ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಪಾಲರಿಗೆ ವಿನಾಯಿತಿ: ಚರ್ಚೆಗೆ ‘ಸುಪ್ರೀಂ’ ನಿರ್ಧಾರ

Last Updated 24 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕ ಲೋಕಾಯುಕ್ತ ಕಾಯ್ದೆಯ ಅಡಿಯಲ್ಲಿ ಸಕ್ಷಮ ಪ್ರಾಧಿಕಾರವಾಗಿ ರಾಜ್ಯಪಾಲರು ನೀಡಿರುವ ಆದೇಶಕ್ಕೆ ಕೋರ್ಟ್‌ ವಿಚಾರಣೆಯಿಂದ ವಿನಾಯಿತಿ ಇದೆಯೇ ಎಂಬುದರ ಕಾನೂನು ಆಯಾಮಗಳ ಕುರಿತು ಚರ್ಚಿಸಲು ಸುಪ್ರೀಂ ಕೋರ್ಟ್‌ ತೀರ್ಮಾನಿಸಿದೆ.

ಮಾಜಿ ಮುಖ್ಯಮಂತ್ರಿ ಎನ್‌.ಧರಂ ಸಿಂಗ್‌ ಅವರು ಸಲ್ಲಿಸಿದ್ದ ಅರ್ಜಿಯನ್ನು ಶುಕ್ರವಾರ ಕೈಗೆತ್ತಿಕೊಂಡ ನ್ಯಾಯಮೂರ್ತಿಗಳಾದ ರಂಜನ್‌ ಗೋಗೊಯ್‌ ಹಾಗೂ ನವೀನ್‌ ಸಿನ್ಹಾ ಅವರನ್ನು ಒಳಗೊಂಡ ದ್ವಿಸದಸ್ಯ ಪೀಠ, ‘ರಾಜ್ಯಪಾಲರ ಆದೇಶವನ್ನು ಪ್ರಶ್ನಿಸುವಂತಿಲ್ಲ ಎಂದು ಧರಂ ಸಿಂಗ್ ಎತ್ತಿರುವ ಪ್ರಶ್ನೆ  ಆಸಕ್ತಿದಾಯಕವಾಗಿದೆ’ ಎಂದು ತಿಳಿಸಿತು.

ರಾಜ್ಯಪಾಲರು ನೀಡಿದ ಆದೇಶವನ್ನು ಕಾನೂನಾತ್ಮಕವಾಗಿ ಪ್ರಶ್ನಿಸಲು ಅವಕಾಶ ಇದೆಯೇ ಎಂಬುದನ್ನು ಅರಿಯಲು ತೀರ್ಮಾನಿಸಿದ ಪೀಠ, ಪ್ರಕರಣದ ಅಂತಿಮ ವಿಚಾರಣೆಯನ್ನು ಜುಲೈ 18ಕ್ಕೆ ನಿಗದಿಪಡಿಸಿತು. ಧರಂ ಸಿಂಗ್‌ ಅವರ ಅಧಿಕಾರದ ಅವಧಿಯಲ್ಲಿ ಅಕ್ರಮ ಅದಿರು ಸಾಗಣೆಗೆ ಅನುಮತಿ ನೀಡಿದ್ದರಿಂದ, ರಾಜ್ಯ ಸರ್ಕಾರದ ಬೊಕ್ಕಸಕ್ಕೆ ₹ 23 ಕೋಟಿ ನಷ್ಟ ಉಂಟಾಗಿದೆ ಎಂದು ಲೋಕಾಯುಕ್ತವು ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ವರದಿಯಲ್ಲಿ ಆರೋಪಿಸಿತ್ತು.

ಆದರೆ, ‘ಅದಿರು ಸಾಗಣೆಗೆ ಅನುಮತಿ ನೀಡಿದ್ದ ಧರಂ ಸಿಂಗ್‌ ಅವರು ಅದರಿಂದ ಹಣಕಾಸಿನ ಲಾಭ ಮಾಡಿಕೊಂಡಿಲ್ಲ. ಹಾಗಾಗಿ, ಅವರ ವಿರುದ್ಧ ಕ್ರಮ ಕೈಗೊಳ್ಳುವ ಅಗತ್ಯವಿಲ್ಲ’ ಎಂದು ಅಂದಿನ ರಾಜ್ಯಪಾಲ ರಾಮೇಶ್ವರ ಠಾಕೂರ್‌ ಅವರು 2009ರ ಜೂನ್‌ 23ರಂದು ಆದೇಶಿಸಿದ್ದರು.
ಧರಂ ಸಿಂಗ್‌ ಅವರು ತಪ್ಪೆಸಗಿದ್ದಾರೆ ಎಂದು ಲೋಕಾಯುಕ್ತ ವರದಿ ಹೇಳಿದ್ದರೂ ಅವರಿಂದ ₹ 23 ಕೋಟಿ ದಂಡ ವಸೂಲಿ ಮಾಡಿಲ್ಲ ಎಂದು ದೂರಿ ವಕೀಲ ಡಿ.ನಟೇಶ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ್ದ ರಾಜ್ಯ ಹೈಕೋರ್ಟ್‌, ದಂಡ ಪಾವತಿಸುವಂತೆ ಆದೇಶಿಸಿತ್ತು.

ಈ ಆದೇಶವನ್ನು ಪ್ರಶ್ನಿಸಿ ಧರಂ ಸಿಂಗ್‌ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರಲ್ಲದೆ, ಲೋಕಾಯುಕ್ತ ಕಾಯ್ದೆ ಅಡಿ ಸಕ್ಷಮ ಪ್ರಾಧಿಕಾರವಾಗಿ ರಾಜ್ಯಪಾಲರು ನೀಡಿರುವ ಆದೇಶಕ್ಕೆ ಕೋರ್ಟ್‌ ವಿಚಾರಣೆಯಿಂದ ವಿನಾಯಿತಿ ಇದೆ ಎಂದು ತಿಳಿಸಿದ್ದರು. ಈ ಅರ್ಜಿಯನ್ನು ಇತ್ಯರ್ಥ ಪಡಿಸುವ ನಿಟ್ಟಿನಲ್ಲಿ ಸಲಹೆ ನೀಡುವಂತೆ ಹಿರಿಯ ವಕೀಲ ಫಾಲಿ ಎಸ್‌. ನಾರಿಮನ್‌ ಅವರನ್ನು ಸಹಾಯಕರನ್ನಾಗಿ ಸುಪ್ರೀಂಕೋರ್ಟ್‌ ನೇಮಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT