ಕೆಲವು ಔಷಧಿಗಳು, ವಯಸ್ಸು ಹಾಗೂ ಪದೇ ಪದೇ ಲೈಂಗಿಕ ಕ್ರಿಯೆ ನಡೆಸುವುದು ಇದಕ್ಕೆ ಕಾರಣವಾಗಬಲ್ಲದು.

ಸ್ಖಲನದ ಸಂದರ್ಭದಲ್ಲಿ ಎಷ್ಟು ಪ್ರಮಾಣದ ವೀರ್ಯ ಬಿಡುಗಡೆಯಾಯಿತು ಎಂಬುದನ್ನು   ಆಧರಿಸಿ ನಿಖರ ಕಾರಣ ಹೇಳಲಾಗದು. ಏಕೆಂದರೆ ಈ ಪ್ರಮಾಣದಲ್ಲಿ ಏರಿಳಿತವಾಗುವುದೂ ಸಹಜವೇ. ಆದರೆ ಕೆಲವು ಅಂಶಗಳು ವೀರ್ಯಸ್ಖಲನಕ್ಕೆ ಕಾರಣವಾಗಬಲ್ಲದು ಎಂದು ಊಹಿಸಲಾಗಿದೆ. ವಯಸ್ಸು, ನಿರ್ದಿಷ್ಟ ಔಷಧಿಗಳು ಹಾಗೂ ಕೆಲವು ಶಸ್ತ್ರಚಿಕಿತ್ಸೆಗಳು ಇದಕ್ಕೆ ಪರೋಕ್ಷ ಕಾರಣವಾಗಬಹುದು.

ತಜ್ಞರ ಅಂಕಿ–ಅಂಶಗಳ ಪ್ರಕಾರ, 1.5 ಕೋಟಿ ಭಾರತೀಯ ಪುರುಷರನ್ನು ಕಡಿಮೆ ಟೆಸ್ಟೊಸ್ಟೆರಾನ್ ಸಮಸ್ಯೆ ಕಾಡುತ್ತಿದ್ದು, ಲೈಂಗಿಕ ಕ್ರಿಯೆಯ ಸಮಯದಲ್ಲಿ ವೀರ್ಯಾಣು ಬಿಡುಗಡೆಯಾಗುವ ಮಟ್ಟ ಕುಸಿಯಲು ಟೆಸ್ಟೊಸ್ಟೆರಾನ್ ಸಮಸ್ಯೆ  ಎಡೆಮಾಡಿಕೊಡುತ್ತಿದೆ ಎಂದಿದೆ. ಲೈಂಗಿಕ ಸಾಮರ್ಥ್ಯದ ಮೇಲೆ  ಇದು ಯಾವುದೇ ರೀತಿ ಪರಿಣಾಮ ಬೀರದಿದ್ದರೂ ಕೆಲವರಿಗೆ ಕೊರತೆಯಂತೆ ಭಾಸವಾಗುತ್ತದೆ. ಈ ಅನುಭವ ಒಬ್ಬರಿಂದೊಬ್ಬರಿಗೆ ಭಿನ್ನವಾಗಿರುತ್ತದೆ. ಈ ರೀತಿ ಇದ್ದಕ್ಕಿದ್ದಂತೆ  ಬದಲಾವಣೆ ಕಂಡುಬರುವುದು ಯಾರಿಗಾದರೂ ಸಮಸ್ಯೆ ಎನ್ನಿಸುವುದು ಅಸಹಜವೂ ಅಲ್ಲ.

ದೇಹದಲ್ಲಿ ವೀರ್ಯ ಉತ್ಪಾದನೆ: ಸ್ಖಲನಗೊಂಡಾಗ ಬಿಡುಗಡೆಯಾಗುವ ವೀರ್ಯ ಸರಾಸರಿ 3–5 ಕ್ಯೂಬಿಕ್ ಸೆಂಟಿಮೀಟರ್‌ ಎಂದು ಅಂದಾಜಿಸಲಾಗಿದ್ದರೂ  ಇದರಲ್ಲಿ 1.5ರಿಂದ 7.6 ಸಿಸಿವರೆಗೂ ಏರಿಳಿತವಿರುತ್ತದೆ.  ವೀರ್ಯರಸದಲ್ಲಿರುವ ದ್ರವಾಂಶವು ಉತ್ಪತ್ತಿಯಾಗುವುದು ಶುಕ್ಲಗ್ರಂಥಿಯಲ್ಲಿ. ವೃಷಣ ಹಾಗೂ ವೃಷಣಕೋಶಗಳು ವೀರ್ಯ ಉತ್ಪಾದನೆಯಲ್ಲಿನ ಪ್ರಮುಖ ಅಂಗಗಳು.

ಟೆಸ್ಟೊಸ್ಟೆರಾನ್ ಒಂದು ಹಂತಕ್ಕೆ ಬಂದ ನಂತರ ಈ ಮೂರು ಅಂಗಗಳು ಸೇರಿ ವೀರ್ಯಸ್ಖಲನಕ್ಕೆ ಎಡೆಮಾಡಿಕೊಡುತ್ತವೆ. ಈ ಪ್ರಕ್ರಿಯೆಯಲ್ಲಿ ಯಾವುದೇ ಅಡೆತಡೆ ಎದುರಾದರೆ, ಅಂದರೆ ವೀರ್ಯನಾಳದಲ್ಲಿ ಅಡಚಣೆಯಾದರೆ ವೀರ್ಯದ ಮಟ್ಟವೂ ಕುಂಠಿತಗೊಳ್ಳುತ್ತದೆ.

ಕಡಿಮೆ ‘ಟೆಸ್ಟೊಸ್ಟೆರಾನ್’ನಿಂದ ಕಡಿಮೆ ಪ್ರಮಾಣದ ವೀರ್ಯಸ್ಖಲನ?

ಟೆಸ್ಟೊಸ್ಟೆರಾನ್, ಪುರುಷರ ಅತಿ ಪ್ರಮುಖ ಲೈಂಗಿಕ ಹಾರ್ಮೋನು. ವೀರ್ಯ ಉತ್ಪತ್ತಿ ಮಾಡಲು ಸಹಾಯ ಮಾಡುವ ಈ ಹಾರ್ಮೋನು, ಸ್ನಾಯುಗಳು ಹಾಗೂ ಮುಳೆಗಳು ಗಟ್ಟಿಯುಳಿಯುವಂತೆ ಮಾಡುತ್ತವೆ ಹಾಗೂ ಪುರುಷರಲ್ಲಿ ಲೈಂಗಿಕ ಆಸಕ್ತಿ ಕುಂದದಂತೆ ನೋಡಿಕೊಳ್ಳುತ್ತದೆ. ಲೈಂಗಿಕತೆಯಲ್ಲಿ ನಿರಾಸಕ್ತಿ, ಟೆಸ್ಟೊಸ್ಟೆರಾನ್ ಉತ್ಪಾದನೆಯ ಮಟ್ಟ ಕಡಿಮೆಯಾದ ಮೊದಲ ಸೂಚನೆ.

ಡೆಸಿಲೀಟರ್‌ ರಕ್ತದಲ್ಲಿ 300–1100 ನ್ಯಾನೊಗ್ರಾಮ್‌ನಷ್ಟು ಟೆಸ್ಟೊಸ್ಟೆರಾನ್‌  ಇದ್ದರೆ ಅದನ್ನು ಸಹಜ ಮಟ್ಟ ಎಂದು ಪರಿಗಣಿಸಬಹುದು. ಲೈಂಗಿಕ ನಿರಾಸಕ್ತಿಯೊಂದಿಗೆ ಟೆಸ್ಟೊಸ್ಟೆರಾನ್ ಮಟ್ಟವೂ ಕಡಿಮೆಯಾದರೆ, ಸುಸ್ತು, ಕಿರಿಕಿರಿ, ಖಿನ್ನತೆ, ಬೊಜ್ಜು, ವೃಷಣದ ಗಾತ್ರ ಕಡಿಮೆಯಾಗುವ ಲಕ್ಷಣಗಳು ಗೋಚರಿಸುತ್ತವೆ.

ಕಡಿಮೆ ಟೆಸ್ಟೊಸ್ಟೆರಾನ್‌, ವೀರ್ಯದ್ರವದ ಉತ್ಪಾದನೆ ಮೇಲೂ ಪರಿಣಾಮ ಬೀರುತ್ತದೆ. ವೃಷಣ ಹಾಗೂ ಶುಕ್ಲಗ್ರಂಥಿಗಳ ಸಮರ್ಥ ಕಾರ್ಯನಿರ್ವಹಣೆಗೆ ಟೆಸ್ಟೊಸ್ಟೆರಾನ್‌ ಅವಶ್ಯಕತೆ ಇರುವುದರಿಂದ, ಈ ಹಾರ್ಮೋನು ಕುಂಠಿತಗೊಂಡರೆ ವೀರ್ಯ ಸ್ರವಿಸುವಿಕೆಯೂ ಕಡಿಮೆ ಆಗುತ್ತದೆ. ಆದ್ದರಿಂದ ವೀರ್ಯಸ್ಖಲನದ ಪ್ರಮಾಣವೂ ಕುಗ್ಗಿದಂತೆ ಅನ್ನಿಸುತ್ತದೆ.

ವೀರ್ಯದ ಪ್ರಮಾಣವನ್ನು ನಿರ್ಧರಿಸುವ ಇತರ ಅಂಶಗಳು

ಟೆಸ್ಟೊಸ್ಟೆರಾನ್‌ ಮಟ್ಟವಲ್ಲದೇ ಈ ಕೆಲವು ಅಂಶಗಳು ವೀರ್ಯದ ಪ್ರಮಾಣ ಕಡಿಮೆಗೊಳ್ಳಲು ಕಾರಣವಾಗಬಹುದು.

ಆಡಚಣೆ: ವೀರ್ಯನಾಳದ ಅಡಚಣೆ ಕೆಲವರಿಗೆ ಹುಟ್ಟಿನಿಂದಲೇ ಇರುತ್ತದೆ. ಆದರೆ ಅದನ್ನು ಮುನ್ನವೇ ಕಂಡುಕೊಳ್ಳಬಹುದು. ಇದಲ್ಲದೇ  ವೃಷಣ, ಮೂತ್ರಕೋಶ ಅಥವಾ ಮೂತ್ರವಿಸರ್ಜನಾ ನಾಳಕ್ಕೆ ಸಂಬಂಧಿಸಿದ ಶಸ್ತ್ರಚಿಕಿತ್ಸೆ ಆಗಿದ್ದರೆ, ಅವು ಕೂಡ ಸ್ಖಲನಕ್ಕೆ ಅಡ್ಡಿಯುಂಟುಮಾಡುತ್ತವೆ. ಆದರೆ ಒಂದು ಸಿಸಿಗಿಂತ ಹೆಚ್ಚಿನ ವೀರ್ಯದ್ರವ ಉತ್ಪತ್ತಿ ಇದ್ದರೆ, ಅದು ವೀರ್ಯನಾಳ ಅಡಚಣೆ ಸಂಬಂಧಿತ ಸಮಸ್ಯೆ ಆಗಿರುವುದಿಲ್ಲ.

ಹಿಮ್ಮುಖ ಚಲನೆಯ ಸ್ಖಲನ: ವೀರ್ಯವು ಹೊರಬರದೆ, ಮೂತ್ರಕೋಶದ ಒಳಗೆ ಹಿಮ್ಮುಖವಾಗಿ ಹೋದರೆ ಅದನ್ನು ಹಿಮ್ಮುಖ ಚಲನೆಯ ಸ್ಖಲನ ಎನ್ನುತ್ತಾರೆ. ಇದು ಕಡಿಮೆ ಮಟ್ಟದ ವೀರ್ಯಸ್ಖಲನಕ್ಕೆ ಕಾರಣ. ಈ ಸಮಸ್ಯೆಗೆ ಒಳಗಾದ ಪುರುಷರು ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ. ಇದರೊಂದಿಗೆ ಟ್ರಾನ್ಸುರೆಟ್ರಾಲ್ ರೆಸೆಕ್ಷನ್ ಆಫ್ ದಿ ಪ್ರಾಸ್ಟೇಟ್ ಎಂಬ ಶಸ್ತ್ರಚಿಕಿತ್ಸೆ ಕೂಡ ಈ ಹಿಮ್ಮುಖ ಚಲನೆಗೆ ಕೆಲವೊಮ್ಮೆ ಕಾರಣವಾಗುತ್ತದೆ.

ಮಧುಮೇಹದಿಂದ ಬಳಲುತ್ತಿರುವ ಪುರುಷರಲ್ಲಿ ಮೂತ್ರಕೋಶದ ನರಗಳು ಸಮರ್ಥವಾಗಿ ಕೆಲಸ ಮಾಡದಿರುವುದರಿಂದ ಈ ಸಮಸ್ಯೆ ಸಹಜವಾಗಿರುತ್ತದೆ.

ಔಷಧಿಗಳು: ಕೆಲವು ರೋಗನಿರೋಧಕ ಅಥವಾ ಖಿನ್ನತೆ ನಿವಾರಕ ಔಷಧಗಳು ವೀರ್ಯದ ಪ್ರಮಾಣವನ್ನು ಕುಂಠಿತಗೊಳಿಸಬಹುದು.

ವಯಸ್ಸು: ಪುರುಷರಿಗೆ ವಯಸ್ಸಾಗುತ್ತಿದ್ದಂತೆ, ವೀರ್ಯದ ಪ್ರಮಾಣವೂ ಕಡಿಮೆಯಾಗುತ್ತದೆ. ಇಸ್ರೇಲಿನಲ್ಲಿ ನಡೆದ ಅಧ್ಯಯನದ ಪ್ರಕಾರ, ವೀರ್ಯದ ಮಟ್ಟ, ಗುಣಮಟ್ಟ ಹಾಗೂ ವಯಸ್ಸಿಗೂ ಒಂದಕ್ಕೊಂದು ಸಂಬಂಧವಿದೆ. 55 ವಯಸ್ಸಿಗೂ ಹೆಚ್ಚಿನ ಪುರುಷರು, ವೀರ್ಯದ ಪ್ರಮಾಣ ಹಾಗೂ ಗುಣಮಟ್ಟವೂ ಕಡಿಮೆಯಾಗಿರುವ ಅನುಭವವನ್ನು ಹೊಂದಿರುವುದಾಗಿ ಸಂಶೋಧನೆಯು ತಿಳಿಸಿಕೊಟ್ಟಿದೆ. 

ಇಂದ್ರಿಯನಿಗ್ರಹ: ಪದೇ ಪದೇ ಲೈಂಗಿಕಕ್ರಿಯೆಯಲ್ಲಿ ತೊಡಗಿಕೊಳ್ಳುವ ಪುರುಷರಲ್ಲಿ ವೀರ್ಯದ ಬಿಡುಗಡೆ ಪ್ರಮಾಣವು ಕಡಿಮೆಯಾಗುತ್ತದೆ. ಆದ್ದರಿಂದ ಇಂದ್ರಿಯನಿಗ್ರಹ ಇದಕ್ಕೆ ನೆರವಾಗಬಲ್ಲದು. ಸ್ಖಲನದ ನಂತರದ ಮೊದಲ ನಾಲ್ಕು ದಿನಗಳಲ್ಲಿ ವೀರ್ಯವು ದಿನಕ್ಕೆ ಶೇ.11.9ರಷ್ಟು ಹೆಚ್ಚಳಗೊಳ್ಳಬಹುದು.

ಕಡಿಮೆ ಪ್ರಮಾಣದ ಸ್ಖಲನ ಹಾಗೂ ಲೈಂಗಿಕ ತೃಪ್ತಿ: ಲೈಂಗಿಕಕ್ರಿಯೆಯ ಸಂದರ್ಭದಲ್ಲಿ ಕಡಿಮೆ ವೀರ್ಯ ಬಿಡುಗಡೆಯಾಗುವುದರಿಂದ ಮಿಲನದ ಸುಖಕ್ಕೆ ಯಾವುದೇ ಅಡ್ಡಿಯಿಲ್ಲ. ಉದಾಹರಣೆಗೆ, ವೃಷಣದ ಕ್ಯಾನ್ಸರ್ ಹೊಂದಿದ ಕೆಲವರಲ್ಲಿ ಸ್ಖಲನದ ಪ್ರಕ್ರಿಯೆಯೇ ಸಾಧ್ಯವಾಗುವುದಿಲ್ಲ. ಆದರೂ ಅವರು ಲೈಂಗಿಕ ಕ್ರಿಯೆ ನಡೆಸಬಹುದು. ಹಾಗೆಯೇ ಲೈಂಗಿಕತೃಪ್ತಿಯನ್ನೂ ಹೊಂದಬಹುದು.  ಕಡಿಮೆ ವೀರ್ಯಸ್ಖಲನ ಅಥವಾ ಸ್ಖಲನವೇ ಆಗದೆ ಇರುವುದು ಪುರುಷರ ಒಟ್ಟಾರೆ ಲೈಂಗಿಕ ಅನುಭವದ ಮೇಲೆ ಪರಿಣಾಮ ಬೀರಬಹುದು.  ಅವರ ಅನುಭವದ ಮಟ್ಟದ ಮೇಲೂ ಪರಿಣಾಮ ಬೀರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT