ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ್ಯ ಹಸ್ತಾಂತರ ಮನವಿ ದೃಢೀಕರಿಸಿದ ಬ್ರಿಟನ್

Last Updated 24 ಮಾರ್ಚ್ 2017, 19:08 IST
ಅಕ್ಷರ ಗಾತ್ರ

ನವದೆಹಲಿ: ಸಾಲ ಬಾಕಿ ಉಳಿಸಿಕೊಂಡು ದೇಶ ತೊರೆದಿರುವ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರ ಮಾಡುವಂತೆ ಸಲ್ಲಿಸಿರುವ ಮನವಿಯನ್ನು ಬ್ರಿಟನ್ನಿನ ಗೃಹ ಕಾರ್ಯದರ್ಶಿ ಆ್ಯಂಬರ್‌ ರಡ್ ಅವರು ದೃಢೀಕರಿಸಿದ್ದು, ಅದನ್ನು ಲಂಡನ್ನಿನ ನ್ಯಾಯಾಲಯಕ್ಕೆ ವರ್ಗಾಯಿಸಿದ್ದಾರೆ.
ಮಲ್ಯ ವಿರುದ್ಧ ಬಂಧನ ವಾರಂಟ್ ಹೊರಡಿಸಬಹುದೇ ಎಂಬುದನ್ನು ಕೋರ್ಟ್‌ ತೀರ್ಮಾನಿಸಲಿದೆ.

ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರ ಮಾಡಬಹುದೇ ಎಂಬ ಬಗ್ಗೆ ತೀರ್ಮಾನ ಕೈಗೊಳ್ಳುವ ಮುನ್ನ ಬ್ರಿಟನ್ ಸರ್ಕಾರ ಕೈಗೊಳ್ಳಬೇಕಿರುವ ಹಲವು ಕ್ರಮಗಳ ಪೈಕಿ ಇದು ಮೊದಲನೆಯದು.

ಭಾರತದ ಮನವಿಯನ್ನು ದೃಢೀಕರಿಸಿರುವುದನ್ನು ವಿದೇಶಾಂಗ ಸಚಿವಾಲಯದ ವಕ್ತಾರ ಗೋಪಾಲ್ ಬಾಗಲೆ ಸುದ್ದಿಗಾರರಿಗೆ ತಿಳಿಸಿದರು.

ರಕ್ಷಣೆ ಪಡೆಯಲು ಇದೆ ಅವಕಾಶ
ಭಾರತದ ಮನವಿಯನ್ನು ಗೃಹ ಕಾರ್ಯದರ್ಶಿ ದೃಢೀಕರಿಸಿದ್ದರೂ ಮಲ್ಯ ಅವರಿಗೆ ಹಸ್ತಾಂತರದಿಂದ ರಕ್ಷಣೆ ಪಡೆಯಲು ಬ್ರಿಟನ್ನಿನ ಕಾನೂನಿನ ಅಡಿ ಸಾಕಷ್ಟು ಅವಕಾಶಗಳಿವೆ. ಭಾರತ ಮತ್ತು ಬ್ರಿಟನ್ ನಡುವೆ 1993ರಿಂದ ಹಸ್ತಾಂತರ ಒಪ್ಪಂದ ಇದೆ. ಆದರೆ, ಈ ಒಪ್ಪಂದವು ಹಸ್ತಾಂತರ ಪ್ರಕ್ರಿಯೆಯನ್ನು ತ್ವರಿತಗೊಳಿಸುವ ಸಾಧ್ಯತೆ ಕಡಿಮೆ.

ಹಸ್ತಾಂತರ ಪ್ರಕ್ರಿಯೆ ಹೇಗೆ?
* ಮಲ್ಯ ಅವರು ಭಾರತದಲ್ಲಿ ಎಸಗಿದ್ದಾರೆ ಎನ್ನಲಾದ ಅಪರಾಧವು ಹಸ್ತಾಂತರಿಸಲು ಸೂಕ್ತ ಎಂಬುದು ಬ್ರಿಟನ್ನಿನ ನ್ಯಾಯಾಲಯಕ್ಕೆ ಮನವರಿಕೆ ಆಗಬೇಕು. ಆಗ ನ್ಯಾಯಾಲಯವು ಮಲ್ಯ ವಿರುದ್ಧ ಬಂಧನ ವಾರಂಟ್ ಹೊರಡಿಸುತ್ತದೆ.
* ಭಾರತದಲ್ಲಿ ಎಸಗಿದ್ದಾರೆ ಎನ್ನಲಾದ ಅಪರಾಧವನ್ನು ಮಲ್ಯ ಅವರು ಒಂದು ವೇಳೆ ಬ್ರಿಟನ್ನಿನಲ್ಲಿ ಎಸಗಿದ್ದರೆ, ಬ್ರಿಟನ್ ಕಾನೂನಿನ ಅನ್ವಯ ಅಂಥ ಕೃತ್ಯವನ್ನು ಕ್ರಿಮಿನಲ್ ಅಪರಾಧವಾಗಿ ಪರಿಗಣಿಸಬಹುದು ಎಂಬುದು ಕೋರ್ಟ್‌ಗೆ ಮನವರಿಕೆ ಆಗಬೇಕು.
* ಇದರ ಜೊತೆಗೇ, ಮಲ್ಯ ಅವರನ್ನು ಹಸ್ತಾಂತರ ಮಾಡಲು ಕಾನೂನಿನ ಅಡೆತಡೆ ಇಲ್ಲ ಎಂಬುದು ಖಚಿತವಾಗಬೇಕು.
* ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರ ಮಾಡಿದರೆ, ಅವರ ಮಾನವ ಹಕ್ಕುಗಳನ್ನು ಉಲ್ಲಂಘಿಸಿದಂತೆ ಆಗುತ್ತದೆಯೇ ಎಂಬುದನ್ನು ನ್ಯಾಯಾಧೀಶರು ಪರಿಶೀಲನೆಗೆ ಒಳಪಡಿಸುತ್ತಾರೆ.
* ಈ ಎಲ್ಲ ಹಂತಗಳಲ್ಲೂ ಭಾರತಕ್ಕೆ ಪೂರಕವಾಗುವಂತಹ ತೀರ್ಮಾನಗಳು ಹೊರಬಂದರೆ, ನ್ಯಾಯಾಧೀಶರು ಪ್ರಕರಣವನ್ನು ಗೃಹ ಕಾರ್ಯದರ್ಶಿಗೆ ಪುನಃ ವರ್ಗಾಯಿಸುತ್ತಾರೆ. ನ್ಯಾಯಾಧೀಶರ ತೀರ್ಮಾನವನ್ನು ಪ್ರಶ್ನಿಸಿ ಅಲ್ಲಿನ ಹೈಕೋರ್ಟ್‌ಗೆ ಅಥವಾ ಗೃಹ ಕಾರ್ಯದರ್ಶಿಗೆ ಮನವಿ ಸಲ್ಲಿಸುವ ಅವಕಾಶ ಮಲ್ಯ ಅವರಿಗೆ ಇದೆ.
* ಆಗ, ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರ ಮಾಡಬೇಕೇ ಬೇಡವೇ ಎಂಬ ತೀರ್ಮಾನವನ್ನು ಗೃಹ ಕಾರ್ಯದರ್ಶಿ ಕೈಗೊಳ್ಳುತ್ತಾರೆ.
* ಹಸ್ತಾಂತರಕ್ಕೆ ಗೃಹ ಕಾರ್ಯದರ್ಶಿ ಆದೇಶ ನೀಡಿದರೆ, ಅದನ್ನು ಪ್ರಶ್ನಿಸಿ ಹೈಕೋರ್ಟ್‌ ಅಥವಾ ‘ಸುಪ್ರೀಂ’ ಮೆಟ್ಟಿಲೇರಲು ಅವಕಾಶ ಇದೆ.
* ಮಲ್ಯ ಅವರು ಆದೇಶವನ್ನು ಹೈಕೋರ್ಟ್‌ ಅಥವಾ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸದಿದ್ದರೆ, ಆದೇಶ ಹೊರಡಿಸಿದ 28 ದಿನಗಳಲ್ಲಿ ಅವರನ್ನು ಭಾರತಕ್ಕೆ ಹಸ್ತಾಂತರ ಮಾಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT