ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಧ್ರದ ಇಬ್ಬರ ನಿಗೂಢ ಸಾವು

ನ್ಯೂಜೆರ್ಸಿಯ ಬರ್ಲಿಂಗ್‌ಟನ್‌ನಲ್ಲಿರುವ ಮನೆಯಲ್ಲಿ ಘಟನೆ
Last Updated 24 ಮಾರ್ಚ್ 2017, 19:20 IST
ಅಕ್ಷರ ಗಾತ್ರ

ವಿಜಯವಾಡ:   ಭಾರತದ ಮಹಿಳೆ ಹಾಗೂ ಆಕೆಯ ಏಳು ವರ್ಷದ ಮಗ ನ್ಯೂಜೆರ್ಸಿಯ ಬರ್ಲಿಂಗ್‌ಟನ್‌ನ ಅವರ ಮನೆಯಲ್ಲಿ ಗುರುವಾರ ರಾತ್ರಿ ನಿಗೂಢ ರೀತಿಯಲ್ಲಿ ಮೃತಪಟ್ಟಿದ್ದಾರೆ. ಆದರೆ ಅವರನ್ನು ಕತ್ತು ಸೀಳಿ ಕೊಲೆ ಮಾಡಲಾಗಿದೆ ಎಂದು ಆಂಧ್ರಪ್ರದೇಶದಲ್ಲಿ ನೆಲೆಸಿರುವ ಅವರ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.

ಎನ್‌. ಶಶಿಕಲಾ (40) ಅವರ ಮಗ ಅನೀಶ್‌ ಸಾಯಿ ಸಾವನ್ನಪ್ಪಿದವರು. ಶಶಿಕಲಾ ದಂಪತಿ ವೃತ್ತಿಯಲ್ಲಿ  ಸಾಫ್ಟ್‌ವೇರ್‌ ಎಂಜಿನಿಯರ್‌. ಶಶಿಕಲಾ ಅವರು ಮನೆಯಿಂದಲೇ ಕೆಲಸ ಮಾಡುತ್ತಿದ್ದರು. ಶಶಿಕಲಾ ಪತಿ ಎನ್‌. ಹನುಮಂತರಾವ್‌ ಗುರುವಾರ ರಾತ್ರಿ ಕೆಲಸ ಮುಗಿಸಿಕೊಂಡು ಬಂದ ವೇಳೆ ಘಟನೆ ಬೆಳಕಿಗೆ ಬಂದಿದೆ.

ಪ್ರಕಾಶಂ ಜಿಲ್ಲೆಯ ಪಾರ್ಚೂರು ಮಂಡಲದ ತಿಮ್ಮರಾಜಯಪಲೆಂನಲ್ಲಿ ನೆಲೆಸಿರುವ ಹನುಮಂತರಾವ್‌ ತಂದೆ ಎಂ.ಸುಬ್ಬರಾವ್‌ ಅವರಿಗೆ ಶುಕ್ರವಾರ ಬೆಳಿಗ್ಗೆ ದುರಂತದ ಮಾಹಿತಿ ಸಿಕ್ಕಿದೆ. ಶಶಿಕಲಾ – ಹನುಮಂತರಾವ್‌್ 14 ವರ್ಷದ ಹಿಂದೆ ಮದುವೆಯಾಗಿದ್ದರು. ‘ವಿವಾಹದ ನಂತರ ಕುಟುಂಬದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ನನ್ನ ಮಗ ಪ್ರತಿದಿನ ದೂರವಾಣಿ ಸಂಪರ್ಕದ ಲ್ಲಿರುತಿದ್ದ’ ಎಂದು ಅವರು  ತಿಳಿಸಿದ್ದಾರೆ.  ಶಶಿಕಲಾ ಮಧ್ಯಾಹ್ನದ ವೇಳೆ ಶಾಲೆಯಿಂದ ಮಗನನ್ನು  ಕರೆತಂದಿದ್ದು, ನಂತರ ಈ ಹತ್ಯೆ ನಡೆದಿದೆ ಎಂದು ದೂರಿದ್ದಾರೆ.

ಅಳಿಯನ ಮೇಲೆ ಶಂಕೆ?: ‘ನನ್ನ ಅಳಿಯ ಬೆಳಿಗ್ಗೆ 6 ಗಂಟೆಗೆ ಕರೆ ಮಾಡಿ, ಶಶಿಕಲಾ, ಅನೀಶ್‌ ಮೃತಪಟ್ಟಿರುವ ವಿಷಯ ತಿಳಿಸಿದರು. ಇದರ ಹಿಂದೆ ಯಾವುದೇ ಜನಾಂಗೀಯ ದಾಳಿಯ ಅನುಮಾನವಿಲ್ಲ. ಅಳಿಯ ಹನುಮಂತರಾವ್‌ ಅನೇಕ ಮಹಿಳೆಯರ ಜತೆಗೆ ಸಂಬಂಧ ಹೊಂದಿದ್ದರು. ಈ ಕೊಲೆಗೆ ಅವರೇ ಕಾರಣ’ ಎಂದು ಶಶಿಕಲಾ ತಂದೆ ವೆಂಕಟೇಶ್ವರರಾವ್‌ ಆರೋಪಿಸಿದ್ದಾರೆ.

ವಿಚ್ಛೇದನ ನೀಡುವಂತೆ ಪತಿಯೇ ಒತ್ತಾಯಿಸುತ್ತಿರುವುದಾಗಿ ಮಗಳು ಈ ಹಿಂದೆ ಕರೆಮಾಡಿದ್ದ ವೇಳೆ ತಿಳಿಸಿದ್ದಳು ಎಂದು ಅವರು ತಿಳಿಸಿದ್ದಾರೆ.
ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಪ್ರಕಾಶಂ ಜಿಲ್ಲೆಯ ಪಾರ್ಚೂರ್‌ ಕ್ಷೇತ್ರದ ಶಾಸಕ ವೈ.ಸಾಂಬಶಿವರಾವ್‌್ ಅವರು ಉತ್ತರ ಅಮೆರಿಕದ ತೆಲುಗು ಸಂಘಟನೆ (ಟಿಎಎನ್‌ಎ) ಸದಸ್ಯರ ಜತೆಗೆ ಮಾತುಕತೆ ನಡೆಸಿ ಪ್ರಕರಣದ ಮಾಹಿತಿ ಪಡೆದು ಕೊಂಡರು. ‘ತಾಯಿ ಹಾಗೂ ಮಗನನ್ನು  ಕತ್ತು ಹಿಸುಕಿ ಕೊಲೆ ಮಾಡಲಾಗಿದೆ’ ಎಂದು ತಿಳಿಸಿದರು.

ಸಂಸತ್ತಿನಲ್ಲೂ ಪ್ರತಿಧ್ವನಿ: ಅಮೆರಿಕದಲ್ಲಿ ನಡೆದ ಆಂಧ್ರ ಮೂಲದ ತಾಯಿ, ಮಗುವಿನ ಕೊಲೆ ವಿಚಾರವನ್ನು ಆಂಧ್ರಪ್ರದೇಶದ ಸಂಸದರು ಸಂಸತ್ತಿನ ಉಭಯ ಸದನಗಳಲ್ಲಿ ಪ್ರಸ್ತಾಪಿಸಿ, ಕಳವಳ ವ್ಯಕ್ತಪಡಿಸಿದರು.  ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಸ್ತಾಪಿಸಬೇಕು ಎಂದು ಆಗ್ರಹಿಸಿದರು.

ರಾಜ್ಯಸಭೆಯಲ್ಲಿ ಶೂನ್ಯವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಟಿ.ಸುಬ್ಬರಾಮಿರೆಡ್ಡಿ, ‘ತಾಯಿ ಮತ್ತು ಮಗನನ್ನು ಅತ್ಯಂತ  ಬರ್ಬರವಾಗಿ ಕೊಲೆಗೈಯಲಾಗಿದೆ.  ಪ್ರಧಾನಿ ನರೇಂದ್ರ ಮೋದಿ ಅವರು  ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಲ್ಲಿ ದೇಶದ ಕಳಕಳಿಯನ್ನು ಪ್ರಸ್ತಾಪಿಸಬೇಕು’ ಎಂದು ಒತ್ತಾಯಿಸಿದರು.

ಲೋಕಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ವೈಎಸ್‌ಆರ್‌ ಕಾಂಗ್ರೆಸ್‌ನ ಸಂಸದ ವೈ.ವಿ. ಸುಬ್ಬಾರೆಡ್ಡಿ, ಅಮೆರಿಕದಲ್ಲಿರುವ ಭಾರತೀಯರನ್ನು ರಕ್ಷಿಸುವ ವಿಚಾರದಲ್ಲಿ ಭಾರತವು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT