ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೀಮ್ಡ್‌ ವಿ.ವಿ: ಶೇ 25ರಷ್ಟು ಸೀಟು ಪಡೆಯಲು ಯತ್ನ

Last Updated 24 ಮಾರ್ಚ್ 2017, 20:13 IST
ಅಕ್ಷರ ಗಾತ್ರ

ಬೆಂಗಳೂರು: ‘ಡೀಮ್ಡ್‌ ವಿಶ್ವವಿದ್ಯಾಲಯಗಳಲ್ಲಿನ ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್‌ಗಳ ಶೇ 25ರಷ್ಟು ಸೀಟುಗಳನ್ನು ರಾಜ್ಯ ಸರ್ಕಾರದ ಸ್ವಾಧೀನಕ್ಕೆ ಪಡೆಯುವ ಪ್ರಯತ್ನ ನಡೆಯುತ್ತಿದೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ ಹೇಳಿದರು.

ಕರ್ನಾಟಕ ವೃತ್ತಿಶಿಕ್ಷಣ ಸಂಸ್ಥೆಗಳ (ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ) (ತಿದ್ದುಪಡಿ) ಮಸೂದೆ 2017ರ  ಮೇಲೆ ವಿಧಾನ ಪರಿಷತ್ತಿನಲ್ಲಿ ನಡೆದ ಚರ್ಚೆಯಲ್ಲಿ ಅವರು ಮಾತನಾಡಿದರು.

ಡೀಮ್ಡ್‌ ವಿಶ್ವವಿದ್ಯಾಲಯಗಳು ಯುಜಿಸಿ ಕಾಯ್ದೆ ಪ್ರಕಾರ ನಡೆಯುತ್ತವೆ. ಖಾಸಗಿ ಮತ್ತು ಅಲ್ಪಸಂಖ್ಯಾತ ಕಾಲೇಜುಗಳಂತೆ ರಾಜ್ಯ ಸರ್ಕಾರಕ್ಕೆ ಸೀಟುಗಳನ್ನು ಬಿಟ್ಟು ಕೊಡುತ್ತಿರರಲಿಲ್ಲ. ಈಗ ಎನ್‌ಇಇಟಿ ಮೆರಿಟ್‌ ಆಧಾರದ ಮೇಲೆ ಸರ್ಕಾರವೇ ಸೀಟು ಹಂಚಿಕೆ ಕೌನ್ಸೆಲಿಂಗ್‌ ನಡೆಸುವುದರಿಂದ
ಅಲ್ಲಿನ ಕೆಲವು ಸೀಟುಗಳನ್ನು ಈ ಕೋಟಾದಡಿ ಹಂಚಿಕೆ ಮಾಡಲಾಗುವುದು ಎಂದರು.

ಡೀಮ್ಡ್‌ ವಿ.ವಿಗಳ ಪ್ರತಿನಿಧಿಗಳ ಜೊತೆ ಈಗಾಗಲೇ ಮಾತುಕತೆ ನಡೆಸಲಾಗಿದೆ. ಶೀಘ್ರದಲ್ಲೇ ಮತ್ತೊಮ್ಮೆ ಚರ್ಚೆ ಮಾಡಲಾಗುವುದು ಎಂದರು.
ಕೇಂದ್ರೀಕೃತ ಕೌನ್ಸೆಲಿಂಗ್‌:  ‘ಖಾಸಗಿ, ಅಲ್ಪಸಂಖ್ಯಾತ ಮತ್ತು ಡೀಮ್ಡ್‌ ವಿಶ್ವವಿದ್ಯಾಲಯಗಳ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ಅನಿವಾಸಿ ಭಾರತೀಯ (ಎನ್‌ಆರ್‌ಐ) ಕೋಟಾದ ಸೀಟುಗಳನ್ನು ಹೊರತುಪಡಿಸಿ, ಉಳಿದ ಸೀಟುಗಳಿಗೆ ಸರ್ಕಾರವೇ  ಕೇಂದ್ರೀಕೃತ ಕೌನ್ಸೆಲಿಂಗ್‌ ನಡೆಸಲಿದೆ’ ಎಂದು ಸಚಿವರು ಹೇಳಿದರು.

‘ಈ ಕೇಂದ್ರೀಕೃತ ಕೌನ್ಸೆಲಿಂಗ್‌ ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್‌ಗಳಿಗೆ ಆನ್ವಯ ಆಗುತ್ತದೆ.  ಕರ್ನಾಟಕ ಪರೀಕ್ಷಾ ಪ್ರಾಧಿಕಾರವೇ (ಕೆಇಎ) ಕೌನ್ಸೆಲಿಂಗ್‌ ನಡೆಸಲಿದೆ’ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್‌ನ ವಿ.ಎಸ್. ಉಗ್ರಪ್ಪ, ‘ಬೇರೆ ರಾಜ್ಯದಿಂದ ಬಂದು ಖಾಸಗಿ ಅಥವಾ ಡೀಮ್ಡ್‌ ವಿಶ್ವವಿದ್ಯಾಲಯದಲ್ಲಿ 5 ವರ್ಷಗಳ ವೈದ್ಯಕೀಯ ಪದವಿ ಪಡೆದವರಿಗೂ ಸ್ನಾತಕೋತ್ತರ ಪದವಿಯಲ್ಲಿ ಕರ್ನಾಟಕದ ಅಭ್ಯರ್ಥಿ ಎಂದು ಪರಿಗಣಿಸಲಾಗುತ್ತದೆ. ಇದರಿಂದ ಮೂಲ ಕನ್ನಡಿಗ ವಿದ್ಯಾರ್ಥಿಗಳಿಗೆ ಅನ್ಯಾಯ ಆಗುತ್ತದೆ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಚರ್ಚೆ ಬಳಿಕ ಮಸೂದೆಗೆ ಪರಿಷತ್ತಿನಲ್ಲಿ ಅನುಮೋದನೆ ನೀಡಲಾಯಿತು. ವಿಧಾನಸಭೆಯು ಈಗಾಗಲೇ ಈ ಮಸೂದೆಗೆ ಒಪ್ಪಿಗೆ ನೀಡಿದೆ.|

ಸೀಟು ಹಂಚಿಕೆ ಹೀಗಿರಲಿದೆ...
ವೈದ್ಯಕೀಯ, ದಂತ ವೈದ್ಯಕೀಯ ಪದವಿ (ಸರ್ಕಾರಿ ಕಾಲೇಜುಗಳು) ರಾಜ್ಯ ಮತ್ತು ಕೇಂದ್ರ ಸರ್ಕಾರ ತಲಾ ಶೇ 50ರಷ್ಟು ಸೀಟು ಹಂಚಿಕೆ

ಖಾಸಗಿ ಕಾಲೇಜುಗಳು: ಶೇ 40ರಷ್ಟು ಸೀಟುಗಳನ್ನು ರಾಜ್ಯ ಸರ್ಕಾರಕ್ಕೆ ನೀಡಬೇಕು

ಭಾಷಾ ಹಾಗೂ ಧಾರ್ಮಿಕ ಅಲ್ಪಸಂಖ್ಯಾತ ಕಾಲೇಜುಗಳು: ಶೇ 25ರಷ್ಟು ಸೀಟುಗಳನ್ನು ರಾಜ್ಯಕ್ಕೆ ಬಿಟ್ಟು ಕೊಡಬೇಕು.

ಸ್ನಾತಕೋತ್ತರ ಪದವಿ 
ಸರ್ಕಾರಿ ಕಾಲೇಜುಗಳು: ರಾಜ್ಯ ಮತ್ತು ಕೇಂದ್ರ ಸರ್ಕಾರ ತಲಾ ಶೇ 50ರಷ್ಟು ಹಂಚಿಕೆ.

ಖಾಸಗಿ ಕಾಲೇಜುಗಳು:  ಶೇ 33 ರಷ್ಟು ಸೀಟು ರಾಜ್ಯಕ್ಕೆ ಬಿಡಬೇಕು

ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತ ಕಾಲೇಜುಗಳು:  ಶೇ 20ರಷ್ಟು ಸೀಟುಗಳನ್ನು ಸರ್ಕಾರಕ್ಕೆ ನೀಡಬೇಕು.

ಖಾಸಗಿ, ಅಲ್ಪಸಂಖ್ಯಾತ ಕಾಲೇಜುಗಳು, ಡೀಮ್ಡ್‌ ವಿಶ್ವವಿದ್ಯಾಲಗಳು ವೈದ್ಯಕೀಯ ಮತ್ತು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ನ ಶೇ 30ರಷ್ಟು ಸೀಟುಗಳನ್ನು ಕನ್ನಡಿಗ ಅಭ್ಯರ್ಥಿಗಳಿಗೆ ಮೀಸಲಿಡಬೇಕು.
-ಶರಣ ಪ್ರಕಾಶ ಪಾಟೀಲ,
ವೈದ್ಯಕೀಯ ಶಿಕ್ಷಣ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT