ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಧಾನದ ಸಲಹೆ ಸರಿಯಲ್ಲ ಕೋರ್ಟ್ ತೀರ್ಪು ಬೇಕು

Last Updated 24 ಮಾರ್ಚ್ 2017, 19:25 IST
ಅಕ್ಷರ ಗಾತ್ರ

ರಾಮ ಜನ್ಮಭೂಮಿ– ಬಾಬ್ರಿ ಮಸೀದಿ ವಿವಾದವನ್ನು ನ್ಯಾಯಾಲಯದ ಹೊರಗೆ ಸಂಧಾನದ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್ ನೀಡಿರುವ ಸಲಹೆ ಅಚ್ಚರಿಯದು. ಈ ವಿವಾದವನ್ನು ಸಂಧಾನದ ಮೂಲಕ ಪರಿಹರಿಸಲು ತಾವೇ ಮಧ್ಯಸ್ಥಿಕೆ ವಹಿಸಲು ಸಿದ್ಧರಿರುವುದಾಗಿಯೂ ಅವರು ಹೇಳಿದ್ದಾರೆ. ಈ ವಿವಾದದಲ್ಲಿ ಮುಖ್ಯವಾಗಿರುವುದು ಧಾರ್ಮಿಕ ನಂಬಿಕೆ ಹಾಗೂ ಭಾವನೆಯ ವಿಚಾರ. ಹೀಗಾಗಿ ಸಂಬಂಧಿಸಿದವರು ಒಟ್ಟಾಗಿ ಕುಳಿತು ಒಮ್ಮತದ ನಿರ್ಧಾರಕ್ಕೆ  ಬರಬಹುದು ಎಂಬುದು ನ್ಯಾಯಾಲಯದ ತರ್ಕ. 

ಈ ಸಲಹೆಯ ಹಿಂದೆ  ಸದುದ್ದೇಶವಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಇದು ಕಾರ್ಯಸಾಧುವಲ್ಲ ಎಂಬುದು ವಾಸ್ತವ.  ನ್ಯಾಯಾಲಯದ ಹೊರಗೆ ವಿವಾದ ಇತ್ಯರ್ಥ ಪಡಿಸಿಕೊಳ್ಳುವ ಪ್ರಯತ್ನಗಳು ಈ ಹಿಂದೆಯೂ ನಡೆದಿದ್ದವು.  ಅಲಹಾಬಾದ್ ಹೈಕೋರ್ಟ್ ಸಹ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಹೇಳಿತ್ತು. ಆದರೆ ಅದು ಸಾಧ್ಯವಾಗಿರಲಿಲ್ಲ.  ಈಗ ಪರಿಸ್ಥಿತಿ ಬದಲಾಗಿದೆ ಎಂದು ಹೇಳುವುದೂ ಸಾಧ್ಯವಿಲ್ಲ. ಅದರಲ್ಲೂ ಇತ್ತೀಚೆಗೆ ಉತ್ತರಪ್ರದೇಶ  ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸಾಧಿಸಿರುವ ಗೆಲುವಿನಿಂದಾಗಿ ಹಿಂದೂ ಪರ ಗುಂಪುಗಳಿಗೆ ಹೆಚ್ಚಿನ ಅನುಕೂಲವಿದೆ ಎಂಬ ಭಾವನೆ ಸೃಷ್ಟಿಯಾಗುವ ಸಾಧ್ಯತೆಯೂ ಇದೆ. ಹೀಗಾಗಿ ಸಮಾನ ನೆಲೆಯಲ್ಲಿ ಸಂಧಾನ ನಡೆಯುತ್ತದೆ ಎಂಬ ಬಗ್ಗೆ ಬರಬಹುದಾದ ಸಂಶಯಗಳನ್ನು ನಿವಾರಿಸುವುದು ಕಷ್ಟ.

ಹೀಗಾಗಿಯೇ ಬಾಬ್ರಿ ಮಸೀದಿ ಕ್ರಿಯಾ ಸಮಿತಿಯಿಂದ ನ್ಯಾಯಮೂರ್ತಿ ಖೇಹರ್ ಅವರ ಸಲಹೆಗೆ ಯಾವುದೇ ಸಕಾರಾತ್ಮಕ ಸ್ಪಂದನ ಸಿಕ್ಕಿಲ್ಲ ಎಂಬುದರಲ್ಲಿ ಅಚ್ಚರಿ ಏನೂ ಇಲ್ಲ. ಹಾಗೆಯೇ ಬಿಜೆಪಿ ಮತ್ತು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರೂ ಈ ಸಲಹೆಯನ್ನು ತಕ್ಷಣವೇ ಒಪ್ಪಿಕೊಂಡಿದ್ದಾರೆ ಎಂಬ ವಿಚಾರದಲ್ಲೂ  ಅಚ್ಚರಿಪಡಬೇಕಾದ ಅಗತ್ಯ ಇಲ್ಲ. ಆದರೆ ವಿವಾದಕ್ಕೆ ಸಂಬಂಧಿಸಿದಂತೆ  ಎಲ್ಲಾ ಪಕ್ಷದವರದೂ  ಪೂರ್ಣ ಮನಸ್ಸಿನ ಒಪ್ಪಿಗೆ ಇಲ್ಲದಿದ್ದಾಗ ಸಂಧಾನ ಸಾಧ್ಯವಾಗದು ಎಂಬ ಅಂಶವನ್ನು ಮರೆಯುವಂತಿಲ್ಲ.

ಈ ಹಿಂದೆ 2010ರಲ್ಲಿ ತೀರ್ಪು ನೀಡಿದ್ದ ಅಲಹಾಬಾದ್ ಹೈಕೋರ್ಟ್, ವಿವಾದಿತ 2.7 ಎಕರೆ ಭೂಮಿಯನ್ನು ಮೂರು ಹೋಳುಗಳಾಗಿ ಮಾಡಿ ಹಂಚಿತ್ತು.  ಆದರೆ ಕಾನೂನಿನ ನೆಲೆಗಿಂತ ಹೆಚ್ಚಾಗಿ ಧಾರ್ಮಿಕ ನಂಬಿಕೆಯನ್ನಾಧರಿಸಿ  ವಿವಾದಿತ ಭೂಪ್ರದೇಶವನ್ನು ಹೋಳುಗಳನ್ನಾಗಿಸಿ ಹಂಚುವಂತಹ ಮಧ್ಯಸ್ಥಿಕೆದಾರನ ಕೆಲಸವನ್ನು ಮಾಡಿದ ನ್ಯಾಯಾಲಯದ  ಈ ತೀರ್ಪಿಗೆ ಮನ್ನಣೆಯೇನೂ ಸಿಗಲಿಲ್ಲ ಎಂಬುದನ್ನು ನೆನಪಿಸಿಕೊಳ್ಳಬೇಕು. ಹೀಗಾಗಿ
ಪ್ರಕರಣ ಈಗ ಸುಪ್ರೀಂ ಕೋರ್ಟ್ ಅಂಗಳದಲ್ಲಿದೆ.  ಈ ವಿಚಾರದ ಗಂಭೀರತೆಯನ್ನು ಸುಪ್ರೀಂಕೋರ್ಟ್ ಕೂಡ ಅರ್ಥ ಮಾಡಿಕೊಂಡಿದೆ.

ಆದರೆ ಒಮ್ಮತದ ಇತ್ಯರ್ಥ ಸಾಧ್ಯವಾಗಬಹುದು ಎಂಬಂತಹ ಅದರ ಆಶಯ ವಾಸ್ತವವನ್ನು ಸರಿಯಾಗಿ  ಗ್ರಹಿಸದಂತಹ ಅತಿರಂಜಿತ ನಿರೀಕ್ಷೆ ಎನ್ನಬಹುದು. ವಿವಾದವನ್ನು ಕಾನೂನಿನ ಮೂಲಕ ಇತ್ಯರ್ಥ ಮಾಡಲು ಸಾಧ್ಯವೇ ಇಲ್ಲ ಎಂಬಂತಹ ಭಾವನೆಗಳು ಬಲಿಯಲು ಅವಕಾಶ ನೀಡುವುದು ಸಲ್ಲದು. ಏಳು ವರ್ಷಗಳಷ್ಟು ದೀರ್ಘ ಕಾಲದಿಂದ ಸುಪ್ರೀಂ ಕೋರ್ಟ್‌ನಲ್ಲಿರುವ ಈ ವಿಚಾರದ ಹೊಣೆಗಾರಿಕೆಯನ್ನು ಬೇರೆಯವರಿಗೆ ವರ್ಗಾಯಿಸಲು ಮುಂದಾಗುವುದು ಸಲ್ಲದು. ಈ ವಿವಾದಕ್ಕೆ ಹಲವು ಆಯಾಮಗಳಿರಬಹುದು. ಆದರೆ ನೆಲದ ಕಾನೂನಿಗೆ ಅನುಸಾರವಾಗಿ ತೀರ್ಪು ನೀಡಬೇಕಾದ ಹೊಣೆಗಾರಿಕೆಯಿಂದ ಸುಪ್ರೀಂ ಕೋರ್ಟ್ ಹಿಂದೆ ಸರಿಯಲಾಗದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT