ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಹಿಳಾ ತಂಡದಲ್ಲಿ ಕನ್ನಡತಿಯರು ಹೆಚ್ಚಲಿ’

ಭಾರತ ತಂಡದ ನೂತನ ಸಹಾಯಕ ಕೋಚ್‌ ಅರ್ಜುನ್‌ ಹಾಲಪ್ಪ ಅಭಿಮತ
Last Updated 24 ಮಾರ್ಚ್ 2017, 19:55 IST
ಅಕ್ಷರ ಗಾತ್ರ

ಬೆಂಗಳೂರು: ಜೂನಿಯರ್‌ ಹಂತದಲ್ಲೇ ಅಮೋಘ ಆಟದ ಮೂಲಕ ಗಮನ ಸೆಳೆದು ಬಳಿಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಛಾಪು ಮೂಡಿಸಿದ ಕರ್ನಾಟಕದ ಪ್ರತಿಭೆ ಅರ್ಜುನ್‌ ಹಾಲಪ್ಪ.

2001ರಲ್ಲಿ ಈಜಿಪ್ಟ್್ ವಿರುದ್ಧ ಆಡುವ ಮೂಲಕ ಅಂತರರಾಷ್ಟ್ರೀಯ ಹಾಕಿಗೆ ಪದಾರ್ಪಣೆ ಮಾಡಿದ ಕೊಡಗಿನ ಅರ್ಜುನ್‌  ಅವರು ಒಲಿಂಪಿಕ್ಸ್‌, ಕಾಮನ್‌ ವೆಲ್ತ್‌ ಮತ್ತು ಚಾಂಪಿಯನ್ಸ್‌ ಟ್ರೋಫಿ ಯಂತಹ ಮಹತ್ವದ ಕೂಟಗಳಲ್ಲಿ ದೇಶ ವನ್ನು ಪ್ರತಿನಿಧಿಸಿದ ಹೆಗ್ಗಳಿಕೆ ಹೊಂದಿದ್ದಾರೆ.
2011ರ ಸುಲ್ತಾನ್‌ ಅಜ್ಲಾನ್‌ ಷಾ ಕಪ್‌ ಹಾಕಿ ಟೂರ್ನಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದ ಅವರು ರಾಷ್ಟ್ರೀಯ ಆಯ್ಕೆ ಸಮಿತಿ ಸದಸ್ಯ ರಾಗಿಯೂ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

ಈಗ ಭಾರತ ಹಾಕಿ ತಂಡದ ಸಹಾ ಯಕ ಕೋಚ್‌ ಆಗಿ ನೇಮಕವಾಗಿರುವ ಅರ್ಜುನ್‌ ಅವರು ತಮ್ಮ ಮುಂದಿರುವ ಸವಾಲುಗಳ ಬಗ್ಗೆ ‘ ಪ್ರಜಾವಾಣಿ’ ಜೊತೆ  ಮಾತನಾಡಿದ್ದಾರೆ.

l ಭಾರತ ತಂಡದ ಸಹಾಯಕ ಕೋಚ್‌ ಆಗಿ ನೇಮಕವಾಗಿದ್ದೀರಿ. ಹೇಗನಿಸುತ್ತಿದೆ?
ಸಹಜವಾಗಿಯೇ ಖುಷಿಯಾಗುತ್ತಿದೆ. ಜೊತೆಗೆ ಹೆಮ್ಮೆಯೂ ಆಗುತ್ತಿದೆ. ನನ್ನನ್ನು ಈ ಹುದ್ದೆಗೆ ನೇಮಿಸಿರುವ ಹಾಕಿ ಇಂಡಿಯಾಕ್ಕೆ ಕೃತಜ್ಞನಾಗಿದ್ದೇನೆ.  ಹಿರಿಯ ಮತ್ತು ಕಿರಿಯ ಆಟಗಾರರ ಜೊತೆ ಅನುಭವ ಹಂಚಿಕೊಳ್ಳಲು ನನಗೆ ಸಿಕ್ಕಿರುವ ಉತ್ತಮ ಅವಕಾಶ ಅಂತ ಭಾವಿಸಿದ್ದೇನೆ.

l ಕರ್ನಾಟಕದಲ್ಲಿ ಹಾಕಿಯ ಅಭಿವೃದ್ಧಿ ಹೇಗಿದೆ?
ಮೊದಲಿನಿಂದಲೂ ಕರ್ನಾಟಕದಲ್ಲಿ ಹಾಕಿಗೆ ಅಪಾರ ಜನಮನ್ನಣೆ ಇದೆ. ನಮ್ಮ ರಾಜ್ಯದ ಅನೇಕ ಪ್ರತಿಭೆಗಳು ರಾಷ್ಟ್ರ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ಕೇವಲ ಆಟಗಾರರಾಗಿ ಮಾತ್ರವಲ್ಲದೆ ಯಶಸ್ವಿ ನಾಯಕರಾಗಿಯೂ  ಅನೇಕರು ಈ ಕ್ರೀಡೆಯಲ್ಲಿ ತಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ. ಸದ್ಯ ವಿ.ಆರ್‌. ರಘು ನಾಥ್‌, ಎಸ್‌.ವಿ. ಸುನಿಲ್‌, ನಿಕಿನ್‌ ತಿಮ್ಮಯ್ಯ ಅವರೂ ಚೆನ್ನಾಗಿ ಆಡುತ್ತಿದ್ದಾರೆ.

l ಮಹಿಳಾ ತಂಡದಲ್ಲಿ ರಾಜ್ಯದ ಆಟಗಾರ್ತಿಯರಿಗೆ ಸ್ಥಾನ ಸಿಗುತ್ತಿಲ್ಲವಲ್ಲ?
ಪುರುಷರಂತೆ ಮಹಿಳಾ ತಂಡದಲ್ಲೂ ರಾಜ್ಯದವರು ಇರಬೇಕೆಂಬ ಆಸೆ ನನಗೂ ಇದೆ. ಇದಕ್ಕಾಗಿ ನಮ್ಮವರು ಗಮನಾರ್ಹ ಸಾಮರ್ಥ್ಯ ತೋರಬೇಕಾಗುತ್ತದೆ.  ಚೆನ್ನಾಗಿ ಆಡಿದರೆ ಖಂಡಿತವಾಗಿಯೂ  ರಾಷ್ಟ್ರೀಯ ತಂಡದಲ್ಲಿ ಸ್ಥಾನ ಸಿಗುತ್ತದೆ.   ಸಾಮರ್ಥ್ಯವಿಲ್ಲದೆ ಸ್ಥಾನ ಸಿಗಬೇಕೆಂದರೆ ಹೇಗೆ ಸಾಧ್ಯ.

lಇತ್ತೀಚಿನ ದಿನಗಳಲ್ಲಿ ಸೀನಿಯರ್‌ ಮತ್ತು ಜೂನಿಯರ್‌ ತಂಡಗಳು ಉತ್ತಮ ಸಾಮರ್ಥ್ಯ ತೋರು ತ್ತಿವೆ. ಈ ಯಶಸ್ಸಿನ ಹಿಂದಿನ ಗುಟ್ಟೇನು?ಹಾಕಿಯ ಅಭಿವೃದ್ಧಿಗೆ ಹಾಕಿ ಇಂಡಿಯಾ ರೂಪಿಸಿರುವ ಯೋಜನೆಗಳ ಫಲ ಇದು ಅಂತ ನಾನು ಭಾವಿಸುತ್ತೇನೆ.ಇದರಲ್ಲಿ ಹಾಕಿ ಇಂಡಿಯಾ ಲೀಗ್‌ನ ಪಾತ್ರವೂ ಮಹತ್ತರವಾದುದು. ಈ ಲೀಗ್‌ ನಲ್ಲಿ ವಿದೇಶದ ಹಲವು ಘಟಾನುಘಟಿ ಆಟಗಾರರು ಆಡುತ್ತಾರೆ. ಅವರೊಂದಿಗೆ ನಮ್ಮ ಆಟಗಾರರು ಬೆರೆಯುವುದರಿಂದ ಅವರಲ್ಲಿ ಹೊಸ ಹುರುಪು ಮೂಡುತ್ತದೆ. ಜೊತೆಗೆ ಅವರ  ಅಭ್ಯಾಸ ಕ್ರಮ, ಎದು ರಾಳಿಗಳನ್ನು ಹಣಿಯುವ ತಂತ್ರ ಹೀಗೆ ಹಲವು ವಿಷಯಗಳನ್ನು ಕಲಿಯಲು ಈ ಲೀಗ್‌ ನಾಂದಿಯಾಗಿದೆ. ಇದರಿಂದ ನಮ್ಮ ಯುವ ಆಟಗಾರರಿಗೆ ತುಂಬಾ ಪ್ರಯೋಜನವಾಗಿದೆ.

l ನೀವು ಕಂಡಂತೆ ಈಗ ಆಟದಲ್ಲಿ ಏನಾದರೂ ಬದಲಾವಣೆ ಆಗಿದೆಯೇ?
ಹಾಕಿ ಮೊದಲಿನ ಹಾಗೆಯೇ ಇದೆ. ಇದರಲ್ಲಿ ಯಾವ ಬದಲಾವಣೆಯೂ ಆಗಿಲ್ಲ. ಆದರೆ ತರಬೇತಿ ವಿಧಾನದಲ್ಲಿ ಮಹತ್ತರವಾದ ಸುಧಾರಣೆಳಾಗಿವೆ. ಈಗ ಹೆಚ್ಚು ಆಧುನಿಕ ವಿಧಾನಗಳನ್ನು ಅನುಸರಿಸಲಾಗುತ್ತಿದೆ. ಇದರಿಂದ ಆಟಗಾರರಿಗೂ ತುಂಬಾ ಅನುಕೂಲ ವಾಗುತ್ತಿದೆ.

l ನಿಮ್ಮ ಮುಂದಿರುವ ಸವಾಲುಗಳೇನು?
ಸವಾಲುಗಳು ಅಂತ ಏನಿಲ್ಲ. ಈ ಮೊದಲು ಆಟಗಾರನಾಗಿ, ಆಯ್ಕೆ ಸಮಿತಿ ಸದಸ್ಯನಾಗಿ ಸಾಕಷ್ಟು ಕಲಿತಿದ್ದೇನೆ. ಈಗ ಇನ್ನಷ್ಟು ಹೊಸ ವಿಷಯಗಳನ್ನು ಕಲಿಯುವ ಅವಕಾಶ ಸಿಕ್ಕಿದೆ. ಈಗಿರುವ ತಂಡದಲ್ಲಿ ಈ ಹಿಂದೆ ನನ್ನೊಂದಿಗೆ ಆಡಿದ ಆಟಗಾರರೂ ಇದ್ದಾರೆ. ಜೊತೆಗೆ ಹೊಸಬರೂ ಇದ್ದಾರೆ. ಅಭಿಪ್ರಾಯ ಭೇದಕ್ಕೆ ಅವಕಾಶ ಕೊಡದೆ ಅವರನ್ನೆಲ್ಲಾ ಒಗ್ಗೂಡಿಸಿ ಮುಂದೆ ಸಾಗಬೇಕು.

l 2020ರ ಒಲಿಂಪಿಕ್ಸ್‌ ಅನ್ನು ಗಮನದಲ್ಲಿಟ್ಟುಕೊಂಡು ಏನಾದರೂ ಹೊಸ ಯೋಜನೆಗಳನ್ನು ರೂಪಿಸಿದ್ದೀರಾ?
ಒಲಿಂಪಿಕ್ಸ್‌ ಹಾದಿ ಇನ್ನೂ ಬಹಳಷ್ಟು ದೂರ ಇದೆ. ಅದರ ಬಗ್ಗೆ ಯೋಚಿಸುವ ಸಮಯ ಇದಲ್ಲ. ಅದಕ್ಕೂ ಮುನ್ನ ಏಷ್ಯನ್‌ ಕ್ರೀಡಾಕೂಟ , ಕಾಮನ್‌ವೆಲ್ತ್‌ ಕ್ರೀಡಾಕೂಟಗಳಿವೆ. ಅವುಗಳಲ್ಲಿ ಉತ್ತಮ ಸಾಮರ್ಥ್ಯ ನೀಡುವ ನಿಟ್ಟಿನಲ್ಲಿ ಆಟಗಾರರನ್ನು ಸಜ್ಜುಗೊಳಿಸಬೇಕಿದೆ. ಏಷ್ಯನ್‌ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದರೆ ನೇರವಾಗಿ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಬಹುದು. ಇಲ್ಲದಿದ್ದರೆ ಒಲಿಂಪಿಕ್ಸ್‌ ಅರ್ಹತಾ ಟೂರ್ನಿಗಳನ್ನು ಆಡಬೇಕಾಗು ತ್ತದೆ. ಹೀಗಾಗಿ ನಮ್ಮ ಮೊದಲ ಗುರಿ ಏಷ್ಯನ್‌ ಕ್ರೀಡಾಕೂಟದಲ್ಲಿ ಚಿನ್ನ ಗೆಲ್ಲುವುದು. ಬಳಿಕ ವಿಶ್ವಕಪ್‌ನಲ್ಲಿ ಕನಿಷ್ಠ ಸೆಮಿಫೈನಲ್‌ವರೆಗೆ ಪ್ರವೇಶಿಸಬೇಕು.

l ಒಬ್ಬ ಆಟಗಾರನಾಗಿ ಸಾಯ್‌ ಮತ್ತು ರಾಜ್ಯ ಕ್ರೀಡಾ ಹಾಸ್ಟೆಲ್‌ಗಳ ತರಬೇತಿ ವಿಧಾನದಲ್ಲಿ ಏನು ವ್ಯತ್ಯಾಸ ಇದೆ ಅನಿಸುತ್ತದೆ?
ಸಾಕಷ್ಟು ವ್ಯತ್ಯಾಸ ಇದೆ. ಜೂನಿಯರ್‌ ಹಂತದಲ್ಲಿ ಮಕ್ಕಳು ಹೇಗೆ ಆಡುತ್ತಾರೆ ಎಂಬುದರ ಮೇಲೆ ಅವರ ಭವಿಷ್ಯ ನಿಂತಿರುತ್ತದೆ. ಹೀಗಾಗಿ ಬಾಲ್ಯದಲ್ಲಿಯೇ ಅವರಿಗೆ ಉತ್ತಮ ತರಬೇತಿ ಸಿಗಬೇಕು.  ಹೀಗಾಗಿ ಕೋಚ್‌ಗಳ ಮೇಲೆ ಗುರುತರ ಜವಾಬ್ದಾರಿ ಇದೆ. ಅದನ್ನು ಅವರು ಅರ್ಥ ಮಾಡಿಕೊಳ್ಳಬೇಕು. ಕಲಿಸುವ ಜೊತೆಗೆ ತಾವೂ ಹೊಸ  ವಿಷಯಗಳನ್ನು ತಿಳಿದು ಕೊಳ್ಳಲು ಮನಸ್ಸು ಮಾಡಬೇಕು. ಅವರಿಗೇೆ ಏನೂ ಗೊತ್ತಿಲ್ಲದಿದ್ದರೆ ಮಕ್ಕಳಿಗೆ ಏನು  ಹೇಳಿಕೊಡಲು ಸಾಧ್ಯ.

l ಜೂನಿಯರ್‌ ವಿಭಾಗದ ಆಟಗಾರರಿಗೆ ನಿಮ್ಮ ಕಿವಿ ಮಾತೇನು?
ಶ್ರೇಷ್ಠ ಸಾಮರ್ಥ್ಯ ಮೈಗೂಡಿಸಿ ಕೊಂಡ ಎಲ್ಲರಿಗೂ ಖಂಡಿತವಾಗಿಯೂ ರಾಷ್ಟ್ರೀಯ ತಂಡದಲ್ಲಿ ಅವಕಾಶ ಸಿಗುತ್ತದೆ. ಅದಕ್ಕೂ ಮುನ್ನ ಶ್ರದ್ಧೆಯಿಂದ  ಹೊಸ ಕೌಶಲಗಳನ್ನು ಕಲಿಯಬೇಕು. ಜೊತೆಗೆ ಸಿಕ್ಕ ಅವಕಾಶದಲ್ಲಿ ಉತ್ತಮ ಸಾಮರ್ಥ್ಯ ತೋರಬೇಕು. ಹಾಗಾದಾಗ ಮಾತ್ರ ಭವಿಷ್ಯ ಉಜ್ವಲವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT