ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರಣಿ : ಆರು ಮಂದಿ ವಿರುದ್ಧ ಎಫ್‌ಐಆರ್‌

Last Updated 24 ಮಾರ್ಚ್ 2017, 20:09 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ನಡೆದ ಅಂಗನವಾಡಿ ಕಾರ್ಯಕರ್ತೆಯರ ಅಹೋರಾತ್ರಿ ಧರಣಿಯ ನೇತೃತ್ವ ವಹಿಸಿದ್ದ  ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸಂಘದ ಅಧ್ಯಕ್ಷೆ ವರಲಕ್ಷ್ಮಿ  ಸೇರಿದಂತೆ ಆರು ಮಂದಿ ವಿರುದ್ಧ ಶುಕ್ರವಾರ ಎಫ್‌ಐಆರ್‌ ದಾಖಲಾಗಿದೆ.

‘ಶಾಂತಿಯುತ ಪ್ರತಿಭಟನೆ ನಡೆಸುವುದಾಗಿ ಅನುಮತಿ ಪಡೆದಿದ್ದ ಸಂಘಟಕರು ಜನರನ್ನು ಪ್ರಚೋದಿಸಿ  ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ. ನಿರ್ಬಂಧಗಳನ್ನೂ ಉಲ್ಲಂಘಿಸಿದ್ದಾರೆ. ಹೀಗಾಗಿ ಅವರೆಲ್ಲರ ವಿರುದ್ಧ ಉಪ್ಪಾರಪೇಟೆ ಠಾಣೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದೇವೆ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಅನುಚೇತ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸರ್ಕಾರಿ ಅಧಿಕಾರಿಯ ಆದೇಶ ಪಾಲಿಸದ (ಐಪಿಸಿ 188) ಆರೋಪ ಅವರ ಮೇಲಿದೆ. ಇದು ಕ್ರಿಮಿನಲ್‌ ಮೊಕದ್ದಮೆ ಅಲ್ಲ. ಈ ಅಪರಾಧಕ್ಕೆ ₹200 ದಂಡ ವಿಧಿಸಲಾಗುತ್ತದೆ’ ಎಂದು ಹೇಳಿದರು. ಸಂಘದ ಪ್ರಧಾನ ಕಾರ್ಯದರ್ಶಿ ಸುನಂದಾ, ಕಾರ್ಯದರ್ಶಿಗಳಾದ ಶಾಂತಾ ಘಂಟಿ, ಯುಮುನಾ ಗಾಂವ್ಕರ್‌, ಲಕ್ಷ್ಮೀದೇವಿ ಹಾಗೂ ಖಜಾಂಚಿ ಕಮಲಾ ಅವರ ಹೆಸರನ್ನು ಎಫ್‌ಐಆರ್‌ನ ಆರೋಪಿಗಳ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಹೋರಾಟದಲ್ಲಿ ಸಹಜ: ಈ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ವರಲಕ್ಷ್ಮಿ, ‘ಹೋರಾಟಗಾರರ ವಿರುದ್ಧ ಪ್ರಕರಣ ದಾಖಲಿಸುವುದು ಸಹಜ. ಕನಿಷ್ಠ ವೇತನವೊಂದೇ ನಮ್ಮ ಗುರಿ. ಎಫ್‌ಐಆರ್‌ಗೆ ನಾವು ಹೆದರಲ್ಲ. ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಭಯಪಡುವ ಅಗತ್ಯವಿಲ್ಲ’ ಎಂದರು.

‘2010ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮನೆಗೆ ಮುತ್ತಿಗೆ ಹಾಕಿದ್ದೆವು. ಆಗಲೂ ನಮ್ಮ ಮೇಲೆ ಪ್ರಕರಣ ದಾಖಲಾಗಿತ್ತು. ಈಗಲೂ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹೋಗಿ ಬರುತ್ತಿದ್ದೇವೆ’ ಎಂದರು.

ಸಮರ್ಥನೆ:  ಅಂಗನವಾಡಿ ಕಾರ್ಯಕರ್ತೆಯರ ಸಂಘಟನೆಗಳ ಮುಖಂಡರ ಮೇಲೆ ಎಫ್‌ಐಆರ್‌ ದಾಖಲು ಮಾಡಿರುವುದು ಪೊಲೀಸರು ಅನುಸರಿಸುವ ಸಾಮಾನ್ಯ ಪ್ರಕ್ರಿಯೆ ಎಂದು ಮುಖ್ಯಮಂತ್ರಿಗಳ ಸಚಿವಾಲಯ ತಿಳಿಸಿದೆ.

ಅಂಗನವಾಡಿ ಕಾರ್ಯಕರ್ತೆಯರ ಸಂಘಟನೆಗಳ ಮುಖಂಡರು ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲು ಅನುಮತಿ ಪಡೆದಿದ್ದರು. ಆದರೆ, ಪೂರ್ವಾನುಮತಿ ಇಲ್ಲದೆ ಪ್ರತಿಭಟನೆಯನ್ನು  ಸ್ಥಳಾಂತರಿಸಿದ  ಕಾರಣ ಎಫ್ಐಆರ್ ದಾಖಲಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT