ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ಕೆಲಸ ಆರೋಗ್ಯದ ಕೆಲಸ

Last Updated 24 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಪ್ರತಿ ವರ್ಷ 6.3 ಕೋಟಿ ಭಾರತೀಯರು ಕಾಯಿಲೆಗೆ ಬಿದ್ದು ಆಸ್ಪತ್ರೆ ಖರ್ಚಿನಿಂದ ಬಡವರಾಗುತ್ತಿದ್ದಾರೆ. ಸರ್ಕಾರಗಳ ಪ್ರಯತ್ನ ಒಂದೆಡೆ ಜನರನ್ನು ಬಡತನ ರೇಖೆಯಿಂದ ಮೇಲೆತ್ತಿ ಹೆಗ್ಗಳಿಕೆಯ ಮಾತನಾಡಿದರೆ, ಇನ್ನೊಂದೆಡೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಳಿಲ್ಲದೆ ಅದೇ ಜನರು ಖಾಸಗಿ ಆಸ್ಪತ್ರೆಗಳಲ್ಲಿ ತಮ್ಮ ಜೇಬು ಬರಿದುಮಾಡಿಕೊಂಡು ಬಡತನಕ್ಕೆ ಬೀಳುವುದಾಗಿದೆ. ಆಸ್ಪತ್ರೆ ಖರ್ಚಿನ ಶೇ.70ರಷ್ಟು ಖಾಸಗಿ ಆಸ್ಪತ್ರೆಯಲ್ಲಿ ತಮ್ಮದೇ ಹಣ ಖರ್ಚು ಮಾಡಿ ಆರೋಗ್ಯ ಕಾಪಾಡಿಕೊಳ್ಳುವ ಪರಿಸ್ಥಿತಿ ನಮ್ಮದಾಗಿದೆ. ಜಗತ್ತಿನ ಒಟ್ಟು ಆರ್ಥಿಕತೆಯ ಸರಾಸರಿ ಶೇ. 6ರಷ್ಟು ಆರೋಗ್ಯಕ್ಕಾಗಿ ಸಾರ್ವಜನಿಕ ವ್ಯವಸ್ಥೆಗೆ ಸರ್ಕಾರಗಳು ಖರ್ಚು ಮಾಡುತ್ತಿದ್ದರೆ, ನಮ್ಮ ದೇಶ ಕೇವಲ ಶೇ. 1.3ರಷ್ಟು ಮಾತ್ರ ಖರ್ಚು ಮಾಡುತ್ತಿದೆ. ಸಾರ್ವಜನಿಕರ ಆರೋಗ್ಯಕ್ಕಾಗಿ ಅತಿ ಕಡಿಮೆ ಹಣ ಹೂಡುವ ಸರ್ಕಾರದ ದುರ್ವ್ಯವಸ್ಥೆ ನಮ್ಮದಾಗಿದೆ. ಭಾರತೀಯರು ತಮ್ಮ ಆದಾಯದ ಕಾಲು ಭಾಗದಷ್ಟು ಹಣವನ್ನು ಆರೋಗ್ಯ ಮತ್ತು ಶಿಕ್ಷಣಕ್ಕೆ ವ್ಯಯಮಾಡುವುದಾಗಿದೆ. ಇದು ಕೂಡ ದೇಶದ ಆರ್ಥಿಕ ಬೆಳವಣಿಗೆ ಎಂದು ಲೆಕ್ಕ ಹಾಕಲಾಗುತ್ತದೆ! ಮೂಲತಃ ಆರೋಗ್ಯ ಮತ್ತು ಶಿಕ್ಷಣ ಸರ್ಕಾರ ಹೊರಬೇಕಾದ ಮೊದಲ ಜವಾಬ್ದಾರಿ. ಇದಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಪ್ರತಿ ದೇಶ ತನ್ನ ಒಟ್ಟು ಆರ್ಥಿಕತೆಯ ಶೇ. 5ರಷ್ಟನ್ನು ಆರೋಗ್ಯಕ್ಕೆ ನಿಗದಿಯಾಗಿಡಬೇಕೆಂದು ಸೂಚಿಸುತ್ತದೆ. ಆದರೆ ಈ ಜವಾಬ್ದಾರಿಯಿಂದ ಇದುವರೆಗೂ ಸರ್ಕಾರಗಳು ನುಣುಚಿಕೊಂಡಿವೆ. ಮೊನ್ನೆ ಕೇಂದ್ರ ಸರ್ಕಾರ ಹೊಸ ಆರೋಗ್ಯ ನೀತಿಯನ್ನು ಜಾರಿಗೆ ತಂದು ಆರೋಗ್ಯಕ್ಕಾಗಿ ಈಗಿನ ಜಿಡಿಪಿಯ ಶೇ. 1.3ರಿಂದ ಶೇ. 2.5ಕ್ಕೆ ಏರಿಸುವುದಾಗಿ ಹೇಳಿದೆ. ಹಾಗೆಯೇ 2025ರ ಹೊತ್ತಿಗೆ ದೇಶವನ್ನು ಕ್ಷಯರೋಗ ಮುಕ್ತವನ್ನಾಗಿಸುವುದು, ಶಿಶುಮರಣವನ್ನು 2019ಕ್ಕೆ 28ಕ್ಕೆ ಇಳಿಸುವುದು, ಆಯಸ್ಸನ್ನು ಈಗಿನ 67.5ರಿಂದ 70ಕ್ಕೆ (2025ರ ಹೊತ್ತಿಗೆ) ಏರಿಸುವುದು – ಹೀಗೆ ಅನೇಕ ಸದುದ್ದೇಶಗಳನ್ನೊಳಗೊಂಡ ಗುರಿಯನ್ನು ಈ ಹೊಸ ನೀತಿಯಲ್ಲಿ ಅಳವಡಿಸಲಾಗಿದೆ. ಹೊಸನೀತಿ ಹೊರತಂದ ಮಾರನೆಯ ದಿನವೇ ಮಾಧ್ಯಮಗಳಲ್ಲಿ ಇದರ ಜಾಹೀರಾತನ್ನು ಪೂರ್ತಿ ಪುಟಗಳಲ್ಲಿ ಸರ್ಕಾರ ಪ್ರಕಟಿಸಿತು.

ಆದರೆ ಇದೇ ರೀತಿ ಆಶ್ವಾಸನೆಗಳನ್ನೊಳಗೊಂಡ ಆರೋಗ್ಯನೀತಿಯನ್ನು 2002ರಲ್ಲಿ ಜಾರಿಗೊಂಡಿತ್ತು. ಆದರೆ ಆದು ಬರಿ ಘೋಷಣೆಯಾಗಿಯೇ ಉಳಿಯಿತು. 2015ರ ಕರಡುನೀತಿಯಲ್ಲಿ ಆರೋಗ್ಯ ಜನರ ಹಕ್ಕು ಎಂದು ತಿಳಿಸಲಾಗಿತ್ತು. ಈಗ ಆರೋಗ್ಯ ಜನರ ‘ಹಕ್ಕು’ ಎನ್ನುವುದನ್ನು ಕಿತ್ತು ‘ಭರವಸೆ/ ಆಶ್ವಾಸನೆ’ ಎಂಬ ನಿಯಮದ ಮೂಲಕ ಸರ್ಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಂಡಿದೆ. ಹಕ್ಕಾಗಿದ್ದಾಗ ಇದನ್ನು ಕಾನೂನಿನ ಮೂಲಕ ಪಡೆದುಕೊಳ್ಳಬಹುದಾಗಿತ್ತು. ಭರವಸೆ ಎನ್ನುವುದರ ಮೂಲಕ ಕಾನೂನಿನ ಚೌಕಟ್ಟಿನಿಂದ ಹೊರಗುಳಿಯುವುದಾಗಿದೆ. ಅಲ್ಲದೇ ಹೊಸ ನೀತಿಯಲ್ಲಿ ಸೇವೆಯನ್ನು ಖಾಸಗಿ ಸಂಸ್ಥೆಗಳಿಗೆ ಗುತ್ತಿಗೆ ಕೊಡುವ ಪ್ರಸ್ತಾಪ ಎತ್ತಲಾಗಿದೆ. ಕಾಯಿಲೆ ತಡೆಗಟ್ಟುವ ರೋಗ ಪರೀಕ್ಷಣೆ, ತಪಾಸಣೆಗೆ ಒತ್ತುಕೊಡಲಾಗಿದೆ. ಇದು ಇಲ್ಲದ ಕಾಯಿಲೆಗೆ ಸಲ್ಲದ ತಪಾಸಣೆಗೆ ಎಡೆ ಮಾಡಿಕೊಡಬಹುದು. ಇದರಿಂದ ಗುತ್ತಿಗೆ ಪಡೆದ ಖಾಸಗಿ ವ್ಯವಸ್ಥೆ ಮತ್ತು ವಿಮೆ ಕಂಪನಿಗಳಿಗೆ ಹೆಚ್ಚಿನ ಲಾಭ ಹೋಗಬಹುದು.

ಅಲ್ಲದೇ ಆರೋಗ್ಯಕ್ಕಾಗಿ ಶೇ. 2.5 ಖರ್ಚು ಮಾಡುವ ಗುರಿ ತಲುಪುವುದು 2025ರಲ್ಲಿ! ಇದಕ್ಕಾಗಿ ತಂಬಾಕು ಮತ್ತು ತಂಪು ಪಾನೀಯದಂತಹ  ಪದಾರ್ಥಗಳಿಗೆ ಪಾಪದ ತೆರಿಗೆ ವಿಧಿಸುತ್ತಾ ಹಣಸಂಗ್ರಹ ಮಾಡಿ 2025ಕ್ಕೆ ನಮ್ಮ ಜಿಡಿಪಿಯ ಶೇ. 2.5ಕ್ಕೆ ಏರಿಸುವ ಯೋಜನೆ ಸರ್ಕಾರ ಜನಸಾಮಾನ್ಯರ ಆರೋಗ್ಯಕ್ಕೆ ಕೊಡುವ ಪ್ರಾಮುಖ್ಯದ ಕೊರತೆ ಕಾಣುತ್ತದೆ. ಅರ್ಥಶಾಸ್ತ್ರಜ್ಞ ತಾಮ ಪಿಕೆಟಿ ಹೇಳುವ ಪ್ರಕಾರ ಜನಸಾಮಾನ್ಯರು ತಮ್ಮ ಆರೋಗ್ಯಕ್ಕಾಗಿ ತಮ್ಮ ಜೇಬಿನಿಂದ ಹಣ ಖರ್ಚು ಮಾಡುವುದನ್ನು ಹಣದುಬ್ಬರವೆಂದೇ ಪರಿಗಣಿಸಬೇಕು. ಅದನ್ನು ಆರ್ಥಿಕ ಬೆಳವಣಿಗೆ ಎಂದು ಪರಿಗಣಿಸಬಾರದು ಎಂದು. ಇದಾಗಲೇ ಅತೀವ ಆಸ್ಪತ್ರೆಯ ಖರ್ಚಿನಿಂದ ಕಷ್ಟ–ನಷ್ಟಗಳಿಗೆ ಈಡಾಗಿರುವ ಜನರನ್ನು ರಕ್ಷಿಸಲು ಸರ್ಕಾರ ಇನ್ನೂ ಎಂಟು ವರ್ಷ ಕಾಯಿಸುವುದು ಸರಿಯಲ್ಲ. ತೆರಿಗೆ ಗಳಿಸಿ ನಂತರ ಆರೋಗ್ಯಕ್ಕೆ ಮೀಸಲಿಡುವ ಯೋಜನೆಯ ಬದಲು ಈಗಲೇ ಆರೋಗ್ಯಕ್ಕಾಗಿ ಬಂಡವಾಳ ಹೂಡುವುದು ಮತ್ತು ವ್ಯವಸ್ಥೆ ಕಲ್ಪಿಸುವುದು ಅಗತ್ಯವಾಗಿದೆ. ಕಾಯಿಲೆ ಮತ್ತು ಅನಾರೋಗ್ಯದಿಂದ ದೇಶದ ಆರ್ಥಿಕತೆಗೆ ಪ್ರತಿ ವರ್ಷ ನಮ್ಮ ಒಟ್ಟು ಆರ್ಥಿಕತೆಯ ಸುಮಾರು ಶೇ.10ರಷ್ಟು ಉತ್ಪಾದನೆಯಲ್ಲಿ ಕಳೆದುಕೊಳ್ಳುತ್ತೇವೆ. ಇಂತಹ ವಿಷಯಕ್ಕೆ ಸರ್ಕಾರ ಸದಾ ಮುಂದಿರಬೇಕಾಗಿತ್ತು.

ಇದೇ ನೀತಿಯಲ್ಲಿ ಜನನಪ್ರಮಾಣ ಪ್ರತಿ ಮಹಿಳೆಗೆ 2.1ಕ್ಕೆ 2025ಕ್ಕೆ ಇಳಿಸುವ ಉದ್ದೇಶ ಹೊಂದಲಾಗಿದೆ. ಜನನ ಪ್ರಮಾಣ ಇಳಿಸುವುದಕ್ಕೆ ಮಹಿಳೆಯರ ವಿದ್ಯಾಭ್ಯಾಸ ಮಟ್ಟ ಪ್ರಮುಖ ಕಾರಣವಾಗಿದೆ. ಹಾಗಾಗಿ ನೇರವಾಗಿ ಜನನದ ಪ್ರಮಾಣ ಕಡಿಮೆ ಮಾಡುವುದು ಕಷ್ಟ. ಮದುವೆಯ ವಯಸ್ಸು ಮತ್ತು ಮಕ್ಕಳ ಸಂಖ್ಯೆ ತಾಯಿ ವಿದ್ಯಾಭ್ಯಾಸದ ಮೇಲೆ ಅವಲಂಬಿಸಿರುತ್ತದೆ. ಇಂದಿಗೂ ನಮ್ಮಲ್ಲಿ ಮಹಿಳೆಯರು ಶೇ.30ರಷ್ಟು ಅನಕ್ಷರಸ್ಥರಾಗಿರುವುದು ದುರಂತವೇ ಸರಿ. ಹಾಗೆಯೇ ನಮ್ಮ ಆರೋಗ್ಯ ನಮ್ಮ ಆಹಾರಪದ್ಧತಿ, ಶುದ್ಧನೀರು, ಆಡುಗೆ ಇಂದನ, ಶುದ್ಧಗಾಳಿ ಮತ್ತು ಪರಿಸರದ ಮೇಲೆ ಹೆಚ್ಚು ಅವಲಂಬಿತವಾಗಿರುತ್ತದೆ. ಕೇವಲ ಪ್ರತಿ ಜಿಲ್ಲೆಯಲ್ಲೂ ಡಯಾಲಿಸಿಸ್ ಯಂತ್ರಗಳನ್ನು ಹಾಕಿದರೆ ಮಾತ್ರ ಸಾಲದು. Tendency towards techno-solutionism is hallmark of our health policy. ಆರೋಗ್ಯನೀತಿಗಿಂತ ಆರೋಗ್ಯಕ್ಕಾಗಿ ನೀತಿ ಬರಬೇಕಾಗಿದೆ.

ಹೊಸ ನೀತಿಯಲ್ಲಿ ಸ್ಥಳೀಯ ಆರೋಗ್ಯ ಪದ್ಧತಿಗಳಾದ ಆಯುರ್ವೇದ, ಯೂನಾನಿ, ಸಿದ್ಧ, ಹೊಮಿಯೋಪತಿಗೂ ಉತ್ತೇಜನ ಕೊಡುವ ಪ್ರಸ್ತಾವನೆ ಉತ್ತಮವೇ.  ಕಾಯಿಲೆಗಳನ್ನು ತಡೆಗಟ್ಟುವ ಪ್ರಸ್ತಾವನೆ ಕೂಡ ತಾತ್ವಿಕವಾಗಿ ಸರಿಯೇ.

ಮೊನ್ನೆ ತಾನೆ ಬಿಡುಗಡೆಯಾದ ಅಂತರರಾಷ್ಟ್ರೀಯ ಮಾನವ ಅಭಿವೃದ್ಧಿ ಸೂಚ್ಯಂಕದ ಪ್ರಕಾರ ಆರೋಗ್ಯವಂತ ದೇಶಗಳ ಪಟ್ಟಿಯಲ್ಲಿ ಭಾರತ 130ರಿಂದ 131ನೇ ಸ್ಥಾನಕ್ಕೆ ಜಾರಿದೆ. This HDI is more important that FDI. ಶ್ರೀಲಂಕಾದೇಶ ಈ ಸೂಚ್ಯಂಕದಲ್ಲಿ 73ನೇ ಸ್ಥಾನದಲ್ಲಿದೆ. ನಮ್ಮ ದೇಶದಲ್ಲಿ ಪ್ರತಿ ವರ್ಷ ಶಿಶುಮರಣದ ಸಂಖ್ಯೆ ಎರಡು ಲಕ್ಷ! ಆದರೆ ಇದು ಯಾವ ರಾಜಕೀಯ ಪಕ್ಷಕ್ಕೂ ವಿಷಯವಲ್ಲ. ಚುನಾವಣಾ ಪ್ರಣಾಳಿಕೆಯಲ್ಲಿ ಕಾಣುವುದಿಲ್ಲ.

ಆರೋಗ್ಯ ಮತ್ತು ಶಿಕ್ಷಣ ಮುಂದೂಡುವ ವಿಷಯಗಳಲ್ಲ. ಕೇವಲ ಜಿಡಿಪಿ ಸೂಚ್ಯಂಕ ಮುಖ್ಯವಲ್ಲ. ಜನರ ಆರೋಗ್ಯ, ನೆಮ್ಮದಿ ನಮ್ಮ ಸರ್ಕಾರಗಳ ಮೊದಲ ಆದ್ಯತೆಯಾಗಲಿ.

**

–ಕೆ.ಸಿ.ರಘು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT