ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ ಏರಿ ಹೊಡೆದ ಪೊಲೀಸ್ ಕಾನ್‌ಸ್ಟೆಬಲ್

ಕುಣಿಗಲ್ ತಾಲ್ಲೂಕಿನ ದಾಸನಪುರ ಕೆರೆ ಅಭಿವೃದ್ಧಿಗೆ ಪೂರ್ವಿಕರು ನೀಡಿದ್ದ ಜಮೀನು ತನ್ನದು ಎಂದ ಮೊಮ್ಮಗ
Last Updated 25 ಮಾರ್ಚ್ 2017, 5:27 IST
ಅಕ್ಷರ ಗಾತ್ರ

ಕುಣಿಗಲ್: ತಾಲ್ಲೂಕಿನ ದಾಸನಪುರ ಗ್ರಾಮದಲ್ಲಿ ಕೆರೆ ಅಭಿವೃದ್ಧಿಗಾಗಿ ತಮ್ಮ ಪೂರ್ವಿಕರು ಬಿಟ್ಟುಕೊಟ್ಟ ಜಮೀನು ತಮಗೆ ಸೇರಿದೆ ಎಂದು ಕಾನ್‌ಸ್ಟೆಬಲ್ ಒಬ್ಬರು ಕೆರೆ ಏರಿ ಹೊಡೆದು ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದು ಇದನ್ನು ಗ್ರಾಮಸ್ಥರು ವಿರೋಧಿಸಿ ಶುಕ್ರವಾರ ಕೆರೆ ಅಂಗಳಲ್ಲಿ ಪ್ರತಿಭಟಿಸಿದರು.

ಗ್ರಾಮದ ಕೆರೆ ಅಭಿವೃದ್ಧಿಗಾಗಿ 60 ವರ್ಷದ ಹಿಂದೆ ದಾಸನಪುರ ಸರ್ವೆ ನಂ 58ರಲ್ಲಿದ್ದ ತಮ್ಮ ಜಮೀನನ್ನು ಲಕ್ಷಮ್ಮ, ಗಂಗಯ್ಯ, ಮರಿಯಪ್ಪ ಹಾಗೂ ಗ್ರಾಮಸ್ಥರು ನೀಡಿದ್ದರು. ಯಾಚಘಟ್ಟ ಗ್ರಾಮಸ್ಥರೂ ಕೆರೆ ಏರಿ ಹಾಗೂ ರಸ್ತೆಗೆ ಜಾಗ ನೀಡಿದ್ದರು.

ಕೆರೆ ಅಭಿವೃದ್ಧಿಗೆ ಜಮೀನು ನೀಡಿದ್ದರೂ ಅಧಿಕೃತ ದಾಖಲೆಗಳನ್ನು ರೂಪಿಸವಲ್ಲಿ ಅಧಿಕಾರಿಗಳು ಎಡವಿದ್ದರು. ಇದರಿಂದ ಇಂದಿಗೂ ಜಮೀನು ದಾನ ನೀಡಿದ್ದ ರೈತರ ಹೆಸರಿನಲ್ಲಿ ಪಹಣಿ ಇವೆ. 2004ರಲ್ಲಿ ಕೆರೆ ಅಭಿವೃದ್ಧಿಗೆ ಸರ್ಕಾರದ ಅನುದಾನ ಸಹ ಬಿಡುಗಡೆಯಾಗಿದೆ.

ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ವೆಂಕಟೇಶ್ ಗುರುವಾರ ರಾತ್ರಿ ಜೆಸಿಬಿ ತಂದು ಕೆರೆಗಾಗಿ ತಮ್ಮ ಜಮೀನು ಸಹ ನೀಡಲಾಗಿದೆ. ಕೆರೆ ಅಂಚಿನಲ್ಲಿರುವ ಜಮೀನಿಗೆ ಹೋಗಲು ಅನುಕೂಲವಾಗುವಂತೆ ಕೆರೆ ಏರಿ ಹೊಡೆದು ರಸ್ತೆ ನಿರ್ಮಿಸಲು ಮುಂದಾದರು. ಇದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದಾಗ ಮಾತಿನ ಚಕಮಕಿ ನಡೆಯಿತು.

ಗ್ರಾಮಸ್ಥರು ಕಂದಾಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಮಸ್ಯೆ ಉಂಟಾಗಿದೆ ಎಂದು ಆರೋಪಿಸಿ ಟಿ ಹೊಸಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶಿವಕುಮಾರ್ ಹಾಗೂ ಗಿರೀಶ್ ನಾಯಕ್ ನೇತೃತ್ವದಲ್ಲಿ ಅಧಿಕಾರಿಗಳು ಬಂದು ಸಮಸ್ಯೆ ಬಗೆ ಹರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ತಹಶೀಲ್ದಾರ್ ಕೆ.ರಮೇಶ್, ಕಂದಾಯ ಇಲಾಖೆ ನಿರೀಕ್ಷಕ ಕೃಷ್ಣಪ್ಪ ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರ ಮನವಿ ಸ್ವೀಕರಿಸಿ ಯಥಾಸ್ಥಿತಿಯಲ್ಲಿ ಕೆರೆ ಏರಿ ನಿರ್ಮಿಸುವಂತೆ ಸೂಚಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಹರೀಶ್ ನಾಯಕ್ ಮಾತನಾಡಿ, ‘ವೆಂಕಟೇಶ್‌ರ ಅಜ್ಜ ಸೇರಿ ಹಲವು ಗ್ರಾಮಸ್ಥರು ಜನಹಿತಕ್ಕಾಗಿ ಜಮೀನು ನೀಡಿದ್ದರು ಆದರೆ, ಮೊಮ್ಮಗ ಜಮೀನು ವಶಪಡಿಸಿಕೊಂಡು ಗ್ರಾಮಸ್ಥರಿಗೆ ತೊಂದರೆ ನೀಡುತ್ತಿದ್ದಾರೆ’ ಎಂದು ಆರೋಪಿಸಿದರು.

ತಹಶೀಲ್ದಾರ್ ಕಚೇರಿ ಮುಂದೆ ರೈತರ ಪ್ರತಿಭಟನೆ
ಪಾವಗಡ:
ಪಟ್ಟಣದಲ್ಲಿ ನಡೆಯುವ ಸಂತೆಯಲ್ಲಿ ಕೃಷಿ ಉತ್ಪನ್ನಗಳ ಮಾರಾಟಕ್ಕೆ ರೈತರಿಂದ ಸುಂಕ ವಸೂಲಿ ಮಾಡಬಾರದು ಎಂದು ಆಗ್ರಹಿಸಿ ಹಸಿರು ಸೇನೆ ನೇತೃತ್ವದಲ್ಲಿ ಶುಕ್ರವಾರ ತಹಶೀಲ್ದಾರ್ ಕಚೇರಿ ಮುಂದೆ ರೈತರು ಪ್ರತಿಭಟನೆ ನಡೆಸಿದರು.

ಮಳೆ ಬೆಳೆ ಇಲ್ಲದೆ ಕಂಗಾಲಾಗಿರುವ ರೈತ ಕಷ್ಟ ಪಟ್ಟು ಬೆಳೆದ ಶೇಂಗಾ, ಹಣ್ಣು, ಹೂವು, ತೆಂಗಿನಕಾಯಿ, ತರಕಾರಿ, ವೀಳ್ಯದೆಲೆ, ಇತ್ಯಾದಿ ಉತ್ಪನ್ನಗಳ ಮಾರಾಟಕ್ಕೆ ಪುರಸಭೆ ಸುಂಕ ವಸೂಲಿ ಮಾಡುತ್ತಿದೆ. ಇದರಿಂದ ರೈತರಿಗೆ ಹೊರೆಯಾಗುತ್ತಿದೆ ಎಂದು ಹಸಿರು ಸೇನೆ ಅಧ್ಯಕ್ಷ ಪೂಜಾರಪ್ಪ ಆರೋಪಿಸಿದರು.

ಸಂತೆ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು, ಮಧ್ಯವರ್ತಿಗಳಿಂದ ರೈತರಿಗೆ ಅನ್ಯಾಯವಾಗುತ್ತಿದೆ ಇದನ್ನು ಅಧಿಕಾರಿಗಳು ಸರಿಪಡಿಸಬೇಕು. ಕುಡಿಯುವ ನೀರು ಸೇರಿದಂತೆ, ರೈತರು ಉತ್ಪನ್ನಗಳನ್ನು ಮಾರಟ ಮಾಡಲು ನೆರೆಳಿನ ವ್ಯವಸ್ಥೆ ಇಲ್ಲ. ಬಿಸಿಲಿನಲ್ಲಿಯೇ ಮಾರಾಟ ಮಾಡುವ ಪರಿಸ್ಥಿತಿ ಇದೆ ಎಂದು ದೂರಿದರು.

ಸಂತೆ ಮೈದಾನದಲ್ಲಿ ರೈತರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಿ, ರೈತರೇ ನೇರವಾಗಿ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ನೀಡಬೇಕು. ಕರ ವಸೂಲಿ ಮಾಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಲಾಯಿತು. ರೈತ ಮುಖಂಡ ಕರಿಯಣ್ಣ, ಈರಣ್ಣ, ತಿಮ್ಮಣ್ಣ, ವೆಂಕಟಸ್ವಾಮಿ, ಕರಿಯಪ್ಪ, ಸಿ. ಹನುಮಂತರಾಯಪ್ಪ, ನಾಗಭೂಷಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT