ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸದ ಗಾಯಕ್‌ವಾಡ್‌ ಆತ್ಮಾವಲೋಕನ ಮಾಡಿಕೊಳ್ಳಲಿ

ಏರ್‌ಇಂಡಿಯಾ ಮ್ಯಾನೇಜರ್‌ ಆರ್‌. ಸುಕುಮಾರ್‌ ಹೇಳಿಕೆ
Last Updated 24 ಮಾರ್ಚ್ 2017, 20:33 IST
ಅಕ್ಷರ ಗಾತ್ರ

ನವದೆಹಲಿ: ತಾವೇನು ಮಾಡಿದ್ದೇವೆ ಎಂಬ ಬಗ್ಗೆ ಶಿವಸೇನಾ ಸಂಸದ ರವೀಂದ್ರ ಗಾಯಕ್‌ವಾಡ್‌ ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಅವರಿಂದ ಹಲ್ಲೆಗೆ ಒಳಗಾದ ಏರ್‌ಇಂಡಿಯಾ ಸಂಸ್ಥೆಯ ಮ್ಯಾನೇಜರ್‌ ಆರ್‌. ಸುಕುಮಾರ್‌ ಹೇಳಿದ್ದಾರೆ.

ಗೋವಾಕ್ಕೆ ಮುಂದಿನ ಪ್ರಯಾಣಕ್ಕಾಗಿ ವಿಮಾನವನ್ನು ಸಿದ್ಧಪಡಿಸಿಬೇಕಿದೆ. ಹಾಗಾಗಿ ವಿಮಾನದಿಂದ ಇಳಿಯಿರಿ ಎಂದು ಅವರಿಗೆ ವಿನಂತಿ ಮಾಡುತ್ತಿ ದ್ದಂತೆಯೇ ಅವರು ಹೊಡೆಯಲು ಆರಂಭಿಸಿದರು ಎಂದು ಸುಕುಮಾರ್‌ ತಿಳಿಸಿದ್ದಾರೆ.

‘ನಾನು ಮಾತನಾಡುವಾಗ ಅವರು ಚಪ್ಪಲಿಯಲ್ಲಿ ಹೊಡೆಯಲು ಆರಂಭಿ ಸಿದರು. ಅಲ್ಲಿದ್ದವರೆಲ್ಲರೂ ರವೀಂದ್ರ ಅವರನ್ನು ತಡೆಯಲು ಯತ್ನಿಸಿದರು. ಆದರೆ ಅವರು ಹೊಡೆಯುವುದನ್ನು ನಿಲ್ಲಿಸಲೇ ಇಲ್ಲ. ಅಷ್ಟೇ ಅಲ್ಲ ಅವರು ನನ್ನನ್ನು ಜೋರಾಗಿ  ತಳ್ಳಿದರು’ ಎಂದು ಸುಕುಮಾರ್‌ ಮಾಹಿತಿ ನೀಡಿದ್ದಾರೆ.

‘ಕಾನೂನು ಪ್ರಕಾರ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅವರನ್ನು ಸಂಸದರಾಗಿ ಜನರು ಆಯ್ಕೆ ಮಾಡಿದ್ದಾರೆ. ಎಲ್ಲರ ಜತೆಗೂ ಅವರು ಸೌಜನ್ಯದಿಂದ ವರ್ತಿಸಬೇಕು’ ಎಂದು ಸುಕುಮಾರ್‌ ಅಭಿಪ್ರಾಯಪಟ್ಟಿದ್ದಾರೆ.

ಅಸಭ್ಯ ವರ್ತನೆ ಸಹಿಸಲಾಗದು: ಗಜಪತಿ ‘ವಿಮಾನದಲ್ಲಿ ಪ್ರಯಾಣ ಮಾಡುವವರು ಹಾಗೂ ವಿಮಾನ ಸಿಬ್ಬಂದಿಯ ರಕ್ಷಣೆಗೆ ಆದ್ಯತೆ ನೀಡಲಾಗುತ್ತದೆ. ವಿಮಾನದಲ್ಲಿ ಅಸಭ್ಯವಾಗಿ ವರ್ತಿಸುವುದನ್ನು ಸಹಿಸಲು ಆಗದು’ ಎಂದು ಕೇಂದ್ರ ಸರ್ಕಾರ ಶುಕ್ರವಾರ ಹೇಳಿದೆ.

‘ಇಂಥ ಘಟನೆಗಳು ಪುನರಾವರ್ತನೆ ಆಗದಂತೆ ನೋಡಿಕೊಳ್ಳಬೇಕು. ಕೆಟ್ಟ ವರ್ತನೆ ತೋರಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ನಾಗರಿಕ ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು ತಿಳಿಸಿದರು.

‘ಸಂಸದರು ಕಾನೂನಿಗೆ ಅತೀತರಲ್ಲ. ದೇಶದ ಕಾನೂನನ್ನು ನಾವೂ ಪಾಲಿಸಬೇಕು’ ಎಂದು ರಾಜು ಅವರು ಸುದ್ದಿಗಾರರ ಬಳಿ ಹೇಳಿದರು.
ವಿಮಾನದಲ್ಲಿ ಕೆಟ್ಟದಾಗಿ ವರ್ತಿಸುವುದನ್ನು ನಿಯಂತ್ರಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ರಾಜು ತಿಳಿಸಿದರು.

ನಿರ್ಬಂಧಕ್ಕೆ ಅವಕಾಶ ಇಲ್ಲ
ದೇಶದ ಬಹುತೇಕ ವಿಮಾನ ಯಾನ ಸಂಸ್ಥೆಗಳಿಂದ ಪ್ರಯಾಣ ನಿರ್ಬಂಧಕ್ಕೆ ಒಳಗಾದ ದೇಶದ ಮೊದಲ ಸಂಸದ ರವೀಂದ್ರ ಗಾಯಕ್‌ವಾಡ್‌.
ಆದರೆ ರವೀಂದ್ರ ಅವರಿಗೆ ಟಿಕೆಟ್‌ ನಿರಾಕರಿಸಿರುವ ಕ್ರಮ ಸರಿಯೇ ಎಂಬ ಬಗ್ಗೆಯೂ ಚರ್ಚೆ ಆರಂಭವಾಗಿದೆ.

ಪ್ರಯಾಣಕ್ಕೆ ನಿರ್ಬಂಧ ಹೇರುವ ಅಥವಾ ಟಿಕೆಟ್‌ ನಿರಾಕರಿಸುವ ಕಾನೂನು ಇಲ್ಲ ಎಂದು ಕೇಂದ್ರದ ಕಾನೂನು ಇಲಾಖೆಯ ರಾಜ್ಯ ಸಚಿವ ಪಿ.ಪಿ. ಚೌಧರಿ ಹೇಳಿದ್ದಾರೆ.

‘ಯಾರಾದರೂ ತಪ್ಪು ಮಾಡಿದರೆ ಅವರಿಗೆ ಶಿಕ್ಷೆ ವಿಧಿಸಬಹುದು. ಅದರ ಬದಲಿಗೆ ಅವರು ಪ್ರಯಾಣಿಸದಂತೆ ಟಿಕೆಟ್‌ ನಿರಾಕರಿಸುವುದು ದೊಡ್ಡ ತಪ್ಪು’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ಸ್ವಪ್ರೇರಣೆಯ ಕ್ರಮ ಸಾಧ್ಯ ಇಲ್ಲ’
ನವದೆಹಲಿ:
 ಗಾಯಕ್‌ವಾಡ್‌ ವಿರುದ್ಧ ಸ್ವಪ್ರೇರಣೆಯಿಂದ ಕ್ರಮ ಕೈಗೊಳ್ಳುವುದಕ್ಕೆ ಅವಕಾಶ ಇಲ್ಲ ಎಂದು ಲೋಕಸಭಾ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಹೇಳಿದ್ದಾರೆ. ರವೀಂದ್ರ ವರ್ತನೆಗೆ ಅತೃಪ್ತಿ ವ್ಯಕ್ತಪಡಿಸಿರುವ ಸುಮಿತ್ರಾ, ಯಾವುದೇ ಸಂಸದ ಯಾವುದೇ ವ್ಯಕ್ತಿಯ ಜತೆ ಕೆಟ್ಟದಾಗಿ ವರ್ತಿಸಬಾರದು ಎಂದಿದ್ದಾರೆ.

‘ಸಂಸದನಾಗಿರಲಿ, ಸಾಮಾನ್ಯ ವ್ಯಕ್ತಿಯಾಗಿರಲಿ ಅಥವಾ ಅಧಿಕಾರಿಯಾಗಿರಲಿ ಯಾರೊಂದಿಗೂ ದುರ್ವರ್ತನೆ ತೋರುವುದಕ್ಕೆ ಅವಕಾಶ ಇಲ್ಲ. ಒಬ್ಬ ತಾಯಿಯಾಗಿ ಮಕ್ಕಳು ಯಾರೊಂದಿಗೂ ಕೆಟ್ಟದಾಗಿ ವರ್ತಿಸದಂತೆ ನಾನು ಕಲಿಸುತ್ತೇನೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT