ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ವರ್ಗಾವಣೆ ಕಾಯ್ದೆಗೆ ತಿದ್ದುಪಡಿ

Last Updated 24 ಮಾರ್ಚ್ 2017, 20:25 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆಯಲ್ಲಿ ಇದ್ದ ತೊಡಕು ನಿವಾರಿಸಿ, ಶಿಕ್ಷಕ ಸಮೂಹಕ್ಕೆ ಅನುಕೂಲ ಕಲ್ಪಿಸಲು  ಸರ್ಕಾರ ಮುಂದಾಗಿದೆ.

2007ರ ಶಿಕ್ಷಕರ ವರ್ಗಾವಣೆ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ತರಲು ಶುಕ್ರವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ. ಇದೇ 28ರವರೆಗೆ ನಡೆಯಲಿರುವ ಅಧಿವೇಶನದಲ್ಲಿ ತಿದ್ದುಪಡಿ ಮಸೂದೆ ಮಂಡಿಸಲಾಗುವುದು. ಹೊಸ ಕಾಯ್ದೆ ಅನ್ವಯ ಈ ವರ್ಷ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನಡೆಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಉದ್ದೇಶಿತ ಮಸೂದೆಯು ಪತಿ–ಪತ್ನಿ ಪ್ರಕರಣ, ಅಂಗವಿಕಲರು ಮತ್ತು ತೀವ್ರ ಆರೋಗ್ಯ ಸಮಸ್ಯೆ ಇರುವವರು, ಶಿಕ್ಷಕರ ಅಥವಾ ನೌಕರರ ಸಂಘದ ಪದಾಧಿಕಾರಿಗಳನ್ನು ವರ್ಗಾವಣೆ ಮಾಡುವುದಕ್ಕೆ ಅಥವಾ ಮಾಡದೇ ಇರುವುದಕ್ಕೆ ವಿಶೇಷ ಅವಕಾಶಗಳನ್ನು ಕಲ್ಪಿಸಲಿದೆ.  ಶಿಕ್ಷಕರ ಒಟ್ಟು ಬಲದ ಶೇ15ರಷ್ಟು ನೌಕರರನ್ನು ಮಾತ್ರ ಒಂದು  ಶೈಕ್ಷಣಿಕ ವರ್ಷದಲ್ಲಿ ವರ್ಗಾವಣೆ ಮಾಡಲು ಮಸೂದೆ ಅವಕಾಶ ಕಲ್ಪಿಸಲಿದೆ.

ಪರಿಣಾಮಗಳೇನು?

* 10 ವರ್ಷ ‘ಎ’ ಮತ್ತು ‘ಬಿ’ ವಲಯದಲ್ಲಿ ಕೆಲಸ ಮಾಡಿದ ಶಿಕ್ಷಕರು ಗ್ರಾಮೀಣ ಪ್ರದೇಶದ ಸೇವೆ ಮಾಡುವುದು ಕಡ್ಡಾಯವಾಗಲಿದೆ.

* ಬೆಂಗಳೂರು ಸೇರಿದಂತೆ ವಿವಿಧ ನಗರ ಪಾಲಿಕೆ, ನಗರಸಭೆ, ಜಿಲ್ಲಾ ಕೇಂದ್ರಗಳಲ್ಲಿ 10 ವರ್ಷ ಸೇವೆ ಸಲ್ಲಿಸಿದವರನ್ನು ನೂತನ ನಿಯಮಗಳ ಪ್ರಕಾರ ಗ್ರಾಮೀಣ ಪ್ರದೇಶಕ್ಕೆ ವರ್ಗಾವಣೆ ಮಾಡಲಾಗುತ್ತದೆ.

* ಈ ವರ್ಗಾವಣೆಯಿಂದ ನಗರ ಪ್ರದೇಶಗಳಲ್ಲಿ ಖಾಲಿಯಾಗಲಿರುವ ಹುದ್ದೆಗಳಿಗೆ 10 ವರ್ಷಕ್ಕೂ ಹೆಚ್ಚು ಅವಧಿ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಿದವರನ್ನು ವರ್ಗಾವಣೆ ಮಾಡಲು ಅವಕಾಶ ಕಲ್‍ಪಿಸಲಾಗುತ್ತದೆ.

* ಒಂದು ವೇಳೆ ಬೆಂಗಳೂರಿನಲ್ಲಿ 10 ವರ್ಷ ಕೆಲಸ ಮಾಡಿದವರು, ಅದಕ್ಕೂ ಹಿಂದೆ ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡಿದ್ದರೆ ಅವರನ್ನು ಬಿ ವಲಯದ ಪ್ರದೇಶಗಳಿಗೆ ವರ್ಗಾವಣೆ ಮಾಡಲಾಗುತ್ತದೆ.

* ­ಇಲ್ಲಿಯವರೆಗೆ ತಾಲ್ಲೂಕು ಮತ್ತು ಜಿಲ್ಲೆಯನ್ನು ಒಂದು ಘಟಕ ಎಂದು ಪರಿಭಾವಿಸಿ, ಅಂತರ್‌ಘಟಕ ವರ್ಗಾವಣೆಗೆ ಅವಕಾಶ ನೀಡಲಾಗುತ್ತಿದ್ದು. ಇನ್ನು ಮುಂದೆ ಕಂದಾಯ ವಿಭಾಗವನ್ನು ಒಂದು ಘಟಕ ಎಂದು ಪರಿಭಾವಿಸಲು ನಿರ್ಧರಿಸಿದ್ದು, ಇದರಿಂದ ಅಂತರ್‌ ವಿಭಾಗೀಯ ವರ್ಗಾವಣೆಗೆ ಅವಕಾಶ ಸಿಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT