ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಏಳು ವರ್ಷ ಜೈಲು ಶಿಕ್ಷೆ

ಸಂಪುಟ ಸಭೆಯಲ್ಲಿ ನಿರ್ಧಾರ
Last Updated 24 ಮಾರ್ಚ್ 2017, 20:19 IST
ಅಕ್ಷರ ಗಾತ್ರ

ಬೆಂಗಳೂರು: ಸಿಬಿಎಸ್‌ಇ (ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ), ಐಸಿಎಸ್‌ಇ(ಇಂಡಿಯನ್‌ ಸರ್ಟಿಫಿಕೇಟ್‌ ಆಫ್‌ ಸೆಕೆಂಡರಿ ಎಜುಕೇಶನ್‌) ಶಾಲೆಗಳು ಒಳಗೊಂಡಂತೆ ರಾಜ್ಯದ ಎಲ್ಲ  ಶಾಲೆಗಳಲ್ಲಿ ಮಕ್ಕಳ ಮೇಲೆ ದೌರ್ಜನ್ಯ ನಡೆದರೆ ತಪ್ಪಿತಸ್ಥರಿಗೆ 7 ವರ್ಷ ಜೈಲು ಶಿಕ್ಷೆ ಕಾದಿದೆ.

ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಕಾಯ್ದೆ ಅನುಸಾರ ಸಿಬಿಎಸ್‌ಇ, ಐಸಿಎಸ್‌ಇ ಶಾಲೆಗಳು ರಾಜ್ಯ ಸರ್ಕಾರದ ನಿಯಂತ್ರಣಕ್ಕೆ ಒಳಪಡುತ್ತಿರಲಿಲ್ಲ. ಈ ಶಾಲೆಗಳಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದರೆ, ಶಿಕ್ಷಕರ ನಿರ್ಲಕ್ಷ್ಯದಿಂದ ಮಕ್ಕಳು ಸಾವಿಗೀಡಾದರೆ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಲು ಅವಕಾಶ ಇರಲಿಲ್ಲ. ಹೀಗಾಗಿ ಮಕ್ಕಳ ಸುರಕ್ಷಾ ನೀತಿಯ ಅಡಿಯಲ್ಲಿ ಹೊಸ ಮಸೂದೆ ತರಲು ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ.

ದೌರ್ಜನ್ಯ ಎಸಗಿದ ಅಪರಾಧಿ, ಅದಕ್ಕೆ ಸಹಕರಿಸಿದ ಶಿಕ್ಷಕರು, ನಿರ್ಲಕ್ಷ್ಯ ತೋರಿದ ಆಡಳಿತ ಮಂಡಳಿಯ ಪ್ರಮುಖ ಪದಾಧಿಕಾರಿಗಳನ್ನು 7 ವರ್ಷ ಜೈಲು ಶಿಕ್ಷೆಗೆ ಗುರಿಪಡಿಸಲು ಉದ್ದೇಶಿತ ಮಸೂದೆ ಅವಕಾಶ ಕಲ್ಪಿಸಲಿದೆ ಎಂದು ಮೂಲಗಳು ತಿಳಿಸಿವೆ. ಮಸೂದೆಗೆ ವಿಧಾನ ಮಂಡಲದ ಅನುಮೋದನೆ ದೊರೆತು ಕಾಯ್ದೆಯಾದ ಬಳಿಕ ಸಿಬಿಎಸ್‌ಇ, ಐಸಿಎಸ್‌ಇ ಶಾಲೆಗಳಲ್ಲಿ ಮಕ್ಕಳಿಗೆ ಸುರಕ್ಷೆ ಹಾಗೂ ಶಿಕ್ಷಕರಿಗೆ ಸೇವಾ ಸೌಲಭ್ಯ ಒದಗಿಸದೇ ಇದ್ದರೆ ಅಂತಹ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರವೂ ಸರ್ಕಾರಕ್ಕೆ ದೊರೆಯಲಿದೆ.

ಸಿಬಿಎಸ್‌ಇ, ಐಸಿಎಸ್‌ಇ ಶಾಲೆಗಳಲ್ಲಿ ಬೇಕಾಬಿಟ್ಟಿ ಶುಲ್ಕ ವಸೂಲು ಮಾಡಲಾಗುತ್ತಿದೆ ಎಂಬ ಆಪಾದನೆ ಇತ್ತು. ಆದರೆ, ರಾಜ್ಯ ಸರ್ಕಾರದ ಅಧಿಕಾರ ವ್ಯಾಪ್ತಿಗೆ ಶಾಲೆಗಳು ಒಳಪಡದೇ ಇದ್ದುದರಿಂದ ಶುಲ್ಕ ನಿಯಂತ್ರಿಸಲು ಅವಕಾಶ ಇರಲಿಲ್ಲ. ಅವಕಾಶವೂ ಉದ್ದೇಶಿತ ಮಸೂದೆಯಲ್ಲಿ ಇರಲಿದೆ ಎಂದು ಮೂಲಗಳು ತಿಳಿಸಿವೆ. ಹೊಸ ಮಸೂದೆ ಬಳಿಕ ಶಾಲೆ ಮತ್ತು ವಿದ್ಯಾರ್ಥಿ ನಿಲಯ ಆರಂಭಿಸುವ ಮೊದಲು ರಾಜ್ಯ ಸರ್ಕಾರದ ಅನುಮತಿ ಪಡೆಯುವುದು ಕಡ್ಡಾಯವಾಗಲಿದೆ. ಅನುಮತಿ ಪಡೆಯದೇ ಇದ್ದರೆ ಆಡಳಿತ ಮಂಡಳಿಯನ್ನು ಕಠಿಣ ಕ್ರಮಕ್ಕೆ  ಗುರಿ ಪಡಿಸಲು ಮಸೂದೆ ಅವಕಾಶ ಕಲ್ಪಿಸಲಿದೆ.

ಪ್ರಮುಖ ನಿರ್ಣಯಗಳು
* ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ 9,456 ಅರೆ ವೈದ್ಯಕೀಯ ಹುದ್ದೆಗಳ ನೇರ ನೇಮಕಾತಿಗೆ ಒಪ್ಪಿಗೆ.
* ಭೂಮಾಪಕರ ಕೊರತೆ ನಿವಾರಿಸಲು 1,076 ನಿವೃತ್ತ ಭೂಮಾಪಕರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಅನುಮೋದನೆ.
* ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 8ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಬೈಸಿಕಲ್‌ ಪೂರೈಸಲು ₹172 ಕೋಟಿ.
* ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಸಮವಸ್ತ್ರ ಪೂರೈಕೆಗೆ ₹156 ಕೋಟಿ.

* ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲ್ಲೂಕಿನ ಆದಿಹಳ್ಳಿ ಹಾಗೂ ಯಾದಗಿರಿ ತಾಲ್ಲೂಕು ಬಾಲ್‌ಚೇಡ್‌ನಲ್ಲಿ ನವೋದಯ ಮಾದರಿಯ ವಸತಿ ಶಾಲೆ ಸ್ಥಾಪನೆ.
* ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ಮಾರಾಟದಲ್ಲಿ  ರೈತರು ತೊಡಗುವುದನ್ನು ಪ್ರೇರೇಪಿಸಲು ‘ರೈತ ಉತ್ಪಾದಕರ ಸಂಸ್ಥೆಗಳಿಗೆ ಉತ್ಕೃಷ್ಟತಾ ಕೇಂದ್ರ’ ಸ್ಥಾಪನೆ.
* ₹205 ಕೋಟಿ ವೆಚ್ಚದಲ್ಲಿ ಮುಂಡರಗಿ, ಕಂಪ್ಲಿ, ತೆಕ್ಕಲಕೋಟೆ, ಕೊಟ್ಟೂರು, ಮಹಾಲಿಂಗಪುರ, ತೇರದಾಳ, ಮುದಗಲ್‌ ಪಟ್ಟಣಗಳಲ್ಲಿ ನೀರು ಸರಬರಾಜು ಯೋಜನೆ ಅನುಷ್ಠಾನಕ್ಕೆ ಅನುಮೋದನೆ.
* ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಚೀಲನಹಳ್ಳಿಯಲ್ಲಿ ₹23 ಕೋಟಿ ವೆಚ್ಚದಲ್ಲಿ  ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ಕುರಿ ಮತ್ತು ಮೇಕೆಗಳ ವಧಾಗಾರ ಸ್ಥಾಪನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT