ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಮೇಶ್‌ ಮಾಡ್ತಾರಾ ಕನ್ನಡದ ‘ಶೆರ್ಲಾಕ್‌ ಹೋಮ್ಸ್‌’?

Last Updated 24 ಮಾರ್ಚ್ 2017, 19:30 IST
ಅಕ್ಷರ ಗಾತ್ರ

* ರಮೇಶ್‌ಜಿ, ‘ಪುಷ್ಪಕ ವಿಮಾನ’  ಕನ್ನಡದ ಮಟ್ಟಿಗೆ ಹೊಸ ಭಾಷ್ಯ ಬರೆದ ಸಿನಿಮಾ. ನಿಮ್ಮ ಅಭಿಮಾನಿಗಳಿಗೆ ಮುಂದಿನ ಅಚ್ಚರಿ ಏನು?

ಕರೆಕ್ಟಾಗಿ ಕೇಳಿದ್ರಿ. ರಮೇಶ್‌ ಸಿನಿಮಾ ಮಾಡಿದ್ರೆ ಏನಾದರೂ ಹೊಸದಿರುತ್ತೆ ಅನ್ನೋ ನಿರೀಕ್ಷೆ ಇದೆಯಲ್ಲ. ಅದಕ್ಕಾಗಿಯೇ ನಾನು ಗಂಭೀರವಾಗಿ ಚಿಂತನೆ ಮಾಡಿ ಪ್ರಾಜೆಕ್ಟ್‌ ರೂಪಿಸುತ್ತೇನೆ. ನೀವೇ ಹೇಳಿದಂತೆ, ರಮೇಶ್‌ ಸುಮ್ಮನೆ ಕೂರಲಾಗದಿರುವುದಕ್ಕೂ ಇದೇ ಕಾರಣ.

ನಾನು ಬಹುತೇಕ ಎಲ್ಲಾ ಬಗೆಯ ಪಾತ್ರಗಳನ್ನೂ ಮಾಡಿದ್ದೇನೆ. ಆ್ಯಕ್ಷನ್‌ ಮತ್ತು ಪತ್ತೇದಾರಿ ಮಾತ್ರ ಉಳಿದಿದೆ. ಅದನ್ನೊಂದು ಮಾಡಿ ಮುಗಿಸಬೇಕು ಎಂದಿದ್ದೇನೆ. ಅದರಲ್ಲೂ ಪತ್ತೇದಾರಿ ಪಾತ್ರ ಮಾಡಬೇಕು ಅಂತ ಇದ್ದೀನಿ.

* ಪತ್ತೇದಾರಿ ಅಂದರೆ?

ಕನ್ನಡದಲ್ಲಿ ಹಲವು ಬಗೆಯ ಚಿತ್ರಗಳು ಪಾತ್ರಗಳು ಬಂದುಹೋಗಿವೆ. ಕತೆ, ಕಾದಂಬರಿಗಳೂ ಸಿನಿಮಾಗಳಾಗಿವೆ. ಆದರೆ ಈ ಶೆರ್ಲಾಕ್‌ ಹೋಮ್ಸ್‌ ಅನ್ನೋ ಪತ್ತೇದಾರಿ ಇದ್ದಾನಲ್ಲ ಅವನನ್ನು ಯಾರೂ ಕನ್ನಡಕ್ಕೆ ತಂದಿಲ್ಲ. ನಾನ್ಯಾಕೆ ಕನ್ನಡದ ಶೆರ್ಲಾಕ್‌ ಹೋಮ್ಸ್‌ ಮಾಡಬಾರದು ಎಂಬ ವಿಚಾರ ತಲೆಯಲ್ಲಿದೆ.

ಕಳೆದ ಬಾರಿಯೂ ‘ವೀಕೆಂಡ್‌ ವಿತ್‌ ರಮೇಶ್‌’ ಮಾಡುವಾಗಲೇ ‘ಪುಷ್ಪಕ ವಿಮಾನ’ದ ಪ್ರಾಜೆಕ್ಟ್‌ ನಡೆದಿತ್ತು. ಈ ಸಲವೂ ಅಷ್ಟೇ  ‘ವೀಕೆಂಡ್‌’ನ ಮೂರನೇ ಋತು ಮುಗಿಯುವ ಹೊತ್ತಿಗೆ ‘ಶೆರ್ಲಾಕ್‌’ನನ್ನು   ರೆಡಿ ಮಾಡಬೇಕೆಂದಿದ್ದೇನೆ. ನೋಡೋಣ.

* ಅದರ ಬಗ್ಗೆ ಏನಾದರೂ ವರ್ಕ್‌ ಮಾಡಿದ್ದೀರಾ?

ವರ್ಕ್‌ ಅಂತ ಸೀರಿಯಸ್‌ ಆಗಿ ಮಾಡಿಲ್ಲ. ಅದರೆ ಒಂದು ಸ್ಪಷ್ಟವಾದ ಪರಿಕಲ್ಪನೆ ನನ್ನಲ್ಲಿದೆ. ಇತ್ತೀಚೆಗೆ ಶೆರ್ಲಾಕ್‌ ಹೋಮ್ಸ್‌ ಬಗ್ಗೆ ಟಿ.ವಿಯಲ್ಲಿ ಒಂದು ಸರಣಿ  ಬರ್ತಿದೆ. ಇಂಗ್ಲಿಷ್‌ನಲ್ಲಿದೆ ಅದು. ತುಂಬಾ ಇಂಟರೆಸ್ಟಿಂಗ್‌ ಆಗಿದೆ.  ಹಳೆಯ ಶೆರ್ಲಾಕ್ ಜಾಣ್ಮೆ, ವಾಕ್ಚಾತುರ್ಯ, ಬುದ್ಧಿಮತ್ತೆಯಿಂದ ಅವನು ಕೇಸ್‌ಗಳನ್ನು ಪರಿಹರಿಸುತ್ತಾ ಹೋಗ್ತಾನೆ. ಅದು ಕನ್ನಡದ ಮಟ್ಟಿಗೆ ಹೊಸ ಪ್ರಯತ್ನವಾಗುತ್ತದೆ. ಅದು ನನ್ನನ್ನು ತುಂಬಾ ಸೆಳೆದಿದೆ. ಮಾಡಲೇಬೇಕು ಅಂದುಕೊಂಡಿದ್ದೇನೆ. ನೋಡೋಣ. ಏನಾಗುತ್ತೋ... ಸಮಯ ಹೇಳಬೇಕು.

* ನೀವು ಯಾವಾಗಲೂ ಲವಲವಿಕೆಯಿಂದ ಇರುತ್ತೀರಲ್ಲ?

ಅದು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಒಂದು ಗುಣ ಆಗಿರಬೇಕು ಎಂಬುದು ನನ್ನ ಪ್ರತಿಪಾದನೆ. ಯಾಕೆಂದರೆ ಲವಲವಿಕೆಯಾಗಿದ್ದರೆ ನಮ್ಮನ್ನು ಜನ ಇಷ್ಟಪಡ್ತಾರೆ. ಎದುರಿಗಿದ್ದ ವ್ಯಕ್ತಿಯನ್ನು ಅನುಮಾನಿಸ್ತಾ, ಸಂಶಯಪಡುವಂತೆ ನಡ್ಕೋತಾ ಇದ್ದರೆ  ಬೋರ್‌ ಅನಿಸಿಬಿಡುತ್ತದೆ. ಇಲ್ಲದಿದ್ದರೆ ನಮ್ಮ ಆತ್ಮವಿಶ್ವಾಸ ಕಳೆದುಕೊಂಡಂತೆ ಆಗುತ್ತದೆ.

ನನ್ನ ಮಟ್ಟಿಗೆ ಹೇಳಬೇಕಾದರೆ,  ಲವಲವಿಕೆಯಿಂದ ಇರೋದು ನನ್ನ ಸ್ವಭಾವ. ನಾನು ಯಾವಾಗಲೂ ವಾಸ್ತವದಲ್ಲಿ ಬದುಕುತ್ತೇನೆ. ಅಂದರೆ ನನ್ನ ಮುಂದೆ ಯಾರಿದ್ದಾರೋ ಅವರೇ ಜಗತ್ತು ಅಂದ್ಕೊಂಡುಬಿಡ್ತೀನಿ. ಆ ಕ್ಷಣವನ್ನು ಖುಷಿಯಾಗಿ ಕಳೀತೀನಿ. ನನ್ನ ಲವಲವಿಕೆಯ ಗುಟ್ಟು ಅದೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT