ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲು ತೂರಾಟ–ಲಾಠಿ ಪ್ರಹಾರ: 34 ಜನರ ಬಂಧನ

ರಾಜಕುಮಾರ’ ಚಲನಚಿತ್ರ ಪ್ರದರ್ಶನ
Last Updated 24 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಟ ಪುನೀತ್ ರಾಜಕುಮಾರ್‌ ಅಭಿನಯದ ‘ರಾಜಕುಮಾರ’ ಚಲನಚಿತ್ರ ಪ್ರದರ್ಶನಕ್ಕೆ ಆಗ್ರಹಿಸಿ ಗುರುವಾರ ರಾತ್ರಿ ಹೊಸಪೇಟೆ ನಗರದ ಎರಡು ಚಿತ್ರಮಂದಿರಗಳ ಬಳಿ ದಾಂದಲೆ ನಡೆಸಿದ 34 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಹೊಸಪೇಟೆಯ ‘ಬಾಲಾ’ ಹಾಗೂ ‘ಸರಸ್ವತಿ’ ಚಿತ್ರಮಂದಿರಗಳಲ್ಲಿ ಶುಕ್ರವಾರ ಬೆಳಿಗ್ಗೆ ಚಿತ್ರ ಪ್ರದರ್ಶನಕ್ಕೆ ಸಮಯ ನಿಗದಿಯಾಗಿತ್ತು. ಆದರೆ, ಗುರುವಾರ ರಾತ್ರಿ 11 ಗಂಟೆ ಸುಮಾರಿಗೆ ನಗರದ ವಿವಿಧ ಬಡಾವಣೆಗಳ ಬಂದ ನೂರಾರು ಜನರು ಎರಡೂ ಚಿತ್ರಮಂದಿರಗಳ ಎದುರು ಜಮಾಯಿಸಿದರು. ಪುನೀತ್‌ ರಾಜಕುಮಾರ್‌ ಪರ ಜಯಘೋಷ ಕೂಗಿದರು. ಅವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿ, ಕುಣಿದು ಕುಪ್ಪಳಿಸಿದರು. ಮಧ್ಯರಾತ್ರಿ 12 ಗಂಟೆವರೆಗೆ ಅಲ್ಲಿಯೇ ಇದ್ದ ಜನರು, ಬಳಿಕ ಚಲನಚಿತ್ರ ಪ್ರದರ್ಶಿಸುವಂತೆ  ಆಗ್ರಹಿಸಿದರು.

ಇದಕ್ಕೆ ಒಪ್ಪದ ಚಿತ್ರಮಂದಿರದ ಸಿಬ್ಬಂದಿ, ‘ಯಾವುದೇ ಕಾರಣಕ್ಕೂ ಈಗ ಚಿತ್ರ ಪ್ರದರ್ಶನ ಮಾಡಲು ಆಗುವುದಿಲ್ಲ. ಬೆಳಿಗ್ಗೆ ನಡೆಯಲಿರುವ ಆಟಕ್ಕೆ ಬನ್ನಿ’ ಎಂದರು. ಆದರೆ ಚಿತ್ರ ಪ್ರದರ್ಶನಕ್ಕೆ ಪಟ್ಟು ಹಿಡಿದು ಜನರು ಬಳಿಕ ದಾಂದಲೆ ಶುರು ಮಾಡಿದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಾಲಾ’ ಚಿತ್ರಮಂದಿರದ ಗೇಟ್‌ ಮುರಿದು, ಒಳಗೆ ನುಗ್ಗಲು ಪ್ರಯತ್ನಿಸಿದರು. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ವಾತಾವರಣ ತಿಳಿಗೊಳಿಸಲು ಪ್ರಯತ್ನಿಸಿದರು. ಆದರೆ, ಜನರು ಸುಮ್ಮನಾಗಲಿಲ್ಲ. ನಂತರ ಚಿತ್ರಮಂದಿರ ಹಾಗೂ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು. ಘಟನೆಯಲ್ಲಿ ಎ.ಎಸ್‌.ಐ. ಕೃಷ್ಣ ನಾಯ್ಕ ಹಾಗೂ ಕಾನ್‌ಸ್ಟೆಬಲ್‌ ಅಂಜಿನಿ ನಾಯ್ಕ ಅವರಿಗೆ ಗಾಯಗಳಾಗಿವೆ. ಚಿತ್ರಮಂದಿರದ ಗಾಜುಗಳು ಪುಡಿಪುಡಿಯಾಗಿವೆ.

ಅಷ್ಟೇ ಅಲ್ಲ, ಹಂಪಿ ರಸ್ತೆಯ ಬದಿ ವಿದ್ಯುತ್‌ ದೀಪಗಳಿಗೂ ಕಲ್ಲಿನಿಂದ ಹೊಡೆದು ಹಾನಿಗೊಳಿಸಿದರು. ಇದೇ ವೇಳೆ ಸರ್ಕಾರಿ ಬಸ್ಸುಗಳನ್ನು ಸುಮಾರು ಎರಡು ತಾಸು ತಡೆಹಿಡಿದರು. ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಪೊಲೀಸರು, ಲಾಠಿ ಪ್ರಹಾರ ನಡೆಸಿ ಜನರನ್ನು ಚದುರಿಸಿದರು.

‘ಮಧ್ಯರಾತ್ರಿ ಚಿತ್ರ ಪ್ರದರ್ಶನ ಮಾಡಬೇಕೆಂದು ಒತ್ತಾಯಿಸಿ ಕಿಡಿಗೇಡಿಗಳು ಶಾಂತಿ ಭಂಗ ಮಾಡಲು ಪ್ರಯತ್ನಿಸಿದರು. ಅಷ್ಟೇ ಅಲ್ಲ, ಪೊಲೀಸರ ಮೇಲೆ ಕಲ್ಲು ತೂರಿದರು. ಇದರಿಂದಾಗಿ ಅನಿರ್ವಾಯವಾಗಿ ಲಾಠಿ ಪ್ರಹಾರ ಮಾಡಬೇಕಾಯಿತು. ಬಂಧಿಸಿರುವ 34 ಜನರನ್ನು  ಬಳ್ಳಾರಿ ಜೈಲಿಗೆ ಕಳುಹಿಸಲಾಗಿದ್ದು, ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ’ ಎಂದು ಇನ್‌ಸ್ಪೆಕ್ಟರ್‌ ಮೃತ್ಯುಂಜಯ   ತಿಳಿಸಿದರು.

ಪೊಲೀಸ್‌ ಭದ್ರತೆಯಲ್ಲಿ ಚಿತ್ರ ಪ್ರದರ್ಶನ: ‘ಬಾಲಾ’ ಹಾಗೂ ‘ಸರಸ್ವತಿ’ ಚಿತ್ರಮಂದಿರಗಳಲ್ಲಿ ಶುಕ್ರವಾರ ಬೆಳಿಗ್ಗೆ 8.45ಕ್ಕೆ ‘ರಾಜಕುಮಾರ’ ಚಿತ್ರವು ಬಿಗಿ ಪೊಲೀಸ್‌ ಬಂದೋಬಸ್ತ್‌ನಲ್ಲಿ ಪ್ರದರ್ಶನ ಕಂಡಿತು.

ಬಳ್ಳಾರಿಯಲ್ಲೂ ಗಲಾಟೆ: ಕನ್ನಡದ ‘ರಾಜಕುಮಾರ’ ಹಾಗೂ ತೆಲುಗಿನ ‘ಕಾಟಮರಾಯುಡು’ ಸಿನಿಮಾ ನೋಡುವ ಸಲುವಾಗಿ ಗುರುವಾರ ಮಧ್ಯರಾತ್ರಿಯೇ ನೆರೆದಿದ್ದ ಅಭಿಮಾನಿಗಳು ಬಳ್ಳಾರಿಯಲ್ಲಿ ಚಿತ್ರಮಂದಿರಗಳಿಗೆ ನುಗ್ಗಿ ದಾಂದಲೆ ನಡೆಸಿದ್ದಾರೆ ‘ರಾಜಕುಮಾರ’ ಚಲನಚಿತ್ರವನ್ನು ಮಧ್ಯರಾತ್ರಿಯೇ ಪ್ರದರ್ಶಿಸಬೇಕೆಂದು ಒತ್ತಾಯಿಸಿ ಇಲ್ಲಿಯ ‘ಶಿವ’ ಚಿತ್ರಮಂದಿರದ ಗೇಟ್‌ ಮುರಿದು ಒಳನುಗ್ಗಿದ ಯುವಕರ ಗುಂಪು ದಾಂದಲೆ ನಡೆಸಿದೆ.

‘ಗೇಟು ಮುರಿದು ಮಧ್ಯರಾತ್ರಿಯೇ ನುಗ್ಗಿದ ಅಭಿಮಾನಿಗಳು, ಕೂಡಲೇ ಪ್ರದರ್ಶನವನ್ನು ಆರಂಭಿಸಬೇಕು ಎಂದು ಪಟ್ಟುಹಿಡಿದರು. ಹೀಗಾಗಿ ಪ್ರದರ್ಶನ ಆರಂಭಿಸಲೇಬೇಕಾಯಿತು. ಹುಚ್ಚೆದ್ದ ಅಭಿಮಾನಿಗಳು ಮಂದಿರದ ಹಲವು ವಸ್ತುಗಳಿಗೆ ಹಾನಿ ಮಾಡಿದ್ದಾರೆ. ಆದರೆ ಪ್ರದರ್ಶನಕ್ಕೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ, ಇದ್ದ ಅಲ್ಪ ಅವಧಿಯಲ್ಲೇ ಎಲ್ಲವನ್ನೂ ಸರಿಪಡಿಸಿದೆವು’ ಎಂದು ‘ಶಿವ’ ಹಾಗೂ ‘ನಟರಾಜ’ ಚಿತ್ರಮಂದಿರದ ಮಾಲೀಕ ಲಕ್ಷ್ಮಿಕಾಂತ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ಕಲ್ಲು ತೂರಾಟ: ಪುನೀತ್ ರಾಜಕುಮಾರ್‌ ಅಭಿನಯದ ‘ರಾಜಕುಮಾರ’ ಸಿನಿಮಾವನ್ನು ವೀಕ್ಷಿಸಲು ಅಭಿಮಾನಿಗಳು ಮುಗಿಬಿದ್ದು ಟಿಕೆಟ್ ಸಿಗದೆ ನಿರಾಶರಾಗಿ ಚಿತ್ರಮಂದಿರಕ್ಕೆ ಕಲ್ಲು ತೂರಿದ ಘಟನೆ ಗಂಗಾವತಿಯಲ್ಲಿ ನಡೆದಿದೆ. ಶುಕ್ರವಾರ ಬೆಳಿಗ್ಗೆ ಏಳು ಗಂಟೆಗೇ ಇಲ್ಲಿನ ಶಿವ ಚಿತ್ರಮಂದಿರದ ಮುಂದೆ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಈ ವೇಳೆ ನೂಕುನುಗ್ಗಲು ಉಂಟಾಯಿತು. ಟಿಕೆಟ್‌ ಸಿಗದೆ ಸಿಟ್ಟಿಗೆದ್ದವರು ಕಲ್ಲು ತೂರಾಟ ನಡೆಸಿದರು. ಇದರಿಂದ ಚಿತ್ರಮಂದಿರದ ಕಿಟಕಿಗಳ ಗಾಜು ಪುಡಿಯಾದವು. ಸ್ಥಳಕ್ಕೆ ಬಂದ ಪೊಲೀಸರು ಗುಂಪನ್ನು ಚದುರಿಸಿದರು.

ಮುಗಿಬಿದ್ದ ಪ್ರೇಕ್ಷಕರು: ಪುನೀತ್ ರಾಜ್‌ಕುಮಾರ ಅಭಿನಯದ ‘ರಾಜಕುಮಾರ’ ಚಿತ್ರ ವೀಕ್ಷಣೆಗಾಗಿ ಅಭಿಮಾನಿಗಳು ಮುಗಿಬಿದ್ದ ಪರಿಣಾಮ
ದಾವಣಗೆರೆಯ ಗೀತಾಂಜಲಿ ಚಿತ್ರಮಂದಿರ ಬಳಿ ನೂಕುನುಗ್ಗಲು ಉಂಟಾಯಿತು. ಅಭಿಮಾನಿಗಳು ಕಿಕ್ಕಿರಿದ ಹಿನ್ನೆಲೆಯಲ್ಲಿ ಗುರುವಾರ ಮಧ್ಯರಾತ್ರಿಯಿಂದಲೇ ಚಿತ್ರ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಚಿತ್ರ ವೀಕ್ಷಣೆಗಾಗಿ ನೂರಾರು ಅಭಿಮಾನಿಗಳು ರಾತ್ರಿಯೇ ಚಿತ್ರಮಂದಿರದ ಮುಂದೆ ಜಮಾಯಿಸಿದ್ದರು. ಈ ಸಂದರ್ಭ ಟಿಕೆಟ್‌ ಸಿಗದ ಕೆಲವರು ಆಕ್ರೋಶ ವ್ಯಕ್ತಪಡಿಸಿದ ಪರಿಣಾಮ ಗೊಂದಲ ಸೃಷ್ಟಿಯಾಗಿ ನೂಕುನುಗ್ಗಲು ಉಂಟಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT