ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಂಚತತ್ವ’ದಲ್ಲಿ ಕಾವ್ಯ, ಸಂಗೀತ, ದೃಶ್ಯ ಸಮಾಗಮ

Last Updated 24 ಮಾರ್ಚ್ 2017, 19:30 IST
ಅಕ್ಷರ ಗಾತ್ರ

* ಪಂಚತತ್ವ ಪರಿಕಲ್ಪನೆ ಮೂಡಿದ್ದು ಹೇಗೆ?
ಇದು ನನ್ನ ರಕ್ತದಲ್ಲೇ ಮೂಡಿ ಬಂದಿದೆ. ನನ್ನ ತಾತ ಖ್ಯಾತ ಚಿತ್ರ ನಿರ್ದೇಶಕ ವಿ.ಶಾಂತಾರಾಂ. ತಂದೆ ಪ್ರಖ್ಯಾತ ಹಿಂದೂಸ್ತಾನಿ ಗಾಯಕ ಪಂಡಿತ್ ಜಸ್‌ರಾಜ್‌. ಮನೆಯ ಸಾಂಸ್ಕೃತಿಕ ಪರಿಸರ ನನ್ನಲ್ಲಿ ಹೊಸ ಹೊಳಹುಗಳನ್ನು ಸೃಜಿಸಿತು. ಶಬ್ದ ಹಾಗೂ ದೃಶ್ಯಗಳ ಸೂಕ್ತ ಸಂಯೋಜನೆಯಿಂದ ಒಂದು ಅದ್ಭುತವನ್ನು ಸಾಧಿಸಬಹುದು  ಎಂಬುದನ್ನು ಈ 10–15 ವರ್ಷಗಳ ಸಂಗೀತ ಯಾನದಲ್ಲಿ ಕಂಡುಕೊಂಡೆ.

ಪಂಚಭೂತಗಳಾದ ಅಗ್ನಿ, ಜಲ, ವಾಯು, ಆಕಾಶ ಮತ್ತು ಪೃಥ್ವಿಗಳನ್ನು ಬಳಸಿಕೊಂಡು ಸಂಗೀತವನ್ನು ಸೃಜನಾತ್ಮಕವಾಗಿ ಪ್ರಸ್ತುತಪಡಿಸುವುದು ಇದರ ಒಟ್ಟಾರೆ ಹೂರಣ. ಸುಸ್ಥಿರ ಬದುಕಿನ ಸೆಲೆ ಹುಟ್ಟಿದ್ದು ಹೀಗೆ.

* ಪಂಚತತ್ವ ಸಂಗೀತ ಕಾರ್ಯಕ್ರಮ ಎಲ್ಲೆಲ್ಲಿ ನಡೆದಿದೆ. ಜನರ ಸ್ಪಂದನೆ ಹೇಗಿದೆ?

ಹೈದರಾಬಾದ್‌ನಿಂದ ಆರಂಭವಾಗಿ ಪುಣೆ, ಮುಂಬೈ, ಜೈಪುರಗಳಲ್ಲಿ ಝೇಂಕರಿಸಿ ಈಗ ಬೆಂಗಳೂರಿಗೆ ಬಂದಿದೆ. ಬೆಂಗಳೂರಿನಲ್ಲಿ ಎರಡನೇ ಬಾರಿ ಈ ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ.  ವಿಶಿಷ್ಟ ಪರಿಭಾಷೆಯ ಸಂಗೀತಕ್ಕೆ ಜನರು ಹಾತೊರೆಯುವುದನ್ನು ಕಂಡು  ನನ್ನ ಯತ್ನ ಸಾರ್ಥಕ ಎನಿಸುತ್ತಿದೆ.

* ಪಂಚತತ್ವಕ್ಕೆ ಬೆಂಗಳೂರನ್ನು ಆಯ್ಕೆ ಮಾಡಿಕೊಂಡಿದ್ದು ಏಕೆ?

ನಮ್ಮ ದೇಶಕ್ಕೆ ಬೆಂಗಳೂರು ಸಂಗೀತ ಹಾಗೂ ಸಾಂಸ್ಕೃತಿಕ ರಾಜಧಾನಿ. ಶಾಸ್ತ್ರೀಯ ಸಂಗೀತದ ದಿಗ್ಗಜರೇ ಇಲ್ಲಿದ್ದಾರೆ. ಪ್ರವೀಣ್ ಗೋಡ್ಖಿಂಡಿ, ಅಮೃತ್ ಸೇರಿದಂತೆ ಹಲವು ಪ್ರತಿಭೆಗಳಿವೆ. ಪಾಶ್ಚಾತ್ಯ ಸಂಸ್ಕೃತಿ ಬಿಂಬಿಸುವ ರಾಕ್ ಮ್ಯೂಸಿಕ್‌ನ ಒಡ್ಡೋಲಗವೇ ಇದೆ. ಒಂದು ಊರು ಸಾಂಸ್ಕೃತಿಕವಾಗಿ ತನ್ನತನ ಉಳಿಸಿಕೊಳ್ಳುವ ಪರಿ ಇದು. ಯಾವುದೇ ಕಲಾವಿದನಿಗೆ ಬೆಂಗಳೂರಿನಲ್ಲಿ ಸಂಗೀತ ಕಾರ್ಯಕ್ರಮ ನೀಡುವುದು ಹೆಮ್ಮೆಯ ಸಂಗತಿ.

* ಈ ಬಾರಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಪಂಚತತ್ವದ ವೈಶಿಷ್ಟ್ಯ ಏನು?

ಬೆಂಗಳೂರಿನವರೇ ಆದ ಕೊಳಲು ವಿದ್ವಾಂಸ ಪ್ರವೀಣ್ ಗೋಡ್ಖಿಂಡಿ ಹಾಗೂ ಖಂಜಿರಾದಲ್ಲಿ ದೊಡ್ಡ ಹೆಸರು ಮಾಡಿರುವ  ಅಮೃತ್ ನಟರಾಜ್ ಅವರು ಈ ಬಾರಿ ಪಂಚತತ್ವ ತಂಡದ ಪ್ರಮುಖ ಆಕರ್ಷಣೆ. ಗೋಡ್ಖಿಂಡಿ ಅವರು ವಾಯು ಹಾಗೂ ಅಮೃತ್ ಅವರು ಅಗ್ನಿ ಪರಿಕಲ್ಪನೆಗಳನ್ನು ಸಂಗೀತದ ಮೂಲಕ ಪ್ರಸ್ತುತಪಡಿಸಲಿದ್ದಾರೆ.

* ನೀವು ಸಂಗೀತಗಾರ್ತಿ, ನಟಿ, ಟಿ.ವಿ ಕಾರ್ಯಕ್ರಮ ಹೋಸ್ಟ್ ಮಾಡಿದ್ದೀರಿ. ಆರ್ಟ್ ಅಂಡ್ ಆರ್ಟಿಸ್ಟ್ ಎಂಬ ಸಂಸ್ಥೆ ಮುನ್ನಡೆಸುತ್ತಿದ್ದೀರಿ. ಎಲ್ಲವನ್ನೂ ಹೇಗೆ ನಿಭಾಯಿಸುತ್ತೀರಿ?

ನಾನು ಮೂಲತಃ ಸಂಗೀತಗಾರ್ತಿ. ಇದು ತಂದೆಯಿಂದ ಬಂದ ಬಳುವಳಿ. ಕೆಲಸ ಎಂದುಕೊಂಡರೆ ಎಲ್ಲವೂ ಕಷ್ಟ. ತುಂಬು ಹೃದಯದಿಂದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಯಾವುದೂ ಒತ್ತಡ ಎನಿಸಿಲ್ಲ. ನನ್ನೆಲ್ಲಾ ಪ್ರಯತ್ನಗಳಿಗೆ ಶಾಸ್ತ್ರೀಯ ಸಂಗೀತವೇ ಪ್ರೇರಣೆ.

* ಪಂಡಿತ್‌ ಜಸ್‌ರಾಜ್‌ ಹೇಗಿದ್ದಾರೆ? ಅವರ ಸಂಗೀತವನ್ನು ಈ ಬಾರಿ ಬೆಂಗಳೂರಿಗರು ಆಸ್ವಾದಿಸಬಹುದೇ?

ದೇವರ ದಯೆ, ಚೆನ್ನಾಗಿದ್ದಾರೆ. ಅವರು ಈಗಾಗಲೇ ಹೈದರಾಬಾದ್ ಹಾಗೂ ಪುಣೆಯಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಹೀಗಾಗಿ ಬೆಂಗಳೂರಿಗೆ ಬರುತ್ತಿಲ್ಲ. ಇಲ್ಲಿನ ಕಲಾವಿದರ ಜತೆ ಉಸ್ತಾದ್ ರಶೀದ್ ಖಾನ್, ಶುಭಂಕರ ಬ್ಯಾನರ್ಜಿ, ತೌಫೀಕ್ ಖುರೇಷಿ, ಪೂರ್ವಾಯನ ಚಟರ್ಜಿ ಮೊದಲಾದವರು ರಸದೌತಣ ನೀಡಲು ಸಜ್ಜಾಗಿದ್ದಾರೆ.

* ನಿಮಗೀಗ 51 ವರ್ಷ. ನಿಮ್ಮ ಫಿಟ್‌ನೆಸ್‌ ಹಾಗೂ ಸೌಂದರ್ಯದ ಗುಟ್ಟು ಏನು?

ಮುಂಬೈನಲ್ಲಿದ್ದಾಗ ದಿನವೂ ಎರಡು ಗಂಟೆ ವರ್ಕೌಟ್ ಮಾಡುತ್ತೇನೆ. ಇಷ್ಟದ ಆಹಾರ ತಿಂದರೂ, ಡಯೆಟ್ ತಪ್ಪಿಸುವುದಿಲ್ಲ. ತಂದೆ ಜಸ್‌ರಾಜ್ ಕೂಡಾ ನನ್ನೊಂದಿಗೆ ವಾಕಿಂಗ್‌ಗೆ ಬರುತ್ತಾರೆ. ತಂದೆಯೇ ನನ್ನ ಜೀವನೋತ್ಸಾಹದ  ದೊಡ್ಡ ಶಕ್ತಿ.

ಕಾರ್ಯಕ್ರಮದ ಭದ್ರತಾ ತಪಾಸಣೆ ಸೇರಿದಂತೆ­­ ದುರ್ಗಾ ಅವರ ಸಂಸ್ಥೆಯ ಬಗ್ಗೆ ಮಾಹಿತಿಗೆ ಭೇಟಿ ನೀಡಿ.

www.facebook.com/ArtandArtistes

***

ಉತ್ಸಾಹದ ಚಿಲುಮೆ ದುರ್ಗಾ ಜಸ್‌ರಾಜ್
ಐವತ್ತರ ಹರೆಯದ ದುರ್ಗಾ ಜಸ್‌ರಾಜ್ ಅವರು ಹಿಂದೂಸ್ತಾನಿ ಸಂಗೀತದಲ್ಲಿ ಬಿಗಿಪಟ್ಟು ಸಾಧಿಸಿದವರು. ಸಂಗೀತ ಸಂಬಂಧಿ ಕ್ಷೇತ್ರಗಳಲ್ಲಿ ಹೊಸತನ್ನು ವಿಸ್ತರಿಸುವ ಹಂಬಲವುಳ್ಳವರು.

ಆರ್ಟ್ ಅಂಡ್ ಆರ್ಟಿಸ್ಟ್ಸ್ ಹಾಗೂ ಇಂಡಿಯನ್ ಮ್ಯೂಸಿಕ್ ಅಕಾಡೆಮಿಯ ಸಂಸ್ಥಾಪಕರು. ಅಸೋಚಾಂನ ಸಾಂಸ್ಕೃತಿಕ ಸಮಿತಿಯ ಮುಖ್ಯಸ್ಥೆ, ಕೇಂದ್ರ ಚಲನಚಿತ್ರ ಪ್ರಮಾಣಪತ್ರ ಮಂಡಳಿ (ಸಿಬಿಎಫ್‌ಸಿ) ಸದಸ್ಯೆ ಅವರು. ಐಡಿಯಾ ಜಲ್ಸಾ, ತಿರಂಗಾ, ಪಂಚತತ್ವ– ಅವರ ಮಹತ್ವದ ಪರಿಕಲ್ಪನೆಗಳು.

‘ಪಂಚತತ್ವ’ಕ್ಕೂ ಮೊದಲು ರೂಪಿಸಿದ್ದ ‘ಐಡಿಯಾ ಜಲ್ಸಾ’ ಕಾರ್ಯಕ್ರಮವನ್ನು ದೇಶದ ಸುಮಾರು 30 ಕೋಟಿ ಜನರು ಆನಂದಿಸಿದ್ದಾರೆ ಎಂಬುದು ದುರ್ಗಾ ಅವರ ವಿವರಣೆ.

‘ತಿರಂಗಾ’ ಎಂಬ, ರಾಷ್ಟ್ರಧ್ವಜದ ಶ್ರೇಷ್ಠತೆ ಸಾರುವ ಕಾವ್ಯಾತ್ಮಕ ಸಂಗೀತ ರೂಪಕವನ್ನು ಸಂಸತ್ತಿನಲ್ಲಿ ಅಂದಿನ ರಾಷ್ಟ್ರಪತಿ ಡಾ.ಅಬ್ದುಲ್ ಕಲಾಂ ಹಾಗೂ ಪ್ರಧಾನಿಯಾಗಿದ್ದ ಅಟಲ್‌ ಬಿಹಾರಿ ವಾಜಪೇಯಿ ಎದುರು ಪ್ರಸ್ತುತಪಡಿಸಲಾಗಿತ್ತು. ಎರಡೂ ಕಾರ್ಯಕ್ರಮಗಳು ಲಿಮ್ಕಾ ದಾಖಲೆಗೆ ಪಾತ್ರವಾದವು. ಜಗತ್ತಿನಾದ್ಯಂತ ಸುಮಾರು 300 ಸಂಗೀತ ಕಾರ್ಯಕ್ರಮಗಳನ್ನು ನೀಡಿದ ಹೆಗ್ಗಳಿಕೆ ದುರ್ಗಾ ಅವರದ್ದು.

***

ಪಂಚತತ್ವ ಪ್ರಸ್ತುತಿ: ಪೃಥ್ವಿ– ಉಸ್ತಾದ್ ರಶೀದ್ ಖಾನ್, ಜಲ– ಪೂರ್ವಾಯನ ಚಟರ್ಜಿ, ಅಗ್ನಿ– ತೌಫಿಕ್ ಖುರೇಷಿ, ಶುಭಂಕರ ಬ್ಯಾನರ್ಜಿ, ಶ್ರೀಧರ ಪಾರ್ಥಸಾರಥಿ, ಬೆಂಗಳೂರು ಅಮೃತ್ ಎನ್., ಆಕಾಶ– ರತನ್ ಮೋಹನ್ ಶರ್ಮಾ ಮತ್ತು ಅಂಕಿತಾ ಜೋಷಿ, ವಾಯು– ಪ್ರವೀಣ್ ಗೋಡ್ಖಿಂಡಿ ಮತ್ತು ಶಶಾಂಕ್ ಸುಬ್ರಹ್ಮಣ್ಯಂ, ಕಾವ್ಯ– ದುರ್ಗಾ ಜಸ್‌ರಾಜ್, ಶನಿವಾರ ಸಂಜೆ 6.30. ಸ್ಥಳ– ಒರಾಯನ್ ಮಾಲ್, ರಾಜಾಜಿನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT