ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇವಿಎಂಗೆ ಕನ್ನ: ಪ್ರತಿಕ್ರಿಯೆಗೆ ಆಯೋಗಕ್ಕೆ ಸೂಚನೆ

Last Updated 24 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ : ಈಚೆಗೆ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಎಲೆಕ್ಟ್ರಾನಿಕ್‌ ಮತ ಯಂತ್ರಗಳಿಗೆ (ಇವಿಎಂ) ಕನ್ನಹಾಕಲಾಗಿತ್ತು ಎಂಬ ಆರೋಪಗಳ ಕುರಿತು ಸಾಫ್ಟ್‌ವೇರ್‌ ತಂತ್ರಜ್ಞರಿಂದ ತನಿಖೆ ನಡೆಸಬೇಕು ಎನ್ನುವ ಕೋರಿಕೆ ಇರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಸೂಚಿಸಿದೆ.

ಇವಿಎಂಗಳಿಗೆ ಸುಲಭವಾಗಿ ಕನ್ನ ಹಾಕಬಹುದು ಎಂದು ಅರ್ಜಿಯಲ್ಲಿ ದೂರಲಾಗಿದೆ. ಇದರ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್, ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್ ಮತ್ತು ಎಸ್.ಕೆ. ಕೌಲ್ ಅವರು ಇರುವ ಪೀಠ ನಡೆಸುತ್ತಿದೆ.

‘ರಾಜಕೀಯ ಪಕ್ಷವೊಂದು ತನ್ನ ಹಿತಾಸಕ್ತಿ ರಕ್ಷಿಸಿಕೊಳ್ಳಲು ಇವಿಎಂಗಳಿಗೆ ಕನ್ನ ಹಾಕಿತ್ತು ಎಂಬ ಆರೋಪದ ಬಗ್ಗೆ ಎಫ್‌ಐಆರ್‌ ದಾಖಲಿಸಿ, ತನಿಖೆ ನಡೆಸಬೇಕು. ತನಿಖಾ ವರದಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಬೇಕು’ ಎಂಬ ಮನವಿ ವಕೀಲ ಎಂ.ಎಲ್. ಶರ್ಮ ಸಲ್ಲಿಸಿರುವ ಅರ್ಜಿಯಲ್ಲಿದೆ. ಇವಿಎಂಗಳ ಗುಣಮಟ್ಟ, ಅವುಗಳಲ್ಲಿ ಬಳಸಿರುವ ತಂತ್ರಾಂಶ ಮತ್ತು ಕನ್ನ ಹಾಕುವುದರಿಂದ ಆಗುವ ಪರಿಣಾಮ ಕುರಿತು ವಿಶ್ವಾಸಾರ್ಹ ಎಲೆಕ್ಟ್ರಾನಿಕ್‌ ಮತ್ತು ಸಾಫ್ಟ್‌ವೇರ್‌ ತಜ್ಞರಿಂದ ಪರಿಶೀಲನೆ ನಡೆಸಬೇಕು ಎಂದು ಶರ್ಮ ಕೋರಿದ್ದಾರೆ.

ಇವಿಎಂಗಳ ತಾಂತ್ರಿಕ ಮತ್ತು ಸಾಫ್ಟ್‌ವೇರ್‌ಗೆ ಸಂಬಂಧಿಸಿದ ಮಾಹಿತಿ ರಹಸ್ಯವಾಗಿರುವವರೆಗೆ ಮಾತ್ರ ಅವು ಸುರಕ್ಷಿತವಾಗಿರುತ್ತವೆ ಎಂದು ಚುನಾವಣಾ ಆಯೋಗ ಒಪ್ಪಿಕೊಂಡಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

‘ಮತ ಯಂತ್ರಗಳ ಈ ವಿವರಗಳನ್ನು ಕದಿಯಲು ಪರಿಣತರಿಗೆ ಗೊತ್ತಿದೆ. ವಿವರ ಕದ್ದು, ಯಂತ್ರಗಳಲ್ಲಿನ ದಾಖಲೆಗಳನ್ನು ಬದಲಿಸಲು ಸಾಧ್ಯವಿದೆ’ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT