ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಟಿಲ ಬ್ರಹ್ಮಗಂಟು

Last Updated 25 ಮಾರ್ಚ್ 2017, 5:15 IST
ಅಕ್ಷರ ಗಾತ್ರ

ಇಳಯರಾಜ ಅವರು ಬಹುಕಾಲದ ಸ್ನೇಹಿತ, ಸಂಗೀತ ಲೋಕದ ಜೊತೆಗಾರ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ತಮ್ಮ ಕಾನೂನು ಸಲಹೆಗಾರರ ಮೂಲಕ ಈಚೆಗೆ ನೋಟಿಸ್‌ ನೀಡಿರುವುದು ವಿವಾದ ಉಂಟುಮಾಡಿದೆ.

ಎಸ್‌ಪಿಬಿ ಅವರು ಫೇಸ್‌ಬುಕ್‌ನಲ್ಲಿ ಬರೆದಿರುವ ಪ್ರಕಾರ: ನೋಟಿಸ್‌ ಅನ್ನು ಎಸ್‌ಪಿಬಿ, ಅವರ ಪುತ್ರ, ಸಹೋದರನಿಗೆ ನೀಡಲಾಗಿದೆ. ಇಳಯರಾಜ ಅವರ ಯಾವುದೇ ಹಾಡುಗಳನ್ನು ಹಾಡದಂತೆ ಸೂಚಿಸಲಾಗಿದೆ. ಅಲ್ಲದೆ, ಅನುಮತಿ ಇಲ್ಲದೆ ತಮ್ಮ ಹಾಡುಗಳನ್ನು ಹಾಡದಂತೆ ನೋಡಿಕೊಳ್ಳಬೇಕು ಎಂದು ಎಸ್‌ಪಿಬಿ ಅವರ ಸಂಗೀತ ಕಾರ್ಯಕ್ರಮಗಳ ಆಯೋಜಕರಿಗೆ ಹಾಗೂ ಹಾಡಲು ವೇದಿಕೆ ಕೊಡುವವರಿಗೆ ಸೂಚಿಸಲಾಗಿದೆ. ಈ ಸೂಚನೆಗಳನ್ನು ಪಾಲಿಸದಿದ್ದರೆ ಇಳಯರಾಜ ಅವರ ಹಕ್ಕುಸ್ವಾಮ್ಯಕ್ಕೆ ಧಕ್ಕೆಯಾಗುತ್ತದೆ, ಹಕ್ಕುಸ್ವಾಮ್ಯ ಉಲ್ಲಂಘಿಸುವವರು ಭಾರಿ ಮೊತ್ತದ ದಂಡ ಪಾವತಿಸಬೇಕಾಗುತ್ತದೆ, ಕಾನೂನಿನ ಕ್ರಮ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆ ಕೂಡ ನೋಟಿಸ್‌ನಲ್ಲಿದೆ ಎಂದು ಫೇಸ್‌ಬುಕ್‌ನಲ್ಲಿ ಎಸ್‌ಪಿಬಿ ಬರೆದಿದ್ದಾರೆ.

ಈ ನೋಟಿಸ್‌ಗೆ ಕಾನೂನಿನ ಮಾನ್ಯತೆ ಎಷ್ಟಿದೆ ಎಂಬ ಪ್ರಶ್ನೆಯನ್ನು ಇಲ್ಲಿ ಎತ್ತಬಹುದು. ಸಂಗೀತದ ವಿಚಾರದಲ್ಲಿ ಹೇಳುವುದಾದರೆ, ಈ ಪ್ರಶ್ನೆ ಅಷ್ಟೇನೂ ಮುಖ್ಯವಾದದ್ದಲ್ಲ ಎಂಬುದನ್ನು ಗಮನಿಸಬೇಕು. ಹಾಡಿಗೆ ಸಂಗೀತ ನೀಡಿದ (Compose) ಮಾತ್ರಕ್ಕೆ ಇಳಯರಾಜ ಅವರಿಗೆ ಅದರ ಮೇಲೆ ಪೂರ್ಣ ಹಕ್ಕು ದೊರೆಯುತ್ತದೆ ಎಂದು ಭಾವಿಸುವಂತಿಲ್ಲ. ಹಕ್ಕುಸ್ವಾಮ್ಯ ಕಾಯ್ದೆಗೆ 2012ರಲ್ಲಿ ತಿದ್ದುಪಡಿ ತರುವ ಮೊದಲು, ಸಿನಿಮಾ ನಿರ್ಮಾಣ ಮಾಡುವ ವ್ಯಕ್ತಿಗೆ ಹಾಡಿನ ಸಂಗೀತ ರಚಿಸಿಕೊಟ್ಟ ವ್ಯಕ್ತಿ ಆ ಕೆಲಸವನ್ನು ‘ಬಾಡಿಗೆ ಆಧಾರದಲ್ಲಿ’ ಮಾಡಿಕೊಟ್ಟಿದ್ದಾನೆ ಎಂದು ಭಾವಿಸಲಾಗುತ್ತಿತ್ತು.

ಇಲ್ಲಿ ಸಿನಿಮಾ ನಿರ್ಮಾಪಕ ಆ ಹಾಡಿನ ಮೇಲೆ ಎಲ್ಲ ಬಗೆಯ ಹಕ್ಕುಗಳನ್ನು ಹೊಂದಿರುತ್ತಿದ್ದ. ಇಂಥ ಸಂದರ್ಭದಲ್ಲಿ ಹಾಡಿನ ಮೇಲೆ ಇಳಯರಾಜ ಅವರಿಗೆ ಹಕ್ಕುಸ್ವಾಮ್ಯ ಇರಬೇಕು ಎಂದೇನೂ ಇಲ್ಲ. ಹಾಗಾಗಿ ಈ ಹಾಡುಗಳನ್ನು ಸಾರ್ವಜನಿಕವಾಗಿ ಹಾಡದಂತೆ ಎಸ್‌ಪಿಬಿ ಅವರನ್ನು ಸಿನಿಮಾ ನಿರ್ಮಾಪಕ ಮಾತ್ರ ತಡೆಯಬಹುದು. ಆದರೆ, ಬಹುತೇಕ ಹಾಡುಗಳ ನಿರ್ಮಾಪಕ ಇಳಯರಾಜ ಅವರೇ ಆಗಿರುವ ಅಥವಾ ಅವರು ಆ ಹಾಡುಗಳ ಹಕ್ಕುಸ್ವಾಮ್ಯವನ್ನು ಖರೀದಿಸಿರುವ ಸಾಧ್ಯತೆಯೂ ಇದೆ.

ಸಂಗೀತ ನೀಡಿದವರಿಗೆ, ಸಾಹಿತ್ಯ ರಚಿಸಿದವರಿಗೆ ಮತ್ತು ಅದನ್ನು ಹಾಡುವವರಿಗೆ ಹೆಚ್ಚಿನ ಹಕ್ಕುಗಳನ್ನು ನೀಡುವ ಉದ್ದೇಶದಿಂದ ಹಕ್ಕುಸ್ವಾಮ್ಯ ಕಾಯ್ದೆಗೆ 2012ರಲ್ಲಿ ತಿದ್ದುಪಡಿ ತರಲಾಯಿತು. ಈ ತಿದ್ದುಪಡಿ ಜಾರಿಗೆ ಬಂದ ನಂತರ, ಸಾಹಿತ್ಯ ರಚನೆಕಾರರು ಮತ್ತು ಸಂಗೀತ ಸಂಯೋಜಿಸಿದವರು ಹಾಡಿನ ಮೇಲಿನ ಹಕ್ಕುಗಳನ್ನು ನಿರ್ಮಾಪಕರಿಗೆ ಅಪ್ರಜ್ಞಾಪೂರ್ವಕವಾಗಿ ವರ್ಗಾಯಿಸಿಬಿಟ್ಟಿರುತ್ತಾರೆ ಎಂದು ಭಾವಿಸಲಾಗದು. ಇದರ ಅರ್ಥ, ಇಳಯರಾಜ ಅವರು 2012ರ ನಂತರ ಸಂಗೀತ ಸಂಯೋಜನೆ ಮಾಡಿದ ಹಾಡುಗಳ ಸ್ವಾಮ್ಯತ್ವ ಉಳಿಸಿಕೊಂಡಿರಬಹುದು.

ಮೇಲಿನ ಎರಡೂ ಸಂದರ್ಭಗಳು ಇಳಯರಾಜ ಅವರು ಸಂಗೀತ ನೀಡಿರುವ ಹಾಡುಗಳ ಮೇಲೆ ಗೀತ ರಚನೆಕಾರ ಹೊಂದಿರುವ ಹಕ್ಕುಸ್ವಾಮ್ಯವನ್ನು ನಿರ್ಲಕ್ಷಿಸುತ್ತವೆ. 2012ರ ತಿದ್ದುಪಡಿಯ ನಂತರ ಇಳಯರಾಜ ಅವರು ಸಂಗೀತ ಸಂಯೋಜಿಸಿದ ಹಾಡುಗಳ ಹಕ್ಕುಸ್ವಾಮ್ಯವನ್ನು ಇಬ್ಬರೂ – ಗೀತ ರಚನೆಕಾರ ಹಾಗೂ ಇಳಯರಾಜ – ಹೊಂದಿರುತ್ತಾರೆ. (ಅಂದರೆ, ಸಂಗೀತ ಮತ್ತು ಸಾಹಿತ್ಯ ಒಟ್ಟಿಗೆ ಇರುವ ಹಾಡುಗಳ ಮೇಲಿನ ಸ್ವಾಮ್ಯ) ಸಂಗೀತ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಅಂತರರಾಷ್ಟ್ರೀಯ ಸಂಸ್ಥೆಗಳ ಜೊತೆ ಇಳಯರಾಜ ಅವರು ಹೆಸರು ನೋಂದಾಯಿಸಿಕೊಂಡಿದ್ದರೆ, ತಮ್ಮ ಹಾಡುಗಳನ್ನು ವಿದೇಶದಲ್ಲಿ ಹಾಡಿ, ಪ್ರದರ್ಶಿಸುವ ಹಕ್ಕುಗಳನ್ನು ಆ ಸಂಸ್ಥೆಗೆ ಅವರು ನೀಡಿದ್ದಾರೆ ಎಂದು ಅರ್ಥ.

ಇದರ ಅರ್ಥ, ಇಂಥ ಸಂಸ್ಥೆಗಳಿಂದ ಎಸ್‌ಪಿಬಿ ಅಥವಾ ಕಾರ್ಯಕ್ರಮ ಆಯೋಜಕರು ಪೂರ್ವಾನುಮತಿ ಪಡೆದರೆ ಹಾಡು ಹಾಡಲು ಅಡ್ಡಿಯಿಲ್ಲ. ಹಾಗಾಗಿ, ಹಾಡಿನ ಹಕ್ಕುಸ್ವಾಮ್ಯ ಯಾರದ್ದು ಎಂಬುದು ಜಟಿಲವಾದ ವಿಚಾರ. ಈ ಗೋಜಲನ್ನು ಬಿಡಿಸುವುದು ಸರಳ ಕೆಲಸವಲ್ಲ. ಇಳಯರಾಜ ಅವರು ಎಸ್‌ಪಿಬಿ ಅವರಿಗೆ ಕಳುಹಿಸಿರುವ ನೋಟಿಸ್‌ ಅನ್ನು ಆಲೋಚಿಸಿ ಸಿದ್ಧಪಡಿಸಿದಂತೆ ಕಾಣುತ್ತಿಲ್ಲ. ಅದೊಂದು ಆಕ್ರಮಣಕಾರಿ ಧೋರಣೆಯಂತೆ ಭಾಸವಾಗುತ್ತಿದೆ. ತಮ್ಮ ಯಾವ ಸಂಗೀತ ಅಥವಾ ಹಾಡಿನ ಮೇಲೆ ತಮಗೆ ವಿವಾದಕ್ಕೆ ಆಸ್ಪದ ಇಲ್ಲದಂತೆ ಹಕ್ಕು ಇದೆ ಎಂಬುದನ್ನು ಇಳಯರಾಜ ಹಾಗೂ ಅವರ ಕಾನೂನು ಸಲಹೆಗಾರರು ಖಚಿತಪಡಿಸಿಕೊಳ್ಳಬೇಕಿತ್ತು.

ನೋಟಿಸ್‌ನ ಕಾನೂನು ಮಾನ್ಯತೆಗಿಂತ ಹೆಚ್ಚು ಪ್ರಮುಖವಾದ ವಿಚಾರವೊಂದಿದೆ. ಅದು ಸಂಗೀತದ ಬೆಳವಣಿಗೆಗೆ ಸಂಬಂಧಿಸಿದ್ದು. ಇಳಯರಾಜ ಅವರ ಸಂಗೀತದಿಂದ ಸ್ಫೂರ್ತಿ ಪಡೆದು ಅದನ್ನು ಗಾಯಕರು ಹಾಡಿರದಿದ್ದರೆ ಅವರ ಸಂಗೀತದ ಬಗ್ಗೆ ಹೆಚ್ಚಿನವರಿಗೆ ಗೊತ್ತಾಗುತ್ತಿರಲಿಲ್ಲ. ಹೀಗೆ ಹಾಡುವ ಗಾಯಕರು ಇಳಯರಾಜ ಅವರ ಜೊತೆ ವೃತ್ತಿಪರ ಸಂಬಂಧ ಹೊಂದಿರಬಹುದು ಅಥವಾ ಅವರು ತಮ್ಮ ಸ್ನೇಹಿತರ ಎದುರು ಖುಷಿಗಾಗಿ ಹಾಡುವವರಿರಬಹುದು.

ಸಂಗೀತ ಬೆಳೆಯುವುದು ಅದನ್ನು ಪ್ರದರ್ಶಿಸಿದಾಗ. ನೋಟಿಸ್‌ ಅಥವಾ ಕಾನೂನು ಕ್ರಮದ ಎಚ್ಚರಿಕೆ ನೀಡಿದಾಗ ಅಲ್ಲ. ಇಂತಹ ನೋಟಿಸ್‌ಗಳಿಂದ ಭಯಭೀತರಾಗಿ ಗಾಯಕರು ಮುಂದೊಂದು ದಿನ ಇಳಯರಾಜ ಅವರ ಹಾಡುಗಳನ್ನು ಸಂಗೀತ ಪ್ರಿಯರ ಎದುರು ಹಾಡುವುದರಿಂದ ದೂರವಿರುವ ಸಾಧ್ಯತೆ ಇದೆ. ತಮ್ಮ ಕೆಲವು ಹಾಡುಗಳನ್ನು ಇತರರು ಹಾಡದಂತೆ ತಡೆಯುವ ಹಕ್ಕು ಇಳಯರಾಜ ಅವರಿಗೆ ಇದ್ದಿರಬಹುದು. ಆದರೆ, ಇಳಯರಾಜ ಅವರು ಸಂಪಾದಿಸಿರುವ ಹೆಸರಿಗೆ ಈ ಕ್ರಮದಿಂದ ಏನಾಗಬಹುದು ಎಂಬುದು ಬೇರೆ ವಿಚಾರ.
-ರೋಹನ್ ಜಾರ್ಜ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT