ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉಸಿರುಗಟ್ಟುತ್ತಿದೆ... ಬೇಗ ಸ್ವಚ್ಛಗೊಳಿಸಿ’

ಅರಕೆರೆಯ ಆಕ್ರಂದನ: ಅನುದಾನ ಬಿಡುಗಡೆಯಾದರೂ ಅಭಿವೃದ್ಧಿ ನನೆಗುದಿಗೆ,
Last Updated 24 ಮಾರ್ಚ್ 2017, 21:06 IST
ಅಕ್ಷರ ಗಾತ್ರ

ಬೆಂಗಳೂರು: ‘ದಯವಿಟ್ಟು ನನ್ನನ್ನು ಬೇಗ ಸ್ವಚ್ಛಗೊಳಿಸಿ. ಒಳಚರಂಡಿ ನೀರಿನ ದುರ್ವಾಸನೆ, ಕಟ್ಟಡ ತ್ಯಾಜ್ಯಗಳ ದೂಳು, ಹೂಳು ತುಂಬಿಕೊಂಡು ನನ್ನ ಉಸಿರುಗಟ್ಟುತ್ತಿದೆ’

–ಬನ್ನೇರುಘಟ್ಟ ರಸ್ತೆಯಲ್ಲಿರುವ ಅರೆಕೆರೆಯ ಕೆರೆಯನ್ನು ಒಮ್ಮೆ ನೋಡಿದರೆ ಈ ಜಲಮೂಲ ಹೀಗೆ ಕೂಗುತ್ತಿರುವಂತೆ ಭಾಸವಾಗುತ್ತದೆ.
150 ವರ್ಷದ ಹಿಂದೆ ನಿರ್ಮಿಸಿದ್ದ ಈ ಕೆರೆಗೆ ದೇಶ, ವಿದೇಶಗಳ ಪಕ್ಷಿಗಳು ವಲಸೆ ಬರುತ್ತಿದ್ದವು. ಹಾಗಾಗಿ ಇದೊಂದು ಚಿಕ್ಕ ಪಕ್ಷಿಧಾಮವೇ ಆಗಿತ್ತು. ಆದರೆ, ಈಗ  ಇಲ್ಲಿ ಹಕ್ಕಿಗಳ ಕಲರವವಿಲ್ಲ. ಕಲುಷಿತಗೊಂಡಿರುವ ಈ ಕೆರೆ ಬಿಕೋ ಎನ್ನುತ್ತಿದೆ. ಕೆರೆ ಅಭಿವೃದ್ಧಿಗೆ ಹಣ ಬಿಡುಗಡೆ ಆಗುತ್ತಿದೆಯೇ ಹೊರತು ಯಾವುದೇ ಕೆಲಸಗಳು ಅಲ್ಲಿ ನಡೆದಿಲ್ಲ. ಜಲಮೂಲದಲ್ಲಿ ನೀರಿನ ಪ್ರಮಾಣವೂ ಗಣನೀಯವಾಗಿ ಕಡಿಮೆಯಾಗಿದೆ.

‘2013ರಲ್ಲಿ ಕೆರೆ ಅಭಿವೃದ್ಧಿಗಾಗಿ ₹7.5 ಕೋಟಿ ಹಣ ಬಿಡುಗಡೆಯಾಗಿತ್ತು. ಈ ಪೈಕಿ ₹2 ಕೋಟಿ ವೆಚ್ಚದಲ್ಲಿ ಕೆರೆ ಹೂಳೆತ್ತುವ, ಒಡ್ಡು ನಿರ್ಮಿಸುವ ಹಾಗೂ ಗಣೇಶ ವಿಸರ್ಜನೆಗೆ ಕಲ್ಯಾಣಿ ನಿರ್ಮಾಣ  ಕೆಲಸಗಳು ನಡೆದಿವೆ’ ಎಂದು ಪಾಲಿಕೆಯ ಮಾಜಿ ಸದಸ್ಯ ರವಿ ತಿಳಿಸಿದರು.
‘ಕೆರೆ 37 ಎಕರೆ ವಿಸ್ತೀರ್ಣ ಹೊಂದಿತ್ತು. ಒತ್ತುವರಿಯಿಂದಾಗಿ ಅದರ ಗಾತ್ರ ಕುಗ್ಗಿದೆ. ಆಸುಪಾಸಿನ ಮನೆಗಳ ಕೊಳಚೆ ನೀರು ಕೆರೆ ಸೇರುತ್ತಿದೆ. ಜತೆಗೆ ಕಸವನ್ನು ಸುರಿಯಲಾಗುತ್ತಿದೆ’ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

‘ಹುಳಿಮಾವು, ಜನತಾ ಕಾಲೊನಿ, ವಿಜಯ ಬಡಾವಣೆ, ಸಿಂಡಿಕೇಟ್‌ ಬ್ಯಾಂಕ್‌ ಕಾಲೊನಿಯ ಕೊಳಚೆ ನೀರು ಕೆರೆಯ ಒಡಲು ಸೇರುತ್ತಿದೆ’ ಎಂದರು.
‘ಕೆರೆಯಲ್ಲಿ ಹೂಳು ತೆಗೆದು ಎರಡು ವರ್ಷಗಳಾಗಿವೆ. ಈಗ ಮತ್ತೆ ಹೂಳು ತುಂಬಿಕೊಂಡಿದೆ. ಇದನ್ನು ಅಭಿವೃದ್ಧಿ ಪಡಿಸುವುದಾಗಿ ಹೇಳುತ್ತಿದ್ದಾರೆಯೇ ಹೊರತು ಯಾವುದೇ ಕೆಲಸ ಮಾಡುತ್ತಿಲ್ಲ. ಕೆರೆ ಕಸದ ತೊಟ್ಟಿಯಾಗಿದೆ’ ಎಂದು ಸ್ಥಳೀಯ ನಿವಾಸಿ ಕೆಂಪರಾಜು ದೂರಿದರು. ಪ್ರವಾಸಿ ತಾಣವಾಗಲಿ: ‘ಕೆರೆಯನ್ನು ಸಹಜ ಸ್ಥಿತಿಗೆ ಮರಳಿಸುವ ಮೂಲಕ ಜೀವ ಸಂಕುಲವನ್ನು ರಕ್ಷಿಸಬೇಕು. ಇದನ್ನು ಅಭಿವೃದ್ಧಿಪಡಿಸಿ ಪ್ರವಾಸಿ ತಾಣವನ್ನಾಗಿಸಬೇಕು. ಸಮೃದ್ಧ ಕೆರೆಯನ್ನು ನೋಡುವ ಆಸೆ ಇದೆ’ ಎಂದು ರಾಧಾ ಹೇಳಿದರು.

‘ಒತ್ತುವರಿಯಿಂದಾಗಿ ಪ್ರವಾಹ ಉಂಟಾಗುತ್ತಿದೆ. ರಾಜಕಾಲುವೆಯ ದುರಸ್ತಿ ಕೆಲಸ ಬಾಕಿ ಉಳಿದಿದೆ. ಕೆರೆ ಅಭಿವೃದ್ಧಿಗೆ ಅನುದಾನ ಬಿಡುಗಡೆ ಆಗಿದ್ದರೂ ಕಾಮಗಾರಿ ಕೈಗೊಳ್ಳಲು ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ’ ಎಂದು ದೂರಿದರು. ಭದ್ರತಾ ಸಿಬ್ಬಂದಿಗೆ ಮನೆ: ‘ಕೆರೆ ಅಭಿವೃದ್ಧಿಯನ್ನೇ ಮಾಡದೆ ಭದ್ರತಾ ಸಿಬ್ಬಂದಿಗೆ ಮನೆ ನಿರ್ಮಿಸಿಕೊಡಲಾಗುತ್ತಿದೆ. ಕೆರೆಯ ಸುತ್ತಲೂ ತಂತಿ ಬೇಲಿ ಅಳವಡಿಸಿಲ್ಲ. ಇದರಿಂದ ಅನೈತಿಕ ಚಟುವಟಿಕೆ ತಾಣವಾಗಿ ಮಾರ್ಪಟ್ಟಿದೆ. ಮಹಿಳೆಯರು ರಾತ್ರಿ ವೇಳೆ ಓಡಾಡಲು ಭಯಪಡುವಂತಾಗಿದೆ’ ಎಂದು ಸ್ಥಳೀಯ ನಿವಾಸಿ ಕಾತ್ಯಾಯಿನಿ ಹೇಳಿದರು.

‘ನೀರಿಲ್ಲ ಎಂದು ಅರಚುತ್ತಿರುವ ನಮಗೆ ಅದರ ಸದ್ಬಳಕೆ, ಸಂರಕ್ಷಣೆ ಬಗ್ಗೆ ಇನ್ನೂ ಅರಿವು ಮೂಡಿಲ್ಲ. ಇನ್ನಾದರೂ ಕೆರೆಯಲ್ಲಿ ತುಂಬಿರುವ ಕಸವನ್ನು ತೆರವುಗೊಳಿಸಬೇಕು. ದೋಣಿ ವಿಹಾರಕ್ಕೆ ವ್ಯವಸ್ಥೆ ಮಾಡಬೇಕು’ ಎಂದರು. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಜಲ ಕಾಯ್ದೆ 1974ರ ಅನ್ವಯ ಕೆರೆಗೆ ಒಳಚರಂಡಿ ನೀರು ಸೇರುವುದನ್ನು ತಡೆಯಬೇಕೆಂದು ಐದು ಇಲಾಖೆಗಳಿಗೆ 2014ರಲ್ಲಿ ನೋಟಿಸ್‌ ಜಾರಿ ಮಾಡಿತ್ತು. ಆದರೆ, ಪರಿಸ್ಥಿತಿ ಮಾತ್ರ ಬದಲಾಗಿಲ್ಲ.

‘ಕೆರೆಗೆ ಭೇಟಿ ನೀಡಿ ಪುನಶ್ಚೇತನಗೊಳಿಸಬೇಕೆಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಸೂಚನೆ ನೀಡಿದ್ದೇವೆ.  ಕೆರೆಗೆ ಸೇರುವ ಚರಂಡಿಯ ಕೊಳಚೆ ನೀರನ್ನು ಶುದ್ಧೀಕಣಕ್ಕೆ ತ್ಯಾಜ್ಯ ನೀರು ಸಂಸ್ಕರಣಾ ಘಟಕ (ಎಸ್‌ಟಿಪಿ) ನಿರ್ಮಿಸಲು ಜಲಮಂಡಳಿ ಆರಂಭಿಸಿತ್ತು. ಕೆಲವು ದಿನಗಳಿಂದ ಕಾಮಗಾರಿ ಸ್ಥಗಿತಗೊಂಡಿದೆ. ಶೀಘ್ರ ಕೆಲಸ ಪೂರ್ಣಗೊಳಿಸುವಂತೆ ಸೂಚಿಸುತ್ತೇವೆ’ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್ ತಿಳಿಸಿದರು. ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಮುಂದಾದಾಗ ಜಲಮಂಡಳಿಯ ಮುಖ್ಯ ಎಂಜಿನಿಯರ್‌ ರಾಮಕೃಷ್ಣ ಎಸ್‌.ಎಂ. (ತ್ಯಾಜ್ಯ ನೀರು ಸಂಸ್ಕರಣೆ) ಕರೆ ಸ್ವೀಕರಿಸಲಿಲ್ಲ.

ಸದನ ಸಮಿತಿ ಸೂಚನೆಗೂ ಬೆಲೆ ಇಲ್ಲವೇ?
ಕೆರೆ ಒತ್ತುವರಿ ಪತ್ತೆ ಸದನ ಸಮಿತಿ ಸದಸ್ಯರು 2015ರ ಮೇ 10 ಹಾಗೂ 2016ರ  ಜೂನ್‌ 9ರಂದು ಕೆರೆಗೆ ಭೇಟಿ ನೀಡಿ ಪರಿಶೀಲಿಸಿದ್ದರು. ಒತ್ತುವರಿಯನ್ನು ತೆರವು ಮಾಡುವಂತೆ ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿ ಅವರಿಗೆ ತಾಕೀತು ಮಾಡಿದ್ದರು. ಆದರೆ, ಒತ್ತುವರಿ ಹಾಗೆಯೇ ಇದೆ. ಇನ್ನಷ್ಟು ಒತ್ತುವರಿಯ ಆತಂಕ ಎದುರಾಗಿದೆ.

2015ರ ಮೇ ತಿಂಗಳ ಸೂಚನೆ: ‘ಕೆರೆ ಅಭಿವೃದ್ಧಿಪಡಿಸುವ ಮುನ್ನ ಸಮೀಕ್ಷೆ ನಡೆಸಿ ಗಡಿ ಗುರುತು ಹಾಕಬೇಕು. ಮತ್ತೆ ಒತ್ತುವರಿಗೆ ಅವಕಾಶ ನೀಡಬಾರದು’ ಎಂದು ಸದನ ಸಮಿತಿಯ ಅಧ್ಯಕ್ಷ ಕೆ.ಬಿ. ಕೋಳಿವಾಡ ಅವರು ದಕ್ಷಿಣ ಉಪವಿಭಾಗಾಧಿಕಾರಿ (ಎ.ಸಿ.) ಅವರಿಗೆ ತಾಕೀತು ಮಾಡಿದ್ದರು.

‘ತೆರವು ಕಾರ್ಯಾಚರಣೆ ವಿರುದ್ಧ ಕಟ್ಟಡ ಮಾಲೀಕರೊಬ್ಬರು ತಡೆಯಾಜ್ಞೆ ತಂದಿದ್ದಾರೆ. ಯಥಾಸ್ಥಿತಿ ಕಾಪಾಡುವಂತೆ  ಹೈಕೋರ್ಟ್‌ ನಿರ್ದೇಶನ ನೀಡಿದೆ. ಶೀಘ್ರದಲ್ಲಿ ತಡೆಯಾಜ್ಞೆ ತೆರವು ಮಾಡುತ್ತೇವೆ ಹಾಗೂ ಕೆರೆ ರಕ್ಷಿಸುತ್ತೇವೆ’ ಎಂದು ಎ.ಸಿ. ಸಮಜಾಯಿಷಿ ನೀಡಿದ್ದರು.

2016ರ ಜೂನ್‌ 9ರಂದು ಹೇಳಿದ್ದೇನು:  ‘ಸದನ ಸಮಿತಿ ಸದಸ್ಯರು ಮೊದಲು ಭೇಟಿ ನೀಡಿದ್ದ ಕೆರೆಗಳ ಪೈಕಿ ಅರೆಕೆರೆ ಕೆರೆಯೂ ಒಂದು. ಇದರ ಸರ್ವೆ ನಡೆಸಿ ಗಡಿ ಗುರುತಿಸುವಂತೆ ಸೂಚನೆ ನೀಡಿದ್ದೆವು. ಆದರೆ, ಅದನ್ನು ಅಧಿಕಾರಿಗಳು ಪಾಲಿಸಿಲ್ಲ’ ಎಂದು ಕೋಳಿವಾಡ ಅಸಮಾಧಾನ ವ್ಯಕ್ತಪಡಿಸಿದರು.

‘ಸಮಿತಿಯ ಸೂಚನೆಗೆ ನೀವು ಬೆಲೆ ನೀಡಿಲ್ಲ. ಕೆರೆಯ ತಟದಲ್ಲಿ ಕಾಂಪೌಂಡ್‌ ನಿರ್ಮಿಸಲು ಅವಕಾಶ ನೀಡಿದವರು ಯಾರು? ಇದಕ್ಕೆ ಯಾರನ್ನು ಹೊಣೆ ಮಾಡುವುದು?’ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದರು. ದಕ್ಷಿಣ ಉಪವಿಭಾಗಾಧಿಕಾರಿ ಎಲ್‌.ಸಿ. ನಾಗರಾಜ್‌ ಪ್ರತಿಕ್ರಿಯಿಸಿ, ‘ತೆರವು ಕಾರ್ಯಾಚರಣೆ ವಿರುದ್ಧ ಕಟ್ಟಡ ಮಾಲೀಕರೊಬ್ಬರು ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದರು. ಯಥಾಸ್ಥಿತಿ ಕಾಪಾಡುವಂತೆ ಹೈಕೋರ್ಟ್‌ ನಿರ್ದೇಶನ ನೀಡಿದ್ದರೂ ಅದನ್ನು ಉಲ್ಲಂಘಿಸಿ ಕಾಂಪೌಂಡ್‌ ನಿರ್ಮಿಸಿದ್ದರು. ಆಗ ಅದನ್ನು ಕೆಡವಲಾಗಿತ್ತು. ಅಲ್ಲದೆ, ಜಂಟಿ ಸರ್ವೆ ನಡೆಸುವಂತೆ ಹೈಕೋರ್ಟ್‌ ಆದೇಶ ನೀಡಿತ್ತು’ ಎಂದು ಹೇಳಿದ್ದರು.

ಹೈಕೋರ್ಟ್‌ ಆದೇಶದ ಪ್ರತಿಯನ್ನು ಗಮನಿಸಿದ್ದ ಸಮಿತಿ ಸದಸ್ಯ ಎಸ್‌. ಸುರೇಶ್‌ ಕುಮಾರ್‌ ಅವರು, ‘2015ರ ಜುಲೈನಲ್ಲಿ ಹೈಕೋರ್ಟ್‌ ಆದೇಶ ನೀಡಿದೆ. ಒಂದು ವರ್ಷವಾದರೂ ಇನ್ನೂ ಜಂಟಿ ಸರ್ವೆ ನಡೆಸಿಲ್ಲ. ತೆರವುಗೊಳಿಸಿದ್ದ ಜಾಗದಲ್ಲಿ ಮತ್ತೆ ಕಾಂಪೌಂಡ್‌ ನಿರ್ಮಿಸುತ್ತಿರುವುದನ್ನು ಏಕೆ ತಡೆಯಲಿಲ್ಲ? ಇದರ ಹಿಂದೆ ಯಾರ ಕೈವಾಡ ಇದೆ?’ ಎಂದು ತರಾಟೆಗೆ ತೆಗೆದುಕೊಂಡಿದ್ದರು. ಬೆಂಗಳೂರು ದಕ್ಷಿಣ ತಾಲ್ಲೂಕು ತಹಸೀಲ್ದಾರ್‌, ‘ಭೂ ಮಾಪನಾ ಇಲಾಖೆಗೆ ಹಲವು ಬಾರಿ ಪತ್ರ ಬರೆಯಲಾಗಿದೆ. ಆದರೆ, ಜಂಟಿ ಸರ್ವೆ ನಡೆಸಿಲ್ಲ’ ಎಂದು ಉತ್ತರಿಸಿದ್ದರು.

‘15 ದಿನದಲ್ಲಿ ಜಂಟಿ ಸರ್ವೆ ನಡೆಸಬೇಕು. ಈ ಪ್ರದೇಶದಲ್ಲಿ ಮತ್ತೆ ಕಟ್ಟಡ ಕಾಮಗಾರಿ ನಡೆದರೆ ಅದಕ್ಕೆ ತಹಶೀಲ್ದಾರ್‌, ಉಪವಿಭಾಗಾಧಿಕಾರಿ ಹೊಣೆಯಾಗುತ್ತಾರೆ’ ಎಂದು ಕೋಳಿವಾಡ ಅವರು ಎಚ್ಚರಿಕೆ ನೀಡಿದ್ದರು. ‘ಆದರೆ, ಈವರೆಗೂ ಒತ್ತುವರಿ ತೆರವು ಮಾಡಿಲ್ಲ. ಅಧಿಕಾರಿಗಳು ಒತ್ತುವರಿದಾರರೊಂದಿಗೆ ಕೈಜೋಡಿಸಿದ್ದಾರೆ’ ಎಂಬುದು ಸ್ಥಳೀಯರ ಆರೋಪ.

‘ಅಧಿಕಾರಿಗಳು ಪ್ರಭಾವಿಗಳನ್ನು ನಿರಂತರವಾಗಿ ರಕ್ಷಿಸುತ್ತಿದ್ದಾರೆ. ಬಡ ಒತ್ತುವರಿದಾರರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತಾರೆ. ಇದೊಂದು ನಾಟಕ ಅಷ್ಟೇ’ ಎಂದು ಸ್ಥಳೀಯ ನಿವಾಸಿ ಲಕ್ಷ್ಮಿನಾರಾಯಣ ಆಕ್ರೋಶ ವ್ಯಕ್ತಪಡಿಸಿದರು.  ‘ಈ ಸ್ಥಾನಕ್ಕೆ ವರ್ಗಾವಣೆಯಾಗಿ ಇತ್ತೀಚೆಗೆ ಬಂದಿದ್ದೇನೆ. ಅರೆಕೆರೆ ಒತ್ತುವರಿ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಕೆಲವೇ ದಿನಗಳಲ್ಲಿ ಪರಿಶೀಲಿಸಿ ತೆರವಿಗೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ’ ಎಂದು ಉಪವಿಭಾಗಾಧಿಕಾರಿ ಡಿ.ಬಿ. ನಟೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಕೆರೆ ಕಟ್ಟೆಯೊಡೆದು ಪ್ರವಾಹ
‘2012ರಲ್ಲಿ ರಾತ್ರೋರಾತ್ರಿ ಅರೆಕೆರೆ ಕೆರೆಯ ಕಟ್ಟೆ ಒಡೆದು, ಪ್ರವಾಹ ಸ್ಥಿತಿ ನಿರ್ಮಾಣವಾಗಿತ್ತು. ಶಾಂತಿನಿಕೇತನ ಲೇಔಟ್ ಮತ್ತು ವೈಶ್ಯ ಬ್ಯಾಂಕ್ ಕಾಲೊನಿಯ ನೂರಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿತ್ತು. 1998ರಲ್ಲೂ ಒಮ್ಮೆ ಕಟ್ಟೆ ಒಡೆದು ಇದೇ ಸ್ಥಿತಿ ಉಂಟಾಗಿತ್ತು’ ಎಂದು ಸ್ಥಳೀಯರು ತಿಳಿಸಿದರು.

(ಮಂಜುನಾಥ ಹೆಬ್ಬಾರ್ /ಯೋಗಿತಾ ಆರ್.ಜೆ.)

****

ನೀವೂ ಪ್ರತಿಕ್ರಿಯಿಸಿ
ವಿವಿಧ ಇಲಾಖೆಗಳ ಅಧಿಕಾರಿಗಳ ನಿರ್ಲಕ್ಷ್ಯ, ಸಮನ್ವಯ ಕೊರತೆಯಿಂದಾಗಿ ಅರೆಕೆರೆಯ ಕೆರೆ ಅವನತಿಯತ್ತ ಸಾಗುತ್ತಿದೆ. ಅಭಿವೃದ್ಧಿಯ ಯಾವ ಸೂಚನೆಗಳು ಕಾಣುತ್ತಿಲ್ಲ. ಈ ಬಗ್ಗೆ ಸಾರ್ವಜನಿಕರೂ ಪ್ರತಿಕ್ರಿಯಿಸಬಹುದು. bangalore@prajavani.co.in ಅಥವಾ 9513322930(ವಾಟ್ಸ್‌ ಆ್ಯಪ್‌) ಮೂಲಕ ಅನಿಸಿಕೆ ಕಳುಹಿಸಬಹುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT