ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಯಾಲಿಸಿಸ್‌: ಹೊಸ ಹೆಜ್ಜೆ

Last Updated 24 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಕೆಮಿಕಲ್‌ ಟೆಕ್ನಾಲಜಿ (ಐಐಸಿಟಿ)ಯ ವಿಜ್ಞಾನಿಗಳು ವಿಶಿಷ್ಟ ಪೊರೆಯೊಂದನ್ನು  (membrane) ಅಭಿವೃದ್ಧಿಪಡಿಸಿದ್ದಾರೆ. ಇದು ಡಯಾಲಿಸಿಸ್‌ನ ವೆಚ್ಚವನ್ನು ಅರ್ಧದಷ್ಟು ಕಡಿತಗೊಳಿಸಲಿದೆ. ಸದ್ಯದ ಪರಿಸ್ಥಿತಿಯಲ್ಲಿ ಡಯಾಲಿಸಿಸ್‌ ಮಾಡುವ ಸಂದರ್ಭದಲ್ಲಿ ಈ ಪೊರೆಯು ಮಹತ್ವದ ಪಾತ್ರ ನಿರ್ವಹಿಸುತ್ತವೆ ಎಂಬುದು ಅವರ ವಿವರಣೆ.

ಅನೇಕರು ಮೂತ್ರಪಿಂಡಕ್ಕೆ ಸಂಬಂಧಿಸಿದ ಸಮಸ್ಯೆ ಎದುರಿಸುತ್ತಿದ್ದರೂ ದುಬಾರಿ ಎನ್ನುವ ಕಾರಣಕ್ಕೆ ಬದಲಿ ಮೂತ್ರಪಿಂಡ ಜೋಡಿಸಿಕೊಳ್ಳಲು ಮುಂದಾಗುತ್ತಿಲ್ಲ. ಹೀಗಾಗಿಯೇ ಐಐಸಿಟಿಯ ವಿಜ್ಞಾನಿಗಳು ಕಡಿಮೆ ಬೆಲೆಯಲ್ಲಿ ಡಯಾಲಿಸಿಸ್‌ ಮಾಡಿಸಿಕೊಳ್ಳಲು ಸಾಧ್ಯವಾಗುವಂತೆ ವಿಶಿಷ್ಟ ಪೊರೆಯನ್ನು ಸಂಶೋಧನೆ ಮಾಡಿದ್ದಾರೆ. ‘ನಮ್ಮಲ್ಲಿ ಅಭಿವೃದ್ಧಿಪಡಿಸಲಾಗಿರುವ ಈ ಫೈಬರ್‌ ಪೊರೆಯು ಅನಗತ್ಯ ಯೂರಿಯಾ, ಕ್ರಿಯೇಟಿನೈನ್‌ನಂಥ ಟಾಕ್ಸಿನ್‌ ಅಂಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ’ ಎಂದು ಮಾಹಿತಿ ನೀಡುತ್ತಾರೆ ಹಿರಿಯ ವಿಜ್ಞಾನಿ ಎಸ್‌.ಶ್ರೀಧರ್‌.

ದುಬಾರಿ ಎನ್ನುವ ಕಾರಣಕ್ಕೆ ಕೆಲ ಪ್ರಯೋಗಾಲಯಗಳಲ್ಲಿ ಒಂದೇ ಕಿಟ್‌ ಅನ್ನು ಪದೇಪದೆ ಬಳಸಲಾಗುತ್ತದೆ. ಇದರಿಂದ ಹೆಪಟೈಟಿಸ್‌ ಸಿ ಉಂಟಾಗುವ ಸಾಧ್ಯತೆಯೂ ಇದೆ. ‘ಒಂದು ವೇಳೆ ಡಯಾಲಿಸಿಸ್‌ ಬೆಲೆ ಅರ್ಧದಷ್ಟು ಕಡಿಮೆ ಆದರೆ ಹೆಚ್ಚಿನವರಿಗೆ ಚಿಕಿತ್ಸೆ ಪಡೆಯುವುದು ಸುಲಭವಾಗುತ್ತದೆ. ಅಲ್ಲದೆ ಒಂದೇ ಕಿಟ್‌ ಅನ್ನು ಪದೆಪದೆ ಬಳಸುವುದು ತಪ್ಪುತ್ತದೆ’ ಎಂದೂ ವಿಜ್ಞಾನಿಗಳು ಹೇಳಿಕೊಂಡಿದ್ದಾರೆ. 

ಸದ್ಯ ಆಮದು ಮಾಡಿಕೊಳ್ಳಲಾಗುತ್ತಿರುವ ಈ ಪೊರೆಗಳ ಬೆಲೆ ₹700 ಇದೆ. ಐಐಸಿಟಿಯ ಈ ಉತ್ಪನ್ನ ₹150– ₹200 ಬೆಲೆಯಲ್ಲಿ ಸಿಗುವಂತೆ ಮಾಡಬಹುದಾಗಿದೆ. ತಮ್ಮ ಈ ಸಂಶೋಧನೆಗೆ ಐಐಸಿಟಿ ಪೇಟೆಂಟ್‌ಗೆ ಅರ್ಜಿ ಸಲ್ಲಿಸಿದ್ದು, ಅಧಿಕ ಉತ್ಪಾದನೆಗಾಗಿ ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ಯೋಜನೆ ಹಾಕಿಕೊಂಡಿದೆ. ಇದು ಸಾಧ್ಯವಾದರೆ ಮುಂದಿನ ದಿನಗಳಲ್ಲಿ ಡಯಾಲಿಸಿಸ್‌ ರೋಗಿಗಳು ಖರ್ಚಿನ ವಿಷಯದಲ್ಲಿ ತುಸು ನಿರಾಳರಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT