ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶಿ ತಂತ್ರಜ್ಞರಿಂದ ಕೆರೆ ಪರಿಶೀಲನೆ

ಬೆಳ್ಳಂದೂರು ಕೆರೆ ಪುನರುಜ್ಜೀವನಕ್ಕೆ ಕೆಎಸ್‌ಐಐಡಿಸಿ ಉತ್ಸಾಹ
Last Updated 24 ಮಾರ್ಚ್ 2017, 20:59 IST
ಅಕ್ಷರ ಗಾತ್ರ

ಬೆಂಗಳೂರು: ಬೆಳ್ಳಂದೂರು ಕೆರೆ ಪುನರುಜ್ಜೀವನಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಆಸಕ್ತ ಸಂಸ್ಥೆಗಳಿಂದ ಪ್ರಸ್ತಾವ ಆಹ್ವಾನಿಸಿದ ಬೆನ್ನಲ್ಲೇ, ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮವೂ (ಕೆಎಸ್‌ಐಐಡಿಸಿ) ಈ ಬಗ್ಗೆ ಆಸಕ್ತಿ ತೋರಿಸಿದೆ.

ಕೆಎಸ್‌ಐಐಡಿಸಿ ನೇತೃತ್ವದಲ್ಲಿ ಶುಕ್ರವಾರ ಲಂಡನ್‌ನ ಬ್ಲೂ ವಾಟರ್‌ ಬಯೊ (ಬಿಡಬ್ಲ್ಯುಬಿ) ಕಂಪೆನಿಯ ತಂತ್ರಜ್ಞರು  ಕೆರೆಯ ಪರಿಸರವನ್ನು ಪರಿಶೀಲಿಸಿದರು. ಬಳಿಕ ಕಂಪೆನಿ ಕಾರ್ಯನಿರ್ವಾಹಕ ಅಧ್ಯಕ್ಷ ರಿಚರ್ಡ್‌ ಹ್ಯಾಡನ್‌ ನೇತೃತ್ವದ ತಂಡ ಕೆರೆ ಪುನರುಜ್ಜೀವನದ ಬಗ್ಗೆ ಪ್ರಾತ್ಯಕ್ಷಿಕೆ ನೀಡಿತು.

‘ಕೆರೆಯ ಕಲುಷಿತ ನೀರನ್ನು ಶುದ್ಧ ನೀರನ್ನಾಗಿ ಪರಿವರ್ತಿಸಿ, ಅದರಿಂದ  ಆದಾಯದ ಗಳಿಸಲು ಸಾಧ್ಯವಾಗುವ ರೀತಿ ಯೋಜನೆ ರೂಪಿಸಿದ್ದೇವೆ. ಕೆರೆಗೆ ಮಾಲಿನ್ಯಕಾರಕಗಳು ಸೇರುವುದನ್ನು ತಡೆಯಲು ಕ್ರಮಕೈಗೊಳ್ಳುತ್ತೇವೆ. ದಿನವೊಂದಕ್ಕೆ 20 ಕೋಟಿ ಲೀಟರ್‌  ನೀರನ್ನು ಶುದ್ಧೀಕರಿಸುವ ಸಾಮರ್ಥ್ಯದ ತ್ಯಾಜ್ಯನೀರು ಸಂಸ್ಕರಣಾ ಘಟಕವನ್ನು  ಸ್ಥಾಪಿಸಲಿದ್ದೇವೆ’ ಎಂದು ಕಂಪೆನಿಯ ಎಂಜಿನಿಯರಿಂಗ್‌ ನಿರ್ದೇಶಕ ಜೆರೆಮಿ ಬಿಡ್ಲ್‌ ವಿವರಿಸಿದರು.

‘ನೀರು ಶುದ್ಧೀಕರಣ ಯೋಜನೆಗೆ ನಮ್ಮ ಕಂಪೆನಿ ಹಾಗೂ ಇಂಗ್ಲೆಂಡ್‌ ಸರ್ಕಾರ ಶೇ 85ರಷ್ಟು ಮೊತ್ತವನ್ನು ಸಾಲದ ರೂಪದಲ್ಲಿ ಹೂಡಿಕೆ ಮಾಡಲಿದೆ. ಉಳಿದ ಶೇ 15ರಷ್ಟು ಮೊತ್ತವನ್ನು ಇಲ್ಲಿನ ಸರ್ಕಾರ ಹೊಂದಿಸಬೇಕು. ಶುದ್ಧೀಕರಣ ಯೋಜನೆ ಪೂರ್ಣಗೊಂಡ  ಆರು ತಿಂಗಳ ಬಳಿಕ  ಸಾಲವನ್ನು ಕಂತುಗಳಲ್ಲಿ  ಮರುಪಾವತಿ ಮಾಡಬೇಕು. 

ಇದಕ್ಕೆ ಶೇ 2.36ರಷ್ಟು ಬಡ್ಡಿ ವಿಧಿಸಲಾಗುತ್ತದೆ’ ಎಂದು ಕಂಪೆನಿಯ ಜಾಗತಿಕ ವ್ಯವಹಾರ ಅಭಿವೃದ್ಧಿ ಹಾಗೂ ಭಾರತೀಯ ಘಟಕದ ನಿರ್ದೇಶಕ ಕ್ಸಾನ್‌ ಮೋರ್ಗನ್‌ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೂಲಸೌಕರ್ಯ ಅಭಿವೃದ್ಧಿ ಸಚಿವ ಆರ್‌.ವಿ.ದೇಶಪಾಂಡೆ, ‘ ಕೆರೆ ಅಭಿವೃದ್ಧಿಗೆ  ಸಾಲ ನೀಡುವುದಾದರೆ,  ಅದರ ಮರುಪಾವತಿ ಬಗ್ಗೆ ನಾವು ಯೋಚಿಸಬೇಕಾಗುತ್ತದೆ.  ವಿದೇಶಿ ಸಂಸ್ಥೆಗಳಿಂದ ಸಾಲ ಪಡೆಯಲು ಕೇಂದ್ರ ಸರ್ಕಾರದ ಅನುಮತಿಯೂ ಕಡ್ಡಾಯ’ ಎಂದರು.

‘ಕೆರೆ ಪುನರುಜ್ಜೀವನ ಯೋಜನೆಯನ್ನು ನಿಮ್ಮ ಕಂಪೆನಿಗೇ ವಹಿಸುತ್ತೇವೆ ಎಂಬ ಭರವಸೆ ನೀಡಲಾಗದು. ನಮ್ಮಲ್ಲಿ ಯಾವುದೇ ಅಭಿವೃದ್ಧಿ ಯೋಜನೆಗಳಿಗೆ  ಕರ್ನಾಟಕ ಸಾರ್ವಜನಿಕ ಸಂಗ್ರಹಣೆ­ಯಲ್ಲಿನ ಪಾರದರ್ಶಕತೆ (ಕೆಟಿಟಿಪಿ) ಕಾಯ್ದೆ  ಪ್ರಕಾರ ಜಾಗತಿಕ ಟೆಂಡರ್‌ ಕರೆದು ಅರ್ಹ ಸಂಸ್ಥೆಯನ್ನು ಆಯ್ಕೆ ಮಾಡಬೇಕಾಗುತ್ತದೆ’ ಎಂದು ಅವರು ಹೇಳಿದರು. ಬಳಿಕ ಕಂಪೆನಿಯ ಪ್ರತಿನಿಧಿಗಳು ಪ್ರಾತ್ಯಕ್ಷಿಕೆಯನ್ನು ಮುಂದುವರಿಸಲು ಆಸಕ್ತಿ ತೋರಿಸಲಿಲ್ಲ.‘ಯೋಜನೆಗೆ ಎಷ್ಟು ವೆಚ್ಚವಾಗುತ್ತದೆ. ಕೆರೆ ಶುದ್ಧೀಕರಣಕ್ಕೆ ಯಾವ ತಂತ್ರಜ್ಞಾನ ಬಳಸುತ್ತೀರಿ’ ಎಂದು  ಸುದ್ದಿಗಾರರು ಪ್ರಶ್ನಿಸಿದಾಗ  ಉತ್ತರಿಸಲು  ನಿರಾಕರಿಸಿದರು. 

ಪುನರುಜ್ಜೀವನ ಯಾರ ಹೊಣೆ: ಬೆಳ್ಳಂದೂರು ಕೆರೆ ಪುನರುಜ್ಜೀವನದ ರೂಪರೇಷೆ ತಯಾರಿಸಲು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದ ತಜ್ಞರ ಸಮಿತಿ ರಚಿಸಲಾಗಿತ್ತು.  ಕೆರೆ ಪುನರುಜ್ಜೀವನಕ್ಕೆ ಏನೆಲ್ಲ ಕ್ರಮ ಕೈಗೊಳ್ಳಬೇಕು. ಇದರಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ),  ಜಲಮಂಡಳಿ, ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಗಳ ಜವಾಬ್ದಾರಿಗಳೇನು ಎಂಬುದನ್ನು   ಈ ಸಮಿತಿ ಸ್ಪಷ್ಟ ಪಡಿಸಿದೆ.

ಈ ಸಮಿತಿಯ ಶಿಫಾರಸುಗಳ ಅನುಸಾರ ಬಿಡಿಎ, ಕೆರೆಯ ಕಳೆ ನಿರ್ಮೂಲನೆ ಹಾಗೂ ಆಮ್ಲಜನಕ ಮರುಪೂರಣಕ್ಕೆ ಆಸಕ್ತ ಸಂಸ್ಥೆಗಳಿಂದ ಪ್ರಸ್ತಾವ ಆಹ್ವಾನಿಸಿದೆ.  ಕಾಮಗಾರಿಯ ಗುತ್ತಿಗೆ ನೀಡಲು ಅರ್ಹ ಸಂಸ್ಥೆಯನ್ನು ಆಯ್ಕೆ ಮಾಡುವ ಪ್ರಕ್ರಿಯೆ ಜಾರಿಯಲ್ಲಿದೆ. ಇನ್ನೊಂದೆಡೆ ಜಲಮಂಡಳಿ ಕೆರೆಯ ಜಾಲದಲ್ಲಿ ಐದು ಕಡೆ ತ್ಯಾಜ್ಯನೀರಿನ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುವ ಪ್ರಕ್ರಿಯೆ ಆರಂಭಿಸಿದೆ.

‘ಬೆಳ್ಳಂದೂರು ಕೆರೆಯ ಪುನರುಜ್ಜೀವನ ಬಿಡಿಎ ಜವಾಬ್ದಾರಿ. ಈ ಕಾರ್ಯದಲ್ಲಿ ಕೆಎಸ್‌ಐಐಡಿಸಿ ಕೈಜೋಡಿಸುತ್ತದೆ ಎಂದರೆ ಅದನ್ನು ಸ್ವಾಗತಿಸುತ್ತೇವೆ. ಕೆರೆ ಪುನರುಜ್ಜೀವನಕ್ಕೆ ಅರ್ಹ ಸಂಸ್ಥೆಯನ್ನು ಆಯ್ಕೆ ಮಾಡುವ ಪ್ರಗತಿಯಲ್ಲಿತ್ತು. ಇಂಗ್ಲೆಂಡ್‌ ಕಂಪೆನಿ ಈ ಕಾರ್ಯವನ್ನು ಹೆಚ್ಚು ಸಮರ್ಥವಾಗಿ ನಡೆಸಲಿದೆ ಎಂದು ಮನದಟ್ಟಾದರೆ ಅವರಿಗೆ ಗುತ್ತಿಗೆ ನೀಡುವುದಕ್ಕೆ ನಮ್ಮ ಅಭ್ಯಂತರ ಇಲ್ಲ’ ಎಂದು ಬಿಡಿಎ ಆಯುಕ್ತ ರಾಕೇಶ್‌ ಸಿಂಗ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೆಎಸ್‌ಐಐಡಿಸಿ ನೋಡೆಲ್‌ ಏಜೆನ್ಸಿ ಮಾಡಿ’
‘ಬೆಳ್ಳಂದೂರು ಕೆರೆ ಪುನರುಜ್ಜೀವನಕ್ಕೆ   ಕೆಎಸ್‌ಐಐಡಿಸಿಯನ್ನು ನೋಡೆಲ್‌ ಏಜೆನ್ಸಿ ಮಾಡುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದೇನೆ. ಅವರು ಈ ಕುರಿತು ಕ್ರಮಕೈಗೊಳ್ಳುವಂತೆ ಸೂಚಿಸಿ ಪತ್ರವನ್ನು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಅವರಿಗೆ ರವಾನಿಸಿದ್ದಾರೆ’ ಎಂದು ನಿಗಮದ ಅಧ್ಯಕ್ಷ ಸಿ.ಎಂ.ಧನಂಜಯ ತಿಳಿಸಿದರು.

‘ಬೆಳ್ಳಂದೂರು ಕೆರೆ ಪುನರುಜ್ಜೀವನಕ್ಕೆ ತಜ್ಞರ ಸಮಿತಿ ಸರ್ಕಾರದ ಬೇರೆ ಬೇರೆ ಇಲಾಖೆಗಳಿಗೆ ಹಾಗೂ ಪ್ರಾಧಿಕಾರಗಳಿಗೆ ಹೊಣೆ ವಹಿಸಿದೆ. ಈ ಕಾರ್ಯ ಏಕಗವಾಕ್ಷಿ ವ್ಯವಸ್ಥೆಯ ಮೂಲಕ ಜಾರಿಯಾಗಲಿ ಎಂಬುದು ನಮ್ಮ ಉದ್ದೇಶ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT