ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಾಯಧನ: ಅರ್ಹರಿಗೆ ನಿರಾಕರಣೆ!

Last Updated 24 ಮಾರ್ಚ್ 2017, 19:19 IST
ಅಕ್ಷರ ಗಾತ್ರ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ರಾಜ್ಯದ ಹೆಗ್ಗಳಿಕೆ. ಇತರ ರಾಜ್ಯಗಳಲ್ಲಿ ಇಂತಹದೊಂದು ಇಲಾಖೆ ಇಲ್ಲವೆಂದೇ ಹೇಳಲಾಗುತ್ತಿದೆ. ಸಾಹಿತಿ, ಕಲಾವಿದರ ಹಿತರಕ್ಷಣೆ; ಪ್ರದರ್ಶಕ ಕಲೆಗಳಿಗೆ ಉತ್ತೇಜನ ನೀಡುವುದು ಇಲಾಖೆಯ ಪ್ರಮುಖ ಉದ್ದೇಶ. ಲಾಗಾಯ್ತಿನಿಂದಲೂ ಇಲಾಖೆ ಆ ಕಾರ್ಯವನ್ನು ನೆರವೇರಿಸುತ್ತ ಬಂದಿದೆ.

ಜಿಲ್ಲಾ ಕೇಂದ್ರಗಳಲ್ಲೂ ಸಂಸ್ಕೃತಿ ಇಲಾಖೆಯ ಶಾಖೆಗಳಿವೆ. ಅದಕ್ಕೊಬ್ಬ ಸಹಾಯಕ ನಿರ್ದೇಶಕರು ಮತ್ತು ಸಿಬ್ಬಂದಿ ಇರುತ್ತದೆ. ಸಂಗೀತ, ಜಾನಪದ, ನೃತ್ಯ, ನಾಟಕ ಕಲಾವಿದರನ್ನು ಗುರುತಿಸುವುದು ಹಾಗೂ ಅವರಿಗೆ ಕಾರ್ಯಕ್ರಮ ನಡೆಸಲು ಇಲಾಖೆ ವತಿಯಿಂದ ಧನಸಹಾಯ ನೀಡುವುದು; ಕೇಂದ್ರ ಕಚೇರಿ ಸೂಚಿಸಿದ  ಕಾರ್ಯಕ್ರಮ ಆಯೋಜಿಸುವುದು, ಪ್ರಾಯೋಜನೆ ನೀಡುವುದು ಜಿಲ್ಲಾ ಮಟ್ಟದ ಸಂಸ್ಕೃತಿ ಇಲಾಖೆಯ ಕೆಲಸ. ವಿಕೇಂದ್ರೀಕರಣದ ಪರಿಕಲ್ಪನೆಯಲ್ಲಿ ಕಾರ್ಯಕ್ರಮಗಳನ್ನು ಯಥೋಚಿತವಾಗಿ ನಡೆಸುತ್ತ ಬಂದಿದೆ.

ಹೀಗೆ ಸಂಸ್ಕೃತಿ ರಕ್ಷಣೆಗಾಗಿಯೇ...! ಸರ್ಕಾರದ ಅಧಿಕೃತ ಇಲಾಖೆಯೊಂದು ಅಸ್ತಿತ್ವದಲ್ಲಿರುವುದರಿಂದ ಕಲಾವಿದರು ಮತ್ತು ಕಲಾತಂಡಗಳ ವಿವರಗಳ ಒಂದು ಅಂದಾಜಿರುತ್ತದೆ. ಅವರ ಪಟ್ಟಿ ಇಲಾಖೆಯಲ್ಲಿರುತ್ತದೆ. ಸಹಜವಾಗಿ ಸಂಸ್ಕೃತಿ ಇಲಾಖೆಯನ್ನು ಕ್ಷೇತ್ರ ಅಧ್ಯಯನ ಮಾಡುವ ಇಲಾಖೆ ಎಂದೂ ಹೇಳಬಹುದಾಗಿದೆ.

ಹಾಗಾಗಿ ಒಂದು ಜಿಲ್ಲೆಯಲ್ಲಿ ಎಷ್ಟು ಕಲಾವಿದರು, ಎಷ್ಟೆಲ್ಲ ತಂಡಗಳು ಸಕ್ರಿಯವಾಗಿವೆ ಎಂಬ ಮಾಹಿತಿ ಸಂಸ್ಕೃತಿ ಇಲಾಖೆಯಲ್ಲಿ ಇರಬೇಕಾದುದು ಅಪೇಕ್ಷಣೀಯ. ಸಂಸ್ಕೃತಿ ಇಲಾಖೆಯ ವಾರ್ಷಿಕ ₹ 425 ಕೋಟಿ ಮೊತ್ತದ ಬಜೆಟ್ ಹಣದಲ್ಲಿ ರಾಜ್ಯಮಟ್ಟದಲ್ಲಿ ಸಂಘ–ಸಂಸ್ಥೆಗಳಿಗೆ ಸಹಾಯಧನ ನೀಡಲು ನಾಲ್ಕು ಕೋಟಿ ರೂಪಾಯಿಗಳನ್ನು ಇಲಾಖೆ ಮೀಸಲಿಟ್ಟಿದೆ. ಇದು ಇಲಾಖೆಯ ಮತ್ತೊಂದು ಪ್ರಮುಖ ಕಾರ್ಯ. ವರ್ಷದಿಂದ ವರ್ಷಕ್ಕೆ ಅಲ್ಪಸ್ವಲ್ಪ ಏರಿಕೆ ಇದ್ದರೂ- ಸಹಾಯಧನಕ್ಕೆ ಮೀಸಲಿಟ್ಟಿರುವ ಹಣ ಕಡಿಮೆ ಎಂದು ಹೇಳಲಾಗುತ್ತಿದೆ. ಆ ವಿಷಯ ಇರಲಿ.

ರಾಜ್ಯದಲ್ಲಿ ಸಕ್ರಿಯವಾಗಿರುವ ಸಾವಿರಾರು ಸಂಘ–ಸಂಸ್ಥೆಗಳ ಪೈಕಿ ಮುನ್ನೂರಕ್ಕೂ ಅಧಿಕ ತಂಡಗಳು ಅತ್ಯಂತ ಕ್ರಿಯಾಶೀಲವಾಗಿವೆ ಎಂದು ಖಾಸಗಿ ಸಂಸ್ಥೆ ಮಾಡಿದ ಸಮೀಕ್ಷೆಯೊಂದರಿಂದ ತಿಳಿದುಬಂದಿದೆ. ಈ ಮುನ್ನೂರು ತಂಡಗಳು ಸಂಸ್ಕೃತಿ ಇಲಾಖೆಯ ನೆರವು ಸಿಗಲಿ ಸಿಗದಿರಲಿ ತಮ್ಮ ಪಾಡಿಗೆ ತಾವು ಕಾರ್ಯಕ್ರಮ ಆಯೋಜಿಸುತ್ತಿರುತ್ತವೆ. ಸಹಾಯಧನ ಸಿಕ್ಕರೆ ಒಳಿತೇ ಆಯಿತು ಎಂದು ಮತ್ತಷ್ಟು ಉತ್ಸಾಹದಿಂದ ಕಾರ್ಯಕ್ರಮ ಹೆಚ್ಚಿಸಿಕೊಳ್ಳುತ್ತವೆ. ಕೆಲವು ಸಂಘ–ಸಂಸ್ಥೆಗಳು ಇಲಾಖೆಯ ಸಹಾಯಧನ ನೆಚ್ಚಿ ಅಷ್ಟರಮಟ್ಟಿಗೆ ಕಾರ್ಯಕ್ರಮ ಸಂಘಟಿಸುತ್ತವೆ. ಒಟ್ಟಿನಲ್ಲಿ ಸಂಸ್ಕೃತಿ ಇಲಾಖೆಯ ಸಹಾಯಧನದಿಂದ ಕಲಾವಿದರಿಗೆ, ತಂಡಗಳಿಗೆ ತಕ್ಕಮಟ್ಟಿನ ನೆರವು ದೊರೆಯುತ್ತದೆ ಎಂಬುದು ಸಮಾಧಾನದ ಸಂಗತಿ. ಸಂಸ್ಕೃತಿ ಇಲಾಖೆಯ ಇಂತಹದೊಂದು ಉತ್ತಮ ವ್ಯವಸ್ಥೆ ಕಳೆದ ಮೂರು ವರ್ಷಗಳಿಂದ ವಿವಾದಕ್ಕೀಡಾಗಿದೆ.

ಅರ್ಜಿ ಹಾಕಿ ಮಂಜೂರು ಮಾಡುವ ಇಡೀ ಪ್ರಕ್ರಿಯೆಯನ್ನು ಕಳೆದ ವರ್ಷದಿಂದ ಗಣಕೀಕರಣ ಮಾಡಲಾಗಿದೆ. ಹಾಗೆ ಮಾಡಿದಾಗಲೇ ವಿವಾದ ಇನ್ನೂ ಹೆಚ್ಚಿರುವುದು ವಿಪರ್ಯಾಸದ ಸಂಗತಿ. ಕೆಲವು ಅರ್ಹ ತಂಡಗಳಿಗೆ ಸಹಾಯಧನ ‘ತಿರಸ್ಕರಿಸಿರುವುದು’ ವಿವಾದದ ಮೂಲ. ‘ಕಳೆದ ವರ್ಷ ತೆಗೆದುಕೊಂಡ ಸಹಾಯಧನ ಸದ್ಬಳಕೆ ಆಗಿಲ್ಲ, ದುರುಪಯೋಗ ಆಗಿದೆ’ ಎಂಬ ಕಾರಣಕ್ಕೆ ತಿರಸ್ಕರಿಸಿದ್ದರೆ ಒಪ್ಪಬಹುದಿತ್ತು. ಸಂಘದ ನವೀಕರಣದ ಪ್ರಮಾಣ ಪತ್ರ ಇಲ್ಲ. ಚಿತ್ರ ಸರಿ ಇಲ್ಲ, ಪೇಪರ್ ಕಟಿಂಗ್ಸ್ ಇಲ್ಲ. ಜಾತಿ ಪ್ರಮಾಣಪತ್ರ ಸರಿ ಇಲ್ಲ- ಇವೇ ಮುಂತಾದ ಚಿಕ್ಕಪುಟ್ಟ ಕಾರಣಕ್ಕೆ ಅರ್ಹ ತಂಡಗಳ ಮನವಿಗಳನ್ನು ತಿರಸ್ಕರಿಸಲಾಗಿದೆ! ಆರ್ಥಿಕ ವರ್ಷದ ಅಂತ್ಯದಲ್ಲಿ ಅಂದರೆ ಮಾರ್ಚ್‌ 17 ರಂದು ಈ ಪ್ರಕಟಣೆ ಹೊರಬಿದ್ದಿರುವುದರಿಂದ ಸಂಘ–ಸಂಸ್ಥೆಗಳಿಗೆ ತಮ್ಮ ತಪ್ಪು ತಿದ್ದಿಕೊಳ್ಳಲು ಇರುವ ಅವಕಾಶ ನಿರಾಕರಣೆ ಮಾಡಲಾಗಿದೆ.

ಸಹಾಯಧನಕ್ಕೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಂತೆ ಜುಲೈ ತಿಂಗಳಿನಲ್ಲಿ ಪ್ರಕಟಣೆ ನೀಡಲಾಗಿತ್ತು. ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳು ಅವನ್ನೆಲ್ಲ ಪರಿಶೀಲಿಸಿ ರಾಜ್ಯಮಟ್ಟಕ್ಕೆ ಹೊತ್ತುಹಾಕಿದ್ದರು. ಎಲ್ಲವೂ ಸರಿ ಇದೆ ಎಂದು ಜಿಲ್ಲಾಮಟ್ಟದಲ್ಲಿ ಬರೆದ ಅರ್ಜಿಗಳಲ್ಲೂ ಕೆಲವು ರಾಜ್ಯಮಟ್ಟದಲ್ಲಿ ತಿರಸ್ಕಾರಕ್ಕೆ ಒಳಗಾಗಿವೆ. ಜಿಲ್ಲೆಯಲ್ಲಿ ಸರಿ ಇದ್ದು ರಾಜ್ಯಮಟ್ಟದಲ್ಲಿ ಹೇಗೆ ತಪ್ಪಾಗುತ್ತದೆ!? ಇದಕ್ಕೆ ಹೊಣೆ ಯಾರು? ಕಲಾವಿದರೇ ಹೊಣೆ ಎಂದರೆ ಇದಾವ ನ್ಯಾಯ?
ಕಲಾವಿದರು ಮತ್ತು ಕಲಾತಂಡಗಳ ಬಗ್ಗೆ ಬೆರಳ ತುದಿಯಲ್ಲಿ ಮಾಹಿತಿ ಹೊಂದಿರಬೇಕಾದ ಸಂಸ್ಕೃತಿ ಇಲಾಖೆ ಅಧಿಕಾರಿಗಳಿಗೆ ಯಾವ ತಂಡಕ್ಕೆ ನಿರಾಕರಿಸಬೇಕು ಎಂಬ ಸಂಸ್ಕೃತಿ ಇರಬೇಡವೇ?

ಯೋಗ್ಯರು ಚಿಕ್ಕಪುಟ್ಟ ತಪ್ಪು ಮಾಡಿದ್ದರೆ ಅದನ್ನು ತಿದ್ದಿಕೊಳ್ಳಲು ಅವಕಾಶ ನೀಡುವುದೇ ಸುಸಂಸ್ಕೃತಿಯ ಲಕ್ಷಣ ಅಲ್ಲವೇ? ಕಲಾವಿದರು ಭಾವುಕರು. ರಂಗದ ಮೇಲೆ ಅವರು ಅಮೋಘವಾಗಿ ಹಾಡಬಲ್ಲರು, ನರ್ತಿಸಬಲ್ಲರು, ಅಭಿನಯಿಸಬಲ್ಲರು ಆದರೆ ವ್ಯವಹಾರಜ್ಞಾನ ಕಡಿಮೆ. ಬಹುತೇಕ ಕಲಾವಿದರಿಗೆ ಗುಮಾಸ್ತರ ಕೆಲಸ ಸುತರಾಂ ಗೊತ್ತಿರುವುದಿಲ್ಲ. ಅದಕ್ಕಾಗಿಯೇ ಸಂಸ್ಕೃತಿ ಇಲಾಖೆ ಅಧಿಕಾರಿಗಳು ಇದ್ದಾರಲ್ಲ. ಒಂದು ಜಿಲ್ಲೆಯಲ್ಲಿ ಎಷ್ಟೆಲ್ಲ ಅರ್ಹ ತಂಡಗಳಿವೆ ಎಂಬುದು ಅವರಿಗೆ ತಿಳಿದಿರುತ್ತದೆಯಲ್ಲವೇ? ಅರ್ಹ ತಂಡಗಳ ಅರ್ಜಿ ಸರಿ ಇಲ್ಲದಿದ್ದರೆ ಅವರು ಮಾರ್ಗದರ್ಶನ ನೀಡಬಹುದಿತ್ತಲ್ಲ. ಸರ್ಕಾರದಲ್ಲಿ ಬರೀ ಕಡತಗಳು (ಈಗ ಕಂಪ್ಯೂಟರ್) ಮಾತಾಡಬೇಕೇ? ಮನುಷ್ಯ ಸಂಬಂಧಕ್ಕೆ ಬೆಲೆ ಇಲ್ಲವೇ?

‘ಅನುದಾನ ಬೇಗ ಬಿಡುಗಡೆ ಮಾಡಿಬಿಟ್ಟರೆ ಕಿರಿಕಿರಿ. ಅನುದಾನ ದೊರೆಯದವರು ಗಲಾಟೆ ಮಾಡ್ತಾರೆ. ಯಾಕಪ್ಪಾ ಆ ಗೋಳು. ಮಾರ್ಚ್‌ ಕೊನೆಯ ವಾರದಲ್ಲಿ ಬಿಡುಗಡೆ ಮಾಡಿ ಫೋನ್ ಸ್ವಿಚ್ ಆಫ್ ಮಾಡಿಕೊಂಡರಾಯಿತು’ ಎಂಬುದು ವಿಧಾನಸೌಧದ ಮೊಗಸಾಲೆಯಲ್ಲಿ ಕೇಳಿಬರುವ ಮಾತು. ವಾಹ್! ಎಂತಹ ಪಲಾಯನವಾದ.

ನೂರು ಜನ ಅಪರಾಧಿಗಳು ತಪ್ಪಿಸಿಕೊಂಡರೂ ಪರವಾಯಿಲ್ಲ, ಒಬ್ಬ ನಿರಪರಾಧಿಗೂ ಶಿಕ್ಷೆ ಆಗಬಾರದು ಎಂಬುದು ನ್ಯಾಯಾಂಗದ ಅಘೋಷಿತ ನೀತಿ. ಇಲ್ಲಿ ನಡೆದದ್ದು ಅದಕ್ಕೆ ತದ್ವಿರುದ್ಧ. ‘ದಾಖಲೆ ಸರಿ ಇದೆ’ ಎಂಬ ನೆಪದಲ್ಲಿ ಕೆಲವು ಅನರ್ಹರಿಗೂ ಸಹಾಯಧನ ದೊರೆತಿರಬಹುದು. ಅಂತಹವರನ್ನು ಮಟ್ಟಹಾಕಬೇಕಾದ್ದು ಇಲಾಖೆಯ ಕರ್ತವ್ಯ. ಆ ಕಾರಣಕ್ಕೆ ಅಮಾಯಕರಿಗೆ ಏಕೆ ಶಿಕ್ಷೆ? ‘ಕಂಪ್ಯೂಟರ್ರೇ ತಿರಸ್ಕರಿಸಿದೆ’ ಎಂಬುದು ಜಾರಿಕೊಳ್ಳುವ ಮಾತು. ಯಾಕೆಂದರೆ ಅದಕ್ಕೆ ‘ಫೀಡ್’ ಮಾಡುವವರು ಮನುಷ್ಯರೇ ಅಲ್ಲವೇ?

ಜುಲೈ ತಿಂಗಳಲ್ಲಿ ಅರ್ಜಿ ಕರೆದಿರುವಾಗ ಸೆಪ್ಟೆಂಬರ್– ಅಕ್ಟೋಬರ್‌ಗೆ ಸಹಾಯಧನ ನೀಡಲು ಏನಡ್ಡಿ? ವರ್ಷದ ಕೊನೆಯಲ್ಲಿ ಹಣ ಬಿಡುಗಡೆ ಮಾಡಿದರೆ, ಕಾರ್ಯಕ್ರಮ ಬೇಗ ಮುಗಿಸುವ ಧಾವಂತದಲ್ಲಿ ಕಾಟಾಚಾರದ ಕಾರ್ಯಕ್ರಮ ಆಗುವುದಿಲ್ಲವೇ? ಸಂಸ್ಕೃತಿ ಇಲಾಖೆ ಇಂತಹದನ್ನೇ ಬಯಸಿತ್ತೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT