ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡುತ್ತಿರುವ ಪ್ರಸಾದ್ ಅನುಪಸ್ಥಿತಿ

ಪ್ರಚಾರ ಕಾರ್ಯದಲ್ಲಿ ನಿರತರಾದ ಬಿಜೆಪಿ ಮುಖಂಡರು
Last Updated 24 ಮಾರ್ಚ್ 2017, 20:37 IST
ಅಕ್ಷರ ಗಾತ್ರ

ಮೈಸೂರು: ನಂಜನಗೂಡು ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿ ಪಕ್ಷದ ಮುಖಂಡರೊಂದಿಗೆ ಪ್ರಚಾರ ಕಾರ್ಯ ನಡೆಸುತ್ತಿದ್ದರೆ, ಬಿಜೆಪಿ ಮುಖಂಡರು ಅಭ್ಯರ್ಥಿಯ ಅನುಪಸ್ಥಿತಿಯ ನಡುವೆ ಪ್ರಚಾರ ನಡೆಸುತ್ತಿರುವುದು ಕಂಡು ಬಂದಿದೆ.

ಚಿತ್ರನಟ ಜಗ್ಗೇಶ್ ದೇವರಸನಹಳ್ಳಿ, ಒಕ್ಕಲಗೇರಿ ಸೇರಿದಂತೆ ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಪ್ರದೇಶದಲ್ಲಿ ಶುಕ್ರವಾರ ಬಿರುಸಿನ ಪ್ರಚಾರ ನಡೆಸಿದರು. ಮತ್ತೊಂದೆಡೆ, ಹುರ ಭಾಗದಲ್ಲಿ ಶೋಭಾ ಕರಂದ್ಲಾಜೆ, ಹರದನಹಳ್ಳಿ ಭಾಗದಲ್ಲಿ ವಿ.ಸೋಮಣ್ಣ ಪ್ರಚಾರ ನಡೆಸಿದರು.

ಆದರೆ, ಅಭ್ಯರ್ಥಿ ಶ್ರೀನಿವಾಸಪ್ರಸಾದ್ ಹೆಚ್ಚಾಗಿ ಕಾಣಿಸಿಕೊಳ್ಳಲಿಲ್ಲ. ಬಿಸಿಲು ಹೆಚ್ಚಿರುವುದರಿಂದ ಆರೋಗ್ಯದ ಕಾರಣಕ್ಕೆ ಪ್ರಚಾರ ಕಾರ್ಯದಿಂದ ಪ್ರಸಾದ್ ದೂರ ಉಳಿದಿದ್ದಾರೆ ಎಂದು ಹೇಳಲಾಗುತ್ತಿದೆ. ಶನಿವಾರದ ನಂತರ ಪ್ರಸಾದ್ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುವರು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿ ಪಕ್ಷದ ಮುಖಂಡರು ಹೋದ ಕಡೆಯಲ್ಲೆಲ್ಲಾ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಉಪ್ಪಾರ ಸಮುದಾಯ ಇರುವ ಕಡೆ ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ, ನಾಯಕ ಸಮುದಾಯ ಹೆಚ್ಚಿರುವ ಕಡೆ ಸತೀಶ್‌ ಜಾರಕಿಹೊಳಿ ಪ್ರಚಾರ ನಡೆಸಿದರು.

ಸ್ಥಳೀಯ ಮುಖಂಡರಿಗೆ ಗಾಳ: ಹಳ್ಳಿಹಳ್ಳಿಗಳಲ್ಲಿ ಪ್ರಚಾರ ಬಿರುಸು ಪಡೆದುಕೊಂಡಿದ್ದು, ಗ್ರಾಮಮಟ್ಟದ ಮುಖಂಡರನ್ನು ಸೆಳೆಯುವ ಪ್ರಯತ್ನ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ನಡೆದಿದೆ. ‘ಕಳೆದ ಬಾರಿ ಯಾವ ಪಕ್ಷಕ್ಕೆ ಬೆಂಬಲ ನೀಡಿದ್ದೀರಿ ಎನ್ನುವುದು ಬೇಡ. ಈ ಬಾರಿ ನಮ್ಮ ಜತೆ ಬನ್ನಿ’ ಎಂದು ಸ್ಥಳೀಯ ಮುಖಂಡರಿಗೆ ‘ಆಮಿಷ’ಗಳನ್ನು ಒಡ್ಡಲಾಗುತ್ತಿದೆ.

ಯಾವ ಪಕ್ಷದವರಿಂದ ಹೆಚ್ಚಿನ ‘ಆಮಿಷ’ದ ಭರವಸೆ ಬರುತ್ತದೋ ಅತ್ತ ಕಡೆ ಕೆಲವು ಮುಖಂಡರು ವಾಲುತ್ತಿದ್ದಾರೆ. ಸಾಂಪ್ರದಾಯಿಕವಾಗಿ ಇಂತದ್ದೇ ಪಕ್ಷದ ಪರ ಎಂದು ಗುರುತಿಸಿಕೊಂಡವರ ಸಂಖ್ಯೆ ಕಡಿಮೆ. ‘ಆಮಿಷ’ಗಳ ಮುಂದೆ ಪಕ್ಷ, ಜಾತಿ, ವ್ಯಕ್ತಿ ಗೌಣವಾಗಿದೆ.

ಈಚೆಗೆ ತಾಲ್ಲೂಕಿನಲ್ಲಿ ಮಳೆಯಾಗಿದ್ದು, ಕೃಷಿ ಚಟುವಟಿಕೆಗಳಿಗೆ ಚಾಲನೆಪಡೆದುಕೊಂಡಿದೆ. ಬರ ಪರಿಸ್ಥಿತಿಯಿಂದ ಕೆಲಸವಿದಲ್ಲದೆ ಪಕ್ಷಗಳ ಸ್ಥಳೀಯ ಮುಖಂಡರ ಹಿಂದೆ ಸುತ್ತುತ್ತಿದ್ದ ಜನರು ಇದೀಗ ಹೊಲಗಳತ್ತ ಮುಖ ಮಾಡತೊಡಗಿದ್ದಾರೆ. ಇದರಿಂದ ಕೆಲವೆಡೆ ಪ್ರಚಾರ ಕಾರ್ಯಕ್ಕೆ ಸ್ಥಳೀಯ ಜನರ ಅಭಾವ ಕಂಡು ಬಂದಿದೆ.

ಬಿಜೆಪಿಯದ್ದೇ ಗೆಲುವು:  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಇಡೀ ಸಚಿವ ಸಂಪುಟವನ್ನೇ ಪ್ರಚಾರ ಕಾರ್ಯಕ್ಕೆ ಇಳಿಸಿದರೂ ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪಚುನಾವಣೆಗಳಲ್ಲಿ 25 ಸಾವಿರ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸುವುದು ನಿಶ್ಚಿತ ಎಂದು
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT