ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇವು ಬೆಲ್ಲದೊಳಿರಲೇನು

Last Updated 24 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಕಾಯಿಲೆ ಎಷ್ಟೆ ಗಂಭೀರವಿರಲಿ, ಯಾವ ಚಿಕಿತ್ಸೆಗೂ ಗಾಂಧೀಜಿ ಒಪ್ಪುತ್ತಿರಲಿಲ್ಲ. ಬೇವಿನ ಎಲೆಯ ಕಷಾಯ ಮತ್ತು ಆಡಿನ ಹಾಲು ಕುಡಿದುಬಿಡುತ್ತಿದ್ದರು. ಮೈಗೆ ಆಗಾಗ ಬೇವಿನ ಎಣ್ಣೆ ಬಳಿದುಕೊಂಡು ಮರದ ಹಲಗೆಗಳ ಮೇಲೆ ಮಲಗಿ ಸೂರ್ಯಸ್ನಾನ ಮಾಡುತ್ತಿದ್ದರು. ಇಂದಿಗೂ ಅಂತಹ ಸರಳತೆಯ ಸಂಗತಿ ವಿಶ್ವಮಾನ್ಯ. ಅವರ ಸಪೂರ ಕಾಯ ಮತ್ತು ಕ್ರಿಯಾಶೀಲ ಬದುಕು ಎಲ್ಲರಿಗೂ ಮಾದರಿ.  ಅವರ ವಾರ್ಧಾ ಆಶ್ರಮಕ್ಕೆ ಹೋಗಿ ನೋಡಿ. ಅವರೇ ನೆಟ್ಟ ಬೇವಿನ ಮರಗಳು ಬೃಹದಾಕಾರ ತಳೆದಿವೆ. ಬೇವಿನ ಎಲೆಯ ಚಟ್ನಿ ಎಂದರೆ ಗಾಂಧೀಜಿಗೆ ಅತ್ಯಂತ ಪ್ರಿಯವಾದ ಭಕ್ಷ್ಯ!

ಥೇರಾವಾದ ಬುದ್ಧಪಂಥೀಯರ ಪ್ರಕಾರ ಒಬ್ಬ ಬುದ್ಧನಿಗೆ ಜ್ಞಾನೋದಯವಾದುದು ಬೇವಿನ ಮರದಡಿಯಲ್ಲಿ! ಅಂದಿನಿಂದ ಇಂದಿನವರೆಗೆ ಎಲ್ಲ ದೇವದೇವಿಯರ ಆಸರೆಯ ತಾಣ ಬೇವಿನ ಮರ. ಎಂತಹ ವಿಪರೀತ ಹವಾಮಾನವಿರಲಿ – ಮಳೆ, ಚಳಿಯ ಉತ್ತುಂಗತೆಗೂ ಕಂಗೆಡದ ಬೇವಿನ ಮರದ ಬಗ್ಗೆ ಮೊಗೆದಷ್ಟೂ ಸಿಕ್ಕೀತು. ಬರೆದಷ್ಟೂ ಕಡಿಮೆಯೇ. ಅದರ ಅಡಿಯಲ್ಲಿ ಸುಳಿದರೇ ಕಾಯಿಲೆ ದೂರ ಎನ್ನುವಷ್ಟು ದಟ್ಟ ನಂಬಿಕೆ ನಮ್ಮದು. ಅದು ಖಂಡಿತ ಸುಳ್ಳಲ್ಲ. ದಕ್ಷಿಣ ಆಫ್ರಿಕೆಗೆ ಬೇವು ಕೊಟ್ಟವರು ನಾವು. ಬ್ರಿಟಿಷ್ ಯುಗದಲ್ಲಿ ಬಾಗಲಕೋಟೆಯ ಬೇವು ಅಲ್ಲಿಗೆ ಹೋಯಿತಲ್ಲ. ಅಲ್ಲಿಯ ಮಂದಿ ನಿತ್ಯ ಹಲ್ಲುಜ್ಜಲು ಬೇವಿ ಕಡ್ಡಿ ಬಳಸಿದರು. ವಿಶ್ವ ಆರೋಗ್ಯ ಸಂಸ್ಥೆಯ ವರದಿಯನ್ವಯ ಬೇವಿನ ಕಡ್ಡಿಯಲ್ಲಿ ಹಲ್ಲು ಶುಚಿಗೊಳಿಸಿದರೆ ಬಾಯಿಯ ಕ್ಯಾನ್ಸರ್ ಕಾಯಿಲೆಗೆ ಕಡಿವಾಣ. ಆದರೆ ನಾವಿಂದು ಬಳಸಲು ಹಿಂದೆ ಮುಂದೆ ನೋಡುತ್ತಿದ್ದೇವೆ. ಜಾಹೀರಾತಿನ ಸುಳಿಯಲ್ಲಿ ಹೈರಾಣಾಗಿದ್ದೇವೆ. ಇನ್ನೊಮ್ಮೆ ಬೇವಿನ ಕಡ್ಡಿಯ ದಂತ ಕೂರ್ಚ (ಬ್ರಷ್) ಆಂದೋಲನಕ್ಕೆ ಇಂದು ಸಕಾಲ. ಶಾಲೆಯಲ್ಲಿ ಇಂತಹ ಸಂಗತಿಗೆ ಒತ್ತು ದೊರಕಲಿ.

ಇಂದು ರಾಸಾಯನಿಕ ಗೊಬ್ಬರ ಬಳಸಿ ಆಹಾರ ವಸ್ತು ಬೆಳೆಯುವ ಯುಗ. ಅಂತಹ ವಸ್ತುಗಳಿಗೆ ಬೇವಿನೆಲೆಯ ನಿಂಬಿಡಿನ್, ನಿಂಬಿಷ್ಟಿನ್ ಬಳಸಿ ಹುಳಹುಪ್ಪಡಿ ಸಾಯಿಸಿದ್ದು ಅಮೆರಿಕೆಯ ಒಬ್ಬ ಭಾರತೀಯ ವಿಜ್ಞಾನಿ. ಅನಂತರ ಅದಕ್ಕೆ ಪೇಟೆಂಟ್ ಪಡೆಯಲು ಹೊರಟದ್ದು 1995ರ ಸುಮಾರಿಗೆ.  ಆಗ ನಡೆದ ಗುಲ್ಲು ಸದ್ದು ಇದೀಗ ಇತಿಹಾಸ. ಧಾನ್ಯಗಳ, ಬೆಳೆಗಳ ರೋಗರುಜಿನ ತಡೆಗೆ ಬೇವಿನೆಲೆ, ಎಣ್ಣೆ ಬಳಸಿದವರು ನಮ್ಮ ಹಿರಿಯರು. ಅಂತಹ ದವಸಧಾನ್ಯ ಬಳಸಿದರೆ ಥೈರಾಯಿಡ್ ಚೋದನಿಕೆ ಏರುಪೇರಾಗದು. ಆರೋಗ್ಯ ಸುಸ್ಥಿತಿಯಲ್ಲಿದ್ದೀತು. ಅದೆಲ್ಲ ಮರೆತು ಇದೀಗ ಹೆಜ್ಜೆ ಹೆಜ್ಜೆಗೆ ಕಾಯಿಲೆ ಮತ್ತು ಆಸ್ಪತ್ರೆಗಳ ಒಳಸುಳಿಗೆ ಒಳಗಾಗುತ್ತಿದ್ದೇವೆ. ಬೇವಿನೆಲೆಯ ಮಹತ್ವ ನಾವೇಕೆ ಮರೆತೆವು? ಹೊಸ ಸಸಿ ಬೆಳೆಸಲೇಕೆ ಮುಂದೆ ಬರುತ್ತಿಲ್ಲ?

ನಮ್ಮೂರಿನ ಮಾರಿ ಹಬ್ಬ, ಜಾತ್ರೆಯ ಸಡಗರವೆಲ್ಲ ಯುಗಾದಿಯಿಂದಲೇ ಆರಂಭ. ಆಗ ಮತ್ತೆ ನಮಗೆ ನೆನಪಾಗುವುದು ಬೇವಿನ ಮರ. ಸಂಸ್ಕೃತಿಯಲ್ಲಿ ಹಾಸುಹೊಕ್ಕಾದ ಬೇವಿನ ಮರವು ಪರಿಸರದ ಹಾನಿಕಾರಕ (ನೆನಪಿಡಿ) ಮಿಣಿಜೀವಿಗಳನ್ನು ನಾಶಪಡಿಸೀತು. ವೈರಾಣು ಪ್ರಸಾರ ತಡೆಗಟ್ಟೀತು. ಹೆಜ್ಜೆ ಹೆಜ್ಜೆಗೆ ಅದನ್ನು ಬಳಸುವ ಪರಿಪಾಠ ನಮ್ಮ ಹಿರಿಯರು ನಮಗುಳಿಸಿದರು. ಜಾತ್ರೆಯ ತೋರಣಕ್ಕೆ, ಮಾರಿಯ ಪೂಜೆಗೆ,  ಮಕ್ಕಳ ಅಮ್ಮ ಕಾಯಿಲೆಯ ಉಪಚಾರ  ಮತ್ತು  ಚಿಕಿತ್ಸೆಗೆ ಅದು ಅಂದು ಬೇಕಿತ್ತು. ಇದೀಗ ಅದೆಲ್ಲ ಮರೆತು ಹೊಸ ಹೊಸ ಕಾಯಿಲೆಯ ಸರಮಾಲೆಗಳಿಗೆ ಲಸಿಕೆಗಳಿಗೆ ದಾಸರಾಗುತ್ತಿದ್ದೇವೆ. ಬೇವು ಮರೆತು ಬೆಲ್ಲದಲ್ಲಿ ಸಿಕ್ಕ ನೊಣಗಳಂಥಾಗಿದೆ ಶ್ರೀಸಾಮಾನ್ಯರ ಪರಿಸ್ಥಿತಿ. ವಿಶ್ವಪ್ರಸಿದ್ಧ ಪುರಿಯ ಜಗನ್ನಾಥನ ರಥ ಯಾತ್ರೆ ತಿಳಿದಿದೆ. ಅಂತಹ ಪ್ರಸಿದ್ಧ ಯಾತ್ರೆಯ ಮೂರ್ತಿ ನಿರ್ಮಾಣಕ್ಕೆ ಮಾತ್ರ ಅಲ್ಲ. ನಮ್ಮೂರಿನ ಪುರದಮ್ಮ, ಹೊಂಗಮ್ಮನ ಮೂರ್ತಿಗೂ ಬೇಕು ಬೇವಿನ ಮರದ ಬೊಡ್ಡೆ. ಅಂತಹ ಮಹತ್ವದ ಮರ ಇಂದು ಮನೆಯ ಚೌಕಟ್ಟಿಗೆ ಕಡಿದು ಪರಿಸರದಲ್ಲಿ ಕಾಣದಾಗಿದೆ.

ಎಲೆ, ಚಿಗುರು, ಬಿಳಿಯ ಹೂವು, ಕಾಯಿ, ಬೀಜ, ಎಣ್ಣೆ, ಕಾಂಡ, ತೊಗಟೆ, ಬೇವಿನ ಬೇರುಗಳೆಲ್ಲವೂ ಮದ್ದಿಗೊದಗುತ್ತವೆ. ಆದರೆ ಬಳಸಲು ವ್ಯವಧಾನ ಬೇಕು. ಉಳಿಸಲು ಛಲ ಬೇಕು. ಉತ್ತರಾಖಂಡದಿಂದ ಕನ್ಯಾಕುಮಾರಿ ಪರ್ಯಂತ ಬೇವು ಬೆಳೆಯದ ಜಾಗವಿಲ್ಲ. ಬಿಸಿಲಿ ಬೇಗೆಗೆ ಬೆಳೆದ ಮರ ಬಾಡುವುದಿಲ್ಲ. ಆದರೆ ಮಳೆ ಹೆಚ್ಚಿರುವ ಕಡೆ ಬೇವಿನ ಬೆಳೆ ಕೊಂಚ ಕಷ್ಟ. ರಾಜ್ಯದ ಕರಾವಳಿಯಲ್ಲಿ ಅದು ಕಡಿಮೆ. ಆದರೂ ಬೇವಿನೆಣ್ಣೆ ಬಳಸಿ ಜಾನುವಾರು ಮತ್ತು ಮನುಷ್ಯರ ಚರ್ಮದ ಕಾಯಿಲೆ ಕಳೆಯುವ ಸಂಗತಿ ಕರಾವಳಿ ಜನರಿಗೂ ಚಿರಪರಿಚಿತ. ಎಣ್ಣೆಗಿರುವ ಗೆದ್ದಲು ನಿರೋಧಕ ಶಕ್ತಿ ಕೂಡ ಅಷ್ಟೆ ಪ್ರಸಿದ್ಧ. ಬೇವಿನ ಮರಗಳ ಇರುನೆಲೆಯ ಜೇನು ಬಹಳ ಬೆಲೆಬಾಳುತ್ತದೆ. ಕೊಂಚ ಕಹಿಯೆನಿಸುವ ಬೇವಿನ ಹೂವಿನ ಜೇನಿಗಿದೆ ಔಷಧೀಯ ಮಹತ್ವ. ಅದು ಕಾಯಿಲೆ ತಡೆಗೆ ಉಪಕಾರಿ.

ಹೊಸ ವರ್ಷದ ಆಚರಣೆಯ ಯುಗಾದಿ ಸಂದರ್ಭದಲ್ಲಿ ಮನೆಯ ತೋರಣಕ್ಕೆ ಬೇವಿನ ರೆಂಬೆಯ ಅಲಂಕಾರ. ನಾಕಾರು ಚಿಗುರುಗಳನ್ನು, ಹೂವನ್ನು ಬೆಲ್ಲದ ಸಂಗಡ ಮೆದ್ದು ಬಿಟ್ಟರೆ ಮುಗಿಯದು ನಮ್ಮ ಆಚಾರ. ಅದು ಕೇವಲ ಒಂದು ಸಾಂಕೇತಿಕ ಆಚರಣೆ. ವಸಂತಋತುವಿನ ಕಫ ಸಂಬಂಧೀ ಕಾಯಿಲೆಗಳಿಗೆ ಕಡಿವಾಣ ಹಾಕಬೇಕೆ? ಬೇವು ಬಳಸಿರಿ. ನಿರೋಗಿಗಳಾಗಿರಿ. ಬೇವಿನ ರಸವನ್ನು ಕುಡಿಸುವ ಪದ್ಧತಿ ಮಹಾರಾಷ್ಟ್ರದಲ್ಲಿ ಇಂದಿಗೂ ರೂಢಿಯಲ್ಲಿದೆ. ವಾಸ್ತವವಾಗಿ ಕಫಸಂಚಯವಾಗದಂತೆ ವಸಂತಋತುವಿನಲ್ಲಿ ವಮನ ಮಾಡಿಸುವ ಸಂಗತಿ ಕೂಡ ಮಹಾರಾಷ್ಟ್ರದ ಒಂದು ಆಚರಣೆ. ಅಲ್ಲಿ ಬೇವಿನ ಎಲೆಯ ಕಷಾಯ, ರಸವನ್ನು ಕುಡಿಸಿ ವಾಂತಿ ಮಾಡಿಸುತ್ತಿದ್ದರು. ಅದು ಇಂದು ಕೇವಲ ಚಮಚೆಯಷ್ಟು ರಸ ಕುಡಿಯಲಷ್ಟೆ ಉಳಿದಿದೆ. ಅಷ್ಟಾದರೂ ಸಾಕು. ಹೊಟ್ಟೆಯ ಜಂತುಹುಳ ನಿವಾರಣೆಗೆ ಬೇವಿನ ರಸ ರಾಮಬಾಣ. ಅಂತಹ ಬೇವನ್ನು ಪ್ರೀತಿಸೋಣ. ಕಾಯಿಲೆ ಕಸಾಲೆಗಳನ್ನು ದೂರ ಇಡೋಣವೆ? ಇಂದಿನ ಯುಗಾದಿಗೆ ಅಂತಹ ಪ್ರತಿಜ್ಞೆ ನಮ್ಮದಾಗಲಿ. ಪರಿಸರದಲ್ಲಿ ಬೇವಿನ ಮರಗಳಿರಲಿ. ಹಿತಮಿತ ಬಳಕೆ ನಮ್ಮದಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT